ವಿವಾಹದ ಬಳಿಕವೂ ಪತ್ನಿಯ ಧರ್ಮ ಬದಲಾಗದು: ಸುಪ್ರೀಂಕೋರ್ಟ್

Update: 2017-12-08 03:46 GMT

ಹೊಸದಿಲ್ಲಿ, ಡಿ. 8: ವಿವಾಹದ ಬಳಿಕ ಪತ್ನಿಯ ಧರ್ಮ ಪತಿಯ ನಂಬಿಕೆಯ ಜತೆಗೆ ವಿಲೀನವಾಗುತ್ತದೆ ಎಂಬ ಮುಂಬೈ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಅನ್ಯ ಸಮುದಾಯದವರನ್ನು ವಿವಾಹವಾದ ಕಾರಣಕ್ಕೆ ಪಾರ್ಸಿ ಮಹಿಳೆಯೊಬ್ಬರಿಗೆ ತಮ್ಮ ತಂದೆ- ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಲು ಮೌನಗೋಪುರ (ಟವರ್ ಆಫ್‌ಸೈಲೆನ್ಸ್)ಕ್ಕೆ ಪ್ರವೇಶ ನಿರಾಕರಿಸಿರುವ ವಲ್ಸದ್ ಝೊಯೊಸ್ಟ್ರಿಯನ್ ಟ್ರಸ್ಟ್ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಕೋರಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎ.ಎಂ. ಖನ್ವೀಲ್ಕರ್, ಡಿ.ವೈ.ಚಂದ್ರಚೂಡ್ ಹಾಗೂ ಅಶೋಕ್ ಭೂಷಣ್ ಅವರನ್ನು ಒಳಗೊಂಡ ನ್ಯಾಯಪೀಠ, "ಬೇರೆ ಸಮುದಾಯದ ಮಹಿಳೆಯನ್ನು ವಿವಾಹವಾದ ಪಾರ್ಸಿ ಪುರುಷನಿಗೆ ಮೌನಗೋಪುರ ಪ್ರವೇಶ ನಿರ್ಬಂಧಿಸಿಲ್ಲ ಎಂದ ಮೇಲೆ ಬೇರೆ ಸಮುದಾಯದ ಪುರುಷನನ್ನು ವಿವಾಹವಾದ ಪಾರ್ಸಿ ಮಹಿಳೆಗೆ ಏಕೆ ನಿರ್ಬಂಧ" ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ಗೂಲ್‌ರೋಕ್ ಎಂ.ಗುಪ್ತಾ ಅವರು ಮೌನಗೋಪುರಕ್ಕೆ ಪ್ರವೇಶಿಸದಂತೆ ವಲ್ಸದ್ ಟ್ರಸ್ಟ್ ನಿರ್ಬಂಧ ವಿಧಿಸಿತ್ತು. ಆದರೆ ಮಹಿಳೆಯ ನಾಗರಿಕ ಹಕ್ಕನ್ನು ನಿರಾಕರಿಸಲು ವಿವಾಹ ಕಾರಣವಾಗುವಂತಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಹಿಂದೂ ವ್ಯಕ್ತಿಯೊಬ್ಬರನ್ನು ವಿವಾಹವಾದ ಕಾರಣಕ್ಕೆ ಗೂಲ್‌ರೋಕ್ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು.

ಸಂತ್ರಸ್ತೆ ಪರ ವಾದ ಮಂಡಿಸಿದ ಇಂದಿರಾ ಜೈಸಿಂಗ್ ಅವರ ವಾದವನ್ನು ಕೋರ್ಟ್ ಎತ್ತಿಹಿಡಿದಿದೆ. "ವಿವಾಹವಾದ ಮಾತ್ರಕ್ಕೆ ಮಹಿಳೆ ತನ್ನನ್ನು ಪುರುಷನಿಗೆ ಒತ್ತೆ ಇಟ್ಟುಕೊಳ್ಳುವುದಿಲ್ಲ. ಪತಿಯ ಧರ್ಮದ ಜತೆಗೆ ಪತ್ನಿಯ ಧರ್ಮ ವಿಲೀನವಾಗುತ್ತದೆ ಎಂಬ ಮುಂಬೈ ಹೈಕೋರ್ಟ್ ವಾದವನ್ನು ನಾವು ಒಪ್ಪುವುದಿಲ್ಲ. ಬೇರೆ ಸಮುದಾಯದ ವ್ಯಕ್ತಿಯನ್ನು ವಿವಾಹವಾದ ಮಾತ್ರಕ್ಕೆ ಮೌನಗೋಪುರಕ್ಕೆ ಪ್ರವೇಶ ನಿರ್ಬಂಧಿಸುವ ಯಾವ ಕಾನೂನು ಕೂಡಾ ಇಲ್ಲ" ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News