‘ಕಾಂಗ್ರೆಸೇತರ ತೃತೀಯ ರಂಗ’ವೊಂದರ ಪ್ರಸ್ತಾಪ! ಹಿಂದಿರಬಹುದಾದ ನೈಜಕಾರಣಗಳು
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್‌ರವರು ಕಾಂಗ್ರೆಸೇತರ ತೃತೀಯ ರಂಗವೊಂದರ ಬಗ್ಗೆ ನೀಡಿರುವ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನವೊಂದನ್ನು ಮೂಡಿಸಿದೆ.
ಸಾರ್ವತ್ರಿಕ ಚುನಾವಣೆಗಳು ಸನಿಹದಲ್ಲಿದ್ದಾಗೆಲ್ಲ ಗರಿಗೆದರುವ ತೃತೀಯರಂಗದ ಮರುಸೃಷ್ಟಿಯ ಮಾತುಗಳು ಚುನಾವಣೆ ಘೋಷಣೆ ಯಾಗುವ ಹೊತ್ತಿಗೆ ಗೊಂದಲಮಯವಾಗಿ, ಒಂದೊಂದು ಪ್ರಾದೇಶಿಕ ಪಕ್ಷಗಳು ಒಂದೊಂದು ರಾಷ್ಟ್ರೀಯ ಪಕ್ಷಗಳ ಬಾಲಂಗೋಚಿಗಳಂತಾಗಿ, ಅವುಗಳ ಮಿತ್ರಕೂಟದಲ್ಲಿ ಪಾಲುದಾರ ಪಕ್ಷಗಳಾಗಿ ಹೋಗಿಬಿಡುವುದು ಕಳೆದೆರಡು ದಶಕಗಳಿಂದಲೂ ನಡೆಯುತ್ತ ಬಂದಿರುವ ಮಾಮೂಲಿ ಪರಿಪಾಠ! ಬಹುಶ: ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗಳಿಗಿನ್ನೂ ಒಂದು ವರ್ಷ ಬಾಕಿ ಇರುವಾಗಲೇ ತೃತೀಯರಂಗ ಸ್ಥಾಪನೆಯ ಮಾತುಗಳು ಕೇಳಿ ಬಂದಿದ್ದು, ಹಲವು ಪ್ರಾದೇಶಿಕ ಪಕ್ಷಗಳು ರಾವ್ ಅವರಿಗೆ ಪೂರಕವಾಗಿ ಮಾತನಾಡಿವೆ.
ರಾವ್ ಅವರ ಈ ಹೇಳಿಕೆ ಹೊರಬಿದ್ದ ತಕ್ಷಣ ಮೊದಲು ಪ್ರತಿಕ್ರಿಯೆ ನೀಡಿದ್ದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿಯರು. ಚಂದ್ರಶೇಖರ್ ಅವರ ಮಾತಿಗೆ ಧ್ವನಿಗೂಡಿಸಿದ ಮಮತಾ ಬ್ಯಾನರ್ಜಿಯವರು ಎರಡೂ ರಾಷ್ಟ್ರೀಯ ಪಕ್ಷಗಳನ್ನು ಹೊರತು ಪಡಿಸಿದ ತೃತೀಯ ರಂಗವೊಂದನ್ನು ಸ್ಥಾಪಿಸಿದಲ್ಲಿ ತಾವು ಅದರ ಭಾಗವಾಗುವುದಾಗಿ ಹೇಳಿದರು. ಇದರ ಹಿಂದೆಯೇ ಎಐಎಂಐಎಂ ಪಕ್ಷದ ಅಸದುದ್ದೀನ್ ಉವೈಸಿಯಂತಹವರು ಸಹ ರಾವ್ ಅವರಿಗೆ ಬೆಂಬಲ ನೀಡುವ ಮಾತನಾಡಿದರು. ಇನ್ನು ಉತ್ತರಪ್ರದೇಶದ ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಸಹ ಇಂತಹ ವೇದಿಕೆ ರಚನೆಗೆ ಒಲವು ತೋರಿಸಬಹುದೆಂಬ ನಂಬಿಕೆ ಚಿಗುರೊಡೆದಿದೆ. ಅದಕ್ಕೆ ಕಾರಣ ಉತ್ತರಪ್ರದೇಶದಲ್ಲಿನ ಪೂಲ್‌ಪುರ ಮತ್ತು ಗೋರಖ್‌ಪುರ ಉಪ ಚುನಾವಣೆಗಳಿಗಾಗಿ ಬಹುಜನ ಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಹಳೆಯ ಹಗೆ ತೊರೆದು ಕೈ ಜೋಡಿಸಿರುವುದು ಹೊಸ ದಿಕ್ಕಿನ ರಾಜಕೀಯ ಧ್ರುವೀಕರಣಕ್ಕೆ ನಾಂದಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಜೊತೆಗೆ ಎನ್‌ಡಿಎ ಜೊತೆಗಿನ ಸಂಬಂಧ ಹಳಸಿಕೊಂಡ ಹಿನ್ನೆಲೆಯಲ್ಲಿ ತೆಲುಗುದೇಶಂ ಸಹ ಇಂತಹ ರಂಗದ ಜೊತೆ ಸೇರಬಹುದೆಂಬ ನಂಬಿಕೆಯನ್ನು ಕೆಲವು ರಾಜಕೀಯ ನಾಯಕರು ವ್ಯಕ್ತ ಪಡಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಜಾತ್ಯತೀತ ಜನತಾದಳದ ದೇವೇಗೌಡರು ಮತ್ತು ಡಿಎಂಕೆಯ ಕರುಣಾ ನಿಧಿಯವರು ಸಹ ತೃತೀಯರಂಗದ ಸೃಷ್ಟಿಗೆ ಎಲ್ಲ ಸಹಕಾರ ನೀಡುವ ಸಾಧ್ಯತೆಯೂ ಹೆಚ್ಚಿದೆ.
ವಿಶೇಷವೆಂದರೆ ಈ ತೃತೀಯ ರಂಗದ ಸ್ಥಾಪನೆಯ ವಿಚಾರ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿಯೂ ಬೇರೆಬೇರೆ ರೀತಿಯ ಪರಿಣಾಮಗಳನ್ನು ಉಂಟು ಮಾಡಿರುವುದು. ಇದು ಕಾಂಗ್ರೆಸೇತರ ರಂಗವಾಗಿರುವುದರಿಂದ ಸಹಜವಾಗಿಯೆ ಕಾಂಗ್ರೆಸ್ ಪಕ್ಷ ತನ್ನ ಮಿತ್ರ ಪಕ್ಷಗಳನ್ನು ಕಳೆದಕೊಳ್ಳುವ ಭೀತಿ ಎದುರಿಸುವಂತಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಭಾಜಪವನ್ನು ಎದುರಿಸಲು ಬೇಕಾದ ಶಕ್ತಿಯನ್ನು ಪಡೆಯಲು ಅದು ವಿಫಲವಾಗುತ್ತದೆ. ಹೀಗಾಗಿಯೇ ಅದು ಈಗಿನ ತನ್ನ ಮಿತ್ರ ಪಕ್ಷಗಳನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಗೆ ಬಿದ್ದಿದೆ.
