ಜಮೀನುದಾರ ಕೇಂದ್ರಿತ ಸಮಾಜದಿಂದ 'ರೈತ ಕೇಂದ್ರಿತ ಸಮಾಜದೆಡೆಗೆ' ನಮ್ಮ ನಡಿಗೆ

Update: 2018-02-25 19:18 GMT

ಭಾಗ 2

‘‘ಊರ ಮುಂದೆ ಹಾಲ ಹಳ್ಳ ಹರಿಯುತ್ತಿರಲು

ಒರೆಯಾವಿನ ಬೆನ್ನ ಹರಿಯಲದೇಕಯ್ಯ.

ಲಜ್ಜೆಗೆಡಲೇಕೆ ನಾಣುಗೆಡಲೇಕೆ

ಕೂಡಲಸಂಗಮದೇವನುಳ್ಳನ್ನಕ್ಕ

ಬಿಜ್ಜಳನ ಭಂಡಾರವೆನಗೇಕಯ್ಯ’’

‘‘ಊರಮುಂದಿನ ಹಾಲ ಹಳ್ಳ’’ ಬಸವಣ್ಣನವರ ಪರಿಕಲ್ಪನೆಯ ರೈತಕೇಂದ್ರಿತ ವ್ಯವಸ್ಥೆಯ ಸಂಕೇತವಾದರೆ, ಒರೆಯಾವು ವಾಸ್ತವದ ಜಮೀನುದಾರ ಕೇಂದ್ರಿತ ವ್ಯವಸ್ಥೆಯ ಸಂಕೇತವಾಗಿದೆ. ಬಸವಣ್ಣ ಬಿಜ್ಜಳ ರಾಜನ ಕೋಪಕ್ಕೆ ಗುರಿಯಾಗದಂತೆ ಹೊಸದನ್ನು ಸಾಧಿಸಬೇಕಿತ್ತು. ಅಂತೆಯೇ ಅವರು ಒರೆಯಾವಿನ ಬೆನ್ನ ಹರಿಯಲಿಲ್ಲ ಅಂದರೆ ರಾಜನನ್ನು ಎದುರು ಹಾಕಿಕೊಳ್ಳಲಿಲ್ಲ. ಆದರೆ ಊರ ಮುಂದೆ ಹಾಲ ಹಳ್ಳ ಹರಿಸುವ ಸಾಮರ್ಥ್ಯವುಳ್ಳ ರೈತರು ಮೊದಲಾದ ಕಾಯಕಜೀವಿಗಳನ್ನು ಸಂಘಟಿಸಿದರು. ರಾಜ್ಯಶಕ್ತಿಯ ಸಹಾಯವಿಲ್ಲದೆ ಜನರು ಸ್ವಾವಲಂಬಿಗಳಾಗಿ ‘ಸ್ವಯಂ ಆಡಳಿತ’ ನಡೆಸುವ ರೀತಿಯಲ್ಲಿ ಶರಣಸಂಕುಲ ಎಂಬ ಸಮಾಜ ಸ್ಥಾಪಿಸಿದರು. ಮಿಗುತಾಯ ಮೌಲ್ಯವು ವ್ಯಕ್ತಿಗೆ ಸೇರಿದ್ದಲ್ಲ ಶರಣಸಂಕುಲಕ್ಕೆ ಸೇರಿದ್ದು ಎಂದು ಸಾರಿದರು. ಅದಕ್ಕಾಗಿ ‘ಶಿವನ ಸೊಮ್ಮು’ ಎಂಬ ಸಾಮಾಜಿಕ ನಿಧಿ ಸ್ಥಾಪಿಸಿದರು. ಕಷ್ಟದಲ್ಲಿರುವವರು ಆ ನಿಧಿಯಿಂದ ಹಣ ಪಡೆಯಬಹುದಿತ್ತು. ಬಸವಣ್ಣನವರು ಬಡ್ಡಿಯನ್ನು ನಿಷಿದ್ಧಗೊಳಿಸುವ ಮೂಲಕ ಹಣವು ಹಣವನ್ನು ಗಳಿಸುವ ವ್ಯವಸ್ಥೆಯನ್ನು ನಿರ್ಮೂಲಗೊಳಿಸಿದರು. ಶರಣ ಸಂಕುಲದ ಪ್ರತಿಯೊಬ್ಬರು ಕಾಯಕದಿಂದಲೇ ಬದುಕಬೇಕಿತ್ತು. ‘ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ ಸಂಗ’ ಎಂದು ಹೇಳುವ ಮೂಲಕ ಬಸವಣ್ಣನವರು ಇಡೀ ಶರಣ ಸಮಾಜವನ್ನು ಒಂದು ಘಟಕವಾಗಿಸಿದರು. ‘ಪರುಷಕಟ್ಟೆ’ ಎಂಬ ಸಾಮಾಜಿಕ ನ್ಯಾಯದ ಪೀಠವನ್ನು ಸ್ಥಾಪಿಸಿದರು. ಕಾಯಕಜೀವಿಗಳು ತಮ್ಮ ದೈನಂದಿನ ಕಾಯಕ ಮುಗಿದ ನಂತರ ಒಂದೆಡೆ ಕುಳಿತು ಸಮಾಜೋಧಾರ್ಮಿಕ ಮತ್ತು ಆರ್ಥಿಕ ವಿಷಯಗಳ ಕುರಿತು ಚರ್ಚಿಸುವುದಕ್ಕಾಗಿ ಅನುಭವ ಮಂಟಪದ ಸ್ಥಾಪನೆ ಮಾಡಿದರು. ಅಭಿವ್ಯಕ್ತಿ ಸ್ವಾತಂತ್ರದ ಅರಿವು ಮೂಡಿಸಿದರು. ಅನುಭವ ಮಂಟಪದಲ್ಲಿ ಮಾನವ ಹಕ್ಕುಗಳ ಪ್ರತಿಪಾದನೆಯಾಯಿತು. 1948ನೇ ಡಿಸೆಂಬರ್ 10ರಂದು ವಿಶ್ವಸಂಸ್ಥೆ ಘೋಷಿಸಿದ ಮಾನವಹಕ್ಕುಗಳ ಎಲ್ಲ 30 ಅಂಶಗಳು ಬಸವಣ್ಣನವರ ವಚನಗಳಲ್ಲಿರುವುದೊಂದು ವಿಶೇಷವಾಗಿದೆ.

ಮಾನವ ಏಕತೆಯನ್ನು ಕಾಪಾಡುವ ವಚನಗಳು ಸಂವಿಧಾನದ ಆಶಯಗಳಂತಿವೆ. ಜಾತ್ಯತೀತವಾದ ಮತ್ತು ಧರ್ಮಸಮ್ಮತವಾದ ವ್ಯವಸ್ಥೆಯೊಂದನ್ನು ರೂಪಿಸುವ ಮೂಲಕ ಸ್ವಯಂಪರಿಪೂರ್ಣ ಹಳ್ಳಿಗಳಲ್ಲಿನ ಜಾತಿ ಮತ್ತು ಅಸ್ಪಶ್ಯತೆಯ ವಿಷಬೀಜಗಳನ್ನು ತೆಗೆದು ಮಾನವಕುಲವನ್ನು ಒಂದು ಮಾಡುವ ಮಹಾನ್ ಉದ್ದೇಶ ಹೊಂದಿದ್ದ ಬಸವಣ್ಣನವರು ಕಾಯಕಜೀವಿಗಳ ಚಳವಳಿ ಆರಂಭಿಸಿದರು. ಎಂದೂ ಕಲಿಯದ ಮನೆತನಗಳಿಂದ ಬಂದ ಕಾಯಕಜೀವಿಗಳು ನವಸಾಕ್ಷರರಾಗಿ ವಚನ ರಚನೆಯಲ್ಲಿ ತೊಡಗಿದರು. ವಸ್ತುಗಳ ಉತ್ಪಾದನೆಯ ಜೊತೆಗೇ ಸಾಹಿತ್ಯ, ಜನಪದ ಕಲೆ, ಸಂಸ್ಕೃತಿ, ಧರ್ಮ, ದರ್ಶನ, ಒಟ್ಟಾರೆ ಜೀವನ ವಿಧಾನ ಹೀಗೆ ಬಸವಣ್ಣನವರ ಯೋಜನೆಯಲ್ಲಿ ಇವೆಲ್ಲವೂ ಅಡಗಿದ್ದವು. ರೈತರು ಮತ್ತು ಆಯಪದ್ಧತಿಯ ವಿವಿಧ ಉತ್ಪಾದನೆಯಲ್ಲಿ ಮತ್ತು ಸೇವೆಗಳಲ್ಲಿ ತೊಡಗಿರುವ ಕಾಯಕಜೀವಿಗಳು ರೈತಕೇಂದ್ರಿತ ವ್ಯವಸ್ಥೆಗೆ ಸೇರಿದವರು ಎಂಬುದನ್ನು ಕಂಡುಹಿಡಿದವರಲ್ಲಿ ಮೊದಲಿಗರೆಂದರೆ ಬಸವಣ್ಣನವರು. ಜಮೀನುದಾರ ಕೇಂದ್ರಿತ ವ್ಯವಸ್ಥೆಯು ರೈತರು ಮತ್ತು ಇತರ ಕಾಯಕ ಜೀವಿಗಳನ್ನು ಸಹಸ್ರಾರು ವರ್ಷಗಳಿಂದ ಸುಲಿಗೆ ಮಾಡುತ್ತಾ ಬಂದಿದೆ ಎಂಬುದನ್ನು ಬಸವಣ್ಣನವರು ಬಹು ಬೇಗನೆ ಕಂಡುಕೊಂಡರು. ಈ ವ್ಯವಸ್ಥೆಗೆ ಮಠ ಮಂದಿರಗಳ ವ್ಯವಸ್ಥೆ ಬಹಳ ಪೂರಕವಾಗಿತ್ತು. ಅಂತೆಯೇ ಅವರು ಮಠೀಯ ವ್ಯವಸ್ಥೆಗೆ ಬದಲು ಮಹಾಮನೆಯ ವ್ಯವಸ್ಥೆ ಜಾರಿಗೊಳಿಸಿದರು. ಮಂದಿರಗಳಲ್ಲಿನ ಮೂರ್ತಿಗಳ ಪೂಜೆಗೆ ಬದಲು ಇಷ್ಟಲಿಂಗ ಪೂಜೆಯನ್ನು ಜಾರಿಗೊಳಿಸಿದರು. ಆ ಮೂಲಕ ಮಂದಿರಗಳಿಂದ ಕಾಯಕ ಜೀವಿಗಳಿಗೆ ಆಗುತ್ತಿರುವ ಶೋಷಣೆ ಮತ್ತು ಬಿಟ್ಟಿಕೂಲಿ ನಿಂತಿತು. ಅಷ್ಟೇ ಅಲ್ಲದೆ ಕಾಯಕಜೀವಿಗಳಿಗೆ ಖರ್ಚಿಲ್ಲದ ದೇವರನ್ನು ಕೊಟ್ಟರು.ಇಷ್ಟಲಿಂಗಕ್ಕೆ ಯಾರೂ ಹರಕೆ ಹೊರುವುದಿಲ್ಲ. ಯಾವುದೇ ಖರ್ಚು ಮಾಡುವುದಿಲ್ಲ. ಬಸವಣ್ಣನವರ ಅರ್ಥಶಾಸ್ತ್ರೀಯ ಪ್ರಜ್ಞೆ ಲಿಂಗಾಯತ ಧರ್ಮದ ಎಲ್ಲ ಆಯಾಮಗಳಲ್ಲಿ ಗೋಚರಿಸುತ್ತದೆ. ಆದ್ದರಿಂದ ಲಿಂಗಾಯತವು ತನ್ನ ನಿಜಸ್ವರೂಪದಲ್ಲಿ ವೈದಿಕ ವ್ಯವಸ್ಥೆಗೆ ಪರ್ಯಾಯವಾದ ಅಂದರೆ ಸವರ್ಣೀಯರ ಜಮೀನುದಾರ ವ್ಯವಸ್ಥೆಗೆ ಪರ್ಯಾಯವಾದ ಶೂದ್ರರ ಮತ್ತು ಪಂಚಮರ ರೈತಕೇಂದ್ರಿತ ವ್ಯವಸ್ಥೆಗಾಗಿ ಹೋರಾಡಿದವರ ಧರ್ಮವಾಗಿದೆ. ಇದಕ್ಕಾಗಿ ಎಲ್ಲ ಕಾಯಕ ಜೀವಿಗಳನ್ನು ಒಂದುಗೂಡಿಸಿ, ಅವರನ್ನು ಒಂದು ವರ್ಗವಾಗಿ ರೂಪಿಸಿ ಜಮೀನುದಾರ ವ್ಯವಸ್ಥೆ ವಿರುದ್ಧ ಹೋರಾಟಕ್ಕೆ ಅಣಿಗೊಳಿಸಿದ ವಿಶ್ವದ ಪ್ರಥಮ ದಾರ್ಶನಿಕರೆಂದರೆ ಬಸವಣ್ಣನವರು.

