ಬಂಟ್ವಾಳ: ಆಧಾರ್ ನೋಂದಣಿಗೆ ಜನರ ಪರದಾಟ
ಬಂಟ್ವಾಳ, ಮಾ.15: ಸರಕಾರದ ವಿವಿಧ ಯೋಜನೆ ಹಾಗೂ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ. ಈ ನಡುವೆ ಆಧಾರ್‌ಗೆ ವಿಧಿಸಿದ್ದ ಗಡುವು ಸುಪ್ರೀಂ ಕೋರ್ಟ್ ಅನಿ ರ್ದಿಷ್ಟಾವಧಿಗೆ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ನೋಂದಣಿಗೆ ಜನರು ಮುಂದಾಗಿದ್ದು, ಬೆಳಗಿನ ಜಾವ 3-4 ಗಂಟೆಯಿಂದಲೇ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂಟ್ವಾಳ ತಾಲೂಕಿನಲ್ಲಿ ನಿರ್ಮಾಣವಾಗಿದೆ.
ಶಾಲಾ ಪ್ರವೇಶಾತಿ, ಪಡಿತರ ಚೀಟಿ, ಬ್ಯಾಂಕ್ ಖಾತೆ, ಸಿಮ್ ಕಾರ್ಡ್ ಇತ್ಯಾದಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿಗಾಗಿ ಬಿ.ಸಿ.ರೋಡ್‌ನಲ್ಲಿರುವ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಜನರ ನೂಕುನುಗ್ಗಲು ಕಂಡುಬರುತ್ತಿದೆ.
ದಿನಕ್ಕೆ 30 ನೋಂದಣಿ ಸೀಮಿತ: ಪ್ರತಿನಿತ್ಯ ಕೇವಲ 30 ನೋಂದಣಿ ಇಲ್ಲವೇ ಪರಿಷ್ಕರಣೆಗೆ ಅವಕಾಶ ನೀಡಲಾಗಿದೆ. ಅಲ್ಲದೇ ಒಂದೇ ಆಧಾರ್ ಕೇಂದ್ರವಿದ್ದು, ಸಾರ್ವಜನಿಕರ ಪರದಾಟಕ್ಕೆ ಕಾರಣವಾಗಿದೆ. ಬೆಳಗ್ಗೆ 9 ಗಂಟೆಗೆ 30 ಟೋಕನ್ ನೀಡಲಾಗುತ್ತಿದ್ದು, ಈ ಟೋಕನ್ ಪಡೆದವರಿಗೆ ಮಾತ್ರ ಅರ್ಜಿಗಳನ್ನು ನೀಡಲಾಗುತ್ತದೆ. ಆದರೆ ಅರ್ಜಿ ಪಡೆಯಲು ಭಾರೀ ನೂಕುನುಗ್ಗಲು ಉಂಟಾಗುತ್ತಿರುವುದರಿಂದ ಸರದಿಯಲ್ಲಿ ನಿಂತ ಎಲ್ಲರಿಗೂ ಮುಂಗಡ ಟೋಕನ್ ಕೊಡುವ ಕೆಲಸ ಹಿಂದಿನ ದಿನಗಳಿಂದ ಮಾಡಲಾಗುತ್ತಿದೆ.
ಸಾಮಾನ್ಯವಾಗಿ ಒಂದು ಆಧಾರ್ ಕಾರ್ಡ್ ನೋಂದಣಿ ಮಾಡಲು ಕನಿಷ್ಠ 20ರಿಂದ 30 ನಿಮಿಷ ಸಮಯ ಬೇಕು. ನಿತ್ಯ 30 ಆಧಾರ್ ಕಾರ್ಡ್ ನೋಂದಣಿಗೆ 8 ರಿಂದ 10 ಗಂಟೆ ಬೇಕಾಗುತ್ತದೆ. ಹೀಗಾಗಿ ನಿತ್ಯ 30 ನೋಂದಣಿ ಮಾಡುತ್ತೇವೆ. ಅಲ್ಲದೇ ಇವುಗಳ ಬಯೋಮೆಟ್ರಿಕ್ ಮಾಹಿತಿಯನ್ನು ಕೇಂದ್ರ ಘಟಕಕ್ಕೆ ರವಾನಿಸಲು ಒತ್ತಡ ಉಂಟಾಗುತ್ತದೆ. ಹೆಚ್ಚಿನ ಆಧಾರ್ ನೋಂದಣಿಗಳನ್ನು ಮಾಡಿದರೆ ತಾಂತ್ರಿಕ ಸಮಸ್ಯೆ ಉಂಟಾಗಿ ನೋಂದಣಿ ವಿಫಲವಾಗುತ್ತದೆ. ಪ್ರತಿದಿನವೂ ಸಿಸ್ಟಂನಲ್ಲಿ ತಾಂತ್ರಿಕ ದೋಷ ಉಂಟಾಗುತ್ತದೆ. ಇಂಟರ್ನೆಟ್ ಸಂಪರ್ಕ ಕೈಕೊಡುತ್ತದೆ. ಆಗಾಗ ಪವರ್ ಕಟ್ ಎದುರಾಗುತ್ತದೆ. ಹಾಗಾಗಿ ದಿನವೊಂದಕ್ಕೆ 30ಕ್ಕಿಂತ ಜಾಸ್ತಿ ಕಾರ್ಡ್ ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ವಿವರಿಸುತ್ತಾರೆ.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎ.ಬಿ.ಇಬ್ರಾಹೀಂ ಪ್ರತೀ ಹೋಬಳಿ ಮಟ್ಟದಲ್ಲಿ ಅಧಾರ್ ಕಾರ್ಡ್ ಮಾಡಲು ಕಚೇರಿಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಆದರೆ ಈವರೆಗೆ ಅದು ಕಾರ್ಯಗತಗೊಂಡಿಲ್ಲ. ಇಲ್ಲಿನ ತಹಶೀಲ್ದಾರರು ಕೂಡಾ ಈ ಸಮಸ್ಯೆಯ ಬಗ್ಗೆ ತಲೆಗೆಡಿಸಿಕೊಂಡಿಲ್ಲ. ಬದಲಿ ವ್ಯವಸ್ಥೆ ಕಲ್ಪಸಿ ಇಲ್ಲಿನ ಜನರಿಗೆ ಅನುಕೂಲ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಉದ್ಭವವಾಗಿದೆ. ಅಧಾರ್ ಪ್ರತಿಯೊಂದಕ್ಕೂ ಅಗತ್ಯವಾಗಿ ಬೇಕಾಗಿರುವುದರಿಂದ ಕೂಡಲೇ ಜಿಲ್ಲಾಧಿಕಾರಿಯವರು ಮಧ್ಯ ಪ್ರವೇಶಿಸಿ ಅಧಾರ್ ಸಮಸ್ಯೆಯನ್ನು ಪರಿಹರಿಸಲು ಕ್ರಮಕೈಗೊಳ್ಳಬೇಕೆಂಬುವುದು ಗ್ರಾಮಸ್ಥರ ಒತ್ತಾಯ.