ಆದರೆ ಈ ತೃತೀಯರಂಗದ ಪ್ರಸ್ತಾವನೆ ಭಾಜಪದಲ್ಲಿ ಸ್ವಲ್ಪ ಮಟ್ಟಿಗಿನ ನಿರಾಳತೆ ಮೂಡಿಸಿದೆ. ಯಾಕೆಂದರೆ ಅದಕ್ಕೆ ಗೊತ್ತು: ಮುಂದಿನ ಸಾರ್ವತ್ರಿಕ ಚುನಾವಣೆಯ ಹೊತ್ತಿಗೆ ಬಹುತೇಕ ವಿರೋಧ ಪಕ್ಷಗಳು ತನ್ನ ವಿರುದ್ಧ ಒಂದಾಗಿ ಹೋರಾಡಲಿವೆ ಮತ್ತು ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗಿರುವ ತಾನು 2014ರಲ್ಲಿ ಗೆದ್ದಷ್ಟು ಸುಲಭವಾಗಿ ಗೆಲ್ಲಲು ಸಾಧ್ಯವಿಲ್ಲವೆನ್ನುವುದು. ಯಾಕೆಂದರೆ 2019ರ ಚುನಾವಣೆಯಲ್ಲಿ ಏನೇ ಪ್ರಯತ್ನಪಟ್ಟರೂ ಭಾಜಪ ತನ್ನ ಈಗಿನ ಸ್ಥಾನಗಳಲ್ಲಿ ಕನಿಷ್ಠ ಅರವತ್ತು ಸ್ಥಾನಗಳನ್ನು ಕಳೆದುಕೊಳ್ಳುವುದು ಖಚಿತ. ಹಾಗಾದಲ್ಲಿ ಅದು ಸರಕಾರ ರಚಿಸಲು ಮಿತ್ರ ಪಕ್ಷಗಳ ಮೊರೆಹೋಗಲೇ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ತನ್ನ ವಿರೋಧಿ ಮತಗಳು ಚದುರಿಹೋಗಲು ತೃತೀಯ ರಂಗ ನೆರವಾಗುತ್ತದೆ ಎನ್ನುವುದೇ ಅದರ ಸಂತೋಷಕ್ಕೆ ಕಾರಣವಾಗಿದೆ. ಈ ದೃಷ್ಟಿಯಿಂದ ಅದು ತೃತೀಯರಂಗದ ಬಗ್ಗೆ ಅಷ್ಟೇನು ಆತಂಕ ಪಟ್ಟಂತೆ ಕಾಣುತ್ತಿಲ್ಲ.
ಗುಜರಾತ್ ಚುನಾವಣೆಯಲ್ಲಿ ಭಾಜಪಕ್ಕೆ ಕಠಿಣ ಸವಾಲು ನೀಡಿದ ಕಾಂಗ್ರೆಸ್‌ನ ಬಗ್ಗೆ ರಾಷ್ಟ್ರ ರಾಜಕಾರಣದಲ್ಲಿ ಒಂದಷ್ಟು ಆಶಾಭಾವನೆ ಮೂಡಿದ್ದು ನಿಜ. ಹೀಗಾಗಿಯೇ ಕಾಂಗ್ರೆಸ್ ನೇತೃತ್ವದಲ್ಲಿ ಬಲಿಷ್ಠವಾದ ಮೈತ್ರಿಕೂಟವೊಂದನ್ನು ರಚಿಸಿ ಭಾಜಪದ ವಿರುದ್ಧ ಹೋರಾಡಬಹುದೆನ್ನುವ ಆಸೆಯೊಂದು ಭಾಜಪವನ್ನು ವಿರೋಧಿಸುವ ಕೆಲವು ಪಕ್ಷಗಳಲ್ಲಿ ಮೂಡಿದ್ದು ಸಹಜವಾಗಿತ್ತು. ಆದರೆ ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಅನುಭವಿಸಿದ ಸೋಲು ಅಂತಹ ಯೋಚನೆಯನ್ನು ಸದ್ಯಕ್ಕೆ ತೊಡೆದು ಹಾಕಿದಂತೆ ಕಾಣುತ್ತಿದೆ. ಯಾಕೆಂದರೆ ದೇಶದ ಯಾವ ಭಾಗದಲ್ಲಿ ಭಾಜಪದ ಕುರುಹೂ ಇಲ್ಲವೆಂದು ಎಲ್ಲರೂ ಭಾವಿಸಿದ್ದರೋ ಅಂತಹ ನೆಲದಲ್ಲಿ ಭಾಜಪ ಸಾಧಿಸಿದ ಜಯ ವಿರೋಧಪಕ್ಷಗಳಲ್ಲಿ ಗಾಬರಿಯನ್ನುಂಟು ಮಾಡಿರುವುದಂತೂ ಸತ್ಯ.
