ಹಜ್: ಸಹಾಯಧನವಿಲ್ಲದೆ ಎಲ್ಲರಿಗೂ ಎಟಕಬಹುದಾದ ಯಾತ್ರೆ

Update: 2017-10-20 18:45 GMT
ಹಜ್: ಸಹಾಯಧನವಿಲ್ಲದೆ ಎಲ್ಲರಿಗೂ ಎಟಕಬಹುದಾದ ಯಾತ್ರೆ
  • whatsapp icon

ಹೊಸ ಹಜ್ ನೀತಿ 2018-2022, ಭಾರತದಿಂದ ಹೊರಡುವ ವಾರ್ಷಿಕ ಹಜ್‌ಯಾತ್ರೆಯ ಆಡಳಿತವನ್ನು ಪುನಶ್ಚೇತನಗೊಳಿಸುವ, ಪುನರ್‌ರೂಪಿಸುವ ಒಂದು ಪ್ರಯತ್ನವಾಗಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಅಕ್ಟೋಬರ್ 7ರಂದು ಬಿಡುಗಡೆ ಮಾಡಿದ ಈ ನವ ನೀತಿಯು ಸರಕಾರ ನೀಡುವ ಸಹಾಯಧನವನ್ನು ಸಂಪೂರ್ಣವಾಗಿ ನಿಲ್ಲಿಸಿ, ತಾವು ಒಬ್ಬರೇ ಇರುವ (ಸಿಂಗಲ್) ಮಹಿಳೆಯರಿಗೂ ಈ ಇಸ್ಲಾಮಿಕ್ ಆಚರಣೆಯನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಕೆಲವು ಸುಧಾರಣೆಗಳನ್ನು ತಂದು, ಹಜ್ ಯಾತ್ರಿಕರ ಆಯ್ಕೆಯನ್ನು ಇನ್ನಷ್ಟು ಪಾರದರ್ಶಕವಾಗುವಂತೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶಗಳನ್ನು ಹೊಂದಿದೆ; ಈ ಉದ್ದೇಶಗಳ ಈಡೇರಿಕೆಗೆ ಪ್ರಯತ್ನಿಸುತ್ತದೆ.

