ಅತ್ಯಾಚಾರಕ್ಕಿಲ್ಲಿ ಅಪರೂಪದ ಶಿಕ್ಷೆ

Update: 2017-07-31 18:21 GMT

ಅತ್ಯಾಚಾರ ಸಂತ್ರಸ್ತೆಯರಿಗೆ ನ್ಯಾಯವನ್ನು ದೊರಕಿಸಲು ಜನರು ಹೋರಾಡುವ ಹಲವಾರು ಪ್ರಕರಣಗಳು ನಮ್ಮ ಕಣ್ಣೆದುರಿಗೆ ಇವೆಯಾದರೂ ನಮ್ಮ ದೇಶದಲ್ಲಿ ಹೆಣ್ಣುಮಕ್ಕಳನ್ನು ಕಾಡುತ್ತಿರುವ ಅತ್ಯಾಚಾರದ ಪಿಡುಗನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರಗಳು ಹೇಳಿಕೊಳ್ಳುವಂಥದ್ದೇನೂ ಮಾಡಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಅಪರಾಧಿಗಳು ಹಣಬಲದಿಂದಲೋ ಕಾನೂನುಗಳಲ್ಲಿಯ ಲೋಪಗಳಿಂದಲೋ ಶಿಕ್ಷೆಯಿಂದ ಪಾರಾಗುತ್ತಾರೆ. ಎಲ್ಲೋ ಕೈಬೆರಳೆಣಿಕೆಯ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುತ್ತದಾದರೂ ಅದಕ್ಕಾಗಿ ಸಂತ್ರಸ್ತರು ಸುದೀರ್ಘ ಕಾನೂನು ಹೋರಾಟ ನಡೆಸಬೇಕಾಗುತ್ತದೆ. ಆದರೆ ಆಗಲೂ ಅವರಿಗೆ ಪರಿಪೂರ್ಣವಾದ ನ್ಯಾಯ ಸಿಕ್ಕಿರುವುದಿಲ್ಲ.

