ಸ್ಥಾವರ-ಜಂಗಮಗಳ ನಡುವೆ ರೋಗಗ್ರಸ್ತ ಪ್ರತಿಮೆ ರಾಜಕಾರಣ
ಸಂವಿಧಾನ ಮೂಲಭೂತ ಹಕ್ಕುಗಳನ್ನು ಕೊಡಮಾಡುತ್ತದೆ ನಿಜ. ಆದರೆ ಅದನ್ನು ಜಾರಿ ಮಾಡಬೇಕಾದ ವ್ಯವಸ್ಥೆಯೇ ಅದಕ್ಕೆ ವಿರುದ್ಧವಾಗಿ ಬಸವಣ್ಣ ಹೇಳುವಂತೆ ಬೇಲಿಯೇ ಎದ್ದು ಹೊಲ ಮೇಯುವ ವ್ಯವಸ್ಥೆಯಾಗಿ ನಿಂತಿರುವಾಗ ಸ್ಥಾವರಿಗಳಾಗಿ ಸಾಂಪ್ರದಾಯಿಕ ರಾಜಕಾರಣದ ಉರುಳಲ್ಲೇ ಜೋತು ಬೀಳುವ ಬದಲು, ಬಿಡುಗಡೆಯ ಹಾದಿಯನ್ನು ಗಂಭೀರವಾಗಿ ಯೋಚಿಸಬೇಕಿದೆ.
ಕಳೆದ ನಾಲ್ಕು ದಿನಗಳಿಂದ ಪ್ರತಿಮಾ ಭಂಜನೆಯ ಘಟನೆಗಳು ತೀವ್ರ ಚರ್ಚೆಯಾಗುತ್ತಿವೆ. ತ್ರಿಪುರಾದಲ್ಲಿ ಗೆದ್ದ ಬಿಜೆಪಿ, ಲೆನಿನ್ ಪ್ರತಿಮೆಯನ್ನು ಉರುಳಿಸಿದೆ. ಇತ್ತ ದ್ರಾವಿಡರ ನಾಡಲ್ಲಿ ನೇರವಾಗಿ ಪೆರಿಯಾರ್ ಪ್ರತಿಮೆಯ ಮೇಲೆಯೇ ಕಲ್ಲುಗಳು ತೂರಿ ಹೋಗಿವೆ. ಮತ್ತೊಂದೆಡೆ ಅಂಬೇಡ್ಕರ್ ಪ್ರತಿಮೆಯನ್ನು ಉರುಳಿಸಿದ್ದಾರೆ. ವರ್ಗ, ಜಾತಿ ಮತ್ತು ಅಂಧಾನುಕರಣೆಗಳು ಮೂರೂ ಮೇಳೈಸಿ ರೂಪುಗೊಂಡಿರುವ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ, ಈ ಮೂರು ಮಹಾನ್ ವ್ಯಕ್ತಿಗಳ ಪ್ರತಿಮೆ ನಾಶವು ಭಾರತದ ಭಿನ್ನ, ಆದರೇ ಸಮಾನ ಕಾಳಜಿಯ ಧನಿಗಳ ಮೇಲಿನ ಸಾಂಕೇತಿಕ ದಾಳಿಯಂತೆ ಕಾಣಿಸುತ್ತಿದೆ. ಮೂರು ದಾಳಿಗಳ ಹಿಂದೆಯೂ ಒಂದೇ ಮೇಲು ಜಾತಿ ಮನಸ್ಥಿತಿಯ ಮೆದುಳು ಮತ್ತು ಕೈಗಳು ಕೆಲಸ ಮಾಡಿವೆ.