ತನ್ನ ಗಡಿಗಳಾಚೆಗೆ ಭಾರತ ಸರಕಾರ ಕೈಗೊಳ್ಳುವ ಒಂದು ಅತ್ಯಂತ ಸಂಕೀರ್ಣವಾದ ಆಡಳಿತಾತ್ಮಕ ಕಾರ್ಯ, ಹಜ್‌ಯಾತ್ರೆ. ಪ್ರತೀ ವರ್ಷ ಸೌದಿ ಅರೇಬಿಯಾದ ಪವಿತ್ರ ಸ್ಥಳಗಳ ಸುತ್ತ ಸುತ್ತುವ ಒಂದು ಬೃಹತ್ತಾದ ಸಮಾವೇಶದಲ್ಲಿ ಭಾರತದಿಂದ ಆಗಮಿಸಿರುವ ಸುಮಾರು 1,70,000 ಮಂದಿ ನೆರೆಯುತ್ತಾರೆ. ಹಜ್ ಯಾತ್ರೆಯು ನಿಗದಿತವಾದ ಐದರಿಂದ ಆರುದಿನಗಳಿಗೆ ಸೀಮಿತವಾಗಿದ್ದರೂ, ಆ ಯಾತ್ರೆಯನ್ನು ಏರ್ಪಡಿಸುವ ಆಡಳಿತಾತ್ಮಕ ಕೆಲಸ ಕಾರ್ಯಗಳು ಇಡೀ ವರ್ಷದ ಉದ್ದಕ್ಕೂ ನಡೆಯುತ್ತವೆ. ಭಾರತದ ಹಜ್‌ಸಮಿತಿಯ ಮೂಲಕ ಹಜ್‌ಯಾತ್ರೆಗೆ ಪ್ರತೀ ವರ್ಷ ಅರ್ಜಿಸಲ್ಲಿಸುವ ಪ್ರತೀ ಮೂವರಲ್ಲಿ, ಒಬ್ಬ ವ್ಯಕ್ತಿ ಮಾತ್ರ ದೇಶದ ವಿವಿಧ ಸ್ಥಳಗಳಿಂದ ಸೌದಿ ಅರೇಬಿಯಾದ ಜಿದ್ದಾಕ್ಕೆ 1.29ಲಕ್ಷ ಯಾತ್ರಿಕರನ್ನು ಕರೆದೊಯ್ಯುವ ಮುನ್ನೂರಕ್ಕೂ ಹೆಚ್ಚು ಚಾರ್ಟರ್ಡ್ ವಿಮಾನಗಳಲ್ಲಿ ಸೀಟು ಪಡೆಯುವುದರಲ್ಲಿ ಯಶಸ್ವಿಯಾಗುತ್ತಾನೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಹೊಸ ಹಜ್ ನೀತಿಯ ಕರಡನ್ನು ಚರ್ಚೆಗಾಗಿ ಸಾರ್ವಜನಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ. 1990ರ ದಶಕದಲ್ಲಿ ಹಡಗು ಪ್ರಯಾಣಗಳ ಬದಲಾಗಿ ಚಾರ್ಟರ್ಡ್ ವಿಮಾನಗಳ ಪ್ರಯಾಣ ಆರಂಭವಾದಾಗಿನಿಂದ ಭಾರತ ಸರಕಾರವು ವಿಮಾನ ಪ್ರಯಾಣ ವೆಚ್ಚದಲ್ಲಿ ಸಹಾಯಧನ ಸಬ್ಸಿಡಿ ನೀಡುತ್ತಾ ಬಂದಿದೆ. 2012ರ ಸುಪ್ರೀಂ ಕೋರ್ಟ್‌ನ ಒಂದು ತೀರ್ಪಿಗನುಗುಣವಾಗಿ, ಕ್ರಮೇಣ ಸಬ್ಸಿಡಿಗೆ ವಿದಾಯ ಹೇಳಲಾ ಗುತ್ತಿದೆ. ವಾರ್ಷಿಕ 600 ಕೋಟಿ ರೂ.ಗಳಿಂದ ಆದೀಗ 200 ಕೋಟಿ ರೂ.ಗೆ ಇಳಿದಿದೆ. ಈ ಸಬ್ಸಿಡಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಹೊಸನೀತಿಯು ಸರಿಯಾಗಿಯೇ ವಾದಿಸುತ್ತದೆ. ಈ ಉದ್ದೇಶದಿಂದಲೇ ಪ್ರಾಯಶಃ ಸದ್ಯ ಇರುವ 21 ನಗರಗಳಿಂದ ಒಂಬತ್ತು ನಗರಗಳ ವಿಮಾನ ನಿಲ್ದಾಣಗಳಿಗಷ್ಟೇ ಹಜ್ ಯಾತ್ರಿಕರು ವಿಮಾನ ಏರುವ ನಿಲ್ದಾಣ ಸಂಖ್ಯೆಗಳನ್ನು ಸೀಮಿತಗೊಳಿಸಿ, ಅವುಗಳ ಸಂಖ್ಯೆಯನ್ನು ಕಡಿಮೆಮಾಡಲಾಗಿದೆ. ಹೀಗೆ ಮಾಡುವಾಗ ಶ್ರೀನಗರ ಮತ್ತು ಗುವಾಹಟಿಯನ್ನು ಕೈಬಿಟ್ಟಿರುವುದರಿಂದ ಎರಡು ವಿಶಿಷ್ಟ ಪ್ರದೇಶಗಳನ್ನು, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳನ್ನು, ಸಂಪೂರ್ಣವಾಗಿ ಕಡೆಗಣಿಸಿದಂತಾಗಿದೆ ಎಂದು ಅನ್ನಿಸುತ್ತದೆ.

ಸಮುದ್ರಯಾನ ಬೇಡ

 ಸರಕಾರದ ನೂತನ ಹಜ್ ನೀತಿಯು ಸಮುದ್ರಯಾನವನ್ನು ಪುನಾರಂಭಿಸುವ ಬಗ್ಗೆ ಸೂಚನೆ ನೀಡಿದೆ. ಮತ್ತು ಅಂತಾರಾಷ್ಟ್ರೀಯ ಬಿಡ್ಡರ್‌ಗಳಿಂದ ಈ ನಿಟ್ಟಿನಲ್ಲಿ ಆಸಕ್ತಿ ಅಭಿವ್ಯಕ್ತಿ (ಎಕ್ಸ್‌ಪ್ರೆಶನ್ ಆಫ್ ಇಂಟರೆಸ್ಟ್)ಯನ್ನು ಆಹ್ವಾನಿಸಿದೆ. ಪ್ರಯಾಣದ ವೆಚ್ಚವನ್ನು ಕಡಿಮೆಮಾಡಿ ಯಾತ್ರೆಯಲ್ಲಿ ಸಾಮಾನ್ಯ ಭಾರತೀಯನಿಗೆ ಕೈಗೆಟಕುವಂತೆ ಮಾಡುವ ಉದ್ದೇಶವೇನೋ ಒಳ್ಳೆಯದೆ, ಆದರೆ ದುಬಾರಿಯಾದ ಲಗ್ಸುರಿ ವಿಹಾರ ಹಡಗು ಯಾನಗಳನ್ನು ಹೊರತು ಪಡಿಸಿದರೆ ಪ್ರಯಾಣಿಕರ ಹಡಗುಯಾನದ ಕಾಲ ಎಂದೋ ಕಳೆದು ಹೋಗಿದೆ ಎಂಬುದನ್ನು ಮರೆಯಬಾರದು. ಅಲ್ಲದೆ ಮುಂಬೈ ಮತ್ತು ಜಿದ್ದಾ ನಡುವೆ 2,515 ನಾಟಿಕಲ್ ಮೈಲು ಅಥವಾ 4,527 ಕಿ.ಮೀ. ದೂರದ ಪ್ರಯಾಣವನ್ನು ಮೂರು ದಿನಗಳಲ್ಲಿ ಮುಗಿಸಬಹುದೆಂದು ನಿರೀಕ್ಷಿಸುವುದು ಕೂಡ ತಪ್ಪು. ಭಾರೀ ಗಟ್ಟಿಮುಟ್ಟಾದ ಹಡಗುಗಳೇ ಒಂದು ಗಂಟೆಗೆ 15 ನಾಟಿಕಲ್ ಮೈಲುಗಳ ವೇಗದಲ್ಲಿ ಸಂಚರಿಸಬಲ್ಲವು ಆಗಿರುವಾಗ, ಯಾವ ಹಡಗೂ ಈ ದೂರವನ್ನು 7ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಲಾರದು, ಆದ್ದರಿಂದ ಸರಕಾರ ಈ ಯೋಜನೆಯನ್ನು ಬಿಟ್ಟು ಬಿಡುವುದು ಒಳ್ಳೆಯದು.