ಹೀಗಾಗಿಯೇ ಇದೀಗ ಕಾಂಗ್ರೆಸೇತರ ತೃತೀಯರಂಗವೊಂದನ್ನು ಕಟ್ಟುವ ರಾವ್ ಅವರ ಮಾತುಗಳು ಕೆಲವು ಪಕ್ಷಗಳನ್ನು ಆಕರ್ಷಿಸಿದೆ. ಆದರೆ ಇಂಡಿಯಾದ ಪ್ರಾದೇಶಿಕ ಪಕ್ಷಗಳ ಇತಿಹಾಸವನ್ನು ಮತ್ತು ಅವುಗಳ ನಾಯಕರ ಇದುವರೆಗಿನ ವರ್ತನೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ತೃತೀಯ ರಂಗವೊಂದರ ಸ್ಥಾಪನೆ ಅಷ್ಟು ಸುಲಭವೇನಲ್ಲ. ನಾಯಕತ್ವದ ವಿಷಯ ಬಂದಾಗ ಮಮತಾ ಬ್ಯಾನರ್ಜಿಯಂತಹವರು ಬೇರೆಯವರನ್ನು ಒಪ್ಪುವುದು ಕಷ್ಟ. ಇನ್ನು ಈ ಪ್ರಸ್ತಾಪ ಮಾಡಿರುವ ರಾವ್ ತೆಲಂಗಾಣದ ಅಚೆ ಪ್ರಭಾವ ಬೀರುವಂತಹವರೇನಲ್ಲ. ಹೀಗಾಗಿ ರಚನೆಯಾದರೂ ನಾಯಕತ್ವದ ಗೊಂದಲವೇ ಅದನ್ನು ತಿಂದು ಹಾಕಲಿದೆ.
ಯಾಕೆ ರಾವ್ ತೃತೀಯರಂಗದ ಬಗ್ಗೆ ಮಾತಾಡುತ್ತಿದ್ದಾರೆ?
ಇದು ಈಗ ಎದ್ದಿರುವ ಬಹುಮುಖ್ಯ ಪ್ರಶ್ನೆ! ಯಾಕೆಂದರೆ ರಾವ್ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿ ಇಲ್ಲಿಯವರೆಗೂ ಎನ್‌ಡಿಎಯ ಅಂಗಪಕ್ಷವಾಗಿದೆ ಮತ್ತು ಕೇಂದ್ರದ ಭಾಗವಾಗಿದೆ. ಇಂತದ್ದರಲ್ಲಿ ರಾವ್ ಯಾಕೆ ಭಾಜಪದ ವಿರುದ್ಧವೇ ರಂಗವೊಂದನ್ನು ಕಟ್ಟುವ ಹವಣಿಕೆಯಲ್ಲಿದ್ದಾರೆಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಒಂದು ವಾದಸರಣಿಯ ಪ್ರಕಾರ ತಮ್ಮನ್ನು ತಾವು ರಾಷ್ಟ್ರೀಯ ಮಟ್ಟದ ನಾಯಕನೆಂದು ಬಿಂಬಿಸಿಕೊಂಡು ರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯಲು ರಾವ್ ತೃತೀಯರಂಗದ ಪ್ರಸ್ತಾಪ ಮುಂದಿಟ್ಟಿದ್ದಾರೆಂದು ಹೇಳಲಾಗುತ್ತಿದೆ.
