ದ.ಕ. ಜಿಲ್ಲೆಯಲ್ಲಿ ನಿಜವಾಗಲೂ ಅಭಿವೃದ್ಧಿಯಾಗಿದೆಯೇ?
► ಕುಂಟುತ್ತಾ ಸಾಗುತ್ತಿರುವ ಪಂಪ್‌ವೆಲ್-ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ
► ತಲೆ ಎತ್ತದ ಹೊಸ ಬಸ್‌ನಿಲ್ದಾಣ
► ಅಸ್ತಿತ್ವಕ್ಕೆ ಬಾರದ ಹೊಸ ತಾಲೂಕು-ಹೋಬಳಿ
► ನಿರ್ಮಾಣಗೊಳ್ಳದ ಹಜ್ ಭವನ
ಮಂಗಳೂರು, ಎ.1: ಬುದ್ಧಿವಂತರ ಜಿಲ್ಲೆ ಎಂದೇ ಪರಿಗಣಿಸಲ್ಪಟ್ಟಿರುವ ದ.ಕ. ಜಿಲ್ಲೆ ಪ್ರಗತಿ ಪಥದಲ್ಲಿ ಸಾಗುತ್ತಿದೆ, ಬೆಂಗಳೂರು ಬಳಿಕ ಮಂಗಳೂರು ರಾಜ್ಯದಲ್ಲೇ ಎರಡನೆ ಸ್ಥಾನದಲ್ಲಿದೆ, ರಾಜ್ಯದ ಇತರ ಜಿಲ್ಲೆಗಳಿಗೆ ಮಾದರಿಯಾಗಿ ಬೆಳೆಯುತ್ತಿದೆ ಎಂದೆಲ್ಲಾ ಸಚಿವರು, ಅಧಿಕಾರಿಗಳು ಆಗಾಗ ಹೇಳುವ ಮಾತುಗಳು. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ವಿವಿಧ ಸಂಘಟನೆಗಳಲ್ಲದೆ ಸರಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳು ಸರಕಾರದ ಮುಂದೆ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸುತ್ತಾ ಬಂದಿದ್ದರೂ, ಹೆಚ್ಚಿನವುಗಳು ಮರೀಚಿಕೆಯಾಗಿ ಉಳಿದಿರುವುದು ಕಂಡು ಬರುತ್ತಿವೆ.
ದ.ಕ. ಜಿಲ್ಲೆಯಲ್ಲೊಂದು ಸುಸಜ್ಜಿತ ರಂಗಮಂದಿರ ಸ್ಥಾಪಿಸಬೇಕು ಎಂಬ ಬೇಡಿಕೆಗೆ ಇನ್ನೂ ಜೀವ ಬಂದಿಲ್ಲ. ವರ್ಷದಿಂದ ವರ್ಷಕ್ಕೆ ರಂಗಮಂದಿರ ನಿರ್ಮಾಣದ ಯೋಜನಾ ವೆಚ್ಚ ಇಮ್ಮಡಿಗೊಳ್ಳುತ್ತಿದೆ. ಆರಂಭದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಆಸಕ್ತಿ ತೋರಿದ್ದರೂ ಕೂಡ ಬಳಿಕ ಅವು ನನೆಗುದಿಗೆ ಬಿದ್ದಿದೆ. ಮಂಗಳೂರಿನಲ್ಲಿ ಸುಸಜ್ಜಿತ ಹಜ್ ಭವನ ನಿರ್ಮಿಸಲಾಗುವುದು ಎಂದು ಸಚಿವರು ವರ್ಷಕ್ಕೊಮ್ಮೆ ಹೇಳುತ್ತಲೇ ಇದ್ದಾರೆ. ಅದೂ ಕೂಡ ತಲೆ ಎತ್ತಲಿಲ್ಲ. ಇನ್ನು ತೊಕ್ಕೊಟ್ಟಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಬ್ಬಕ್ಕ ಭವನ ಕೂಡ ತಲೆ ಎತ್ತಲಿಲ್ಲ.
