ಕಾಂಗ್ರೆಸ್‌ನಲ್ಲಿ ಮುಸ್ಲಿಮರ ನಿರ್ಲಕ್ಷ್ಯ: ಸಮುದಾಯದ ಆಕ್ರೋಶ
ಬೆಂಗಳೂರು, ಜೂ.6: ಇತ್ತೀಚೆಗಷ್ಟೇ ಕೆಪಿಸಿಸಿಗೆ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಎಐಸಿಸಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಕಾರ್ಯಕಾರಿಣಿಗೆ ಆಹ್ವಾನಿತರನ್ನು ನೇಮಕ ಮಾಡುವ ವೇಳೆ ರಾಜ್ಯದ ಎರಡನೆ ಅತಿದೊಡ್ಡ ಸಮುದಾಯವಾಗಿರುವ ಮುಸ್ಲಿಮರನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಮುಸ್ಲಿಮ್ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಆರಂಭದಿಂದಲೂ ಬೆಂಬಲ ನೀಡುತ್ತ ಬಂದಿದೆ. ಆದರೆ, ಅಧಿಕಾರ ಹಾಗೂ ಜವಾಬ್ದಾರಿ ಹಂಚಿಕೆ ವಿಷಯ ಬಂದಾಗ ಪ್ರಬಲ ಸಮುದಾಯಗಳಿಗೆ ಮಣೆ ಹಾಕುವ ಮೂಲಕ, ಮುಸ್ಲಿಮರನ್ನು ಕಡೆಗಣಿಸಿದೆ ಎಂಬ ಆಪಾದನೆಯೂ ಕಾಂಗ್ರೆಸ್ ಮೇಲಿದೆ.
ಕೆಪಿಸಿಸಿ ಅಧ್ಯಕ್ಷರನ್ನಾಗಿ ದಲಿತರು(ಡಾ.ಜಿ.ಪರಮೇಶ್ವರ್), ಕಾರ್ಯಾಧ್ಯಕ್ಷರನ್ನಾಗಿ ಬ್ರಾಹ್ಮಣರು(ದಿನೇಶ್‌ಗುಂಡೂರಾವ್) ಹಾಗೂ ಲಿಂಗಾಯತರು (ಎಸ್.ಆರ್. ಪಾಟೀಲ್), ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಒಕ್ಕಲಿಗರು (ಡಿ.ಕೆ.ಶಿವ ಕುಮಾರ್), ಎಐಸಿಸಿ ಕಾರ್ಯದರ್ಶಿಯಾಗಿ ವಾಲ್ಮೀಕಿ ಸಮುದಾಯದವರು(ಸತೀಶ್ ಜಾರಕಿಹೊಳಿ) ಹಾಗೂ ಎಐಸಿಸಿ ಕಾರ್ಯಕಾರಿಣಿಗೆ ವಿಶೇಷ ಆಹ್ವಾನಿತರನ್ನಾಗಿ ದಲಿತರನ್ನು (ಕೆ.ಎಚ್.ಮುನಿಯಪ್ಪ) ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ.
ಆದರೆ, ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಮರಿಗೆ ಯಾವುದೇ ಪ್ರಾತಿನಿಧ್ಯವನ್ನು ನೀಡಿಲ್ಲ. ತಮ್ಮನ್ನು ಅಹಿಂದ ಪರ ಎಂದು ಬಿಂಬಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಈ ವಿಚಾರದಲ್ಲಿ ಯಾವುದೇ ಧ್ವನಿ ಎತ್ತದಿರುವುದು ಸಮುದಾಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಂತಹ ಸಂದರ್ಭದಲ್ಲಿ ಮುಸ್ಲಿಮರನ್ನು ಪಕ್ಷದಲ್ಲಿ ನಿರ್ಲಕ್ಷ ಮಾಡುತ್ತಿರುವುದು, ಪಕ್ಷಕ್ಕಾಗಿ ದಶಕಗಳ ಕಾಲ ದುಡಿದಿರುವಂತಹ ಹಲವಾರು ನಾಯಕರು ಇದ್ದಾಗಲೂ, ಅವರಿಗೆ ಮಣೆ ಹಾಕದೆ ಇರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಸಮುದಾಯದ ಪ್ರಶ್ನೆಯಾಗಿದೆ.
