ಸಜ್ಜನರು!
ಅವರೆಲ್ಲ ಸೇರಿ ಆತನನ್ನು ಥಳಿಸುತ್ತಿದ್ದರು.
ಸೇರಿದ ಒಂದಿಷ್ಟು ಸಜ್ಜನರು ಅದನ್ನು ಖಂಡಿಸುತ್ತಿದ್ದರು.
ಆತ ಪ್ರತಿಭಟಿಸಲು ನೋಡಿದ. ಸಜ್ಜನರು ಹೇಳಿದರು ‘‘ನೋಡು...ನೀನು ಪ್ರತಿಭಟಿಸ ಬೇಡ. ನಿನ್ನ ಜೊತೆಗೆ ನಾವೆಲ್ಲ ಇದ್ದೇವೆ. ನಾವು ಖಂಡಿಸು ತ್ತಿದ್ದೇವೆ...ನೀನು ಪ್ರತಿ ಹಲ್ಲೆ ನಡೆಸಿದರೆ ಅವರ ಹಲ್ಲೆಗೆ ಅದು ಸಮರ್ಥನೆಯಾಗುತ್ತದೆ...ನಿನಗೂ ಅವರಿಗೂ ವ್ಯತ್ಯಾಸವಿಲ್ಲದಾಗುತ್ತದೆ’’
ಹಲ್ಲೆಗಳು ಜೋರಾಯಿತು. ಸಜ್ಜನರ ಖಂಡನೆಯೂ ಜೋರಾಯಿತು.
ಸಂತ್ರಸ್ತ ನೋವಿನಿಂದ ಚೀರಿ ತನ್ನವರನ್ನು ಕರೆಯ ತೊಡಗಿದ ‘‘ನೋಡು ನಿನ್ನವರನ್ನು ಒಟ್ಟುಗೂಡಿಸಿ ನೀನು ಪ್ರತಿಭಟಿಸಿದರೆ ಅದರಿಂದ ನಿನಗೆ ನಷ್ಟ. ಹಿಂಸೆಗೆ ಪ್ರತಿ ಹಿಂಸೆ ತಪ್ಪು....ಅದು ಕೋಮುವಾದಕ್ಕೆ ಪ್ರತಿ ಕೋಮುವಾದವಾಗುತ್ತದೆ....’’
ಆತ ಜೋರಾಗಿ ಕೂಗಿ ಹೇಳಿದ ‘‘ಹಾಗಾದರೆ ನೀವಾದರೂ ಬನ್ನಿ, ನನ್ನನ್ನು ರಕ್ಷಿಸಿ’’
ಸಜ್ಜನರು ಹೇಳಿದರು ‘‘ನಾವು ಬಂದು ಬಿಡಿಸಿದರೆ ನಿನ್ನ ಪಕ್ಷ ವಹಿಸಿದೆವು ಎಂದಾಗುತ್ತದೆ. ನೇರವಾಗಿ ಹಾಗೆ ನಿನ್ನ ಜೊತೆಗೆ ಕೂಡಿದರೆ ತಪ್ಪಾಗುತ್ತದೆ. ನೀನು ಹೊಡೆತ ತಿನ್ನು. ಆದರೆ ಪ್ರತಿಯಾಗಿ ಹೊಡೆಯಬೇಡ...ನಿನ್ನ ಜೊತೆಗೆ ನಾವಿದ್ದೇವೆ...ನಾವು ಖಂಡಿಸುತ್ತೇವೆ...’’
ಕೆಲ ಹೊತ್ತಿನಲ್ಲೇ ಥಳಿಸುವವರು ತಮ್ಮ ಕೃತ್ಯದಿಂದ ಹಿಂದೆ ಸರಿದು ಹೋದರು. ಸಜ್ಜನರು ಹೇಳಿದರು ‘‘ನಾವು ಹೇಳಿದೆವಲ್ಲ...ನೋಡು ಹಲ್ಲೆ ನಡೆಸುವವರು ಹಿಂದೆ ಸರಿದರು...’’
ಅದನ್ನು ಕೇಳಲು ಸಂತ್ರಸ್ತ ಜೀವದಿಂದಿರಲಿಲ್ಲ.