50 ವರ್ಷಗಳಲ್ಲಿ 400 ಭಾರತೀಯ ಭಾಷೆಗಳ ಸಾವು: ಸಂಶೋಧಕರ ಎಚ್ಚರಿಕೆ
ಹೊಸದಿಲ್ಲಿ, ಆ. 4: ಭಾರತದ 130 ಕೋಟಿ ಜನರು ಮಾತನಾಡುತ್ತಿರುವ ಅರ್ಧಕ್ಕೂ ಹೆಚ್ಚಿನ ಭಾಷೆಗಳು ಮುಂದಿನ 50 ವರ್ಷಗಳಲ್ಲಿ ಸಾಯುವ ಸಾಧ್ಯತೆಯಿದೆ ಎಂದು ಪಿಎಸ್‌ಎಲ್‌ಐ ಸಂಶೋಧಕರು ಹೇಳಿದ್ದಾರೆ. ದೇಶದ ಅಪಾಯದಂಚಿನಲ್ಲಿರುವ ಬುಡಕಟ್ಟು ಸಮುದಾಯಗಳು ಮಾತನಾಡುತ್ತಿರುವ ಭಾಷೆಗಳನ್ನು ರಕ್ಷಿಸಲು ಸಂಘಟಿತ ಪ್ರಯತ್ನಗಳು ನಡೆಯಬೇಕಾಗಿದೆ ಎಂದು ಅವರು ಕರೆ ನೀಡಿದ್ದಾರೆ.
ದೇಶದ ಭಾಷೆಗಳ ಬಗ್ಗೆ ನಡೆಸಲು ಉದ್ದೇಶಿಸಲಾಗಿರುವ 50 ಸಂಪುಟಗಳ ಸಮೀಕ್ಷೆಯ ಇತ್ತೀಚಿನ 11 ಸಂಪುಟಗಳ ಬಿಡುಗಡೆ ಸಮಾರಂಭದಲ್ಲಿ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯ (ಪಿಎಸ್‌ಐಎಲ್) ಈ ಆತಂಕ ವ್ಯಕ್ತಪಡಿಸಿದೆ.
ಭಾರತೀಯರು ಸುಮಾರು 780 ಭಾಷೆಗಳನ್ನು ಮಾತನಾಡುತ್ತಿದ್ದಾರೆ ಎಂದು ಪಿಎಸ್‌ಎಲ್‌ಐ ಹೇಳಿದೆ.
‘‘ಮುಂದಿನ 50 ವರ್ಷಗಳಲ್ಲಿ ಕನಿಷ್ಠ 400 ಭಾರತೀಯ ಭಾಷೆಗಳು ಸಾಯುವ ಅಪಾಯವನ್ನು ಎದುರಿಸುತ್ತಿವೆ’’ ಎಂದು ಪಿಎಸ್‌ಎಲ್‌ಐ ಅಧ್ಯಕ್ಷ ಜಿ.ಎನ್. ಡೆವಿ ಹೇಳಿದರು.
ಪ್ರತಿ ಬಾರಿ ಭಾಷೆಯೊಂದು ನಾಶವಾದಾಗಲೆಲ್ಲ ಅದಕ್ಕೆ ಸಂಬಂಧಪಟ್ಟ ಸಂಸ್ಕೃತಿ ನಾಶವಾಗುತ್ತದೆ ಎಂದು ಡೆವಿ ಹೇಳಿದರು. ಕಳೆದ ಐದು ದಶಕಗಳಲ್ಲಿ ಭಾರತ ಈಗಾಗಲೇ 250 ಭಾಷೆಗಳನ್ನು ಕಳೆದುಕೊಂಡಿದೆ ಎಂದರು.