ದಾರಿಯಲ್ಲಿ ಬೀದಿಯಲ್ಲಿ

Update: 2018-03-16 18:44 GMT

ದಾರಿಯಲ್ಲಿ ಬೀದಿಯಲ್ಲಿ ಮನೆಗಳಲ್ಲಿ

ಹೊನ್ನು ಹೆಣ್ಣು ಮಣ್ಣಿನ ಮೇಲಿನ ಕಾಮವಿಕಾರ ತೋರಿದಡೆ
ಅದಕ್ಕೇನೂ ಶಂಕೆಯಿಲ್ಲ
ಅದೇನು ಕಾರಣವೆಂದಡೆ:
ಚಿತ್ರದ ಹುಲಿ, ಕನಸಿನ ಹಾವು, ಜಲಮಂಡುಕ ಕಚ್ಚಿ ಸತ್ತವರುಂಟೆ?
ಇದು ಕಾರಣ ಜಾಗ್ರಸ್ವಪ್ನಸುಷುಪ್ತಿಗಳಲ್ಲಿ ಕಾಮವಿಕಾರ ತೋರಿತ್ತೆಂದು
ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಗಳಿಂದ ಘಟವ ಬಿಟ್ಟಡೆ,
ಆತ ಗುರುದ್ರೋಹಿ, ಲಿಂಗದ್ರೋಹಿ, ಜಂಗಮದ್ರೋಹಿ.
ಇದು ಭಕ್ತರಾಚರಣೆ, ವಿರಕ್ತ ನಿರ್ಣಯ.
ಇಂತಪ್ಪವರಿಗೆ ಸದ್ಯೋಜಾತಲಿಂಗವುಂಟಿಲ್ಲವೆಂದೆನು.

                                                          -ಅವಸರದ ರೇಕಣ್ಣ

ದೇಹದಲ್ಲಿ ಜೀವವಿರುವವರೆಗೆ ಪುಣ್ಯ ಪಾಪ ಸಂಚರಿಸುತ್ತಿರುತ್ತವೆ ಎಂದು ಮಹಾಕವಿ ಪಂಪ ಹೇಳಿದ್ದಾನೆ. ಮನಸ್ಸಿಗೆ ಗೊತ್ತಾಗದಂಥ ಪಾಪ ಇಲ್ಲವೆಂದು ಅಲ್ಲಮಪ್ರಭುಗಳು ತಿಳಿಸಿದ್ದಾರೆ. ಮನುಷ್ಯರ ಮನಸ್ಸು ವಿವಿಧ ಪ್ರವೃತ್ತಿಗಳಿಂದ ಕೂಡಿದೆ. ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭ ಮುಂತಾದ ಪ್ರವೃತ್ತಿಗಳನ್ನು ಸಂಯಮದಲ್ಲಿಡುವುದೇ ಮಾನವನ ಸಾಧನೆಯಾಗಿದೆ. ‘ಎನ್ನ ಚಿತ್ತವು ಅತ್ತಿಯ ಹಣ್ಣು’ ಎಂದು ಬಸವಣ್ಣನವರು ಮಾನವದೌರ್ಬಲ್ಯಗಳಿಗೆ ಕನ್ನಡಿ ಹಿಡಿದಿದ್ದಾರೆ. ಮನೋದೌರ್ಬಲ್ಯಕ್ಕೆ ಹೆದರದೆ ಮನಸ್ಸನ್ನು ನಿಯಂತ್ರಣದಲ್ಲಿಡಲು ಇಂಥ ಮಾತುಗಳು ಸಹಕಾರಿಯಾಗಿವೆ.