ಬ್ರಾಹ್ಮಣರು, ಲಿಂಗಾಯತರು ಹಾಗೂ ಒಕ್ಕಲಿಗರು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಇಲ್ಲ. ಆದರೆ, ಆ ಸಮುದಾಯದ ಪ್ರತಿನಿಧಿಗಳಿಗೆ ಪಕ್ಷ ಹಾಗೂ ಸರಕಾರದಲ್ಲಿ ಸೂಕ್ತವಾದ ಸ್ಥಾನಮಾನಗಳನ್ನು ನೀಡಲಾಗಿದೆ. ಶೇ.90ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮುಸ್ಲಿಮರಿಗೆ ಮಾತ್ರ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ ಎಂಬ ಕೂಗು ಕೇಳಿ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಸಮಾಜದ ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಗೂ ಸರಕಾರದಲ್ಲಿರುವ ಸಮು ದಾಯದ ಪ್ರತಿನಿಧಿಗಳು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಉತ್ತಮ ಪ್ರಾತಿನಿಧ್ಯವಿದೆ
ಕಾಂಗ್ರೆಸ್ ಸರಕಾರದಲ್ಲಿ ಮುಸ್ಲಿಮರಿಗೆ ಉತ್ತಮ ಪ್ರಾತಿನಿಧ್ಯ ನೀಡಲಾಗಿದೆ. ಪಕ್ಷ ಸಂಘಟನೆ ವಿಚಾರದಲ್ಲಿಯೂ ನನ್ನನ್ನು ಕೆಪಿಸಿಸಿ ಕಾರ್ಯದರ್ಶಿ ಮಾಡಿದ್ದರು. ಪಕ್ಷದಲ್ಲಿ ರಹ್ಮಾನ್‌ಖಾನ್ ಸೇರಿದಂತೆ ಅನೇಕ ಹಿರಿಯ ನಾಯಕರಿದ್ದಾರೆ. ಅವರನ್ನು ಪರಿಗಣನೆಗೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಅವರಿಗೂ ಪಕ್ಷ ಸೂಕ್ತವಾದ ಜವಾಬ್ದಾರಿ ನೀಡಬಹುದು. ಕಾಂಗ್ರೆಸ್ ಮಾತ್ರ ಎಲ್ಲ ಹಂತಗಳಲ್ಲಿ ಅಲ್ಪಸಂಖ್ಯಾತರನ್ನು ಗುರುತಿಸಿ ಗೌರವಿಸಿ, ಅವಕಾಶಗಳನ್ನು ನೀಡಿದೆ. ಯಾವ ವರ್ಗಗಳನ್ನೂ ಕಾಂಗ್ರೆಸ್ ನಿರ್ಲಕ್ಷಿಸುವುದಿಲ್ಲ.
ಯು.ಟಿ.ಖಾದರ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ
ಗೃಹ ಸಚಿವ ಸ್ಥಾನ ನೀಡಲಿ
ಕಾಂಗ್ರೆಸ್ ಪಕ್ಷವು ಆರಂಭದಿಂದಲೂ ಮುಸ್ಲಿಮರ ಸಂಪೂರ್ಣ ಬೆಂಬಲವನ್ನು ಪಡೆದುಕೊಂಡು ಬಂದಿದೆ. ಆದರೆ, ಈಗ ನಡೆದಿರುವ ಬೆಳವಣಿಗೆಯನ್ನು ಗಮನಿಸಿದರೆ ಮುಸ್ಲಿಮರಿಗೆ ಅನ್ಯಾಯವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ‘ಅಹಿಂದ’ ಪರವಾದ ಮಾತುಗಳನ್ನಾಡುತ್ತಾರೆ. ಆದರೆ, ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಿದ್ದಾರೆ. ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿರುವ ಗೃಹ ಸಚಿವರ ಸ್ಥಾನವನ್ನು ಮುಸ್ಲಿಮರಿಗೆ ನೀಡಲಿ. ಅಲ್ಲದೆ, ಇದು ಚುನಾವಣಾ ವರ್ಷವಾಗಿರುವುದರಿಂದ ಮುಸ್ಲಿಮ್ ನಾಯಕರಿಗೆ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡುವುದು ಉತ್ತಮ. ಕಾಂಗ್ರೆಸ್ ಹೈಕಮಾಂಡ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ, ಮುಸ್ಲಿಮ್ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ.
ಮಸೂದ್ ಅಬ್ದುಲ್ ಖಾದರ್, ಅಧ್ಯಕ್ಷರು, ಅಂಜುಮನ್-ಎ-ಖುದ್ದಾಮುಲ್ ಮುಸ್ಲಿಮೀನ್
ಇದು ಸೋಲಿಗೆ ಮುನ್ನುಡಿ
ಕಾಂಗ್ರೆಸ್ ಪಕ್ಷ ಧಾರ್ಮಿಕ ಅಲ್ಪಸಂಖ್ಯಾತರ ಪರವಾಗಿ ಎಂದಿಗೂ ನಿಲ್ಲುವುದಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ದೇಶದಲ್ಲಿ ಈವರೆಗೆ ಮುಸ್ಲಿಮರ ಮೇಲೆ ನಡೆದಿರುವ ಬಹುತೇಕ ದೌರ್ಜನ್ಯಗಳಿಗೆ ಮೂಲ ಕಾರಣ ಕಾಂಗ್ರೆಸ್. ಕೇಂದ್ರ ಸರಕಾರದ ಗೋಹತ್ಯೆ ನಿಷೇಧದ ಸುತ್ತೋಲೆಯನ್ನು ವಿರೋಧಿಸಿ ಕೇರಳದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಬಹಿರಂಗ ಕ್ಷಮೆ ಕೋರುತ್ತಾರೆ. ಇಂತಹ ಮನುವಾದಿಗಳಿಂದ ಮುಸ್ಲಿಮರಿಗೆ ನ್ಯಾಯ ಸಿಗುತ್ತದೆ ಎಂಬುದನ್ನು ಕನಸಿನಲ್ಲಿಯೂ ನಂಬಲು ಸಾಧ್ಯವಿಲ್ಲ.
ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದಂತಹ ಹಲವಾರು ಮುಸ್ಲಿಮ್ ನಾಯಕರು ಇದ್ದಾರೆ. ಅಂತಹವರನ್ನು ಗುರುತಿಸಿ ಪಕ್ಷದಲ್ಲಿ ಮಹತ್ವದ ಜವಾಬ್ದಾರಿ ನೀಡಬಹುದಾಗಿತ್ತು. ಆದರೆ, ಮುಸ್ಲಿಮರನ್ನು ಕಾಂಗ್ರೆಸ್ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕಾಂಗ್ರೆಸ್‌ನ ಧೋರಣೆಯನ್ನು ಅರ್ಥಮಾಡಿಕೊಂಡಿರುವ ಇಂದಿನ ಯುವ ಸಮೂಹ ಉತ್ತರಪ್ರದೇಶದಲ್ಲಿ ತಕ್ಕ ಉತ್ತರ ನೀಡಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೂ ಅದೇ ರೀತಿ ಕಾಂಗ್ರೆಸ್ ಸೋಲಿಗೆ ಮುನ್ನುಡಿ ಬರೆಯಲಿದ್ದಾರೆ.
ಎ.ಜೆ.ಖಾನ್, ಕಾರ್ಯಾಧ್ಯಕ್ಷ, ದಲಿತ ಮೈನಾರಿಟೀಸ್ ಸೇನೆ
ಕಾರ್ಯಕಾರಿಣಿಗೆ ನೇಮಿಸಲಿ
ರಾಜ್ಯದ ಎರಡನೆ ಅತಿದೊಡ್ಡ ಸಮುದಾಯವಾಗಿರುವ ಮುಸ್ಲಿಮರನ್ನು ಕಾಂಗ್ರೆಸ್ ನಿರ್ಲಕ್ಷಿಸಿರುವುದು ಸರಿಯಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ದಲಿತರಿಗೆ, ಕಾರ್ಯಾಧ್ಯಕ್ಷ ಸ್ಥಾನಗಳು ಲಿಂಗಾಯತ ಹಾಗೂ ಬ್ರಾಹ್ಮಣರಿಗೆ, ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ಒಕ್ಕಲಿಗರಿಗೆ ನೀಡಲಾಗಿದೆ. ಆದರೆ, ಮುಸ್ಲಿಮರನ್ನು ಮಾತ್ರ ಕೈ ಬಿಟ್ಟಿರುವುದು ಸರಿಯಲ್ಲ. ಒಬ್ಬ ಮುಸ್ಲಿಮ್ ಮುಖಂಡನನ್ನು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಗೆ ನೇಮಕ ಮಾಡಬೇಕು. ಇಲ್ಲದಿದ್ದರೆ, ಮುಸ್ಲಿಮ್ ಸಮುದಾಯಕ್ಕೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ.
ಎಸ್.ಎಂ.ಇಕ್ಬಾಲ್, ಪ್ರಧಾನ ಕಾರ್ಯದರ್ಶಿ, ಮುಸ್ಲಿಂ ಮುತ್ತಹಿದಾ ಮಹಝ್
ಲೋಪ ಸರಿಪಡಿಸದಿದ್ದರೆ ಪರಿಣಾಮ
ರಾಜ್ಯ ಕಾಂಗ್ರೆಸ್‌ಗೆ ಸಂಬಂಧಿಸಿದ ಚಟುವಟಿಕೆಗಳ ಕುರಿತು ಇತ್ತೀಚೆಗೆ ತೀರ್ಮಾನ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು, ರಾಜ್ಯದ ಮುಸ್ಲಿಮ್ ನಾಯಕರನ್ನು ಕಡೆಗಣಿಸಿದ್ದು ನ್ಯಾಯಸಮ್ಮತವಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಮುಸ್ಲಿಮರು ಸಂಘಟಿತರಾಗಿ ಬೆಂಬಲ ನೀಡಿದ ಪರಿಣಾಮವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದದ್ದು ಎಂಬುದನ್ನು ಮರೆಯಬಾರದು. ಈ ಲೋಪವನ್ನು ಕಾಂಗ್ರೆಸ್ ಹೈಕಮಾಂಡ್ ಸರಿಪಡಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರುವುದಂತೂ ಸತ್ಯ. ಶೇ.15ರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯದ ಪ್ರತಿನಿಧಿಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತಸ್ಥಾನಮಾನ ನೀಡುವ ತೀರ್ಮಾವನ್ನು ಪಕ್ಷದ ನಾಯಕತ್ವ ಕೂಡಲೇ ಮಾಡಬೇಕು.
ಸೈಯದ್ ಶಾಹಿದ್ ಅಹ್ಮದ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್