ಕೋಮುವಾದಿ ಬಿಜೆಪಿ ಕೈಯ್ಯಲ್ಲಿ ಪ್ರತ್ಯೇಕತಾವಾದಿಗಳ ಮಚ್ಚು! ಅಪಾಯದಲ್ಲಿ ತ್ರಿಪುರ
ಮೋಹನ್ಪರ್ ವಿಧಾನಸಭಾ ಕ್ಷೇತ್ರದ ಗಾಂಧಿ ಮೈದಾನದಲ್ಲಿ ಬಿಜೆಪಿ ಪ್ರಚಾರ ಸಮಾವೇಶ ಹಮ್ಮಿಕೊಂಡಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತನ್ನ ಮಾಮೂಲಿ ಶೈಲಿಯ ಭಾಷಣ ಮಾಡಿ, ಬಾಜಪ ಅಭ್ಯರ್ಥಿಯ ಕಮಲದ ಚಿಹ್ನೆಗೆ ಮತ ನೀಡಿ ತ್ರಿಪುರದ ಪರಿವರ್ತನೆಗೆ ಕಾರಣರಾಗಿ ಎಂದು ಕರೆಕೊಟ್ಟು ಇನ್ನೇನು ಇಳಿಯಬೇಕು ಅನ್ನುವಷ್ಟರಲ್ಲಿ ವೇದಿಕೆಯ ಮೇಲಿದ್ದ ಒಂದಿಬ್ಬರು ಬಂದು ಷಾ ಕಿವಿಯಲ್ಲಿ ಪಿಸುಗುಟ್ಟಿದರು. ಮತ್ತೆ ಮೈಕ್ ಹಿಡಿದ ಷಾ, ಕೊನೆಯದಾಗಿ "ನಾನು ಇನ್ನೊಂದು ಮಾತು ಹೇಳಬೇಕಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಐಪಿಎಫ್ ಟಿ ಯ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರನ್ನೂ ಗೆಲ್ಲಿಸಿಕೊಡುವ ಜವಾಬ್ದಾರಿ ನಿಮ್ಮದಿದೆ. ಅವರ ಚಿಹ್ನೆ.... ಏನದು ? ಏನ್ ಚಿಹ್ನೆ ?" ಎಂದು ಪಕ್ಕದಲ್ಲಿದ್ದವರನ್ನು ಪ್ರಶ್ನಿಸಿದರು. ಅವರು "ಮಚ್ಚು ಸಾರ್, ಮಚ್ಚು ಅಂದ್ರು". ಮುಜುಗರಕ್ಕೆ ಒಳಗಾದ ಅಮಿತ್ ಷಾ, "ಇವರ ಚಿಹ್ನೆಯನ್ನು ನಾನು ಶಂಖ ಅನ್ನುತ್ತೇನೆ. ಐಪಿಎಫ್ ಟಿಗೂ ಮತ ನೀಡಿ" ಎಂದು ವೇದಿಕೆಯಿಂದ ಕೆಳಗಿಳಿದರು.
