ಮಂಗಳೂರು: ಇಂದಿರಾ ಕ್ಯಾಂಟೀನ್‌ಗೆ ಉತ್ತಮ ಪ್ರತಿಕ್ರಿಯೆ
ಮಂಗಳೂರು, ಮಾ.7: ನಗರದ ಪುರಭವನದ ಬಳಿ ಮಂಗಳವಾರ ಉದ್ಘಾ ಟನೆಗೊಂಡ ಇಂದಿರಾ ಕ್ಯಾಂಟೀನ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯ ವಾಗುತ್ತಿದೆ. ಉದ್ಘಾಟನೆಯ ಸಂದರ್ಭವೇ ಮುಗಿಬಿದ್ದು ಕೂಪನ್ ಪಡೆದು ಆಹಾರ ಸೇವಿಸಿದ್ದ ಗ್ರಾಹಕರು ಮಧ್ಯಾಹ್ನ ಮತ್ತು ರಾತ್ರಿ ಕೂಡ ಹೊಟ್ಟೆ ತುಂಬಾ ಉಂಡು ತೃಪ್ತಿಪಟ್ಟಿದ್ದಾರೆ.
ಪ್ರತೀ ದಿನ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಇಲ್ಲಿ ಆಹಾರ ಲಭಿಸುತ್ತಿದೆ. ದಿನಕ್ಕೊಂದ ರಂತೆ ಮೆನು ಸಿದ್ಧಪಡಿಸಲಾಗಿದ್ದು, ಅದರಂತೆ ಆಹಾರ ತಯಾರಿಸಿ ಗ್ರಾಹ ಕರಿಗೆ ನೀಡಲಾಗುತ್ತಿದೆ. ಬೆಳಗ್ಗಿನ ಉಪಾಹಾರಕ್ಕೆ 5 ರೂ., ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ತಲಾ 10 ರೂ. ದರ ನಿಗದಿಪಡಿಸಲಾಗಿದೆ. ಪ್ರತೀ ಪಾಳಿಯಲ್ಲೂ ತಲಾ 500 ಮಂದಿಗೆ ಊಟ-ತಿಂಡಿಯನ್ನು ನೀಡಲಾಗುತ್ತಿದೆ. ಪ್ರತೀ ದಿನ ಪ್ರತಿಯೊಬ್ಬರ ಆಹಾರಕ್ಕೆ 65 ರೂ. ಖರ್ಚು ಬೀಳುತ್ತಿದೆ. ಗುತ್ತಿಗೆದಾರರು ಗ್ರಾಹಕರಿಂದ 25 ರೂ. ವಸೂಲಿ ಮಾಡುತ್ತಿದ್ದು, ಉಳಿದ 35 ರೂ.ವನ್ನು ರಾಜ್ಯ ಸರಕಾರ ಗುತ್ತಿಗೆ ವಹಿಸಿಕೊಂಡ ಕಂಪೆನಿಗೆ ನೀಡಲಿದೆ. ಕ್ಯಾಂಟೀನ್ ಸುತ್ತಮುತ್ತ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ.
ಕ್ಯಾಂಟೀನ್‌ಗೆ ಆವರಣಗೋಡೆಯೂ ಇದೆ. ಕ್ಯಾಂಟೀನ್‌ನೊಳಗೆ ನಿಂತುಕೊಂಡು ಮತ್ತು ಹೊರಗೆ ಕುಳಿತುಕೊಂಡು ತಿನ್ನುವ ವ್ಯವಸ್ಥೆ ಇದೆ. ಕುಡಿಯುವ ನೀರು, ಕೈತೊಳೆಯಲು ನಳ್ಳಿ, ಶೌಚಾಲಯದ ವ್ಯವಸ್ಥೆಯೂ ಇಲ್ಲಿದೆ. ಬೆಳಗ್ಗೆ 7ರಿಂದ 8:30, ಮಧ್ಯಾಹ್ನ 12:30ರಿಂದ 2, ರಾತ್ರಿ 7ರಿಂದ 8:30 ರವರೆಗೆ ಇಲ್ಲಿ ಆಹಾರ ಲಭ್ಯವಿರುತ್ತದೆ. ಬುಧವಾರ ಇಂದಿರಾ ಕ್ಯಾಂಟೀನ್‌ನ ಮುಂದೆ ಈ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಗ್ರಾಹಕರಿದ್ದುದು ಕಂಡು ಬಂತು. ಕೆಲವರು ಹೊತ್ತಲ್ಲದೆ ಹೊತ್ತಲ್ಲಿ ಬಂದು ಆಹಾರ ಕೇಳಿ ‘ಇಲ್ಲ’ ಎಂದೊ ಡನೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ಹರಿದುಬಿಡುತ್ತಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
‘ನಾವು ಪ್ರತೀ ಪಾಳಿಯಲ್ಲಿ 500 ಮಂದಿಗೆ ಆಗುವಷ್ಟು ಆಹಾರ ಸಿದ್ಧ ಪಡಿಸುತ್ತೇವೆ. ಹಾಗಂತ 500 ಕೂಪನ್ ಮುಗಿದ ತಕ್ಷಣ ಕೂಪನ್ ಮುಗಿಸುವು ದಿಲ್ಲ. ಇನ್ನೂ 50 ಅಥವಾ 100 ಮಂದಿಗೆ ಆಗು ವಷ್ಟು ಕೂಪನ್ ವಿತರಿಸಿ ಆಹಾರ ಪೂರೈಕೆ ಮಾಡುತ್ತೇವೆ. ಆಹಾರದ ರುಚಿಯೊಂದಿಗೆ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಹೊಟ್ಟೆ ತುಂಬಾ ತಿಂದು ಸಂತೃಪ್ತಿಯಿಂದ ಮರಳುವಾಗ ನಮಗೆ ತುಂಬಾ ಸಂತೋಷವಾಗುತ್ತದೆ ಎಂದು ಇಂದಿರಾ ಕ್ಯಾಂಟೀನ್‌ನ ಸಿಬ್ಬಂದಿ ವರ್ಗ ಅಭಿಪ್ರಾಯಪಡುತ್ತಿದ್ದಾರೆ.