17ನೇ ಶತಮಾನದ ಶಿವಾಜಿ:

ಜಮೀನದಾರ ವ್ಯವಸ್ಥೆಯನ್ನು ಸಡಿಲುಗೊಳಿಸಿ ರೈತರು ತಲೆ ಎತ್ತುವಂತೆ ಮಾಡಿದ ರಾಜರಲ್ಲಿ ಮೊದಲಿಗರೆಂದರೆ 17ನೇ ಶತಮಾನದ ಶಿವಾಜಿ ಮಹಾರಾಜರು.

ಶಿವಾಜಿಯ ತಂದೆ ಷಹಾಜಿ ಪುಣೆಯ ಜಹಾಗೀರದಾರರಾಗಿದ್ದರು. ಮೊಘಲರು ಮತ್ತು ಆದಿಲಶಾಹಿಗಳ ರಾಜ್ಯದ ಗಡಿಗಳ ಮಧ್ಯೆ ಪುಣೆ ಇದ್ದುದರಿಂದ ಆ ಪ್ರದೇಶ ಪದೇ ಪದೇ ದಾಳಿಗೆ ಒಳಗಾಗುತ್ತಿತ್ತು. ಹೀಗಾಗಿ ಗ್ರಾಮಗಳು ಧ್ವಂಸಗೊಳ್ಳುತ್ತಿದ್ದವು. ಶಿವಾಜಿ ಅಂತಹ ಗ್ರಾಮಗಳ ಪುನರ್ ನಿರ್ಮಾಣ ಮಾಡಿದ. ಯುವಕರನ್ನು ರೈತಾಪಿ ಕಾರ್ಯಗಳಿಗೆ ಪ್ರೋತ್ಸಾಹಿಸಿದ. ಹೊಸದಾಗಿ ಹೊಲ ಮಾಡಬಯಸುವವರಿಗೆ ಕೃಷಿಕಾರ್ಯಗಳಿಗೆ ಬೇಕಾದ ಸಲಕರಣೆಗಳನ್ನು ಮತ್ತು ಬೀಜಗಳನ್ನು ಉಚಿತವಾಗಿ ನೀಡಿದ. ಹೊಸ ರೈತರಿಂದ ಅತೀ ಕಡಿಮೆ ಕಂದಾಯ ವಸೂಲಿ ಮಾಡಿದ. ಬೆಳೆ ಬರುವವರೆಗೆ ಆಹಾರ ಧಾನ್ಯಗಳ ವ್ಯವಸ್ಥೆಯನ್ನೂ ಮಾಡಿದ. ಕೃಷಿ ಸಾಲದ ವ್ಯವಸ್ಥೆಯೂ ಆಯಿತು. ಶಿವಾಜಿಯ ಅಧಿಕಾರಿಗಳು ಕೂಡ ರೈತರ ವಿರುದ್ಧ ಮಾತನಾಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತೆಯೇ ಮಹಾತ್ಮಾ ಜ್ಯೋತಿಬಾ ಫುಲೆ ಅವರು ಶಿವಾಜಿಯನ್ನು ‘ಕೃಷಿಕ ಭೂಷಣ’ ಎಂದು ಕರೆದಿದ್ದಾರೆ.