ಮಚ್ಚು ಚಿಹ್ನೆಯನ್ನು ಹೊಂದಿರುವ ಪ್ರತ್ಯೇಕತಾವಾದಿ ಐಪಿಎಫ್ ಟಿ (ಇಂಡಿಜಿನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ) ತ್ರಿಪುರಾದಲ್ಲಿ ಅಸಂಖ್ಯ ಗಲಭೆಗಳನ್ನು ಸೃಷ್ಠಿಸಿತ್ತು. ಬುಡಕಟ್ಟು ಸಮುದಾಯದ ಪ್ರತ್ಯೇಕ ರಾಜ್ಯಕ್ಕಾಗಿ ಪ್ರಾರಂಭವಾದ ಹೋರಾಟ ಈಗ ಬುಡಕಟ್ಟು ಅಲ್ಲದವರನ್ನು ದ್ವೇಷಿಸುವ, ಕೊಲೆಗೈಯ್ಯುವ ಮಟ್ಟಕ್ಕೆ ತಲುಪಿದೆ. ಮೇಲ್ವರ್ಗದ ನಾಯಕತ್ವವನ್ನೇ ಹೊಂದಿರುವ ಬಿಜೆಪಿಯು ಮೂಲತಹ ಬುಡಕಟ್ಟು ಸಮುದಾಯದ ವಿರುದ್ದ ಮೇಲ್ವರ್ಗಗಳನ್ನು ಎತ್ತಿಕಟ್ಟಿದ ಉದಾಹರಣೆಗಳಿದ್ದು, ಬುಡಕಟ್ಟುಗಳೇ ಇರುವ ಪ್ರದೇಶದಲ್ಲಿ ಐಪಿಎಫ್ ಟಿ ಜೊತೆ ಮೈತ್ರಿ ಮಾಡಿಕೊಂಡಿದೆ. ಐಪಿಎಫ್ ಟಿ ಪಕ್ಷವಾಗಿ ಮಚ್ಚು ಚಿನ್ಹೆಯನ್ನು ಹೊಂದಿದ್ದು, ಸದ್ಯ ಈ ಮಚ್ಚು ತ್ರಿಪುರಾದಲ್ಲಿ ಹಿಂದೂ ಮುಸ್ಲಿಂ ಗಲಭೆ ನಡೆಸುವ ಬಿಜೆಪಿಯ ಕೈಯ್ಯಲ್ಲಿದೆ. ಇದು ತ್ರಿಪುರಾವನ್ನು ಆತಂಕಕ್ಕೆ ದೂಡಿದೆ.
ಅದು ತ್ರಿಪುರಾ ರಾಜಧಾನಿ ಅಗರ್ತಾಲದಿಂದ 55 ಕಿಮಿ ದೂರದಲ್ಲಿರುವ ಸಚಿಯಬಾರಿ ಗ್ರಾಮ. ಈ ಗ್ರಾಮದಿಂದ ಮಂತಲಾ ಕಾಲನಿಗೆ ಗೆರೆ ಎಳೆದಂತೆ ಗಡಿಯನ್ನು ಸೃಷ್ಟಿಸಲಾಗಿದೆ. ಸಚಿಯಬಾರಿ ಮತ್ತು ಮಂತಲಾ ಗ್ರಾಮದ ಮದ್ಯೆ ದಶಕಗಳಿಂದಲೂ ಸಶಸ್ತ್ರಧಾರಿ ಪಡೆಯನ್ನು ನಿಯೋಜಿಸಲಾಗಿದೆ. ಇದು ಇಂದು ನಿನ್ನೆಯ ಕತೆಯಲ್ಲ. ಸಚಿಯಬಾರಿಯಲ್ಲಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವ ಐಪಿಎಫ್ ಟಿ ಬಲವಾಗಿದ್ದರೆ, ಮಂತಲಾ ಕಾಲನಿಯಲ್ಲಿ ಬುಡಕಟ್ಟು, ಬೆಂಗಾಲಿ, ಮುಸ್ಲೀಮರು ಜೊತೆಯಾಗಿ ಇರಬೇಕೆಂದು ಬಯಸುವ ಸಿಪಿಐಎಂ ಬಲವಾಗಿದೆ. 1971 ನಿಂದ ಈ ಎರಡು ಗ್ರಾಮದಲ್ಲಿ ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ಮಧ್ಯೆ ಗಲಾಟೆ ಇದೆ. ಅಂದಿನಿಂದ ಎರಡು ಹಾಡಿಗಳು ಪ್ರತ್ಯೇಕ ದೇಶವೇನೋ ಎಂಬಷ್ಟರ ಮಟ್ಟಿಗೆ ಮಿಲಿಟರಿ ಭದ್ರತೆಯನ್ನು ಒದಗಿಸಲಾಗಿದೆ. "ನೀವು ತುಂಬಾ ಜನ ಬರಬೇಡಿ. ಸ್ವಲ್ಪ ಜನ ಗಾಡಿಯಲ್ಲೇ ಕುಳಿತುಕೊಂಡು ಒಂದೆರಡು ಜನರಷ್ಟೇ ನಮ್ಮ ಕಾಲನಿಗೆ ಬನ್ನಿ. ನಮ್ಮ ಮಹಿಳೆಯರು ಹೆದರಿಕೊಳ್ಳುತ್ತಾರೆ" ಎನ್ನುತ್ತಾರೆ 52 ರ ಹರೆಯದ ಮದನ್ ರಾಯ್.