ಪ್ರತ್ಯೇಕ ತಾಲೂಕಿನ ಭಾಗ್ಯ ಪಡೆದ ಮೂಡುಬಿದಿರೆ ಮತ್ತು ಕಡಬ ತಾಲೂಕಿಗೆ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ. ಅಲ್ಲದೇ ಅಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಸಲ್ಲಿಸಿದ ಮನವಿ ಕೂಡ ಹಳ್ಳ ಹಿಡಿದಿವೆ. ಇನ್ನು ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕವಷ್ಟೇ ಉದ್ಘಾಟನೆಯ ಭಾಗ್ಯ ಲಭಿಸೀತು ಎಂದು ಈ ಭಾಗದ ಜನರು ಅಭಿಪ್ರಾಯಪಡುತ್ತಿದ್ದಾರೆ.
ಸರಕಾರಿ ವೆನ್ಲಾಕ್ ಆಸ್ಪತ್ರೆಯ ಪುನರುಜ್ಜೀವನವೂ ಹಗಲು ಕನಸಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿ ಕತ್ತಲುಮಯವಾಗಿದ್ದು, ಅದರ ನವೀಕರಣ ಇನ್ನೂ ಆಗಿಲ್ಲ. ರಾ.ಹೆ. 66ರ ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿಯೂ ಆಮೆನಡಿಗೆಯಲ್ಲಿ ಸಾಗುತ್ತಿದೆ. ಇದರಿಂದ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಯಾಣಿಕರಿಗೂ ಕಿರಿಕಿರಿಯಾಗುತ್ತಿವೆ. ಎರಡೂ ಫ್ಲೈಓವರ್‌ಗಳು 2017ರ ಮಾರ್ಚ್‌ನಲ್ಲಿ ಪೂರ್ಣ ಗೊಳ್ಳಬೇಕಿತ್ತು. ಆದರೆ, 2018ರ ಮಾರ್ಚ್ ಆದರೂ ಕೂಡ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ನಗರದ ಹಂಪನಕಟ್ಟೆ-ಸ್ಟೇಟ್‌ಬ್ಯಾಂಕ್ ಪರಿಸರದ ಟ್ರಾಫಿಕ್ ಜಾಮ್ ತಗ್ಗಿಸುವ ನಿಟ್ಟಿನಲ್ಲಿ ಪಂಪ್‌ವೆಲ್ ಬಳಿ ನಿರ್ಮಿಸಲು ಉದ್ದೇಶಿಸಲಾದ ಹೊಸ ಬಸ್ ನಿಲ್ದಾಣ ಕಾಮಗಾರಿ ಕೂಡ ನನೆಗುದಿಗೆ ಬಿದ್ದಿದೆ. ಬಹುನಿರೀಕ್ಷಿತ ಬಸ್ ನಿಲ್ದಾಣ ನಿರ್ಮಾಣ ಪ್ರಕ್ರಿಯೆ 10 ವರ್ಷವಾದರೂ ಕೂಡ ಕುಂಟುತ್ತಾ ಸಾಗಿದೆ. ಮಂಗಳೂರಿನಲ್ಲೊಂದು ಸುಸಜ್ಜಿತ ಸಿಟಿ ಬಸ್ ನಿಲ್ದಾಣವೇ ಇಲ್ಲ. ವಿವಿಧ ರೂಟ್‌ಗಳ ಬಸ್‌ಗಳು ಸ್ಟೇಟ್‌ಬ್ಯಾಂಕ್ ಬಳಿಯ ಇಳಿಜಾರು ಪ್ರದೇಶವನ್ನೇ ಬಸ್‌ನಿಲ್ದಾಣವನ್ನಾಗಿ ಮಾಡಿವೆ. ಹಂಪನಕಟ್ಟೆಯಲ್ಲಿದ್ದ ಸರ್ವಿಸ್ ಬಸ್ ನಿಲ್ದಾಣವನ್ನು 1996-97ರ ಅವಧಿಯಲ್ಲಿ ನೆಹರೂ ಮೈದಾನ ಬಳಿಯ ಹಾಕಿ ಮೈದಾನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಯಿತು. ಹಂಪನಕಟ್ಟೆಯಲ್ಲಿ ತೆರವಾದ ಸ್ಥಳದಲ್ಲಿ ಬೃಹತ್ ವಾಹನ ಪಾರ್ಕಿಂಗ್ ಜೊತೆ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆಸಲಾಯಿತು. ಆದರೆ ಅದೂ ಕೂಡ ಕಾರ್ಯ ಗತಗೊಂಡಿಲ್ಲ.
ನಗರದಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆಗಾಗ ಟ್ರಾಫಿಕ್ ಜಾಮ್ ಕೂಡ ಆಗುತ್ತಿವೆ. ಅದನ್ನು ನಿಯಂತ್ರಿಸಲು ‘ನಗರದೊಳಗೆ’ ಸಿಟಿ, ಸರ್ವಿಸ್, ಸರಕಾರಿ ಇತ್ಯಾದಿ ಬಸ್‌ಗಳ ಪ್ರವೇಶ ನಿರ್ಬಂಧಿಸುವ ಅಗತ್ಯವಿದೆ. ಮಂಗಳೂರು ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದೆ. ಸಚಿವರು, ಶಾಸಕರು ಸಭೆ-ಸಮಾರಂಭಗಳಲ್ಲಿ ಮೋನೋ ರೈಲು, ಸ್ಕೈಬಸ್ ಇತ್ಯಾದಿ ಬಗ್ಗೆ ಹೇಳುತ್ತಲೇ ಇದ್ದಾರೆ. ಆದರೆ ಮಂಗಳೂರಿಗೆ ಸುಸಜ್ಜಿತ ಬಸ್ ನಿಲ್ದಾಣದ ಬಗ್ಗೆ ಆಸಕ್ತಿ ತೋರಿದಂತಿಲ್ಲ. ಒಟ್ಟಿನಲ್ಲಿ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆಯೇ ಸಾರ್ವ ಜನಿಕ ವಲಯದಲ್ಲಿ ಶಂಕೆ ವ್ಯಕ್ತವಾಗುತ್ತಿವೆ.
ಸದ್ಯ ಮಂಗಳೂರು ಮಹಾನಗರ ಪಾಲಿಕೆಯು 60 ವಾರ್ಡ್ ಗಳನ್ನು ಒಳಗೊಂಡು 132.45 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ಉತ್ತರದಲ್ಲಿ ಸುರತ್ಕಲ್ ಸಮೀಪದ ಇಡ್ಯಾ, ಪೂರ್ವದಲ್ಲಿ ಅಡ್ಯಾರ್- ಕಣ್ಣೂರು, ದಕ್ಷಿಣದಲ್ಲಿ ಉಳ್ಳಾಲ ಸೇತುವೆಯವರೆಗೆ ಮನಪಾ ವಿಸ್ತರಿಸಿದೆ. ಇನ್ನು ಸೇರ್ಪಡೆಗೊಳ್ಳಲಿದ್ದ 35 ಗ್ರಾಮಗಳ ಅನ್ವಯ ಮನಪಾದ ವಿಸ್ತರಣೆಯು ಉತ್ತರದಲ್ಲಿ ಮುಲ್ಕಿ, ದಕ್ಷಿಣದಲ್ಲಿ ಉಳ್ಳಾಲ ನಗರಸಭೆ, ಕೋಟೆಕಾರ್ ಪುರಸಭೆ ಹಾಗೂ ತಲಪಾಡಿ ಗ್ರಾಪಂ, ಪೂರ್ವದಲ್ಲಿ ಕೊಣಾಜೆ-ಅಡ್ಯಾರ್ ಗ್ರಾಪಂವರೆಗೆ ಹಬ್ಬಲಿತ್ತು. ಅಂದರೆ ಹೆಚ್ಚುವರಿಯಾಗಿ 119.54 ಚ.ಕಿ.