ಕಾಲಿಂಗ್‌ಬೆಲ್‌ನಲ್ಲಿ ಮೊಳಗಲಿದೆ ಸ್ವಚ್ಛತೆ ಮಹತ್ವ!
►ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ವಿನ್ಯಾಸ
►ರಾಮಕೃಷ್ಣಮಿಷನ್ ಪ್ರಾಯೋಜಕತ್ವ
ಬಂಟ್ವಾಳ, ಮಾ.8: ತಾಲೂಕಿನ ಕಳ್ಳಿಗೆ ಗ್ರಾಪಂ ವ್ಯಾಪ್ತಿಯ ಪ್ರತೀ ಮನೆಯಲ್ಲಿ ಸ್ವಚ್ಛತೆಯ ಮಹತ್ವ ಸಾರುವ ಗೀತೆಯನ್ನು ಮೊಳಗಿಸುವ ಕಾಲಿಂಗ್‌ಬೆಲ್‌ಗಳನ್ನು ಅಳವಡಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಮಂಗಳಾದೇವಿಯ ರಾಮಕೃಷ್ಣ ಮಿಷನ್ ಮತ್ತು ಸಹ್ಯಾದ್ರಿ ಅಡ್ಯಾರು ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ಕಳ್ಳಿಗೆ ಗ್ರಾಮದ 1,127 ಮನೆಗಳಿಗೆ ಈ ಕಾಲಿಂಗ್ ಬೆಲ್ ಅಳವಡಿಸಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ.
ಕಳ್ಳಿಗೆಯಲ್ಲಿರುವ ಸಚಿವ ಬಿ.ರಮಾನಾಥ ರೈ ಮನೆಯಲ್ಲಿ ಈ ಕಾಲಿಂಗ್ ಬೆಲ್ ಅಳವಡಿಸಿ ಬಳಿಕ ಮೊಳಗಿಸುವ ಮೂಲಕ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಅಲ್ಲದೆ ಗುರುವಾರ ಉದ್ಘಾಟನೆಗೊಂಡ ನೂತನ ಕಳ್ಳಿಗೆ ಗ್ರಾಪಂ ಕಾರ್ಯಾಲಯದಲ್ಲಿಯೂ ಕಾಲಿಂಗ್ ಬೆಲ್ ಅಳವಡಿಸುವುದರೊಂದಿಗೆ ಗ್ರಾಮಸ್ಥರಿಗೆ ವಿತರಣೆ ಮಾಡಲಾಯಿತು.
250 ರೂ. ತಯಾರಿಕಾ ವೆಚ್ಚ:ಈ ಕಾಲಿಂಗ್ ಬೆಲ್‌ಗಳಿಗೆ ತಲಾ 250 ರೂ. ತಯಾರಿಕಾ ವೆಚ್ಚ ತಗಲಿದ್ದು, ರಾಮಕೃಷ್ಣ ಮಿಷನ್ ಮಂಗಳೂರು ಮತ್ತು ಸಹ್ಯಾದ್ರಿ ಕಾಲೇಜು ಅಡ್ಯಾರು ಈ ಎರಡು ಸಂಸ್ಥೆಗಳು ಇದರ ವೆಚ್ಚವನ್ನು ಭರಿಸುವ ಮೂಲಕ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. ಮನೆ ಮನೆಗೆ ಕಾಲಿಂಗ್‌ಬೆಲ್‌ಗಳನ್ನು ಅಳವಡಿಕೆ ಮಾಡುವ ಜವಾಬ್ದಾರಿಯನ್ನು ಕಳ್ಳಿಗೆ ಗ್ರಾಪಂ ವಹಿಸಿಕೊಂಡಿದೆ ಎಂದು ಸ್ವಚ್ಛ ಭಾರತ್ ಜಿಲ್ಲಾ ಸಂಯೋಜಕಿ ಮಂಜುಳಾ ತಿಳಿಸಿದ್ದಾರೆ.
ರಾಜ್ಯದಲ್ಲಿಯೇ ಪ್ರಥಮವಾಗಿ ಸ್ವಚ್ಛತಾ ಗೀತೆಯನ್ನು ಮೊಳಗಿಸಿ ಕಾಲಿಂಗ್ ಬೆಲ್‌ಗಳನ್ನು ಅಳವಡಿಸಿ ಮನೆಗಳಲ್ಲಿ ಸ್ವಚ್ಛತಾ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಈ ಅಭಿಯಾನದ್ದಾಗಿದೆ.
ಪರಮೇಶ್ವರ ಅಯ್ಯರ್ ಟ್ವೀಟ್
ಕಳ್ಳಿಗೆ ಗ್ರಾಮದಲ್ಲಿ ಕಾಲಿಂಗ್‌ಬೆಲ್ ಅಭಿಯಾನವು ಒಂದು ವಿನೂತನ ಪ್ರಯೋಗವಾಗಿದೆ. ಮನೆಯಿಂದಲೇ ಸ್ವಚ್ಛತಾ ಅರಿವು ಮೂಡಿಸುವ ಮೂಲಕ ಜಾಗೃತಿ, ಅಭಿಯಾನವನ್ನು ಪ್ರಾರಂಭಿಸಿರುವುದು ಶ್ಲಾಘನೀಯ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಅಯ್ಯರ್ ಟ್ವೀಟರ್‌ನಲ್ಲಿ ಪ್ರಶಂಸಿದ್ದಾರೆ.
ಕಾಲಿಂಗ್‌ಬೆಲ್‌ನಲ್ಲಿ ಮ್ಯೂಸಿಕ್ ಬದಲು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಹಾಡು ಬಂದರೆ ಹೇಗೇ? ಈ ಅಭಿಯಾನವನ್ನು ಕಳ್ಳಿಗೆ ಗ್ರಾಮದಲ್ಲಿ ಆರಂಭ ಮಾಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಯಾವುದೇ ಯೋಜನೆಗಳು ಜನರ ಕ್ರಿಯಾಶೀಲತೆಯಿಂದ ಯಶಸ್ವಿಯಾಗಿದೆ. ಇದು ಕೂಡಾ ಯಶಸ್ವಿಯಾಗುವ ನಿರೀಕ್ಷೆಯಿದೆ.
-ಡಾ. ಎಂ.ಆರ್.ರವಿ, ದ.ಕ. ಜಿಪಂ ಸಿಇಒ
ರಫೀಕ್ ಸಂಗೀತ ಸಂಯೋಜನೆ
ಸ್ವಚ್ಛತಾ ಅಭಿಯಾನದಲ್ಲಿ ಅಳವಡಿಸಿರುವ ಈ ಗೀತೆಯನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಂ.ಆರ್.ರವಿ ರಚಿಸಿದ್ದಾರೆ. ಆಕಾಶವಾಣಿಯ ರಫೀಕ್ ಖಾನ್ ಸಂಗೀತ ಸಂಯೋಜಿಸಿದ್ದು, ಗೀತೆಯನ್ನು ಸುಶ್ರಾವ್ಯವಾಗಿ ಶೈನಿ ಪಿರೇರಾ ಮತ್ತು ಕೀರ್ತನ್ ಹೊಳ್ಳ ಹಾಡಿದ್ದಾರೆ.