ಸಚಿಯಬಾರಿ ಗ್ರಾಮಕ್ಕೆ ಪ್ರವೇಶ ಕಲ್ಪಿಸುವ ಹೆದ್ದಾರಿಯು ಗುಹಾಟಿ, ನವತ್ರಿಪುರ್, ಶಿಲ್ಲಾಂಗ್ ಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿ ಅಪಾರ ಪ್ರಮಾಣದಲ್ಲಿ ಗಾಂಜಾ ಬೆಳೆಯಲಾಗುತ್ತದೆ. ಇಲ್ಲಿನ ಬುಡಕಟ್ಟು ಮಹಿಳೆಯರು ತಯಾರಿಸುವ ಭತ್ತದ ಬಿಯರ್ ತ್ರಿಪುರ ಮತ್ತು ಗುಹಾಟಿಯಲ್ಲಿ ಹೆಸರುವಾಸಿ. ಆದರೆ ಸರಕಾರ ಈ ರೀತಿಯ ದಂಧೆಗಳಿಗೆ ಕಡಿವಾಣ ಹಾಕೋದ್ರಿಂದ ಇಲ್ಲಿನ ಬುಡಕಟ್ಟು ವಾಸಿಗಳು ಐಪಿಎಫ್ ಟಿ ಆಶ್ರಯ ಪಡೆದಿದ್ದಾರೆ. ಬೆಂಗಾಲಿಗಳು ಮತ್ತು ಮುಸ್ಲೀಮರು ಬಿಯರ್ ಮಾದರಿಯ ಶೇಂದಿ ದಂಧೆ ಮತ್ತು ಗಾಂಜಾ ದಂಧೆಯನ್ನು ಬೆಂಬಲಿಸದೇ ಇರುವುದರಿಂದ ಐಪಿಎಫ್ ಟಿಯ ಬಲವನ್ನು ಪಡೆದುಕೊಂಡು ಅವರ ಮೇಲೆ ದಾಳಿ ನಡೆಸಲಾಗುತ್ತದೆ. ಇಲ್ಲಿನ ಗಲಭೆಗಳಿಗೆ ಇದೂ ಒಂದು ಆರ್ಥಿಕ ಕಾರಣ ಎಂದರೂ ತಪ್ಪಲ್ಲ. "ನಾವು ಯಾಕೆ ಮಾಣಿಕ್ ಸರ್ಕಾರ್ ರನ್ನು ಬೆಂಬಲಿಸಬೇಕು ? ಅವರು ಬೆಂಗಾಲಿಗಳು ಮತ್ತು ಮುಸ್ಲೀಮರ ಜೊತೆಗಿದ್ದಾರೆ. ನಮಗೆ ಬೆಳೆ ಬೆಳೆಯಲೂ ಬಿಡೋದಿಲ್ಲ" ಎನ್ನುತ್ತಾರೆ ಸಚಿಯಬಾರಿ ಗ್ರಾಮದ ನ್ಯುಮಂತ್ ದೆಬ್ಬರ್ಮಾ. ಯಾವ ಬೆಳೆ ಬೆಳೆಯಲು ಬಿಡೋದಿಲ್ಲ ಎಂದು ಮರುಪ್ರಶ್ನಿಸಿದ್ರೆ ನಿರುತ್ತರರಾಗುತ್ತಾರೆ.
