ದಿಲ್ಲಿ ದರ್ಬಾರ್

Update: 2018-01-27 18:59 GMT

ಶಾ ಮುಕ್ತ ಸಂವಾದ
ಪತ್ರಿಕಾ ಗೋಷ್ಠಿಗಳು ಔಪಚಾರಿಕ. ಆದರೆ ನಿಜವಾದ ಮಜಾ ಇರುವುದು ಪತ್ರಿಕಾಗೋಷ್ಠಿ ನಂತರ ರಾಜಕಾರಣಿಗಳ ಆಫ್ ದ ರೆಕಾರ್ಡ್ ಮುಕ್ತ ಸಂವಾದದಲ್ಲಿ. ಇಂಥ ಆತ್ಮೀಯ ಸಂವಾದಕ್ಕೆ ದಿವಂಗತ ಪ್ರಮೋದ್ ಮಹಾಜನ್, ಅರುಣ್ ಜೇಟ್ಲ್ಲಿಯಂತಹ ಬಿಜೆಪಿಯ ರಾಜಕಾರಣಿಗಳು ಹೆಸರುವಾಸಿ. ಪತ್ರಕರ್ತರ ಜತೆ ದಿಲ್ಲಿಯಲ್ಲಿ ಜೇಟ್ಲಿಯವರ ಮುಕ್ತ ಹರಟೆ ಮಾಮೂಲಾಗಿಬಿಟ್ಟಿದೆ. ಇದಕ್ಕೆ ಕೆಲ ಗಾಸಿಪ್ ಹಾಗೂ ಮಾಹಿತಿಗಳನ್ನೊಳಗೊಂಡ ರೋಚಕತೆ ಇರುತ್ತದೆ. ಆದರೆ ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಇದಕ್ಕೆ ಸವಾಲು ಎದುರಾಗಬಹುದು. ಆ ಗೌರವವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಡೆಯಬಹುದು. ಸದಾ ಬಿಗುವಿನ ಮನುಷ್ಯ ಎನಿಸಿಕೊಂಡ ಶಾ ಪತ್ರಕರ್ತರ ಜತೆ ಮಾತ್ರ ಮುಕ್ತಸಂವಾದ ನಡೆಸುತ್ತಾರೆ. ಇದರಲ್ಲಿ ತಿಳಿಹಾಸ್ಯದ ನವಿರೂ ಇರುತ್ತದೆ. ಆದರೆ ಶಾ ಅವರ ಹೃದಯಾಂತರಾಳ ಅಳೆಯುವುದು ಬಹುತೇಕ ಮಂದಿಗೆ ಕಷ್ಟ. ಏನು ಅಡಗಿದೆ ಎನ್ನುವುದು ಭವಿಷ್ಯದಲ್ಲಷ್ಟೇ ಬಹಿರಂಗವಾಗಬೇಕು.