ಮೀ. ವಿಸ್ತರಣೆಯಾಗಲಿತ್ತು. ಒಟ್ಟಾರೆ ಗ್ರೇಟರ್ ಮಂಗಳೂರಿನ ವಿಸ್ತೀರ್ಣ 251.99 ಚ.ಕಿ.ಮೀ.ಆಗಲಿತ್ತು. ಅಂದರೆ ಮನಪಾಕ್ಕೆ ಮುಲ್ಕಿ ಮತ್ತು ಕೋಟೆಕಾರ್ ಪಪಂ, ಸೋಮೇಶ್ವರ ಪುರಸಭೆ ಹಾಗೂ ಉಳ್ಳಾಲ ನಗರಸಭೆಯಲ್ಲದೆ, ಮಾನಂಪಾಡಿ, ಬಪ್ಪನಾಡು, ಕಾರ್ನಾಡು, ಚಿತ್ರಾಪು, ಪಡು ಪಣಂಬೂರು, ಬೆಳ್ಳಾಯಾರು, ತೋಕೂರು, ಹಳೆಯಂಗಡಿ, ಪಾವಂಜೆ, ಸಸಿಹಿತ್ಲು, ಚೇಳಾಯಾರು, ಮಧ್ಯ, ಬಾಳ, ಕಳವಾರು, ಮಳವೂರು, ಕೆಂಜಾರು, ನೀರುಮಾರ್ಗ, ಬೊಂಡಂತಿಲ, ಬಜ್ಪೆ, ಜೋಕಟ್ಟೆ, ಮೂಡುಶೆಡ್ಡೆ, ಪಡುಶೆಡ್ಡೆ, ಕೊಣಾಜೆ, ಬೆಳ್ಮ, ಮುನ್ನೂರು, ಅಡ್ಯಾರ್, ಅರ್ಕುಳ, ಸೋಮೇಶ್ವರ, ಕೋಟೆಕಾರ್, ತಲಪಾಡಿ ಗ್ರಾಪಂಗಳನ್ನು ಸೇರಿಸುವ ಚಿಂತನೆ ನಡೆಸಲಾಗಿತ್ತು. ಅಲ್ಲದೆ ಮನಪಾ ಅಧಿಕಾರಿಗಳು ಗ್ರೇಟರ್ ಮಂಗಳೂರಿಗೆ ಆಸುಪಾಸಿನ ಹೊಸ ಗ್ರಾಮಗಳನ್ನು ಸೇರಿಸುವ ಕುರಿತು ಆಯಾ ಗ್ರಾಮಗಳಿಗೆ ಸುತ್ತೋಲೆ ಕಳುಹಿಸಿ ಈ ಬಗ್ಗೆ ನಿರ್ಣಯ ಕೈಗೊಂಡು ವರದಿ ಸಲ್ಲಿಸಲು ಸೂಚಿಸಿದ್ದರು. ಅದರಂತೆ ಕೆಲವು ಗ್ರಾಪಂ ಇದಕ್ಕೆ ಒಪ್ಪಿಗೆ ನೀಡಿದ್ದರೆ, ಇನ್ನು ಕೆಲವು ಗ್ರಾಪಂ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ‘ಗ್ರೇಟರ್ ಮಂಗಳೂರು’ ರಚನೆಗೊಂಡರೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅಭಿವೃದ್ಧಿಗಾಗಿ ಹೆಚ್ಚೆಚ್ಚು ಅನುದಾನ ಹರಿದು ಬರುವುದರಲ್ಲಿತ್ತು. ಆದರೆ ಈ ಯೋಜನೆಯೇ ನನೆಗುದಿಗೆ ಬಿದ್ದ ಕಾರಣ ಎಲ್ಲವೂ ತಲೆಕೆಳಗಾಗಿದೆ.