ಐಪಿಎಫ್ ಟಿ ಯು ಪ್ರತ್ಯೇಕತೆಯನ್ನು ಹೊರತುಪಡಿಸಿ ಬೇರಾವುದೇ ಸೈದ್ದಾಂತಿಕ ನಿಲುವನ್ನು ಹೊಂದಿಲ್ಲ. ಐಪಿಎಫ್ ಟಿಗೆ ಅರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿ ಯಾವುದೇ ನಿಲುವುಗಳು ಇಲ್ಲ. ಆದ್ದರಿಂದ ಬುಡಕಟ್ಟುಗಳಿಗೆ ಅರಣ್ಯ ಹಕ್ಕು ನೀಡಿರುವುದು, ಗೃಹ ಕೈಗಾರಿಕೆ, ಕೃಷಿಗೆ ಅಪಾರ ಒತ್ತನ್ನು ಸಿಪಿಐಎಂ ಸರಕಾರ ನೀಡುವ ಮೂಲಕ ಹಳ್ಳಿಗಳನ್ನು ಸದೃಡಗೊಳಿಸೋ ಮೂಲಕ ಬುಡಕಟ್ಟು ಸಮುದಾಯಗಳನ್ನು ಅಭಿವೃದ್ದಿಪಡಿಸಿರೋದು ಐಪಿಎಫ್ ಟಿಗೆ ಮುಖ್ಯವೇ ಆಗಿಲ್ಲ.
ಈಗಿರುವ ಸ್ಥಿತಿಯಲ್ಲಿ ಐಪಿಎಫ್ ಟಿ ಜೊತೆ ಮಾತುಕತೆ ಸಾಧ್ಯವೇ ಇಲ್ಲ. ಬುಡಕಟ್ಟು ಸಮುದಾಯದ ಅಭಿವೃದ್ದಿ, ಅರಣ್ಯ ಹಕ್ಕು, ಭೂಮಿ ನೀಡಿಕೆ, ಉದ್ಯೋಗ ಸೃಷ್ಟಿ, ಶಿಕ್ಷಣ ಮತ್ತಿತರ ರಾಜಕೀಯ, ಆರ್ಥಿಕ, ಸಾಮಾಜಿಕ ಬೇಡಿಕೆಗಳನ್ನು ಇಟ್ಟುಕೊಂಡು ರಾಜಕೀಯ ಮಾಡುವುದಾದರೆ ಅವರ ಜೊತೆ ಮಾತುಕತೆಗೆ ಸಿಪಿಐಎಂ ಸಿದ್ದವಿದೆ. ಪ್ರತ್ಯೇಕತಾವಾದವನ್ನೇ ಸಿದ್ದಾಂತವಾಗಿಸಿಕೊಂಡವರ ಜೊತೆ ಮಾತುಕತೆ ಸಾಧ್ಯವಿಲ್ಲ. ಅವರು ಕೋಮುವಾದಿಗಳ ಜೊತೆ ಸೇರಿರೋದು ನಿರೀಕ್ಷಿತ. ಆದರೆ ಅದು ಎಂತಹ ದುರಂತಗಳನ್ನು ಸೃಷ್ಟಿಸಲಿವೆ ಎಂಬುದಷ್ಟೇ ನಮ್ಮ ಆತಂಕ ಎನ್ನುತ್ತಾರೆ ಸಿಪಿಐಎಂ ತ್ರಿಪುರಾ ರಾಜ್ಯ ಕಾರ್ಯದರ್ಶಿ ವಿಜೆನ್ ದಾರ್.