ಗ್ರಾಮ ಮಟ್ಟದಲ್ಲಿ ಆಧಾರ್ ಕಾರ್ಡ್ ಕೇಂದ್ರ ತೆರೆಯ ಲಾಗುವುದು ಎಂದು ಈ ಹಿಂದೆ ಜಿಲ್ಲಾಧಿಕಾರಿಯವರು ಹೇಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮೀಣ ಪ್ರದೇಶದವರು ನಗರಕ್ಕೆ ಹೋಗಬೇಕು. ಸಂಜೆ ತನಕ ಕಾದರೂ ನೋಂದಣಿಯಾಗದೇ ವಾಪಸಾಗುವ ಪರಿಸ್ಥಿತಿ ಕೂಡಾ ಇದೆ. ಇದರಿಂದಾಗಿ ಮಕ್ಕಳು, ಪೋಷಕರು ಹಾಗೂ ದಿನಕೂಲಿ ಕಾರ್ಮಿಕರು ತುಂಬಾ ಕಷ್ಟ ಅನುಭವಿಸುವಂತಾಗಿದೆ. ಗ್ರಾಮ ಮಟ್ಟದಲ್ಲಿ ಆಧಾರ್ ಕೇಂದ್ರ ತೆರೆಯಲಿ, ಇಲ್ಲವೇ ಮುಂಗಡ ಟೋಕನ್ ವ್ಯವಸ್ಥೆಯನ್ನು ಮಾಡಲಿ.
-ನಾಸಿರ್, ಸಜಿಪ ಗ್ರಾಪಂ ಅಧ್ಯಕ್ಷ
ಮಿನಿವಿಧಾನ ಸೌಧದಲ್ಲಿ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಮುಂಗಡವಾಗಿ ಟೋಕನ್ ಪಡೆಯದವರು ಬ್ರೋಕರ್‌ಗಳ ಮೂಲಕ ಆಧಾರ್ ಕೇಂದ್ರಕ್ಕೆ ಹೋಗಿ ಕಾರ್ಡ್ ಮಾಡಿಸುತ್ತಿದ್ದಾರೆ. ಒಬ್ಬರಿಗೆ 200 ರೂ. ನಂತೆ ಕಮೀಷನ್ ಕೇಳುತ್ತಾರೆ. ಇದರಲ್ಲಿ 100 ರೂ. ಬ್ರೋಕರ್‌ಗೆ, ಉಳಿದ 100 ರೂ. ಒಳಗೆ ಕೆಲಸ ಮಾಡುವ ವ್ಯಕ್ತಿಗೆ ನೀಡಲಾತ್ತದೆ. ತನ್ನ ಪತ್ನಿ, ಹಾಗೂ ಮೂವರು ಮಕ್ಕಳಿಗೆ 1200 ರೂ. ಕೇಳುತ್ತಿದ್ದಾರೆ. ತಾನು ದಿನಕೂಲಿ ಕೆಲಸಮಾಡುತ್ತಿದ್ದು, ದಿನಾಲೂ ಇದರ ಹಿಂದೆ ಅಲೆಯುತ್ತಿದ್ದೇನೆ ಎಂದು ಹೆಸರು ಹೇಳಲು ಇಚ್ಛಿಸದ ಸಂತ್ರಸ್ತ ವ್ಯಕ್ತಿಯೊಬ್ಬರು ಆರೋಪಿಸುತ್ತಾರೆ.
ತಾಲೂಕು ಕೇಂದ್ರ ಸಹಿತ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಹೆಚ್ಚುವರಿ ಆಧಾರ್ ತಾತ್ಕಾಲಿಕ ಕೇಂದ್ರ ತೆರೆಯುವಂತೆ ಪುರಸಭೆಗೆ ಮನವಿ ಸಲ್ಲಿಸಿದ್ದೇನೆ. ಪುರಸಭೆಯಲ್ಲಿ ಈ ಬಗ್ಗೆ ಚರ್ಚೆ ಕೂಡಾ ನಡೆದಿದ್ದು, ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ, ಇಲಾಖೆಯು ಇದುವರೆಗೂ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಿಲ್ಲ.
-ಮುನೀಶ್ ಅಲಿ, ಪುರಸಭಾ ಸದಸ್ಯ