ಅವಸರದ ರೇಕಣ್ಣನ ವೈಚಾರಿಕ ಪ್ರಜ್ಞೆ ಉನ್ನತಮಟ್ಟದ್ದಾಗಿದೆ. ಕಾಮನೆಗಳಿಂದಾಗಿ ಮನಸ್ಸು ವಿಕೃತವಾಯಿತೆಂದು ಖಿನ್ನರಾಗಿ ಆತ್ಮಹತ್ಯೆ ಮಾಡಿಕೊಳ್ಳುವ ದುರ್ಬಲ ಮನಸ್ಸಿನವರ ವಿರುದ್ಧ ಹುಸಿಕೋಪ ವ್ಯಕ್ತಪಡಿಸುತ್ತಾನೆ. ರೇಕಣ್ಣನ ಕೋಪ ತೀವ್ರ ಕಾಳಜಿಯ ಪ್ರತೀಕವಾಗಿದೆ. ಚಂಚಲ ಮನಸ್ಸಿನಿಂದ ಉಂಟಾಗುವ ಗೊಂದಲ ನಿವಾರಿಸಿ ಮುನ್ನಡೆಯಬೇಕು ಎಂಬುದು ಈ ವಚನದ ಆಶಯವಾಗಿದೆ.
ಹೊನ್ನು, ಹೆಣ್ಣು ಮತ್ತು ಭೂಸಂಪತ್ತಿನ ಮೇಲೆ ಆಸೆಯುಂಟಾದರೆ ಯಾವುದೇ ವ್ಯಕ್ತಿ ತನ್ನ ಬಗ್ಗೆ ತಾನೇ ಸಂಶಯಕ್ಕೆ ಒಳಗಾಗಬೇಕಿಲ್ಲ. ಮನಸ್ಸಿನಲ್ಲಿ ಇಂಥ ಸಂಚಾರಿ ಭಾವಗಳು ಹಾಯ್ದು ಹೋಗುತ್ತಲೇ ಇರುತ್ತವೆ. ಅವುಗಳ ಬಗ್ಗೆ ಭಯಪಡಬೇಕಿಲ್ಲ. ಏಕೆಂದರೆ ಚಿತ್ರದಲ್ಲಿ ಬಾಯ್ದೆರೆದ ಹುಲಿಯಿಂದ, ಕನಸಿನಲ್ಲಿ ಕಚ್ಚಿದ ಹಾವಿನಿಂದ ಮತ್ತು ನೀರೊಳಗಿನ ಕಪ್ಪೆಯಿಂದ ಸತ್ತವರಿಲ್ಲ. ಮಾನವನು ಅನುಭವಿಸುವ ಜಾಗೃತ, ಸ್ವಪ್ನ ಮತ್ತು ಧ್ಯಾನದಲ್ಲಿ ಮಗ್ನವಾದ ಸುಷುಪ್ತಿ ಅವಸ್ಥೆಯಲ್ಲಿ ಕಾಮವಿಕಾರ ಕಾಡಿತೆಂಬ ಕಾರಣಕ್ಕೆ ಶಸ್ತ್ರಾಸ್ತ್ರ, ಇಚ್ಛಾಮರಣ, ನೀರು, ನೇಣು ಮತ್ತು ವಿಷೌಷಧಿಗಳಿಂದ ಪ್ರಾಣತ್ಯಾಗ ಮಾಡಿದರೆ ಜ್ಞಾನವೆಂಬ ಗುರುವಿಗೆ, ಧರ್ಮವೆಂಬ ಲಿಂಗಕ್ಕೆ ಮತ್ತು ಸಮಾಜವೆಂಬ ಜಂಗಮಕ್ಕೆ ದ್ರೋಹವೆಸಗಿದಂತಾಗುತ್ತದೆ ಎಂದು ರೇಕಣ್ಣ ಎಚ್ಚರಿಸುತ್ತಾನೆ. ಭಕ್ತರು ಕೂಡ ಇದೇ ಭಾವವನ್ನು ಹೊಂದಿದ್ದಾರೆ. ಭೋಗಾಭಿಲಾಷೆಯಿಂದ ದೂರಾದ ವಿರಕ್ತನ ನಿರ್ಣಯವೂ ಇದೇ ಆಗಿದೆ ಎಂದು ಮನವರಿಕೆ ಮಾಡಿಕೊಡುತ್ತಾನೆ. ದುರ್ಬಲ ಮನಸ್ಸಿನ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವವರಿಂದ ದೇವರು ಕೂಡ ದೂರ ಎಂದು ಅವಸರದ ರೇಕಣ್ಣ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News