ದಾವೂದ್, ಹಫೀಝ್ ಗಡೀಪಾರಿಗೆ ಕೋರಿಕೆ ಬಂದಿಲ್ಲ : ಕೇಂದ್ರ ಸರಕಾರದ ಹೇಳಿಕೆ

Update: 2017-05-14 15:01 GMT

ಹೊಸದಿಲ್ಲಿ, ಮೇ 14: ಭಾರತದ ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು 26/11ರ ಮುಂಬೈ ದಾಳಿ ಪ್ರಕರಣದ ರೂವಾರಿ ಹಫೀಝ್ ಸಯೀದ್ ಗಡೀಪಾರು ಕುರಿತಂತೆ ಈ ಪ್ರಕರಣಗಳ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳಿಂದ ಇದುವರೆಗೆ ಯಾವುದೇ ಕೋರಿಕೆ ಬಂದಿಲ್ಲ ಎಂದು ವಿದೇಶ ವ್ಯವಹಾರ ಇಲಾಖೆ ತಿಳಿಸಿದೆ.

   ಭಯೋತ್ಪಾದಕರಾದ ದಾವೂದ್ ಮತ್ತು ಹಫೀಝ್ ಅವರನ್ನು ದೇಶಕ್ಕೆ ಕರೆತರುವ ಬಗ್ಗೆ ಭಾರತ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಹಕ್ಕಿನಡಿ ಸಲ್ಲಿಸಲಾದ ಅರ್ಜಿಗೆ ಉತ್ತರಿಸಿದ ಸಚಿವಾಲಯ ಈ ಮಾಹಿತಿ ನೀಡಿದೆ.

1993ರ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣದ ರೂವಾರಿಯಾಗಿರುವ ದಾವೂದ್ ಬಳಿಕ ತಲೆತಪ್ಪಿಸಿಕೊಂಡಿದ್ದು ಈಗ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ. ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಿಬದ ಸಹ ಸಂಸ್ಥಾಪಕನಾಗಿರುವ ಹಫೀಝ್ 2008ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕರ ದಾಳಿ ಪ್ರಕರಣದ ರೂವಾರಿಯಾಗಿದ್ದಾನೆ.

  ದಾವೂದ್ ಇಬ್ರಾಹಿಂ ಪಾಕ್‌ನಲ್ಲೇ ನೆಲೆಸಿರುವ ಬಗ್ಗೆ ತನ್ನಲ್ಲಿ ಪುರಾವೆ ಸಹಿತ ಮಾಹಿತಿ ಇರುವುದಾಗಿ ಕಳೆದ 10 ವರ್ಷಗಳಿಂದ ಪಾಕಿಸ್ತಾನಕ್ಕೆ ಭಾರತ ಹಲವಾರು ಬಾರಿ ತಿಳಿಸಿದೆ. ಆದರೆ ಪಾಕ್ ಇದನ್ನು ನಿರಾಕರಿಸುತ್ತಿದೆ. ದಾವೂದ್ ಈಗಲೂ ಪಾಕ್‌ನಲ್ಲೇ ಇರುವ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಕಳೆದ ತಿಂಗಳು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು. 2011ರಲ್ಲಿ, ಆಗಿನ ಗೃಹ ಸಚಿವ ಪಿ.ಚಿದಂಬರಂ ಕೂಡಾ ದಾವೂದ್ ಕರಾಚಿಯಲ್ಲೇ ನೆಲೆಸಿರುವ ಬಗ್ಗೆ ಸರಕಾರದ ಬಳಿ ಪುರಾವೆಗಳಿವೆ ಎಂದು ತಿಳಿಸಿದ್ದರು.

ಭಯೋತ್ಪಾದನಾ ಕೃತ್ಯದಲ್ಲಿ ಶಾಮೀಲಾಗಿರುವವರ ಗಡೀಪಾರು ಕುರಿತು ಸಾರ್ಕ್ ರಾಷ್ಟ್ರಗಳ ನಡುವೆ ಶೀಘ್ರ ಒಪ್ಪಂದ ಆಗಬೇಕೆಂದು ಭಾರತ ಈ ಹಿಂದಿನಿಂದಲೂ ಪ್ರತಿಪಾದಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News