ಎಲ್ಲರಿಗೂ ಗೊತ್ತಿರುವಂತೆ ಭಾರತದ ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶಗಳಲ್ಲಿ ಮೇಲು ಜಾತಿಯವರೇ ಮೇಲು ವರ್ಗವಾಗಿರುವ ಮತ್ತು ಮೂಢನಂಬಿಕೆಗಳ ತೀವ್ರ ಅಂಧ ಆಜ್ಞಾನುಧಾರಕರೂ ಆಗಿರುವ ‘ಜಾತಿ ಮತ್ತು ವರ್ಗ ದುರಹಂಕಾರಿ ಪ್ರಜ್ಞೆ’ಯ ಭಾಗವಾಗಿರುವವರೇ, ತ್ರಿಪುರಾದಲ್ಲಿ ಗೆದ್ದ ಸಂಭ್ರಮದಲ್ಲಿ ಲೆನಿನ್ ಪ್ರತಿಮೆಯನ್ನು ಉರುಳಿಸುವ ಮೂಲಕ ತಮ್ಮ ನಿರ್ಲಜ್ಜ ಅಭಿವ್ಯಕ್ತಿಯನ್ನು ತೋರಿಸಿದ್ದಾರೆ. ಇತ್ತ ತಮಿಳುನಾಡಿನಲ್ಲಿಯೂ ಅದೇ ಪ್ರಜ್ಞೆಯ, ಹತಾಶೆಯ ಅಭಿವ್ಯಕ್ತಿ ಪೆರಿಯಾರ್ ಪ್ರತಿಮೆಯನ್ನು ಭಂಜಿಸಿವೆ. ಉತ್ತರ ಪ್ರದೇಶದಲ್ಲಿ ನಡೆದ ಅಂಬೇಡ್ಕರ್ ಪ್ರತಿಮೆಯ ಮೇಲಿನ ದಾಳಿಯಲ್ಲಿ ಮಾತ್ರ ಅದೇ ಪ್ರಜ್ಞೆಯ ಜಾತಿ ದುರಂಹಕಾರದ ಪುನರಾವರ್ತನೆಗಳಾಗಿವೆ. ಈ ಮೂರೂ ದಾಳಿಗಳು ಮಾಡಿದವರ ಕಾರಣಕ್ಕೆ ಒಂದೇ ಸಮೀಕರಣದಲ್ಲಿ ಬಂದರೂ, ಲೆನಿನ್ ಮತ್ತು ಪೆರಿಯಾರ್ ಪ್ರತಿಮೆಗಳ ಮೇಲಿನ ದಾಳಿ ತೀರ ಹೊಸತು ಮತ್ತು ವಿಶೇಷ. ಆದರೆ ಅಂಬೇಡ್ಕರ್ ಪ್ರತಿಮೆಯ ಮೇಲಿನ ದಾಳಿ, ಜಾತಿ ದೌರ್ಜನ್ಯಗಳಷ್ಟೇ ಮಾಮೂಲಿಯಾಗಿದೆ. ನೀವು ಆಗಾಗ ಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ ನೋಡಿರಬಹುದು, ಅಂಬೇಡ್ಕರ್ ಪ್ರತಿಮೆಗೆ ಮಸಿ, ಚಪ್ಪಲಿ ಹಾರ, ಮೂರ್ತಿಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳು ಇತ್ಯಾದಿ ಇತ್ಯಾದಿ...
ಬಹುಶಃ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹೆಚ್ಚು ವಿರೂಪ ಮತ್ತು ಭಂಜನೆಗೊಳಗಾಗಿರುವ ಪ್ರತಿಮೆಗಳಲ್ಲಿ ಅಂಬೇಡ್ಕರ್ ಮೊದಲಿಗರು. ಲೆನಿನ್, ಪೆರಿಯಾರ್, ಅಂಬೇಡ್ಕರ್ ಈ ಮೂರು ಪ್ರತಿಮಾ ಶಕ್ತಿಗಳಲ್ಲಿ ಭಾರತದ ಜಾತಿ ದುರಂಹಕಾರಿ ಪ್ರಜ್ಞೆಗೆ ಹೆಚ್ಚು ಅಪಾಯಕಾರಿ ಎನಿಸುವುದು ಅಂಬೇಡ್ಕರ್. ಏಕೆಂದರೆ ಜಾತಿ ಭಾರತದ ಎಲ್ಲ ಬಗೆಯ ಅಸಮಾನತೆಗಳನ್ನು ಬುಡಮೇಲು ಮಾಡವ ಚಿಂತನೆ ಹಾಗೂ ಅಂಬೇಡ್ಕರ್ ರೂಪಿಸಿದ ಸಂವಿಧಾನ ಈ ನೆಲದ ಅಸಂಖ್ಯಾ ಅವಕಾಶ ವಂಚಿತರ ಬಿಡುಗಡೆಯ ದಾರಿಯೂ ಆಗಿದೆ. ಹಾಗಾಗಿಯೇ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಎಚ್ಚರಗೊಂಡ ದಲಿತಪ್ರಜ್ಞೆ ಅಂಬೇಡ್ಕರ್ ಚಿಂತನೆಗಳನ್ನು ಹೆಚ್ಚೆಚ್ಚು, ತಮ್ಮ ಹಕ್ಕಿನ ಭಾಷೆಯನ್ನಾಗಿಸಿದಂತೆ ಮತ್ತು ಪ್ರತಿಮಾಶಕ್ತಿಯಲ್ಲಿ ಸ್ಥಾವರಿಕರಿಸಿಕೊಳ್ಳ ತೊಡಗಿದಂತೆ, ಜಾತಿ ದುರಹಂಕಾರದ ಪ್ರತಿಕ್ರಿಯೆಯಾಗಿ, ದ್ವೇಷದ ದಾರಿಯಲ್ಲಿ ಅಂಬೇಡ್ಕರ್ ಪ್ರತಿಮೆಯ ಮೇಲಿನ ದಾಳಿಗಳ ಪುನರಾವರ್ತನೆಗಳು ಇಲ್ಲಿ ಜಾತಿ ದೌರ್ಜನ್ಯಗಳಷ್ಟೇ ಹಳೆಯದು.
ಗೆದ್ದವರು ಬರೆಯುವ ಚರಿತ್ರೆಯ ಫಲವೇ ಈ ಪ್ರತಿಮಾ ಸೃಷ್ಟಿ ಮತ್ತು ಪ್ರತಿಮಾ ನಾಶಗಳ ಅಭಿವ್ಯಕ್ತಿ. ಪ್ರಜಾಪ್ರಭುತ್ವದಲ್ಲೂ ಇದು ವಿಚಿತ್ರವಾಗಿ ಮುಂದುವರಿಯುತ್ತಲೇ ಇದೆ. ಹಸಿವಿನಿಂದ ನರಳುವವರ ಪ್ರಮಾಣದಲ್ಲಿ ಇಥಿಯೋಪಿಯಕ್ಕಿಂತಲೂ ಹೆಚ್ಚಿರುವ ಈ ದೇಶದಲ್ಲಿ ಮೂರು ಸಾವಿರ ಕೋಟಿ ಖರ್ಚಿನ ಪಟೇಲ್ ಪ್ರತಿಮೆ, ಎರಡುವರೆ ಸಾವಿರ ಕೋಟಿ ಖರ್ಚಿನ ಶಿವಾಜಿ ಪ್ರತಿಮೆಗಳನ್ನು ಜನರ ದುಡ್ಡಲ್ಲಿ ಪ್ರಭುತ್ವಗಳೇ ನಿರ್ಮಿಸುವುದು ಯಾರನ್ನು ಮೆಚ್ಚಿಸಲಿರಬಹುದು? ಅಂಬೇಡ್ಕರ್ ಭಾರತದ ಎಲ್ಲ ಬಗೆಯ ಅಸಮಾನತೆಯನ್ನು ಬೋಧಿಸುವ ಮನುಸ್ಮತಿಯನ್ನು ಪ್ರಜ್ಞಾವಂತ ಬ್ರಾಹ್ಮಣನ ಕೈಯಿಂದಲೇ ಸುಟ್ಟು, ವರ್ತಮಾನಕ್ಕೆ ಮುಖಾಮುಖಿ ಯಾದರೆ, ಅದೇ ಮನುಸ್ಮತಿಯನ್ನು, ಜೀವನ ಪರ ಮೌಲ್ಯಗಳ ದಾರಿಯೆಂದು ಪುಸ್ತಕವೊಂದನ್ನು ಬರೆದು ಮಾಜಿ ರಾಜ್ಯಪಾಲ ಮತ್ತು ಉಚ್ಚನ್ಯಾಯಾಲಯದ ಮುಖ್ಯನ್ಯಾಯಾಧೀಶರಾಗಿದ್ದ ಬ್ರಾಹ್ಮಣನೊಬ್ಬ ದಲಿತ ಕವಿಯೊಬ್ಬರಿಂದ ಬಿಡುಗಡೆ ಮಾಡಿಸಿ ಜಾತಿ ದುರಹಂಕಾರದ ಪ್ರತೀಕಾರ ತೀರಿಸಿಕೊಂಡಿರುವುದು ಜಾತಿವಿಕಾರಗಳ ವಾಸ್ತವ. ರಾಜಸ್ಥಾನದಲ್ಲಿ ಗೆಲ್ಲುತ್ತಲ್ಲೇ ಬಂದಿರುವ ಬಿಜೆಪಿ ಅಲ್ಲಿನ ಉಚ್ಚನ್ಯಾಯಲಯದ ಮುಂದೆ ಅದೇ ಮನುವಿನ ಪ್ರತಿಮೆ ನಿಲ್ಲಿಸಿದೆ. ಭಾರತದ ಸಂವಿಧಾನದ ಘನತೆಯನ್ನು ಮನುಸ್ಮತಿಯ ಅಮಾನವೀಯತೆಯನ್ನು ಜೊತೆಯಲ್ಲಿಟ್ಟು ಊಹಿಸಿಕೊಳ್ಳಲು ಸಾಧ್ಯವೂ ಇಲ್ಲದ ಪ್ರಜಾಪ್ರಭುತ್ವದಲ್ಲಿ ಚುನಾಯಿತ ಪ್ರಭುತ್ವವೊಂದು ಮನುಜಪ ಮಾಡುತ್ತಿದೆ. ಮನುಷ್ಯ ಘನತೆಗಾಗಿ ಹೋರಾಡಿದವರ ಪ್ರತಿಮೆಗಳು, ಜೀವಗಳು ಉರುಳಿಬೀಳುತ್ತಿವೆ. ಇದೇ ಪ್ರಜಾಪ್ರಭುತ್ವದ ಸೋಲು.
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎನ್ನುವುದು ಬಸವಣ್ಣನಾದಿಯಾಗಿ ಎಲ್ಲ ವಿವೇಕವಂತರ ತಿಳಿವು ಆಗಿದೆ. ಇದೇ ವಿವೇಕವು ‘ತಳಸಂಸ್ಕೃತಿ ಪ್ರಜ್ಞೆ’ಯ ಹೋರಾಟದ ಅಸ್ತ್ರವೂ ಕೂಡ. ಆದರೆ ಇಂತಹ ಪ್ರಜ್ಞಾವಂತರ ತಿಳಿವನ್ನೇ ತಮ್ಮ ರಾಜಕೀಯ ಸಿದ್ಧಾಂತಗಳನ್ನಾಗಿಸಿ ಕೊಂಡವರು ಕೂಡ ಸ್ಥಾವರಗಳನ್ನು ಕಟ್ಟುತ್ತಲೆ ಬರುತ್ತಿರುವುದು ಏನನ್ನು ಸೂಚಿಸಬಹುದು? ಉತ್ತರಪ್ರದೇಶದಲ್ಲಿ ಮಾಯಾವತಿಯವರು ಕೋಟಿಗಳ ಲೆಕ್ಕದಲ್ಲಿ ಖರ್ಚು ಮಾಡಿ ಅಂಬೇಡ್ಕರರ ವಿವೇಕವನ್ನು ಪ್ರತಿಮಾ ಪ್ರೇಮದಲ್ಲಿಯೇ ಸ್ಥಾವರಿಕರಿಸಿಕೊಂಡದ್ದು ಇದಕ್ಕೆ ದೊಡ್ಡ ಉದಾಹರಣೆ. ಈಗ ಲೆನಿನ್ ಪ್ರತಿಮೆಯ ಮೇಲಿನ ದಾಳಿಯ ನಂತರ ಕಾಮ್ರೆಡ್‌ಗಳ ಪ್ರತಿಕ್ರಿಯೆಗಳಲ್ಲೂ ಸ್ಥಾವರಪ್ರೇಮದ ಭಾವವೇಶ ವ್ಯಕ್ತವಾಗುತ್ತಿದೆ. ಇನ್ನು ಜೀವಮಾನವಿಡಿ ಪ್ರತಿಮಾ ಭಂಜನೆಯ ಮೂಲಕವೇ ಬ್ರಾಹ್ಮಣವಾದಕ್ಕೆ ಮುಖಾಮುಖಿಯಾಗಿದ್ದ ಪೆರಿಯಾರ್ ರ ಪ್ರತಿಮಾ ಭಂಜನೆಗೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳಲ್ಲೂ ಇದು ಪುನರಾವರ್ತನೆಯಾಗುತ್ತಿದೆ. ತಾವು ಜೀವಮಾನವಿಡೀ ವಿರೋಧಿಸಿದ್ದ ಪ್ರತಿಮಾ ರಾಜಕಾರಣಕ್ಕೆ ತಾವೇ ಪ್ರತಿಮೆಗಳಾಗುವ ಇಂತಹ ವಿರೋಧಾಭಾಸಗಳ ಪ್ರತಿಮಾ ಪ್ರೇಮ ಮತ್ತು ಪ್ರತಿಮಾ ನಾಶದ ರಾಜಕಾರಣದ ದುರಂತವ್ಯಂಗ್ಯಗಳಿಗೆ ಎದುರುಬದುರಾಗುತ್ತಿವೆ.
ಹಾಗೆ ನೋಡಿದರೇ ಭಾರತದಲ್ಲಿ ಪ್ರತಿಮೆಗಳನ್ನು ಕೆತ್ತಿ ನಿಲ್ಲಿಸಿ, ಅವನ್ನು ದೇವರನ್ನಾಗಿಸಿ ಪೂಜಿಸುವ ಮತ್ತು ದ್ವೇಷಾಭಿವ್ಯಕ್ತಿಯ ವಿಕಾರ ರೂಪಗಳನ್ನು ತೋರಿಸಿಕೊಳ್ಳಲು ಬಳಕೆಯಾಗುವ ದೊಡ್ಡ ಚರಿತ್ರೆಯೇ ಇದೆ. ಭಾರತದಲ್ಲಿ ಮೊದಲ ಬಾರಿಗೆ ಮನುಷ್ಯನೊಬ್ಬ ಪ್ರತಿಮೆಯಾಗಿ ಕೆತ್ತಲ್ಪಟ್ಟದ್ದು ಬುದ್ಧ, ಮತ್ತು ಹೆಚ್ಚು ಭಂಜನೆಗೊಳಗಾದ ಪ್ರತಿಮೆಗಳೂ ಬುದ್ಧನವೇ ಎನ್ನುತ್ತದೆ ಚರಿತ್ರೆ. ಸ್ಥಾವರೀಕೃತ ವ್ಯವಸ್ಥೆಯನ್ನು, ಬ್ರಾಹ್ಮಣ ಯಜಮಾನಿಕೆಯನ್ನು ವಿರೋಧಿಸಿದ್ದ ಬುದ್ಧ ದಮ್ಮವನ್ನು ಸಾವಿರ ವರ್ಷಗಳ ಬೌದ್ಧಿಕ ಮತ್ತು ಭೌತಿಕ ಹಿಂಸೆಯ ಮೂಲಕ ಗೆದ್ದ ಬ್ರಾಹ್ಮಣ ಧರ್ಮದ ಮೊದಲ ಟಾರ್ಗೆಟ್ ಆಗಿದ್ದದ್ದು ಬುದ್ಧನ ಗುರುತುಗಳೇ ಆಗಿತ್ತು. ಹಾಗಾಗಿ ಹಲವು ಬುದ್ಧ ಮೂರ್ತಿಗಳನ್ನು, ಅವನ ಸಂಕೇತಗಳನ್ನು ನಾಶಗೊಳಿಸಿದರು, ನಾಶ ಮಾಡಲಾಗದ ಕೆಲವನ್ನು ಬ್ರಾಹ್ಮಣೀಕರಿಸಿಕೊಂಡರು. ಚರಿತ್ರೆಯೆಂದರೆ ಗೆದ್ದವರು ಬರೆಯುವ ನಿರೂಪಣೆ ಎಂಬ ಹಳೆ ಮಾತೊಂದಿದೆ. ಭಾರತದ ಮಟ್ಟಿಗೆ ಇದು ಪುನರಾವರ್ತನೆಯಾಗುತ್ತಲೇ ಇರುತ್ತದೆ.
ಇದಕ್ಕೆ ಚರಿತ್ರೆಯೂ ಸಾಕ್ಷಿ, ಮೊನ್ನೆಯ ಲೆನಿನ್, ಅಂಬೇಡ್ಕರ್, ಪೆರಿಯಾರ್ ಪ್ರತಿಮೆಗಳ ಭಂಜನೆಯು ಕೂಡ. ಸಾಮಾನ್ಯವಾಗಿ ಪ್ರತಿಮಾ ಭಂಜನೆಗೆ ಚರಿತ್ರೆಯಲ್ಲಿ ಹೆಚ್ಚು ದೂಷಣೆಗೆ ಒಳಗಾಗಿರುವುದು ಮುಸ್ಲಿಮರು. ಕೆಲವು ಮುಸ್ಲಿಂ ರಾಜರು ಮೂರ್ತಿ ಭಂಜನೆ ಮತ್ತು ಲೂಟಿ ಮಾಡಿದ್ದರ ಫಲವಾಗಿ, ವರ್ತಮಾನದ ಮುಸ್ಲಿಮರನ್ನು ಹೊಣೆಗಾರರನ್ನಾಗಿಸುವ ‘ಚಾರಿತ್ರಿಕ ಕ್ರೌರ್ಯ ನೀತಿ’ಯನ್ನು ಜಾರಿಗೊಳಿಸಲಾಗಿದೆ. ಹೀಗೆ ಹೊಣೆಗಾರರನ್ನಾಗಿಸಿ ಮುಸ್ಲಿಮರನ್ನು ಹಣಿಯಲು ಮತ್ತು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಲು, ‘ಕೋಮುವಾದಿ ನ್ಯಾಯ’ ತರ್ಕವನ್ನು ಪ್ರಜಾಪ್ರಭುತ್ವದಲ್ಲಿ ಮತೀಯ ರಾಜಕಾರಣದ ದೊಡ್ಡ ಆಯುಧವಾಗಿ ಬಳಸಲಾಗುತ್ತಿದೆ. ಆದೇ ಸಂದರ್ಭದಲ್ಲಿ ಮುಸ್ಲಿಮರಲ್ಲದ ಇನ್ನೂ ಹಲವು ಹಿಂದೂ ಎಂದು ಕರೆಯಿಸಿಕೊಂಡವರು ಅದೇ ಹಿಂದೂ ದೇವಾಲಯಗಳ ಮೇಲೆ ನಡೆಸಿದ ಲೂಟಿ ಮತ್ತು ಪ್ರತಿಮಾ ಭಂಜನೆಯ ಕಥೆಗಳನ್ನು ನಮ್ಮ ಓದುವ ಚರಿತ್ರೆಯಿಂದ ಮಾಯಮಾಡಲಾಗಿರುತ್ತದೆ. ಹಾಗಾಗಿಯೇ ಗೆದ್ದವರು ಬರೆಯುವ ಚರಿತ್ರೆಯ ಫಲ ವರ್ತಮಾನದ ಹುಣ್ಣುಗಳು.
ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಬದ್ಧ ಮೌಲ್ಯಗಳ ಅಭಿವ್ಯಕ್ತಿಯ ಭಾಗವಾಗಿ ಪ್ರತಿಮೆಗಳನ್ನು ನಿರ್ಮಿಸಿಕೊಳ್ಳುವುದು ಹಕ್ಕು. ಆದರೆ ಆಂತರ್ಯದಲ್ಲಿ ಅರೆ ಪ್ರಜಾಪ್ರಭುತ್ವವಾದಿ ಗುಣಗಳನ್ನು ಮೈಗೂಡಿಸಿ ಕೊಂಡಿರುವ, ಅಸಮಾನ ಸಾಮಾಜಿಕ ಸ್ಥಾನಮಾನ ಮತ್ತು ಅಸಮಾನ ಸಂಪತ್ತಿನ ಹಂಚಿಕೆಯಿರುವ ಈ ದೇಶದಲ್ಲಿ ಎಲ್ಲ ಬಗೆಯ ಮಾನವೀಯ ಅಭಿವ್ಯಕ್ತಿಗಳೂ ಅಪಾಯದಲ್ಲಿರುತ್ತವೆ ಎಂಬುದು ಮರೆಯುವಂತಿಲ್ಲ.
ಹಾಗಾಗಿಯೇ ಗಾಂಧಿಯನ್ನು ಕೊಂದ ವಿಷಪ್ರಜ್ಞೆಯ ಮೆದುಳುಗಳೇ ನಿನ್ನೆ ಮೊನ್ನೆ ಗೌರಿಯನ್ನೂ ಕೊಂದಿವೆ. ಇಂದು ನಾಳೆ, ಇನ್ನು ಯಾರನ್ನಾದರೂ ಕೊಲ್ಲುತ್ತಲೂ ಇರುತ್ತವೆ ಕೂಡ. ಎಲ್ಲ ಬಗೆಯ ಅಸಮಾನತೆಗಳೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯ ಭಾಗವಾಗಿರುವ ಪಾರಂಪರಿಕ ಒಪ್ಪಿತ ವ್ಯವಸ್ಥೆಯೊಂದರಲ್ಲಿ ಎಲ್ಲರೂ ಸಮಾನರು ಎಂದು ಬೋಧಿಸುವ ಸಂವಿಧಾನದ ಪ್ರಜ್ಞೆಯನ್ನು ಒಪ್ಪುವ ಮತ್ತು ಪ್ರಶ್ನೆ ಮಾಡುವ ಜೀವಂತ ಚೈತನ್ಯಗಳೇ ಅಭಿವ್ಯಕ್ತಿಯನ್ನು ಕಳೆದುಕೊಳ್ಳುವ ಅಪಾಯದಲ್ಲಿರುವಾಗ, ಕಾಳಜಿಯುಳ್ಳವರು ಸ್ಥಾವರಪ್ರೇಮಿಗಳಾಗುವುದು ನಮ್ಮ ವಿವೇಕವನ್ನು ಮೊಂಡು ಮಾಡಿಕೊಂಡಂತೆ ಅನಿಸುತ್ತಿದೆ.
ಸಂವಿಧಾನ ಮೂಲಭೂತ ಹಕ್ಕುಗಳನ್ನು ಕೊಡಮಾಡುತ್ತದೆ ನಿಜ. ಆದರೆ ಅದನ್ನು ಜಾರಿ ಮಾಡಬೇಕಾದ ವ್ಯವಸ್ಥೆಯೇ ಅದಕ್ಕೆ ವಿರುದ್ಧವಾಗಿ ಬಸವಣ್ಣ ಹೇಳುವಂತೆ ಬೇಲಿಯೇ ಎದ್ದು ಹೊಲ ಮೇಯುವ ವ್ಯವಸ್ಥೆಯಾಗಿ ನಿಂತಿರುವಾಗ ಸ್ಥಾವರಿಗಳಾಗಿ ಸಾಂಪ್ರದಾಯಿಕ ರಾಜಕಾರಣದ ಉರುಳಲ್ಲೇ ಜೋತು ಬೀಳುವ ಬದಲು, ಬಿಡುಗಡೆಯ ಹಾದಿಯನ್ನು ಗಂಭೀರವಾಗಿ ಯೋಚಿಸಬೇಕಿದೆ.
ಕೊನೆಯದಾಗಿ ಝೆನ್ ಕಥೆಯೊಂದರ ಮೂಲಕ ಪ್ರತಿಮಾ ಭಂಜನೆಗಳ ಮತ್ತೊಂದು ಆಯಾಮವನ್ನು ಎದುರು ನೋಡಬಹುದೇ?
ಝೆನ್ ಗುರು ತೆಂಕಾ ಒಂದು ರಾತ್ರಿ, ವಿಪರೀತ ಚಳಿ ಮತ್ತು ಮಳೆಯಿಂದಾಗಿ ತನಗೆ ಹತ್ತಿರವಿದ್ದ ಬುದ್ಧನ ದೇವಾಲಯ ಹೊಕ್ಕುತ್ತಾನೆ. ಚಳಿ ತಡೆಯಲಾಗದೆ ಅಲ್ಲೇ ಪೂಜಿಸಲ್ಪಡುತ್ತಿದ್ದ ಬುದ್ಧನ ಮರದ ಮೂರ್ತಿಯೊಂದನ್ನು ನೋಡಿ ಅದನ್ನೇ ಚಳಿಗೆ ಬೆಂಕಿಯಿಟ್ಟು ತನ್ನ ದೇಹ ಕಾಯಿಸಿಕೊಳ್ಳತೊಡಗುತ್ತಾನೆ. ಮುಂಜಾನೆ ಪೂಜಾರಿ ಬಂದು ನೋಡುವಾಗ ಬುದ್ಧನ ಮರದ ಮೂರ್ತಿ ಬೂದಿರಾಶಿಯಾಗಿರುತ್ತದೆ. ಅಲ್ಲೇ ಇದ್ದ ತೆಂಕನಿಗೆ ಪೂಜಾರಿ ‘‘ನೀನು ಬುದ್ಧನ ಮೂರ್ತಿಗೆ ಬೆಂಕಿಯಿಟ್ಟು ಸುಟ್ಟಿದ್ದೀ’’ ಎಂದು ಅರಚುತ್ತಾನೆ. ತೆಂಕ ಸಮಾಧಾನವಾಗಿ ಕೈಯಲ್ಲಿ ಕಡ್ಡಿಯೊಂದನ್ನಿಡಿದು ಬೂದಿರಾಶಿಯಲ್ಲಿ ಕೆದಕತೊಡಗುತ್ತಾನೆ. ಇದರಿಂದ ಮತ್ತಷ್ಟು ಕೋಪಗೊಳ್ಳುವ ಪೂಜಾರಿ ಸಿಟ್ಟಿನಿಂದ ‘‘ಬೂದಿಯಲ್ಲಿ ಏನು ಹುಡುಕುತ್ತಿರುವೆ’’ ಎನ್ನುತ್ತಾನೆ.
ಅದೇ ಸಮಾಧಾನದಲ್ಲಿ ತೆಂಕಾ ‘‘ಬುದ್ಧ್ದನ ಚಿತಾಭಸ್ಮ’’ ಎನ್ನುತ್ತಾನೆ. ಇದರಿಂದ ಮತ್ತಷ್ಟು ಕಸಿವಿಸಿಗೊಂಡ ಪೂಜಾರಿ ‘‘ಅದರಲ್ಲಿ ಬುದ್ಧನ ಚಿತಾಭಸ್ಮವೆಲ್ಲಿದೆ, ಅದು ಮರದ ಮೂರ್ತಿ’’ ಅನ್ನುತ್ತಾನೆ. ಹಾಗಿದ್ದರೆ ಉಳಿದ ಆ ಎರಡು ಮರದ ಮೂರ್ತಿಗಳನ್ನೂ ಕೊಡು ಚಳಿಕಾಯಿಸಿಕೊಳ್ಳುತ್ತೇನೆ ಎನ್ನುತ್ತಾನೆ ತೆಂಕಾ. ಇದೇ ಸ್ಥಾವರ ನಾಶದ ಬಿಡುಗಡೆಯ ಹಾದಿ. ಹಲವು ಅಸಮಾನತೆಗಳ ಗರ್ಭದ ಮೇಲಿರುವ ಪೊರೆಯಂತಿರುವ ಪ್ರಜಾಪ್ರಭುತ್ವಕ್ಕೀಗ ಪರೀಕ್ಷೆಯ ಕಾಲ. ಅವರು ಸ್ಥಾವರಗಳನ್ನು ಭಂಜಿಸುತ್ತಿದ್ದಾರೆ, ಮುಂದವರಿದು ಸಂವಿಧಾನವನ್ನು ಭಂಜಿಸಹೊರಡುತ್ತಿದ್ದಾರೇ... ಅನಿವಾರ್ಯವಾಗಿ ಸೃಷ್ಟಿಯಾಗಿರುವ ಈ ಚಾರಿತ್ರಿಕ ಒತ್ತಡಗಳನ್ನು ಇಂದು ಪಥ ಬದಲಿಸಿಕೊಂಡು ಮುಖಾಮುಖಿಯಾಗಲೇಬೇಕಿದೆ.