ದುರ್ಬಳಕೆಯ ಸಾಧ್ಯತೆ

ಹಡಗುಗಳು ದುರ್ಬಳಕೆ ಮತ್ತು ಭ್ರಷ್ಟ ವ್ಯವಹಾರಗಳಿಗೆ ಒಂದು ಆಗರವಾದ ದ್ದರಿಂದಲೇ ಅವುಗಳನ್ನು ರದ್ದು ಪಡಿಸಲಾಯಿತು. ಸಮುದ್ರಯಾನಗಳು ಕಡಿಮೆ ವೆಚ್ಚದ ಪ್ರಯಾಣಗಳಾದ್ದರಿಂದ ಸಂಘಟಿತ ಗ್ಯಾಂಗ್‌ಗಳು ಮಕ್ಕಾ ಯಾತ್ರೆಯ ವೇಳೆ ಭಿಕ್ಷೆ ಬೇಡಲು ಪಶ್ಚಿಮ ಬಂಗಾಲದಿಂದ ಬಡವರನ್ನು ಕರೆದುಕೊಂಡು ಸೌದಿಗೆ ಮಾನವ ಕಳ್ಳಸಾಗಣೆ ಮಾಡಲು ಆರಂಭಿಸಿದ್ದವು. ವಿಮಾನಯಾನ ಕೈಗೆಟಕದವರು ಸಮುದ್ರ ಪ್ರಯಾಣದ ಮೂಲಕ ಸೌದಿಗೆ ಹೋಗಿ ಯಾತ್ರೆಯಿಂದ ಮರಳಿ ಬರುವಾಗ ತಾವು ಹೋಗುವಾಗ ಇದ್ದುದಕ್ಕಿಂತ ನಾಲ್ಕು ಪಟ್ಟು ಲಗೇಜ್ ತರುವುದು ಹೇಗೆ ಸಾಧ್ಯವಾಯಿತು? ಎಂಬ ಭಾರತದ ಹಜ್ ಕಮಿಟಿ ಅಧ್ಯಕ್ಷ (1987 - 1994) ಮಹಮ್ಮದ್ ಅಮೀನ್ ಖಂಡ್ವಾನಿ ಇವರ ಪ್ರಶ್ನೆ ಗಮನಾರ್ಹ.