19 ಸೆಪ್ಟಂಬರ್ 2017 ರಂದು ಅಗರ್ತಲಾದಲ್ಲಿ ಸಿಪಿಐಎಂ ನ ಬುಡಕಟ್ಟು ವಿಭಾಗದ ಗಣಮುಕ್ತಿ ಪರಿಷತ್ ರ‌್ಯಾಲಿ ನಡೆಸಿತ್ತು. ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಆದಿವಾಸಿಗಳು ಸಮಾರಂಭದಿಂದ ವಾಪಸ್ ತೆರಳುವಾಗ ಐಪಿಎಫ್ ಟಿ ಕಾರ್ಯಕರ್ತರು ವಾಹನಗಳ ಮೇಲೆ ದಾಳಿ ನಡೆಸಿದ್ದರು. 118 ಮಂದಿ ಈ ಗಲಭೆಯಲ್ಲಿ ಗಾಯಗೊಂಡಿದ್ದರು. ಅದೇ ದಿನ ಸಿಪಿಐಎಂ ಕಚೇರಿಗಳ ಮೇಲೂ ದಾಳಿ ನಡೆಯಿತು. ಆ ಎಲ್ಲಾ ದಾಳಿಗಳನ್ನು ಸೆರೆ ಹಿಡಿದವರು ಪತ್ರಕರ್ತ ಶಾಂತನು ಭೌಮಿಕ್ ಮತ್ತು ಕ್ಯಾಮರಾಮೆನ್. ಶಾಂತನುಬೌಮಿಕ್ ವರದಿಗಳಿಂದ ಹಲವು ಐಪಿಎಫ್ ಟಿ ಕಾರ್ಯಕರ್ತರು ಅರೆಸ್ಟ್ ಆಗಿದ್ದರು. ಇದೇ ಕೋಪದಲ್ಲಿ ಐಪಿಎಫ್ ಟಿ ಕಾರ್ಯಕರ್ತರು ಪತ್ರಕರ್ತ ಶಾಂತನು ಬೌಮಿಕ್ ನನ್ನು ಕೊಚ್ಚಿ ಕೊಲೆ ಮಾಡಿದರು. ಈ ಕೊಲೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದ್ದು, ಕೊಲೆ ಆರೋಪಿಗಳಲ್ಲಿ ಒಬ್ಬನಾಗಿರುವ ಧಿರೇಂದ್ರ ದಬ್ಬರ್ಮ್ ಐಪಿಎಫ್ ಟಿ ಅಭ್ಯರ್ಥಿಯಾಗಿ ಮಾಂದೈ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಅದನ್ನು ಬೆಂಬಲಿಸುತ್ತಿದೆ.
ಬೆಂಗಾಲಿಗಳು ಮತ್ತು ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿರುವ ಮಾಂದೈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಐಪಿಎಫ್ ಟಿ ಬೆಂಬಲವನ್ನು ಪಡೆಯಬಹುದಿತ್ತು. ಈ ರೀತಿಯ ಒಪ್ಪಂದಕ್ಕಾಗಿ ಬಿಜೆಪಿಯು, ಐಪಿಎಫ್ ಟಿಯ ಅಭ್ಯರ್ಥಿ ಮೇಲಿರುವ ಕೊಲೆ ಆರೋಪವನ್ನು ನೆಪವಾಗಿಸಬಹುದಿತ್ತು. ಆದರೆ ಮುಸ್ಲಿಂ ದ್ವೇಷದ ಕಾರಣಕ್ಕಾಗಿ ಐಪಿಎಫ್ ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಬುಡಕಟ್ಟು ಸಮುದಾಯ ಮತ್ತು ಮುಸ್ಲಿಂ ಸಮುದಾಯದ ಮಧ್ಯೆ ಸಂಘರ್ಷ ಸೃಷ್ಟಿಸುವುದು ಬಿಜೆಪಿಯ ಉದ್ದೇಶವಾಗಿದೆ.