ಗಡ್ಕರಿ ಕ್ರೀಡಾಸ್ಫೂರ್ತಿ
ಭಾರತೀಯ ರಾಜಕಾರಣಿಗಳು ಬಹುತೇಕ ಬಿಗಿ. ಅದರಲ್ಲೂ ಮುಖ್ಯವಾಗಿ ಇಂದಿನ ಮುಖಂಡರಿಗೆ ಇದು ಹೆಚ್ಚು ಅನ್ವಯವಾಗುತ್ತದೆ ಎಂದು ಹೇಳುವವರಿದ್ದಾರೆ. ಆದರೆ ಪ್ರತಿಯೊಂದಕ್ಕೂ ಅಪವಾದವಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಸುಲಲಿತ ಹಾಗೂ ಕ್ಷಿಪ್ರ ನಡೆಯಿಂದಾಗಿ ಈ ಮಂಕು ಪರಿವಾರದಲ್ಲಿ ಸದಾ ಮಿಂಚುತ್ತಾರೆ. ಮೊನ್ನೆ ದಿಲ್ಲಿಯ ಸಾರಿಗೆ ಭವನಕ್ಕೆ ಗಡ್ಕರಿ ಪ್ರಯಾಣಿಸುತ್ತಿದ್ದಾಗ, ವಿವಿಐಪಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಇವರ ಕಾರು ತಡೆಯಲಾಯಿತು. ಕಾರು ತಡೆಹಿಡಿಯಲ್ಪಟ್ಟಾಗ ಗಡ್ಕರಿ ತಮ್ಮ ಗಮ್ಯಸ್ಥಾನಕ್ಕೆ ಅನತಿ ದೂರದಲ್ಲಿದ್ದರು. ತಕ್ಷಣ ಕಾರಿನಿಂದ ಇಳಿದು ನಡೆಯಲು ಮುಂದಾದರು. ಆದರೆ ಕಾರಿಗೆ ಮರಳುವಂತೆ ಪೊಲೀಸ್ ಒಬ್ಬ ಸೂಚಿಸಿದ. ಅಚ್ಚರಿ ಎಂದರೆ ಗಡ್ಕರಿ, ಪೊಲೀಸ್ ಸೂಚನೆ ಗೌರವಿಸಿದರು. ಈ ಘಟನೆಯನ್ನು ಹಿರಿಯ ಪೊಲೀಸ್ ಸಿಬ್ಬಂದಿಯೊಬ್ಬರು ವೀಕ್ಷಿಸಿ, ಸಚಿವರನ್ನು ಅವರ ಕಚೇರಿವರೆಗೆ ಬೆಂಗಾವಲು ನೀಡಿ ಕರೆದೊಯ್ಯುವಂತೆ ಪೊಲೀಸ್ ಪೇದೆಗೆ ಆದೇಶಿಸಿದರು. ಆಗ ಮತ್ತೊಂದು ಅಚ್ಚರಿ ಘಟಿಸಿತು. ಹಿರಿಯ ಪೊಲೀಸ್ ಬಳಿ ತೆರಳಿ ಗಡ್ಕರಿ ಥ್ಯಾಂಕ್ಸ್ ಹೇಳಿದರು. ‘‘ನಾನು ಸಚಿವನಾಗಿದ್ದರೂ, ಭದ್ರತಾ ಸಿಬ್ಬಂದಿಯ ಸೂಚನೆಗಳಿಗೆ ತಲೆಬಾಗಬೇಕಾದ್ದು ನಾಗರಿಕನಾಗಿ ನನ್ನ ಕರ್ತವ್ಯ’’ ಎಂದು ಹೇಳಿದರು. ಇಂಥ ಘಟನೆಯಿಂದ ಪಾಠ ಕಲಿಯಲು ಪ್ರಧಾನಿ ತಮ್ಮ ಪಕ್ಷದ ಸದಸ್ಯರಿಗೆ ನಿರ್ದೇಶನ ನೀಡಬೇಕೇ?


