ವರ್ಗಾವಣೆ ಪತ್ರಕ್ಕೂ ಹಣ ವಸೂಲು!
ಮಾನ್ಯರೇ,
ಇತ್ತೀಚೆಗೆ ಹೆಚ್ಚಿನ ಖಾಸಗಿ ಶಿಕ್ಷಣ ಸಂಸ್ಥೆಗಳು ‘ಹಣ ದೋಚುವ ಕೇಂದ್ರ’ಗಳಾಗುತ್ತಿವೆೆ. ಈಗಾಗಲೇ ದುಬಾರಿ ಡೊನೇಶನ್, ಅಡ್ಮಿಷನ್ ಶುಲ್ಕ ತೆತ್ತು ಬಸವಳಿದಿರುವ ಹೆತ್ತವರು ಈಗ ವರ್ಗಾವಣೆ ಪತ್ರ ಪಡೆದುಕೊಳ್ಳಲೂ ಹಣ ಕೊಡಬೇಕಾಗಿದೆ!
ಅದರಲ್ಲೂ ಬೆಂಗಳೂರಿನಲ್ಲಿರುವ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ವರ್ಗಾವಣೆ ಮಾಡಲು ಬಯಸಿದವರಿಂದ ಹಣ ಪಡೆಯಲು ಮುಂದಾಗಿರುವುದು ನಿಜಕ್ಕೂ ಖಂಡನೀಯ. ಮಾರ್ಚ್ ಬಳಿಕವೂ ಹೆತ್ತವರು ತಮ್ಮ ಮಕ್ಕಳನ್ನು ಬೇರೆ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಲು ವರ್ಗಾವಣೆ ಪತ್ರ ಬಯಸಿದರೆ ಸುಮಾರು ಹತ್ತು ಸಾವಿರದವರೆಗೂ ದಂಡ ಕೊಡಬೇಕೆಂಬ ನಿಯಮ ವಿಧಿಸಿರುವುದು ಕಾನೂನು ಬಾಹಿರವಲ್ಲವೇ.?
ಈ ರೀತಿ ಒತ್ತಡಹಾಕುವ ಕ್ರಮ ನ್ಯಾಯಸಮ್ಮತವೇ.? ಇದು ಶಿಕ್ಷಣ ಕಾಯ್ದೆಯ ಉಲ್ಲಂಘನೆಯಲ್ಲವೇ.? ಟಿಸಿ ಕೊಡಲು ಹಣ ಕೊಡಬೇಕೆಂಬ ನಿಯಮ, ಉಲ್ಲೇಖ ಶಿಕ್ಷಣ ಕಾಯ್ದೆಯಲ್ಲಿಲ್ಲ. ವರ್ಷಾಂತ್ಯದಲ್ಲಿ ಈ ರೀತಿಯ ನಿಯಮಗಳನ್ನು ಹೇರಿ ಹೆತ್ತವರನ್ನ ಸಂದಿಗ್ಧ ಪರಿಸ್ಥಿತಿಗೆ ದೂಡುವ, ಆರ್ಥಿಕ ಸಮಸ್ಯೆಗೆ ಕಾರಣವಾಗಿಸುವ ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ.