ಜಗ್ಗ್ಗ ಜಾಸೂಸ್: ದುರ್ಬಲ ಕತೆ, ನಿಧಾನಗತಿಯ ನಿರೂಪಣೆ

Update: 2017-07-15 18:43 GMT

ಅನುರಾಗ್ ಬಸು ಅವರ ಚಿತ್ರಗಳ ಕುರಿತಂತೆ ಪ್ರೇಕ್ಷಕರು ಒಂದಿಷ್ಟು ಕುತೂಹಲವನ್ನು ಇಟ್ಟುಕೊಂಡಿರುತ್ತಾರೆ. ಮರ್ಡರ್, ಗ್ಯಾಂಗ್‌ಸ್ಟರ್‌ನಂತಹ ಪಕ್ಕಾ ಕಮರ್ಶಿಯಲ್ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತನ್ನ ಬೇರು ಗಟ್ಟಿ ಮಾಡಿಕೊಂಡಿದ್ದ ಬಸು, 2007ರಲ್ಲಿ, ‘ಲೈಫ್ ಇನ್ ಎ ಮೆಟ್ರೋ’ ಚಿತ್ರದ ಮೂಲಕ, ವಿಭಿನ್ನ ದಾರಿಯೊಂದನ್ನು ಆರಿಸಿಕೊಂಡರು. ಜನಪ್ರಿಯ ಧಾಟಿಯನ್ನು ಬದಿಗಿಟ್ಟು, ತುಸು ಗಂಭೀರವಾದರು. ಇದಾದ ಬಳಿಕ ಅವರು ನಿರ್ದೇಶಿಸಿದ ಹೃತಿಕ್ ರೋಷನ್ ಅವರ ‘ಕೈಟ್’ ಚಿತ್ರ ನೆಲಕಚ್ಚಿತಾದರೂ, ಒಂದು ಪ್ರೇಮಕತೆಯನ್ನು ಕಲಾತ್ಮಕವಾಗಿ ಕಟ್ಟಿಕೊಡಲು ಅವರು ನಡೆಸಿದ ಪ್ರಯತ್ನವನ್ನು ಬಾಲಿವುಡ್ ಸ್ವೀಕರಿಸಿತ್ತು.

ಚಿತ್ರದ ನಿಧಾಗತಿಯ ಕತೆಯಿಂದಾಗಿ ಅವರ ಪ್ರಯೋಗ ವಿಫಲವಾಯಿತು. 2012ರಲ್ಲಿ ಬಿಡುಗಡೆಯಾದ ‘ಬರ್ಫಿ’ ಅವರಿಗೆ ಮತ್ತೆ ಹೆಸರು ತಂದುಕೊಟ್ಟಿತು. ಚಾರ್ಲಿ ಚಾಪ್ಲಿನ್‌ನ್ನು ಬಾಲಿವುಡ್‌ಗೆ ಇಳಿಸಲಾಗಿದೆ ಎಂಬೆಲ್ಲ ಆರೋಪಗಳ ನಡುವೆಯೇ ರಣಬೀರ್ ಕಪೂರ್ ಅವರ ಮುಗ್ಧ ಮುಖವನ್ನು ಬಳಸಿಕೊಂಡು ಒಂದು ನವಿರಾದ ಚಿತ್ರವನ್ನು ಕೊಟ್ಟ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡರು. ವಿಮರ್ಶಕರಿಂದಲೂ ಸಾಕಷ್ಟು ಪ್ರಶಂಸೆಗೆ ಒಳಗಾದ ಚಿತ್ರ ಇದು. ವಿಭಿನ್ನ ನಿರೂಪಣೆ, ವಿಭಿನ್ನ ವಸ್ತು ಚಿತ್ರದ ಹೆಗ್ಗಳಿಕೆ. ಅವರ ನಿರಂತರ ಪ್ರಯೋಗ ಶೀಲತೆಯ ಕಾರಣಕ್ಕಾಗಿಯೇ ‘ಜಗ್ಗ ಜಾಸೂಸ್’ ಚಿತ್ರದ ಬಗ್ಗೆ ಬಾಲಿವುಡ್ ವಿಮರ್ಶಕರು ಕುತೂಹಲವನ್ನು ಇರಿಸಿಕೊಂಡಿದ್ದರು. ವಿಭಿನ್ನ, ಆಕರ್ಷಕ ಛಾಯಾಗ್ರಹಣ ಮತ್ತು ಗ್ರಾಫಿಕ್ಸ್‌ಗಳ ಮೂಲಕ ಟ್ರೇಲರ್‌ಗಳೂ ಸಾಕಷ್ಟು ಸುದ್ದಿ ಮಾಡಿರುವುದರಿಂದ ಹಿರಿ-ಕಿರಿಯರು ಈ ಚಿತ್ರದ ಕುರಿತಂತೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು.

‘ಜಗ್ಗ ಜಾಸೂಸ್’ ಕಾಮಿಕ್ ಪುಸ್ತಕದ ಕಥೆಯನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಮಾಡಿರುವ ಚಿತ್ರ. ಜಗ್ಗ ಜಾಸೂಸ್ ಎನ್ನುವ ಮುಗ್ಧ, ಲವಲವಿಕೆಯ ತರುಣನ ಸಾಹಸ ಮತ್ತು ಪತ್ತೇದಾರಿಕೆಯನ್ನು ಚಿತ್ರ ಕೇಂದ್ರವಾಗಿಟ್ಟುಕೊಂಡಿದೆ. ಆರಂಭದಲ್ಲಿ ಬಿಡಿಬಿಡಿಯಾಗಿ ಜಗ್ಗ ಜಾಸೂಸ್‌ನ ಬಾಲ್ಯ, ಆತನ ಅನಾಥ ಬದುಕು ಮತ್ತು ಓರ್ವ ಅಪರಿಚಿತ ಪೋಷಕನಿಂದ ಹೇಗೆ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಚಿತ್ರ ಹೇಳುತ್ತದೆ. ತನ್ನ ಸುತ್ತ ಮುತ್ತ ನಡೆಯುವ ಚಟುವಟಿಕೆಗಳ ಕುರಿತಂತೆ ಅಗಾಧ ಕುತೂಹಲವನ್ನು ಇಟ್ಟುಕೊಂಡಿರುವ ಜಗ್ಗ್ಗ, ಬುದ್ಧಿವಂತನೂ ಹೌದು. ಮಾತನಾಡುವುದಕ್ಕೆ ಉಗ್ಗುವ ಈತ, ಮಾತನ್ನು ಹಾಡಿನ ರೂಪದಲ್ಲಿ ಸಲೀಸಾಗಿ ಹೇಳಬಲ್ಲ. ಆದುದರಿಂದಲೇ ಈ ಚಿತ್ರ ಸಂಗೀತ ಪ್ರಧಾನವೂ ಹೌದು.

ಜಗ್ಗನ ಬದುಕು ಮತ್ತು ಸಾಹಸವನ್ನು ಸಂಗೀತ, ಹಾಡುಗಳ ಮೂಲಕ ನಿರ್ದೇಶಕರು ನಿರೂಪಿಸುತ್ತಾ ಹೋಗುತ್ತಾರೆ. ಈ ಕಾರಣದಿಂದ ಇದೊಂದು ರೀತಿ ಮಕ್ಕಳ ಚಿತ್ರವೂ ಹೌದು. ಒಟ್ಟಿನಲ್ಲಿ ಫ್ಯಾಂಟಸಿ, ಸಾಹಸ, ಹಾಡು, ಹಾಸ್ಯ ಎಲ್ಲವನ್ನೂ ಜೊತೆ ಸೇರಿಸಿ ಮಕ್ಕಳಿಗೂ, ಹಿರಿಯರಿಗೂ ಸಲ್ಲುವ ಚಿತ್ರವೊಂದನ್ನು ಮಾಡಲು ಅನುರಾಗ್ ಬಸು ಪ್ರಯತ್ನಿಸಿದ್ದಾರೆ. ಬೃಹತ್ ಪುಸ್ತಕ ಮೇಳವೊಂದರಲ್ಲಿ ಜಗ್ಗನ ಸಾಹಸಗಳನ್ನು ಶೃತಿ (ಕತ್ರಿನಾ) ಮಕ್ಕಳಿಗೆ ಹೇಳುವ ಮೂಲಕ ಚಿತ್ರ ಆರಂಭವನ್ನು ಪಡೆಯುತ್ತದೆ. ಆಸ್ಪತ್ರೆಯೊಂದರಲ್ಲಿ ಅನಾಥನಾಗಿ ಬೆಳೆಯುವ ಜಗ್ಗ, ಆಸ್ಪತ್ರೆಯ ವೈದ್ಯರು, ನರ್ಸ್ ಗಳ ಪ್ರೀತಿ, ವಾತ್ಸಲ್ಯವನ್ನು ಉಣ್ಣುತ್ತಾ ಬೆಳೆಯುತ್ತಾನೆ. ಈ ಸಂದರ್ಭದಲ್ಲಿ ರೈಲೊಂದರಿಂದ ಹಾರಿ, ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಬಾಗ್ಚಿ(ಶಾಶ್ವತ ಚಟರ್ಜಿ)ಯನ್ನು ಎಳೆಯ ಜಗ್ಗ ರಕ್ಷಿಸಿ ಆಸ್ಪತ್ರೆಗೆ ಸೇರಿಸುತ್ತಾನೆ.