ರೈತರಿಗೆ ಕಂದಾಯ ನಿಗದಿ ಪಡಿಸುವ ಮೊದಲು ಅವರ ಭೂಮಿಯ ಅಳತೆ ಮಾಡಲು ಶಿವಾಜಿ ಆದೇಶಿಸಿದ. ಬರಗಾಲದಲ್ಲಿ ಕಂದಾಯ ವಸೂಲಿ ಮಾಡುವುದನ್ನು ನಿಲ್ಲಿಸಿದ್ದಷ್ಟೇ ಅಲ್ಲದೆ ಬರಗಾಲದ ಬವಣೆಗೊಳಗಾದ ರೈತರ ಬದುಕಿಗೆ ಆಶ್ರಯವಾದ. ರೈತರ ದಾರುಣ ಪರಿಸ್ಥಿತಿಗೆ ಮರುಗಿದ ಶಿವಾಜಿಯ ದೃಷ್ಟಿ ಶೋಷಕ ಜಮೀನುದಾರರ ಕಡೆ ಹೊರಳಿತು. ಗೌಡರು, ಪಟೇಲರು, ದೇಶಮುಖರು, ದೇಸಾಯರು ಮುಂತಾದ ಜಮೀನುದಾರಿ ವ್ಯವಸ್ಥೆಯ ಪ್ರಮುಖರು ರೈತರನ್ನು ಶೋಷಣೆ ಮಾಡುವುದನ್ನು ನಿಲ್ಲಿಸುವ ಯೋಜನೆ ರೂಪಿಸಿದ. ಅವರು ಪರಂಪರಾಗತವಾಗಿ ಪಡೆದುಕೊಂಡು ಬಂದಿದ್ದ ಅಧಿಕಾರವನ್ನು ಕಿತ್ತುಕೊಂಡ. ಗೌಡರು, ಪಟೇಲರು ಮುಂತಾದವರ ಬದಲಿಗೆ ಅಧಿಕಾರಿಗಳನ್ನು ನೇಮಿಸಿ ಕಂದಾಯ ವಸೂಲಿ ಮಾಡಿದ. ಜನರನ್ನು ಗುಲಾಮರಾಗಿಸಿ ಹಿಂಸೆ ಮತ್ತು ಅಪಮಾನಕ್ಕೆ ಒಳಪಡಿಸುತ್ತಿದ್ದ ದೇಶಮುಖ, ದೇಶಪಾಂಡೆಗಳಂತಹ ಗ್ರಾಮಾಧಿಕಾರಿಗಳ ವಾಡೆ ಮತ್ತು ಬುರುಜುಗಳನ್ನು ಕೆಡವಿ ಅವರೆಲ್ಲ ಗ್ರಾಮೀಣರಂತೆ ಬದುಕುವ ಹಾಗೆ ಮಾಡಿದ.