ಸ್ಪಂದನಾ ಯೋಜನೆ
ಇತ್ತೀಚಿನ ದಿನಗಳಲ್ಲಿ ಸಮಾಜಮಾಧ್ಯಮ ತಂತ್ರಗಾರಿಕೆ ಕಾಂಗ್ರೆಸ್ ಪಕ್ಷದ ಮೇಲೆ ಗಾಢ ಪ್ರಭಾವ ಬೀರಿದೆ. ಈ ಬದಲಾವಣೆಯ ಕೀರ್ತಿ ಸಲ್ಲಬೇಕಾದ್ದು ದಿವ್ಯ ಸ್ಪಂದನಾ ಅಥವಾ ಕರ್ನಾಟಕದ ನಟಿ-ರಾಜಕಾರಣಿ ರಮ್ಯಾಗೆ. ಐಟಿ ವೃತ್ತಿಪರರನ್ನು ಪಕ್ಷದ ಕಾರ್ಯಕರ್ತರಾಗಿ ಸೇರಿಸಿಕೊಂಡಿರುವುದು ಈ ಹಳೆಯ ಪಕ್ಷಕ್ಕೆ ನೆರವಾಗಿದೆ. ಈ ಐಟಿ ಬ್ರಿಗೇಡ್‌ನ ವೇತನ ಹಾಗೂ ಇತರ ಸೌಲಭ್ಯಗಳನ್ನು ಗುಪ್ತವಾಗಿಯೇ ಇಡಲಾಗಿದೆ. ಆದರೆ ಆಸೆಹುಟ್ಟಿಸುವಷ್ಟು ದೊಡ್ಡ ಮೊತ್ತದ ಆಫರ್, ಕಾಂಗ್ರೆಸ್ ಪಕ್ಷವನ್ನು ಡಿಜಿಟಲ್ ನಕ್ಷೆಯಲ್ಲಿ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ. ಈ ನಿಲಯ ಡಿಜಿಟಲ್ ಯೋಧರ ಪ್ರಲೋಭನೆಯಲ್ಲಿ ರಮ್ಯಾ ತಂತ್ರಗಾರಿಕೆ ಮೆರೆದಿದ್ದು, ಕಾಂಗ್ರೆಸ್ ಅಧ್ಯಕ್ಷರ ಜತೆಗೆ ಕಾಫಿ ಆಸ್ವಾದಿಸುವ ಆಫರ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಸಮಾಜ ಮಾಧ್ಯಮ ವೇದಿಕೆಯಲ್ಲಿ ಆಕರ್ಷಕ ಟ್ವೀಟ್, ಸ್ಮಾರ್ಟ್ ಶೀರ್ಷಿಕೆಗಳು, ತೀಕ್ಷ್ಣ ಘೋಷಣೆಗಳು, ಬಿಜೆಪಿಗೆ ತಿರುಗುಬಾಣವಾಗುವ ಹೇಳಿಕೆ ನೀಡುವವರಿಗೆ ರಾಹುಲ್ ಜತೆ ಬೆರೆಯುವ ಅವಕಾಶ ಸಿಗುತ್ತದೆ. ಇಂಥವರನ್ನು ಅಪರೂಪದ ಗೌರವಕ್ಕಾಗಿ ಆಯ್ಕೆ ಮಾಡುವ ಹೊಣೆಯನ್ನು ‘ಸ್ಪಂದನಾ’ ನಿರ್ವಹಿಸುತ್ತಿದ್ದಾರೆ.


ಹಾಸ್ಯ ಮರೆಯದ ನಾಯ್ಡು
ಡಾವೋಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಬಹುಚರ್ಚಿತ ಭಾಷಣದ ಮರುದಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಾವು ಮೋದಿ ಭಾಷಣವನ್ನು ಹೊಗಳಿರುವುದು ಪ್ರಧಾನಿ ಬಗೆಗಿನ ಉಲ್ಲೇಖವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬುಧವಾರ ರಾಷ್ಟ್ರೀಯ ತನಿಖಾ ಸಂಸ್ಥೆಯ ಸಮಾರಂಭದಲ್ಲಿ ಮಾತನಾಡುತ್ತಾ ಈ ಸ್ಪಷ್ಟನೆ ನೀಡಿದ್ದರು. ಇದಕ್ಕೂ ಮುನ್ನ ಎನ್‌ಐಎ ಮುಖ್ಯಸ್ಥ, ಹಿರಿಯ ಐಪಿಎಸ್ ಅಧಿಕಾರಿ ವೈ.ಸಿ.ಮೋದಿ ಪ್ರಾಸ್ತಾವಿಕ ಭಾಷಣ ಮಾಡಿದ್ದರು. ‘‘ಮೋದಿಯವರ ಭಾಷಣ ಕೇಳಿದ್ದೀರಿ’’ ಎಂದೇ ಭಾಷಣ ಆರಂಭಿಸಿದ ನಾಯ್ಡು ತಕ್ಷಣ ಸ್ಪಷ್ಟನೆ ನೀಡಿ, ‘‘ನಿಮ್ಮ ಮೋದಿಯ ಭಾಷಣ..’’ ಎಂದು ಸೇರಿಸಿದ್ದರು. ತಮ್ಮ ಮಾಮೂಲಿ ಶೈಲಿಯಲ್ಲೇ, ಸಮಾರಂಭದಲ್ಲಿ ಉಪಸ್ಥಿತರಿದ್ದ ಗೃಹಸಚಿವ ರಾಜನಾಥ್ ಸಿಂಗ್ ಅವರ ಬಗ್ಗೆಯೂ ಪ್ರತಿಕ್ರಿಯಿಸಿದರು. ‘‘ಇಬ್ಬರೂ ಜತೆಗೇ ಕೆಲಸ ಮಾಡಿದರೂ, ಉತ್ತಮ ಬಾಂಧವ್ಯ ಹೊಂದಿದ್ದರೂ, ಸಿಂಗ್ ಅವರನ್ನು ಆತ್ಮೀಯ ಎಂದು ಕರೆಯುವಂತಿಲ್ಲ. ಏಕೆಂದರೆ ರಾಜ್ಯಸಭೆಯ ಅಧ್ಯಕ್ಷನಾಗಿರುವುದರಿಂದ ಸಿಂಗ್ ಪರ ಪಕ್ಷಪಾತಿ ಎನಿಸಿಕೊಳ್ಳುವಂತಿಲ್ಲ’’ ಎಂದು ಚಟಾಕಿ ಹಾರಿಸಿದರು.


ಎನ್‌ಐಎ ಸಂಕುಚಿತ ಮನಸ್ಸು
ಸಚಿವರು ಮತ್ತು ಅಧಿಕಾರಿಗಳು ಸೇರಿದಂತೆ ವಿಐಪಿ ಅತಿಥಿಗಳ ಜತೆ ಸಂವಾದಕ್ಕೆ ಅವಕಾಶ ನೀಡದ ಕ್ರಮವನ್ನು ಖಂಡಿಸಿ ಪತ್ರಕರ್ತರು ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಸಮಾರಂಭದಿಂದ ಹೊರನಡೆದರು. ‘‘ಚಾಯ್- ಪಕೋಡಾ ಸವಿಯಲು ನಾವಿಲ್ಲಿಗೆ ಬಂದಿಲ್ಲ’’ ಎಂದು ಪತ್ರಕರ್ತರೊಬ್ಬರು ಗುಡುಗಿದರು. ಅದು ಎನ್‌ಐಎಯ 9ನೇ ವರ್ಷಾಚರಣೆ ಸಮಾರಂಭ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಗೃಹಸಚಿವರು ಸೇರಿದಂತೆ ಹಲವು ಮಂದಿ ಸಚಿವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಪತ್ರಕರ್ತರು ಅತಿಥಿಗಳೊಂದಿಗೆ ಬೆರೆಯಲು ಎನ್‌ಐಎ ಕಾರ್ಯಕ್ರಮದಲ್ಲಿ ಹಿಂದೆಂದೂ ತಡೆ ಒಡ್ಡಿರಲಿಲ್ಲ. ಆದರೆ ಈ ವರ್ಷ ಪರಿಸ್ಥಿತಿ ಭಿನ್ನ. ಕೇಂದ್ರ ಸರಕಾರ ಮುಖಭಂಗ ಎದುರಿಸಿರುವ ಹಾದಿಯಾ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ತನಿಖೆ ನಡೆಯುತ್ತಿದ್ದು, ಎನ್‌ಐಎ ಇದರ ವಿಚಾರಣೆ ನಡೆಸುತ್ತಿದೆ. ಬಹುಶಃ ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದರೆ ಇರಿಸು ಮುರಿಸು ಪರಿಸ್ಥಿತಿ ಎದುರಾಗುತ್ತದೆ ಎಂದು ಎನ್‌ಐಎ ಯೋಚಿಸಿದಂತಿದೆ. ಆದರೆ ತಮ್ಮನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎನ್ನುವುದನ್ನು ಪತ್ರಕರ್ತರು ತೋರಿಸಿಕೊಟ್ಟರು.
***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News