ಬೆಟ್ಟ
Update: 2017-05-21 18:11 GMT
ಸಣ್ಣ ಗುಡ್ಡವೊಂದಿತ್ತು. ಅದತಳದಲ್ಲಿ ಬಗೆ ಬಗೆಯ ಗಿಡ ಮರಗಳು. ಪ್ರಾಣಿ ಪಕ್ಷಿಗಳು. ಆದರೆ ಗುಡ್ಡಕ್ಕೋ ಬೆಳೆಯುವ ಆಸೆ. ಜಗತ್ತಿನ ಅತೀ ಎತ್ತರದ ಪ್ರದೇಶವೆಂದು ಕರೆಸಿಕೊಳ್ಳುವ, ಜನಸಾಮಾನ್ಯರಾರೂ ತನ್ನನ್ನು ತುಳಿಯದಷ್ಟು ಏರುವ ಕನಸು. ಹೀಗೆ ಕನಸು ಕಾಣುತ್ತಲೇ ಗುಡ್ಡ ಬೆಳೆಯುತ್ತಾ ಹೋಯಿತು. ಬೆಳೆಯುತ್ತಾ ಬೆಳೆಯುತ್ತಾ ಎತ್ತರಕ್ಕೇರಿತು. ಹಿಮಗಳು ಅದನ್ನು ಸುತ್ತುವರಿದವು. ಪ್ರಾಣಿ ಪಕ್ಷಿಗಳು ದೂರವಾದವು. ಮರಗಿಡಗಳೂ ಅಲ್ಲಿ ಬೆಳೆಯುವುದಕ್ಕೆ ಅಸಾಧ್ಯವಾ ದವು. ಅಪರೂಪಕ್ಕೆ ಮನುಷ್ಯ ಅದರ ತುತ್ತ ತುದಿ ಏರಿ ತನ್ನ ಸಾಮರ್ಥ್ಯವನ್ನು ಘೋಷಿಸುತ್ತಿದ್ದ. ಆದರೆ ಅಲ್ಲಿ ಉಳಿಯುವುದಕ್ಕೆ ಬಯಸುತ್ತಿರಲಿಲ್ಲ. ಅವನು ಕೆಳಗಿಳಿದು ಮಾಯವಾಗುತ್ತಿದ್ದ. ಗುಡ್ಡವೀಗ ಏಕಾಂಗಿಯಾಗಿತ್ತು. ಎಲ್ಲರೂ ವರ್ಣಿಸುತ್ತಿದ್ದರೂ, ಎಲ್ಲರಿಂದಲೂ ದೂರವಾ ಗಿತ್ತು. ಬೆಳೆಯುವುದೆಂದರೆ ಒಂಟಿಯಾಗುವುದು ಎನ್ನುವುದು ಅದಕ್ಕೆ ಗೊತ್ತಾಗುವಾಗ ತಡವಾಗಿತ್ತು.
-ಮಗು