ಚಹಾ-ಕಾಫಿ ಕೇಳುತ್ತಾರೆ
ಹೆಚ್ಚಿನ ಗ್ರಾಹಕರು ಬೆಳಗ್ಗಿನ ಉಪಾಹಾರದೊಂದಿಗೆ ಚಹಾ-ಕಾಫಿಯ ಬೇಡಿಕೆ ಯನ್ನೂ ಮುಂದಿಡುತ್ತಿದ್ದಾರೆ. ಆದರೆ, ಇಂದಿರಾ ಕ್ಯಾಂಟೀನ್‌ನಲ್ಲಿ ಅದರ ಪೂರೈಕೆ ಇಲ್ಲ. ಹಾಗಂತ ಗ್ರಾಹಕರ ಮನಸ್ಸಿಗೆ ಬೇಸರವಾಗದಂತೆ ‘ಚಹಾ- ಕಾಫಿ ಇಲ್ಲಾ ಸಾರ್... ಕೇವಲ ತಿಂಡಿಯ ವ್ಯವಸ್ಥೆಯನ್ನಷ್ಟೇ ನಾವು ಮಾಡುತ್ತಿದ್ದೇವೆ’ ಎನ್ನುತ್ತಾರೆ. ಒಂದಲ್ಲ, ಹತ್ತಲ್ಲ... ನೂರಾರು ಗ್ರಾಹಕರು ಹೀಗೆ ಕೇಳುತ್ತಲೇ ಇದ್ದಾರೆ. ಆದರೆ, ಸಿಬ್ಬಂದಿ ವರ್ಗ ಸ್ವಲ್ಪವೂ ಬೇಸರಿಸದೆ ಉತ್ತರಿಸುತ್ತಾರೆ. ಹಾಗೆಯೇ ಗ್ರಾಹಕರು ಹೊಟ್ಟೆ ತುಂಬಾ ನೀರು ಕುಡಿದು ಹೊರ ಹೋಗುತ್ತಿದ್ದಾರೆ.
ಸಾರ್ವಜನಿಕರ ಅಭಿಪ್ರಾಯ
►ಇಲ್ಲಿನ ಊಟ ತುಂಬಾ ಚೆನ್ನಾಗಿದೆ. ಪಕ್ಕದಲ್ಲೇ ವೆನ್ಲಾಕ್ ಹಾಗೂ ಲೇಡಿಗೋಶನ್ ಆಸ್ಪತ್ರೆ ಇದೆ. ರೋಗಿಗಳ ಜೊತೆಗಿರುವವರೂ ಇಲ್ಲಿಗೆ ಬರುತ್ತಾರೆ. ಅವರಿಗೆ ಅನುಕೂಲವಾಗುವಂತೆ ಪಾರ್ಸೆಲ್ ವ್ಯವಸ್ಥೆ ಮಾಡಿದರೆ ಇನ್ನೂ ಉತ್ತಮ.
►ಪ್ರತೀ ದಿನ ಊಟ ಹಾಗೂ ಉಪಾಹಾರ ನೀಡುವ ಸಮಯವನ್ನು ಇನ್ನಷ್ಟು ದೀರ್ಘಗೊಳಿಸಬೇಕು. ದಿನದಲ್ಲಿ ಒಂದು ಸಮಯದ ಊಟ ವನ್ನು ಕೇವಲ 500 ಜನರಿಗೆ ಮಾತ್ರ ನೀಡುತ್ತಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿಸಬೇಕು ಕನಿಷ್ಠ 1,000 ಜನರಿಗಾದರೂ ನೀಡುವುದು ಉತ್ತಮ.
►ಮಂಗಳೂರಿನ ಜನರು ಹೆಚ್ಚಾಗಿ ಕುಚ್ಚಲಕ್ಕಿಯ ಅನ್ನ ಸೇವಿಸುವುದ ರಿಂದ ಇಲ್ಲಿ ನೀಡುವ ಬೆಳ್ತಿಗೆ ಅಕ್ಕಿಯ ಅನ್ನ ಸೇವಿಸಲು ಸ್ವಲ್ಪ ಕಷ್ಟವಾಗುತ್ತಿದೆ. ಇದನ್ನು ಬದಲಾವಣೆ ಮಾಡಬೇಕು.
►ಪ್ರತೀ ದಿನ ಒಂದೊಂದು ಬಗೆಯ ತರಕಾರಿಗಳನ್ನು ಉಪಯೋಗಿಸಿ ಪಲ್ಯ ಮಾಡಬೇಕು. ಗಂಜಿ ಲಭಿಸಿದರೆ ಉತ್ತಮ. ಜೊತೆಗೆ ಉಪ್ಪಿನಕಾಯಿ ಕೂಡ ಬೇಕು.
►ಇಲ್ಲಿ ಅತ್ಯಂತ ಕಡಿಮೆ ದರಕ್ಕೆ ಊಟ ಸಿಗುತ್ತದೆ. ಬೇರೆ ಕಡೆ ಇಂತಹ ಊಟ ಮಾಡುವುದಾದರೆ ಕನಿಷ್ಠ 50 ರೂ. ಕೊಡಬೇಕು. ಇದರಿಂದ ನಮ್ಮಂತಹ ಬಡವರಿಗೆ ಉಪಕಾರವಾಗಿದೆ.