ಮುಂದೆ ಈ ಬಾಗ್ಚಿಯೇ ಜಗ್ಗನ ಅಧಿಕೃತ ತಂದೆಯಾಗುತ್ತಾನೆ. ಹೀಗಿರುವಾಗ ಒಂದು ಅನಿರೀಕ್ಷಿತ ಬೆಳವಣಿಗೆಯಲ್ಲಿ ಜಗ್ಗ ತಂದೆಯಿಂದ ದೂರವಾಗಬೇಕಾಗುತ್ತದೆ. ಮುಂದೆ ಆತ ವಸತಿಶಾಲೆಯೊಂದರಲ್ಲಿ ಬೆಳೆಯಬೇಕಾಗುತ್ತದೆ. ಸಾಹಸಗಳನ್ನು ಮಾಡುತ್ತಲೇ ಬೆಳೆಯುವ ಜಗ್ಗ, ಒಂದು ಸಂದರ್ಭದಲ್ಲಿ ಪತ್ರಕರ್ತೆ ಶೃತಿಯನ್ನು ಮುಖಾಮುಖಿಯಾಗಬೇಕಾಗುತ್ತದೆ. ದುಷ್ಕರ್ಮಿಗಳಿಂದ ಆಕೆಯನ್ನು ರಕ್ಷಿಸುವುದರೊಂದಿಗೆ ಅಕ್ರಮ ಶಸ್ತ್ರಾಸ್ತ್ರಗಳ ವ್ಯವಹಾರ ನಡೆಸುವ ದೊಡ್ಡ ಜಾಲವೊಂದನ್ನು ಅವನು ಬಹಿರಂಗಪಡಿಸುತ್ತಾನೆ.

ಇದೇ ಸಂದರ್ಭದಲ್ಲಿ ಆತನ ಸಾಕು ತಂದೆ ನಾಪತ್ತೆಯಾಗಿರುವ ವಿಷಯ ಆತನಿಗೆ ಗೊತ್ತಾಗುತ್ತದೆ. ತನ್ನ ಗೆಳತಿಯ ಜೊತೆಗೆ ತಂದೆಯನ್ನು ಹುಡುಕುತ್ತಾ ಹೋಗುವ ಸಾಹಸ ಮುಂದೆ, ಉಗ್ರರಿಗೆ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಪೂರೈಸುವ ದೊಡ್ಡ ಅಂತಾರಾಷ್ಟ್ರೀಯ ಮಾಫಿಯಾವನ್ನು ಆತ ಪತ್ತೆ ಹಚ್ಚುವುದರೊಂದಿಗೆ ಮುಕ್ತಾಯವಾಗುತ್ತದೆ. ಅಂತಿಮವಾಗಿ ಆತನ ಸಾಕು ತಂದೆಯನ್ನು ಪತ್ತೆ ಹಚ್ಚುವಲ್ಲೂ ಯಶಸ್ವಿಯಾಗುತ್ತಾನೆ. ಚಿತ್ರ ಗಟ್ಟಿಯಾದ ಕತೆಯಿಲ್ಲದೆ ಸೊರಗಿದೆ. ನಿಧಾನಗತಿಯ ನಿರೂಪಣೆ ಆಕಳಿಕೆಯನ್ನು ತರಿಸುತ್ತದೆ.

ಹಾಡುಗಳ ಮೂಲಕ, ನೃತ್ಯಗಳ ಮೂಲಕ ಚಿತ್ರವನ್ನು ನಿರೂಪಿಸಲು ಯತ್ನಿಸಿದರೂ, ಅತ್ತ ಮಕ್ಕಳಿಗೂ ಸಲ್ಲದೆ, ಇತ್ತ ಹಿರಿಯರಿಗೂ ಒಗ್ಗದೆ ಅತಂತ್ರವಾಗುತ್ತದೆ. ಬರ್ಫಿ ಚಿತ್ರದ ಮುಂದುವರಿಕೆಯೇನೋ ಎನ್ನುವಂತೆ ಅನುರಾಗ್ ಬಸು ಅವರು ಜಗ್ಗನ ಪಾತ್ರವನ್ನು ಮತ್ತೆ ಕಟ್ಟಿದ್ದಾರೆ. ರಣಬೀರ್ ಕಪೂರ್ ಮತ್ತು ಕತ್ರಿನಾ ಚಿತ್ರದ ಆಕರ್ಷಣೆಯಾಗಿದ್ದರೂ, ಪಾತ್ರ ಪೋಷಣೆ ಗಟ್ಟಿಯಾಗಿಲ್ಲ. ಇಡೀ ಚಿತ್ರವನ್ನು ಸಹ್ಯವಾಗಿಸಿರುವುದು ಛಾಯಾಗ್ರಹಣ. ಚಿತ್ರಕತೆ ತೀರಾ ದುರ್ಬಲವಾಗಿರುವುದರಿಂದ, ಅನುರಾಗ್ ಬಸು ಅವರ ಪ್ರಯತ್ನವೆಲ್ಲ ನೀರುಪಾಲಾಗಿದೆ.

ರೇಟಿಂಗ್: **

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - -ಮುಸಾಫಿರ್

contributor

Editor - -ಮುಸಾಫಿರ್

contributor

Similar News