ಸುಭಾಶ್ ಚಂದ್ರ ಬೋಸ್ ಬಗ್ಗೆ ಅವರ ಪುತ್ರಿ ಹೇಳಿದ್ದೇನು ?

Update: 2018-01-23 17:08 GMT

ಹೊಸದಿಲ್ಲಿ, ಜ. 23: ತನ್ನ ತಂದೆಗೆ ಅದೃಷ್ಟ-ದುರಾದೃಷ್ಟದ ಮಿಶ್ರ ಅನುಭವವಾಗಿತ್ತು ಎಂಬುದು ನನ್ನ ಭಾವನೆ ಎಂದು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಏಕೈಕ ಪುತ್ರಿ, ಜರ್ಮನ್ ಮೂಲದ ಆರ್ಥಿಕ ತಜ್ಞೆ, ಪ್ರೊಫೆಸರ್ ಅನಿತಾ ಬೋಸ್ ಫಾಫ್ ಹೇಳಿದ್ದಾರೆ.

75 ವರ್ಷದ ಅನಿತಾ ಫಾಫ್ ತನ್ನ ತಂದೆ ಕುರಿತ ಪುಸ್ತಕ ‘ಲೈಡ್ ರೆಸ್ಟ್: ದಿ ಕಾಂಟ್ರವರ್ಸಿ ಓವರ್ ಸುಭಾಶ್ ಚಂದ್ರ ಬೋಸ್ ಡೆತ್’ನ ಮುನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ. ಈ ಪುಸ್ತಕವನ್ನು ಲಂಡನ್ ಮೂಲದ ಬಿಬಿಸಿ ಹಾಗೂ ಸಿಎನ್‌ಎನ್ ಟಿವಿಯ ಆಶಿಸ್ ರಾಯ್ ಬರೆದಿದ್ದಾರೆ. ರ್ಯಾಲಿ ಬುಕ್ಸ್ 2018ರ ಫೆಬ್ರವರಿ 12ರಂದು ಬಿಡುಗಡೆ ಮಾಡಲಿದೆ ಅವರು ತಿಳಿಸಿದ್ದಾರೆ.

ವಿದೇಶಿಗರ ಕೆಲಸ, ದಬ್ಬಾಳಿಕೆ ಹಾಗೂ ವಸಾಹತುಶಾಹಿ ಶೋಷಣೆ ಮುಕ್ತ ತನ್ನ ಪ್ರೀತಿಯ ಭಾರತವನ್ನು ನೋಡಲು ಜೀವಿಸಿರದ ನೇತಾಜಿ ಸುಭಾಶ್ ಚಂದ್ರ ಬೋಸ್ ದುರಂತ ನಾಯಕ, ದುರದೃಷ್ಟಕರ ವ್ಯಕ್ತಿ. ಆದರೆ, ಅವರನ್ನು ಅದೃಷ್ಟದ ವ್ಯಕ್ತಿ ಎಂದು ಕೂಡ ಹೇಳಬಹುದು. ಯಾಕೆಂದರೆ, ನೇತಾಜಿ ಅವರು ಮೃತಪಟ್ಟು 72 ವರ್ಷಗಳ ಬಳಿಕ ವೈಯಕ್ತಿಕವಾಗಿ ನೋಡದ ನೇತಾಜಿ ಅವರ ಸಂಗಾತಿಗಳು ತಮ್ಮ ನಾಯಕ, ಆತನ ಆದರ್ಶವನ್ನು ಪ್ರೀತಿ ಹಾಗೂ ಗೌರವದಿಂದ ನೆನಪಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

 1945 ಆಗಸ್ಟ್ 18ರಂದು ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಅವರು ಮೃತಪಟ್ಟರು ಎಂಬ ಏಕೈಕ ಸ್ಥಿರ ಅಭಿಪ್ರಾಯವನ್ನು ಅನಿತಾ ಫಾಫ್ ಪ್ರತಿಪಾದಿಸಿದ್ದಾರೆ. ವಿಷಯದ ಬಗ್ಗೆ ಇದುವರೆಗೆ ಒಗ್ಗೂಡಿಸಲಾದ ಪುರಾವೆಗಳ ಸಮಗ್ರ ದಾಖಲೆಗಳೊಂದಿಗೆ ಈ ಪುಸ್ತಕ ಪ್ರಸ್ತುತಪಡಿಸಲಿದೆ. ಬೋಸ್ ಅವರ ಸಾವಿನ ಕುರಿತ ಆಶ್ಚರ್ಯಕರ 11 ಅಧಿಕೃತ ಹಾಗೂ ಅನಧಿಕೃತ ತನಿಖೆಗಳ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲಲಿದೆ. ಪ್ರತಿಯೊಂದು ತನಿಖೆ ಕೂಡ ನೇತಾಜಿ ಸಾವಿನ ಕುರಿತ ಅನಿತಾ ಫಾಫ್ ಹೇಳಿರುವ ತೀರ್ಮಾನಕ್ಕೆ ಬಂದಿದೆ.

 ವಿಮಾನ ಅಪಘಾತದಲ್ಲಿ ಬದುಕುಳಿದ 6 ಮಂದಿ, ನೇತಾಜಿ ಸಾಯುವ ಮೊದಲು ಚಿಕಿತ್ಸೆ ನೀಡಿದ ವೈದ್ಯರು, ಪಾರ್ಥಿವ ಶರೀರದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರು, ಅವರ ಚಿತಾಭಸ್ಮವನ್ನು ಟೋಕಿಯೊಗೆ ಕೊಂಡೊಯ್ದು ರಾಕೋಜಿ ದೇವಾಲಯಕ್ಕೆ ಹಸ್ತಾಂತರಿಸಿದ ವ್ಯಕ್ತಿಗಳ ಹೇಳಿಕೆ ಸೇರಿದಂತೆ ಪ್ರತ್ಯಕ್ಷ ಸಾಕ್ಷಿಗಳ ದಿಗ್ಭ್ರಮೆಗೊಳಿಸುವ ನಿರಾಕರಿಸಲಾಗದ ಸರಣಿ ವಿಚಾರಗಳು ಓದುಗನನ್ನು ಅಚ್ಚರಿಯಲ್ಲಿ ಕೆಡವಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News