ಉಯಿಲು
Update: 2017-10-08 18:34 GMT
ತಂದೆ ತನ್ನ ಕೊನೆಯ ದಿನ ಹತ್ತಿರ ಬರುತ್ತಿದ್ದಂತೆ ಮಕ್ಕಳೆಲ್ಲರನ್ನು ಕರೆದ.
‘‘ನೋಡಿ, ಮಕ್ಕಳೇ...ನಾನು ನನ್ನ ಉಯಿಲು ಬರೆದಿದ್ದೇನೆ...’’ ಹೇಳಿದ.
‘‘ಈಗ ಯಾಕಪ್ಪ... ನೀವು ಇನ್ನೂ ನೂರು ವರ್ಷ ಬದುಕುತ್ತೀರಿ’’ ಒಳಗೊಳಗೆ ಖುಷಿಯಾದರೂ, ಮಕ್ಕಳು ರಾಗ ಎಳೆದರು.
‘‘ಇರಲಿ... ಸಾವು ಯಾವಾಗ ಬರುತ್ತೇ ಎನ್ನುವುದು ಯಾರಿಗೆ ಗೊತ್ತು? ವಿವಿಧ ಬ್ಯಾಂಕಿನಲ್ಲಿರುವ ನನ್ನ ಹಣವನ್ನು ಹಂಚುತ್ತಿದ್ದೇನೆ...ಕರ್ಣಾಟಕ ಬ್ಯಾಂಕಿನಲ್ಲಿರುವ 20 ಲಕ್ಷ ಹಿರಿಯ ಮಗನಿಗೆ. ಸ್ಟೇಟ್ ಬ್ಯಾಂಕಿನಲ್ಲಿರುವ 15 ಲಕ್ಷ ರೂ ಮಧ್ಯದ ಮಗನಿಗೆ. ಕೆನರಾ ಬ್ಯಾಂಕಿನಲ್ಲಿರುವ 10 ಲಕ್ಷ ರೂ. ಕಿರಿಯ ಮಗನಿಗೆ. ಆರ್‌ಜೆ ಫೈನಾನ್ಸ್ ನಲ್ಲಿರುವ 5 ಲಕ್ಷ ಒಬ್ಬಳೇ ಮಗಳಿಗೆ’’. ಹಿರಿ-ಕಿರಿ ಭೇದ ಮಾಡಿದ್ದಕ್ಕೆ ಅಸಮಾಧಾನವಿದ್ದರೂ ಮಕ್ಕಳು ಒಪ್ಪಿಕೊಂಡರು. ಇಷ್ಟಾದರೂ ಸಿಕ್ಕಿತಲ್ಲ ಎಂದು.
ತಂದೆ ತೀರಿ ಹೋದ ಮರುದಿನ ಅವರಿಗೆ ಗೊತ್ತಾಯಿತು... ಅದು ತಂದೆ ವಿವಿಧ ಬ್ಯಾಂಕಿನಲ್ಲಿ ಮಾಡಿಟ್ಟ ಸಾಲ ಎನ್ನುವುದು.