ಬಡಹಾರುವ

Update: 2018-03-26 18:31 GMT

ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ!
ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ!
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ!
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ!
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯ
                                          ಕೂಡಲಸಂಗಮದೇವಾ. -ಬಸವಣ್ಣ

ಬಸವಣ್ಣನವರು ಹೊಸ ಬದುಕಿಗಾಗಿ ಪ್ರಾರಂಭಿಸಿದ ಚಳವಳಿಯಲ್ಲಿ ಎಲ್ಲ ಜಾತಿಗಳ ಜನರು ಜೊತೆಗೂಡಿದರು. ಜಾತಿ ಸಂಕರಗೊಂಡ ಶರಣಸಂಕುಲದಲ್ಲಿ ಗುರುತಿಸಿಕೊಂಡರು. ಇಷ್ಟಲಿಂಗದ ಮೂಲಕ ಏಕದೇವೋಪಾಸನೆಯನ್ನು ಒಪ್ಪಿಕೊಂಡರು. ಆದರೆ ಅವರಲ್ಲಿನ ಅನೇಕರು ತಮ್ಮ ಹಿಂದಿನ ಜಾತಿ ವ್ಯವಸ್ಥೆಯ ದೌರ್ಬಲ್ಯಗಳಿಂದ ಹೊರಬರದೆ ಹಳೆಯ ದೇವರುಗಳ ಹಂಗಿನಲ್ಲೇ ಬದುಕುವುದನ್ನು ಮುಂದುವರಿಸಿದರು. ಅವರ ಈ ಧರ್ಮಸಂಕಟವನ್ನು ಬಸವಣ್ಣನವರು ಗಮನಿಸಿದ್ದಾರೆ. ಹಳೆಯ ಮೂಢನಂಬಿಕೆಗಳ ಜಡಸಂಸ್ಕೃತಿಯನ್ನು ಬಿಟ್ಟು, ವೈಚಾರಿಕ ಮನೋಭಾವದಿಂದ ಕೂಡಿದ ಹೊಸ ಚೈತನ್ಯಶೀಲ ಸಂಸ್ಕೃತಿಯನ್ನು ಅಪ್ಪಿಕೊಂಡವರು ಆ ಸಂಕ್ರಮಣ ಘಟ್ಟದಲ್ಲಿ ಮಾನಸಿಕ ತೊಳಲಾಟಕ್ಕೆ ಒಳಗಾದರು. ಭಯವೇ ಧರ್ಮದ ಮೂಲವಾಗಿದ್ದ ಸಂದರ್ಭದ ಹಳೆಯ ದೇವರನ್ನು ಬಿಡಲಿಕ್ಕಾಗಲಿಲ್ಲ. ದಯವೇ ಧರ್ಮದ ಮೂಲವಾದ ಹೊಸ ವಾತಾವರಣದಲ್ಲಿ ಅಗಮ್ಯ, ಅಗೋಚರ, ಅಪ್ರತಿಮ ದೇವರ ಕುರುಹು ಆದ ಇಷ್ಟಲಿಂಗವನ್ನು ಪೂಜಿಸುತ್ತಲೇ ಹಳೆಯ ದೇವರುಗಳ ಪೂಜೆ ಮಾಡುವುದನ್ನೂ ಮುಂದುವರಿಸಿದರು.
ಬಡ ಬ್ರಾಹ್ಮಣರನೇಕರು ಶರಣಧರ್ಮ ಸ್ವೀಕರಿಸಿದರು. ಜೀವಾತ್ಮನನ್ನು ಪರಮಾತ್ಮನಲ್ಲಿ ಒಂದಾಗಿಸುವುದರ ಮೂಲಕ ಲಿಂಗಾಂಗಸಾಮರಸ್ಯದ ಅನುಭಾವ ಪಡೆಯ ಬಯಸಿದರು. ಅದೇ ಸಂದರ್ಭದಲ್ಲಿ ಜನಿವಾರದ ಹಂಗಿನೊಳಗೆ ಇರತೊಡಗಿದರು. ಆ ಹಂಗು ಹರಿದುಕೊಳ್ಳಲು ಅವರು ಮುಂದಾಗಲಿಲ್ಲ. ಹೂವಾಡಿಗರು ಭಕ್ತರಾಗಿ ಹೊಸ ಜೀವನವಿಧಾನ ಸ್ವೀಕರಿಸಿದರೂ ಬಾವಿಯ ಬೊಮ್ಮನ ಋಣದಿಂದ ಹೊರಬರಲಿಕ್ಕೆ ಸಾಧ್ಯವಾಗಲಿಲ್ಲ. ತಮ್ಮ ಹೂದೋಟದ ಬಾವಿಯ ಮಾಡಿನಲ್ಲಿರುವ ಬ್ರಹ್ಮನ ಮೂರ್ತಿಗೆ ಹೂ ಹಾಕಿ, ಹೂದೋಟದ ರಕ್ಷಣೆ ಮಾಡೆಂದು ಪ್ರಾರ್ಥಿಸದೆ ಬಿಡಲಿಲ್ಲ. ವ್ಯಾಪಾರಿಗಳು ಭಕ್ತವರ್ಗಕ್ಕೆ ಸೇರಿ ಇಷ್ಟಲಿಂಗ ಆರಾಧಕರಾದರು. ಆದರೆ ಧಾನ್ಯದ ರಾಶಿಯ ಮೇಲೆ ಗಣಪತಿಯ ಮೂರ್ತಿಯನ್ನಿಟ್ಟು ‘ವ್ಯಾಪಾರಕ್ಕೆ ವಿಘ್ನ ಬರದಂತೆ ನೋಡಿಕೊಳ್ಳು’ ಎಂದು ಪ್ರಾರ್ಥಿಸುವುದನ್ನು ಬಿಡಲಿಲ್ಲ. (ಒಟ್ಟಿಲ ಬೆನಕ ಎಂದರೆ ತೂಕದ ಕಲ್ಲುಗಳ ರಾಶಿ ಎಂದೂ ಅರ್ಥವಾಗುತ್ತದೆ. ಬಣಜಿಗರು ತೂಕದ ಕಲ್ಲುಗಳ ಪೂಜೆಯನ್ನೂ ಮಾಡುತ್ತಾರೆ.) ಕಂಚುಗಾರರು ಹೊಸಧರ್ಮ ಸ್ವೀಕರಿಸಿದರೂ ತಮ್ಮ ಹಳೆಯ ಕುಲದೇವತೆಯಾದ ಕಾಳಿಕಾದೇವಿಯ ಆರಾಧನೆಯನ್ನು ನಿಲ್ಲಿಸಲಿಲ್ಲ.
ಆದರೆ ಬಸವಣ್ಣನವರು ಬ್ರಾಹ್ಮಣ್ಯದಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ. ನವಸಮಾಜ ನಿರ್ಮಾಣದಲ್ಲಿ ತಲ್ಲೀನರಾದ ಶರಣರಿಗೆ ಮಾರ್ಗದರ್ಶಿಯಾಗಿ ಮುನ್ನಡೆಯುತ್ತಿದ್ದಾರೆ. ಅಂತೆಯೆ ‘ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ’ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News