ಅತ್ಯಾಚಾರದಂತಹ ಮಾನವ ಸಮಾಜವೇ ತಲೆತಗ್ಗಿಸಬೇಕಾದ ಪ್ರಕರಣಗಳನ್ನು ನಿಭಾಯಿಸಲು ಭಾರತವು ಇಂಡೋನೇಷ್ಯಾದಲ್ಲಿರುವಂತಹ ನಿಯಮಗಳನ್ನು ಅನುಸರಿಸಬೇಕಿದೆ. ಆ ದೇಶವು ಅತ್ಯಾಚಾರಿಗಳ ವಿರುದ್ಧ ತನ್ನ ಕಾನೂನಿನಲ್ಲಿ ಇತ್ತೀಚೆಗೆ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಅಲ್ಲೀಗ ದುಷ್ಕರ್ಮಿಗಳು ಅತ್ಯಾಚಾರವೆಸಗುವ ಮುನ್ನ ಎರಡೆರಡು ಬಾರಿ ಯೋಚಿಸುವ ಸ್ಥಿತಿಯಿದೆ. ಅತ್ಯಾಚಾರವೊಂದು ಮಾಮೂಲು ಘಟನೆ ಎಂದು ಭಾವಿಸಲಾಗುತ್ತಿರುವ ಕೆಲವು ದೇಶಗಳಲ್ಲಿ ಇಂತಹ ನಿಯಮಗಳು ಅತ್ಯಗತ್ಯ ವಾಗಿವೆ.
ಇಡೀ ದೇಶವನ್ನು ನಡುಗಿಸಿದ್ದ 2012ರ ದಿಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ನೆನಪಿಸುವ ಅತ್ಯಾಚಾರ ಪ್ರಕರಣ ಇಂಡೋನೇಷ್ಯಾದಲ್ಲಿ ನಡೆದಾಗ ಅಲ್ಲಿಯ ಸರಕಾರವು ಕೈಕಟ್ಟಿಕೊಂಡು ಕುಳಿತಿರಲಿಲ್ಲ. ಚುರುಕಾಗಿ ಕಾರ್ಯಾಚರಿಸಿದ ಅದು ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಕೊಡಿಸುವ ಮೂಲಕ ಸಾಮೂಹಿಕ ಅತ್ಯಾಚಾರದ ಬಲಿಪಶುವಾಗಿ ಜೀವವನ್ನು ಕಳೆದುಕೊಂಡಿದ್ದ ನತದೃಷ್ಟೆಗೆ ನ್ಯಾಯವೊ ದಗಿಸಿತ್ತು. ತನ್ಮೂಲಕ ಸರಕಾರವೊಂದು ಹೇಗಿರಬೇಕು ಎನ್ನುವುದನ್ನು ತೋರಿಸಿತ್ತು.
 ಇಂಡೋನೇಷ್ಯಾ ಹೊಸ ಕಾನೂನನ್ನು ಜಾರಿಗೆ ತರುವ ಎರಡು ತಿಂಗಳು ಮುನ್ನ ಆ ಅತ್ಯಾಚಾರದ ಘಟನೆ ನಡೆದಿತ್ತು. 12 ಜನರ ಗುಂಪೊಂದು 12ರ ಹರೆಯದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಬಳಿಕ ಆಕೆಯನ್ನು ಕೊಂದು ಹಾಕಿತ್ತು. ಈ ರಾಕ್ಷಸಿ ಕೃತ್ಯದ ವಿರುದ್ಧ ಬೀದಿಗಿಳಿದಿದ್ದ ಅಲ್ಲಿಯ ಪ್ರಜೆಗಳು ದುಷ್ಕರ್ಮಿಗಳನ್ನು ದಂಡಿಸುವಂತೆ ರಾಷ್ಟ್ರಾಧ್ಯಕ್ಷರನ್ನು ಆಗ್ರಹಿಸಿದ್ದರು ಮತ್ತು ಅವರು ಅತ್ಯಾಚಾರಿಗಳ ವಿರುದ್ಧ ಹೊಸ, ಕಠಿಣ ಕಾನೂನೊಂದನ್ನು ತರುವುದಾಗಿ ಭರವಸೆ ನೀಡಿದ್ದರು.
ಇಂಡೋನೇಷ್ಯಾದ ಹೊಸ ಕಾನೂನಿನಂತೆ ಅತ್ಯಾಚಾರಿಗಳಿಗೆ ಸ್ತ್ರೀ ಹಾರ್ಮೋನ್‌ನ ಚುಚ್ಚುಮದ್ದು ನೀಡಿ ಅವರನ್ನು ಷಂಡರನ್ನಾಗಿಸಲಾಗುತ್ತದೆ ಮತ್ತು ಬಳಿಕ ಅಪರಾಧದ ಗಂಭೀರತೆಯನ್ನು ಅವಲಂಬಿಸಿ ಅವರಿಗೆ ಮರಣ ದಂಡನೆಯನ್ನು ವಿಧಿಸಲಾಗುತ್ತದೆ.
ಇದೊಂದೇ ಕಾನೂನಲ್ಲ. ಅತ್ಯಾಚಾರಿಯ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗ ಗೊಳಿಸಲಾಗುತ್ತದೆ ಮತ್ತು ಆತನಿಗೆ ಮರಣ ದಂಡನೆಯಾಗಿರದಿದ್ದರೆ ಆತನ ದೇಹದಲ್ಲಿ ಮೈಕ್ರೋಚಿಪ್‌ವೊಂದನ್ನು ಅಳವಡಿಸಿ ಆತನ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗುತ್ತದೆ. ಅತ್ಯಾಚಾರಿಯು ಜೈಲುಶಿಕ್ಷೆಯನ್ನು ಪೂರೈಸಿದ ಬಳಿಕ ಈ ಚಿಪ್‌ನ್ನು ಕ್ರಿಯಾಶೀಲ ಗೊಳಿಸಲಾಗುತ್ತದೆ.
 ಭಾರತಕ್ಕೂ ಇಂತಹ ಕಠಿಣ ಕಾನೂನುಗಳು ಅಗತ್ಯವಾಗಿವೆ. ವಿಶ್ವಾದ್ಯಂತ ಅತ್ಯಾಚಾರಿ ಗಳನ್ನು ಶಿಕ್ಷಿಸಲೆಂದೇ ಕಠಿಣ ಕಾನೂನುಗಳನ್ನು ಪಾಲಿಸುತ್ತಿರುವಾಗ ನಮ್ಮ ಸರಕಾರವೂ ಅತ್ಯಾಚಾರಿಗಳ ವಿರುದ್ಧದ ಕಾನೂನುಗಳಲ್ಲಿ ತಿದ್ದುಪಡಿಗಳನ್ನು ತಂದು ಅವುಗಳನ್ನು ಕಠಿಣವಾಗಿಸಬೇಕಿದೆ.

Writer - ಎನ್.ಕೆ.

contributor

Editor - ಎನ್.ಕೆ.

contributor

Similar News