ಶಿವಾಜಿಯ ಕಟ್ಟಾಜ್ಞೆಯಿಂದಾಗಿ ಇದೆಲ್ಲ ಕಾರ್ಯರೂಪಕ್ಕೆ ಬಂದಿತು. ಆ ಕಾಲದಲ್ಲಿ ಪಾಳೆಯಗಾರರು, ಮಂತ್ರಿಗಳು, ಜಮೀನುದಾರರು, ದೇಶಮುಖರು, ದೇಸಾಯರು, ಗೌಡರು, ಪಟೇಲರು ಮುಂತಾದ ಶ್ರೀಮಂತ ವರ್ಗದವರು ತಮ್ಮ ಪ್ರದೇಶದ ಸುಂದರ ಮಹಿಳೆಯರನ್ನು ಭೋಗವಸ್ತುವಿನಂತೆ ಬಳಸಿಕೊಳ್ಳುತ್ತಿದ್ದರು. ಜನರು ಯಾರ ಬಳಿಗೆ ನ್ಯಾಯಕ್ಕಾಗಿ ಹೋಗಬೇಕಿತ್ತೋ ಅವರೇ ಈ ಅನ್ಯಾಯ ಅತ್ಯಾಚಾರಗಳನ್ನು ಮಾಡುತ್ತಿದ್ದರು. ಶಿವಾಜಿ ಆಡಳಿತದಲ್ಲಿ ಇಂತಹ ಘಟನೆಗಳು ನಡೆಯದಂತಾದವು. ಇಂತಹ ಅತ್ಯಾಚಾರಿಗಳಿಗೆ ಶಿವಾಜಿ ಕೈ ಕಾಲು ಕತ್ತರಿಸುವ ಮತ್ತು ಕಣ್ಣು ಕೀಳಿಸುವ ಆದೇಶ ನೀಡುತ್ತಿದ್ದ. ಸೈನ್ಯವು ಯುದ್ಧಕ್ಕೆ ಹೊರಟಿತೆಂದರೆ ಮನಸ್ಸಿಗೆ ಬಂದಂತೆ ಬೆಳೆದು ನಿಂತ ಹೊಲಗಳಲ್ಲೇ ನುಗ್ಗುತ್ತಿತ್ತು. ರೈತರ ಬೆಳೆ ಹಾಳಾಗುತ್ತಿತ್ತು. ಆದರೆ ಶಿವಾಜಿ ಇಂಥ ಬೆಳೆ ಹಾಳು ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ. ಸೈನ್ಯದ ಕುದುರೆಗಳಿಗೆ ಬೇಕಾದ ಹುಲ್ಲು ಮತ್ತು ಸೈನಿಕರಿಗೆ ಆಹಾರ ಧಾನ್ಯ ಕೊಳ್ಳಲು ಹಣದ ವ್ಯವಸ್ಥೆ ಮಾಡಿದ. ಸೈನಿಕರು ರೈತರನ್ನು ಬೆದರಿಸಿ ಪುಕ್ಕಟೆಯಾಗಿ ಈ ವಸ್ತುಗಳನ್ನು ಪಡೆದುಕೊಳ್ಳಬಾರದು ಎಂದು ಆದೇಶ ಹೊರಡಿಸಿದ. ಯುದ್ಧ ಇಲ್ಲದ ಕಾಲದಲ್ಲಿ ಸೈನಿಕರು ತಮ್ಮ ಹಳ್ಳಿಗಳಿಗೆ ಹೋಗಿ ಹೊಲ ಗದ್ದೆಗಳನ್ನು ನೋಡಿಕೊಳ್ಳುವ ವ್ಯವಸ್ಥೆಯನ್ನೂ ಮಾಡಿದ. ಸೈನಿಕರಿಗೆ ಸಂಬಳವನ್ನೂ ನೀಡಿದ. ದಾಳಿಯ ಸಂದರ್ಭದಲ್ಲಿ ಸೈನಿಕರು ತಮ್ಮ ಮನಸ್ಸಿಗೆ ಬಂದಂತೆ ಲೂಟಿ ಮಾಡಿಕೊಂಡು ಹೋಗುವ ಮತ್ತು ದಾಳಿಯಲ್ಲಿ ಸಿಕ್ಕ ಹೆಣ್ಣುಮಕ್ಕಳ ಮಾನಹರಣ ಮಾಡುವ ದುಷ್ಟ ಪದ್ಧತಿಯನ್ನೂ ನಿಲ್ಲಿಸಿದ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News