ಪ್ರತ್ಯೇಕತಾವಾದಿಗಳ ಮುಖಂಡ ಬಿಶ್ವಕೇತ್ ದೆಬ್ಬರ್ಮ್ ಉಪಸ್ಥಿತರಿದ್ದ ವೇದಿಕೆಯಲ್ಲೇ ಬಿಜೆಪಿ ಹಿರಿಯ ಮುಖಂಡ ಜಾಯ್ ಲಾಲ್ ದಾಸ್, " ಕಾಶ್ಮೀರ ಪ್ರತ್ಯೇಕವಾಗಬೇಕು ಎಂದು ಹೇಳುವ ಕನ್ನಯ್ಯ ಕುಮಾರ್ ಗೊತ್ತಲ್ವಾ ? ಆತನ ಪಕ್ಷವೇ ಕಮ್ಯುನಿಷ್ಟ್. ಅಂತಹ ದೇಶವಿರೋಧಿಗಳು ತ್ರಿಪುರಾದಲ್ಲಿ ಅಧಿಕಾರದಲ್ಲಿ ಇರಬಾರದು " ಎಂದು ಚುನಾವಣಾ ಪ್ರಚಾರ ಭಾಷಣ ಮಾಡುತ್ತಾರೆ. ಆದರೆ ಪ್ರತ್ಯೇಕತಾವಾದಿಗಳಾದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾ (ಎನ್ಎಲ್ಎಫ್ಟಿ) ಮತ್ತು ಆಲ್ ತ್ರಿಪುರಾ ಟೈಗರ್ ಫೋರ್ಸ್ (ಎಟಿಟಿಎಫ್) ಈಗಲೂ ತ್ರಿಪುರಾದ ಬುಡಕಟ್ಟು ಯುವಕರಿಗೆ ಬಾಂಗ್ಲಾದೇಶದಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿ ಐಪಿಎಫ್ ಟಿ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಆರೋಪ ಇದೆ. ಈ ಎರಡು ಪ್ರತ್ಯೇಕತಾವಾದಿ ಗುಂಪುಗಳು ಭಾರತದಿಂದ ತ್ರಿಪುರ ಪ್ರತ್ಯೇಕವಾಗುವುದನ್ನು ಬಯಸುತ್ತದೆ. ಆದರೆ ಬಿಜೆಪಿ ಮಾತ್ರ ತ್ರಿಪುರಾದಲ್ಲಿ ನಿಂತುಕೊಂಡು ಕಾಶ್ಮೀರ ಪ್ರತ್ಯೇಕತೆಯನ್ನು ವಿರೋಧಿಸುವ ಮಾತುಗಳನ್ನಾಡುವ ಮೂಲಕ ಭಾವನಾತ್ಮಕತೆಯ ತಂತ್ರಗಾರಿಕೆ ಮಾಡುತ್ತಿದೆ.
ತ್ರಿಪುರಾದಲ್ಲಿ ಆರ್ ಎಸ್ ಎಸ್ ಸಕ್ರೀಯವಾಗಿಲ್ಲ. ಆದರೆ ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಆರ್ ಎಸ್ ಎಸ್ ನ ವಿವಿಧ ಘಟಕಗಳ ಕಾರ್ಯಕರ್ತರು ಈಗಿನ ಚುನಾವಣೆಯ ಸಂಧರ್ಭದಲ್ಲಿ ತ್ರಿಪುರದಾದ್ಯಂತ ಸಕ್ರೀಯರಾಗಿದ್ದಾರೆ. ತ್ರಿಪುರ - ಬಾಂಗ್ಲಾ ಗಡಿಯಲ್ಲಿರುವ ಮುಸ್ಲೀಮರ ಮೇಲೆ ದಾಳಿ ನಡೆಸಲು ಅವರಿಗೆ ಬುಡಕಟ್ಟು ಯುವಕರು ಬೇಕಾಗಿದ್ದಾರೆ. ಅದಕ್ಕಾಗಿ ಮಚ್ಚು ಚಿನ್ಹೆಯ ಐಪಿಎಫ್ ಟಿ ಜೊತೆ ಗುಜರಾತ್ ಎನ್ ಕೌಂಟರ್ ಖ್ಯಾತಿಯ ಅಮಿತ್ ಷಾ ಮೂಲಕ ಮೈತ್ರಿ ಏರ್ಪಡಿಸಿದೆ ಎಂಬುದು ತ್ರಿಪುರದಲ್ಲಿ ಬಹುಚರ್ಚಿತ ವಿಷಯವಾಗಿದೆ.