ಭದ್ರತಾ ವ್ಯವಸ್ಥೆ ಆಧುನೀಕರಣಗೊಳ್ಳಬೇಕಾಗಿದೆ
ಮಾನ್ಯರೇ,
ಇತ್ತೀಚೆಗೆ ಲೋಕಾಯುಕ್ತ ನ್ಯಾಯಮೂರ್ತಿ ಮೇಲೆ ಹಾಡಹಗಲೇ ಹಲ್ಲೆ ನಡೆದಿರುವ ಪ್ರಕರಣ ಭದ್ರತಾ ಲೋಪವನ್ನು ಬಯಲು ಮಾಡಿದೆ. ವಿಧಾನಸೌಧ, ವಿಕಾಸ ಸೌಧ, ಹೈಕೋರ್ಟ್ ಹಾಗೂ ಎಂ.ಎಸ್. ಬಿಲ್ಡಿಂಗ್ ಕಟ್ಟಡಗಳ ಭದ್ರತಾ ವ್ಯವಸ್ಥೆ ಆಧುನೀಕರಣ ಮಾಡಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಗೃಹ ಇಲಾಖೆಗೆ 2015ರಲ್ಲಿ ಪ್ರಸ್ತಾವನೆ ಸಲ್ಲಿಸಿದ್ದರು. ವರ್ಷ ಮೂರು ಆದರೂ ಇನ್ನೂ ಈ ಪ್ರಸ್ತಾವನೆಗೆ ಬೆಲೆಯೇ ಸಿಕ್ಕಿಲ್ಲ ಎಂಬುದು ವಿಷಾದನೀಯ. ಬೆಂಗಳೂರಲ್ಲಿರುವ ಎರಡು ಸೌಧಕ್ಕೆ ಪ್ರತೀದಿನಕ್ಕೆ ಹಲವು ಸಾವಿರ ಜನರು ಭೇಟಿ ನೀಡುತ್ತಾರೆ. ಹೀಗಾಗಿ ಶಕ್ತಿ ಕೇಂದ್ರಗಳ ಭದ್ರತೆಯ ವಿಚಾರದಲ್ಲಿ ಸರಕಾರ ಹೆಚ್ಚಿನ ಗಮನ ನೀಡಬೇಕಾಗಿದೆ. ಇಲ್ಲಿರುವ ಸಿಸಿಟಿವಿ ಕ್ಯಾಮರಾದ ಗುಣಮಟ್ಟ, ಪ್ರವೇಶ ದ್ವಾರದಲ್ಲಿನ ಭದ್ರತೆ ವ್ಯವಸ್ಥೆ ಚೆನ್ನಾಗಿಲ್ಲ. ಇದಕ್ಕೆ ಬೇಕಾದ ಲೋಹ ಹಾಗೂ ಹ್ಯಾಂಡ್ ಹೋಲ್ಡ್ ಶೋಧಕಗಳು ಸರಿಯಾಗಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
ಹೀಗಾಗಿ ಇಲ್ಲಿ ಹೆಚ್ಚುವರಿ ಪೊಲೀಸರ ನೇಮಕ, ವೀಕ್ಷಣಾ ಗೋಪುರದ ನಿರ್ಮಾಣ ಹಾಗೂ ವಾಹನಗಳಿಗೆ ಬಾರ್‌ಕೋಡ್ ನೀಡುವ ವ್ಯವಸ್ಥೆ ಸೇರಿ ರಾಜ್ಯದ ಶಕ್ತಿ ಕೇಂದ್ರಗಳಲ್ಲಿ ಆಧುನಿಕ ಭದ್ರತಾ ವ್ಯವಸ್ಥೆಗೆ ಸರಕಾರ ಮುಂದಾಗಬೇಕಾಗಿದೆ. ಈ ಮೂಲಕ ರಾಜ್ಯದ ಶಕ್ತಿ ಕೇಂದ್ರಗಳ ಮಹತ್ವವನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ.
-ಶಂಶೀರ್ ಬುಡೋಳಿ, ಬಂಟ್ವಾಳ