ಇನ್ನೊಂದು ವಾದದ ಪ್ರಕಾರ ತೆಲಂಗಾಣದಲ್ಲಿ ರಾವ್ ಸರಕಾರದ ಜನಪ್ರಿಯತೆ ಕುಸಿಯುತ್ತಿದ್ದು ಅಲ್ಲಿಯ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹದೊಂದು ತಂತ್ರವನ್ನು ಮಾಡುತ್ತಿದ್ದಾರೆಂದು ಆರೋಪಿಸಲಾಗುತ್ತಿದೆ. ಯಾಕೆಂದರೆ 2014ರ ಚುನಾವಣೆಯಲ್ಲಿ ಹೊಸ ರಾಜ್ಯ ಸೃಷ್ಟಿಯಾದ ಒಂದು ಹೊಸ ಸಂಭ್ರಮದಲ್ಲಿ ತೆಲಂಗಾಣದ ಒಟ್ಟು ಹದಿನೇಳು ಲೋಕಸಭಾ ಸ್ಥಾನಗಳ ಪೈಕಿ ಹನ್ನೊಂದನ್ನು ಗೆದ್ದಿತ್ತು. ಜೊತೆಗೆ ವಿಧಾನಸಭೆಯ ಒಟ್ಟು 119 ಸ್ಥಾನಗಳ ಪೈಕಿ 63ನ್ನು ಗೆದ್ದಿತ್ತು. ಆದರೆ ಇವತ್ತು ಆಡಳಿತ ವಿರೋಧಿ ಅಲೆ ನಿಧಾನವಾಗಿ ಸೃಷ್ಟಿಯಾಗುತ್ತಿದೆ. ಇದನ್ನು ಎದುರಿಸಲು ಯಾವುದೇ ಹೊಸ ಅಸ್ತ್ರವಿರದ ರಾವ್ ರಾಜ್ಯದ ಜನರನ್ನು ದಾರಿತಪ್ಪಿಸಲು ಈ ತಂತ್ರ ಮಾಡುತ್ತಿದ್ದಾರೆಂದು ವಾದಿಸುವವರು ‘‘ತೃತೀಯ ರಂಗ ಸ್ಥಾಪನೆ ರಾವ್ ಅಂತಹವರ ಗಿಮಿಕ್’’ ಎನ್ನುವ ಮಾತನ್ನೂ ಆಡುತ್ತಾರೆ.
ಇದೆಲ್ಲಕ್ಕಿಂತ ಮುಖ್ಯವಾದ ಇನ್ನೊಂದು ಆಘಾತಕಾರಿ ವಾದಸರಣಿಯೊಂದಿದೆ. ಈಗಲೂ ಎನ್‌ಡಿಎ ಭಾಗವಾಗಿರುವ ರಾವ್ ಕಾಂಗ್ರೆಸ್ ಮತ್ತು ಇತರ ವಿರೋಧಪಕ್ಷಗಳ ದಾರಿ ತಪ್ಪಿಸಲು ಇಂತಹದೊಂದು ಮಾತನ್ನಾಡಿದ್ದಾರೆ ಎನ್ನಲಾಗುತ್ತಿದ್ದು. ಇದಕ್ಕೆ ಭಾಜಪದ ಸಮ್ಮತವಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಉಳಿದ ಪಕ್ಷಗಳೊಡನೆ ಮೈತ್ರಿ ಮಾಡಿಕೊಂಡು ಬಲಿಷ್ಠ ರಾಜಕೀಯ ಶಕ್ತಿಯಾಗುವುದನ್ನು ತಡೆಯಲು ಭಾಜಪವೇ ರಾವ್ ಮೂಲಕ ಈ ತೃತೀಯ ರಂಗದ ನಾಟಕ ಆಡಿಸುತ್ತಿದೆ ಎನ್ನುವ ಮಾತಿನಲ್ಲಿಯೂ ಹುರುಳಿರುವಂತಿದೆ.
ಭಾಜಪದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಶಾ ಇಂತಹದೊಂದು ತಂತ್ರವನ್ನು ಮಾಡಿದ್ದರೂ ಅಚ್ಚರಿಯೇನಿಲ್ಲ. ಮೊನ್ನೆಯ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ಭಾಜಪಗಳೆರಡರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿರುವ ಕೆ. ಚಂದ್ರಶೇಖರ್ ಅವರ ಮುಂದಿನ ದಿನಗಳ ರಾಜಕೀಯ ನಡವಳಿಕೆಗಳನ್ನು ಉಳಿದ ಪಕ್ಷಗಳು ಮಾತ್ರವಲ್ಲದೆ ಜನತೆ ಸಹ ಕುತೂಹಲದಿಂದ ಗಮನಿಸುತ್ತಾರೆ. ಸದ್ಯಕ್ಕಂತು ರಾವ್ ರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿದ್ದಾರೆ -ಅವರ ಟೀಕಾಕಾರರು ಹೇಳುವಂತೆ- ಆ ಮಟ್ಟಿಗೆ ಅವರಿಗೀಗ ಯಶಸ್ಸು ದೊರೆತಿದೆ.