ಲಿಂಗ ಸಮಾನತೆ

  ನೂತನ ನೀತಿಯಲ್ಲಿ 45ರ ಹರೆಯ ದಾಟಿದ ಮಹಿಳೆಯರಿಗೆ, ಒಬ್ಬ ಮೆಹರಂ ಇಲ್ಲದೆ, 4 ಮಂದಿಯ ಒಂದು ತಂಡದಲ್ಲಿ ಹಜ್‌ಯಾತ್ರೆಗೆ ಹೋಗಲು ಅನುಮತಿ ನೀಡುವ ಪ್ರಸ್ತಾಪ ಲಿಂಗ ಸಮಾನತೆಯ ನಿಟ್ಟಿನಲ್ಲಿ ಇಟ್ಟಿರುವ ಒಂದು ಅಭಿನಂದನಾರ್ಹ ಹೆಜ್ಜೆ. ಮೆಹರಂ ಎಂದರೆ ಓರ್ವ ಮುಸ್ಲಿಂ ಮಹಿಳೆ ಮದುವೆಯಾಗಲು ಸಾಧ್ಯವಿಲ್ಲದ ತಂದೆ, ಮಗ ಅಥವಾ ಸಹೋದರನಂತಹ ಒಬ್ಬ ಗಂಡಸು. ಸರಕಾರದ ಈ ಹೆಜ್ಜೆಯಿಂದಾಗಿ ವಯಸ್ಸಾದ ಅವಿವಾಹಿತ ಸ್ತ್ರೀಯರು, ವಿಧವೆಯರು ಮತ್ತು ತಮ್ಮ ಗಂಡಂದಿರು ಆದಾಗಲೇ ಹಜ್‌ಯಾತ್ರೆ ಮುಗಿಸಿರುವಂತಹ ಮಹಿಳೆಯರಿಗೆ ಹಜ್‌ಯಾತ್ರೆ ಪೂರೈಸುವ ತಮ್ಮ ಜೀವಮಾನದ ಮಹತ್ವಾಕಾಂಕ್ಷೆಯನ್ನು ಈಡೇರಿಸುವ ಅವಕಾಶ ಸಿಕ್ಕಿದಂತಾಗುತ್ತದೆ.

70ವರ್ಷ ವಯಸ್ಸು ದಾಟಿದ ಮತ್ತು 4 ಬಾರಿ ಡ್ರಾ ಮಾಡಿದಾಗಲೂ ಅವಕಾಶ ಸಿಕ್ಕಿರದ ಅರ್ಜಿದಾರರಿಗೆ ಅವಕಾಶ (500 ಮಂದಿಗೆ) ನೀಡುವ ವಿಶೇಷ ಕೋಟಾವನ್ನು ರದ್ದುಮಾಡದೆ ಉಳಿಸಿಕೊಳ್ಳುವುದು ಅಪೇಕ್ಷಣೀಯ.

 ಒಂದೇ ವರ್ಗ

ಪವಿತ್ರ ನಗರಗಳಲ್ಲಿ ಯಾತ್ರಿಕರು ವಾಸ್ತವ್ಯ ಇರಬೇಕಾಗುವ 40ದಿನಗಳ ಅವಧಿಯಲ್ಲಿ ಕೇವಲ ಒಂದು ವರ್ಗ(ಕೆಟಗರಿ)ದ ವಸತಿಗೆ ಮಾತ್ರ ಅವಕಾಶವಿರಬೇಕೆಂದು ಹೊಸನೀತಿ ಹೇಳಿರುವುದು ಸರಿಯಾಗಿಯೇ ಇದೆ.

 ಬಲಿ ಕೂಪನ್‌ಗಳು

ಹಜ್ ಸಮಿತಿಯಿಂದಲೇ (ತಲಾ ಸುಮಾರು 9,000 ರೂಪಾಯಿ ತಗಲುವ) ಬಲಿಕೂಪನ್‌ಗಳನ್ನು ಎಲ್ಲ ಯಾತ್ರಿಕರೂ ಕೊಂಡುಕೊಳ್ಳಬೇಕೆಂದು ಕಡ್ಡಾಯ ಮಾಡಿರುವುದು ಸೂಕ್ತವಲ್ಲ. ಬಲಿ(ಕುರ್ಬಾನಿ)ಗೆ ಬದಲಾಗಿ 7ದಿನಗಳ ಉಪವಾಸ ಮಾಡುವ ಯಾತ್ರಿಕರು ಇರುವುದರಿಂದ ಈ ನಿಯಮವನ್ನು ಕೈ ಬಿಡುವುದು ಒಳ್ಳೆಯದು.

ಒಟ್ಟಿನಲ್ಲಿ ಹೊಸ ನೀತಿಯು ಇತ್ತೀಚೆಗೆ ಆಗಿರುವ ಬದಲಾವಣೆಗಳಿಗೆ ಪೂರಕವಾಗಿಯೇ ಇದೆ ಎನ್ನಬಹುದು.

 2012ರ ಸುಪ್ರೀಂ ಕೋರ್ಟ್‌ನ ಒಂದು ತೀರ್ಪಿಗನುಗುಣವಾಗಿ, ಕ್ರಮೇಣ ಸಬ್ಸಿಡಿಗೆ ವಿದಾಯ ಹೇಳಲಾಗುತ್ತಿದೆ. ವಾರ್ಷಿಕ 600 ಕೋಟಿ ರೂ.ಗಳಿಂದ ಆದೀಗ 200 ಕೋಟಿ ರೂ.ಗೆ ಇಳಿದಿದೆ. ಈ ಸಬ್ಸಿಡಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಹೊಸನೀತಿಯು ಸರಿಯಾಗಿಯೇ ವಾದಿಸುತ್ತದೆ.

Writer - ಎಂ. ಎ. ಸಿರಾಜ್

contributor

Editor - ಎಂ. ಎ. ಸಿರಾಜ್

contributor

Similar News