ದ.ಕ. ಜಿಲ್ಲೆಯಲ್ಲಿ ಸದ್ಯ 17 ಹೋಬಳಿಗಳಿವೆ. 2013ರಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗಲೇ ಜಿಲ್ಲಾಡಳಿತವು ದ.ಕ.ಜಿಲ್ಲೆಯಲ್ಲಿ ಹೊಸ 20 ಹೋಬಳಿ ರಚನೆಯ ಪ್ರಸ್ತಾವ ಸಲ್ಲಿಸಿತ್ತು. ಅಂದರೆ ಮಂಗಳೂರು ತಾಲೂಕಿನಲ್ಲಿ ಮಂಗಳೂರು ‘ಎ’, ಲೇಡಿಹಿಲ್, ಅಳಪೆ, ತೊಕ್ಕೊಟ್ಟು, ದೇರಳಕಟ್ಟೆ, ಗುರುಪುರ, ವಾಮಂಜೂರು, ಸುರತ್ಕಲ್, ಕಾವೂರು, ಬಜ್ಪೆ, ಮುಲ್ಕಿ, ಕಿನ್ನಿಗೋಳಿ, ಮೂಡುಬಿದಿರೆ ಉತ್ತರ, ಮೂಡುಬಿದಿರೆ ದಕ್ಷಿಣ, ಶಿರ್ತಾಡಿ. ಬಂಟ್ವಾಳ ತಾಲೂಕಿನಲ್ಲಿ ಬಂಟ್ವಾಳ, ಕಾವಳಮುಡೂರು, ಬಿ.ಮೂಡ, ಮುಡಿಪು, ವಿಟ್ಲ, ಮಾಣಿ. ಬೆಳ್ತಂಗಡಿ ತಾಲೂಕಿನಲ್ಲಿ ಬೆಳ್ತಂಗಡಿ, ಉಜಿರೆ, ಕೊಕ್ಕಡ, ತಣ್ಣೀರುಪಂಥ, ವೇಣೂರು, ಆಳದಂಗಡಿ, ಪುತ್ತೂರು ತಾಲೂಕಿನಲ್ಲಿ ಪುತ್ತೂರು, ಕಾವು, ಉಪ್ಪಿನಂಗಡಿ, ನೆಲ್ಯಾಡಿ, ಕಡಬ, ಸವಣೂರು. ಸುಳ್ಯ ತಾಲೂಕಿನಲ್ಲಿ ಸುಳ್ಯ, ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ.
ಆದರೆ ಕಳೆದ 5 ವರ್ಷದಲ್ಲಿ ಒಂದೇ ಒಂದು ಹೊಸ ಹೋಬಳಿ ರಚನೆಗೊಂಡಿಲ್ಲ. ಈ ಮಧ್ಯೆ ಹೊಸ ಮೂಡುಬಿದಿರೆ ತಾಲೂಕಿಗೆ ಮಂಗಳೂರು ತಾಲೂಕಿನ ಗುರುಪುರ ಹೋಬಳಿ ಸೇರ್ಪಡೆಯ ಪ್ರಸ್ತಾವವಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಉಳಿದಂತೆ ಜಿಲ್ಲೆಯ ಅಭಿವೃದ್ಧಿಗೆ ಜನರು ಕಂಡಿದ್ದ ಕನಸುಗಳ ಪೈಕಿ ಅಡ್ಯಾರ್-ಹರೇಕಳ ಸೇತುವೆ ನಿರ್ಮಾಣ, ಬಗರ್‌ಹುಕುಂ, 94 ಸಿ ಮತ್ತು 94 ಸಿಸಿ ಅರ್ಜಿಗಳು ಕೂಡ ಪೂರ್ಣವಾಗಿ ವಿಲೇವಾರಿಯಾಗಿಲ್ಲ. ಇನ್ನು ರೇಶನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಪಡೆಯುವುದು ಕೂಡ ಸಾಹಸಮಯವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ದ.ಕ. ಜಿಲ್ಲೆಯ ಅಭಿವೃದ್ಧಿ ಮರೀಚಿಕೆಯಾಗುತ್ತಿದ್ದು, ತಮ್ಮ ಕನಸುಗಳು ನನಸಾಗಿಲ್ಲ ಎಂದು ಇಲ್ಲಿನ ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ.
‘ಗ್ರೇಟರ್ ಮಂಗಳೂರು’ ಯೋಜನೆ ಪ್ರಸ್ತಾವ ಹಂತದಲ್ಲಿ ಬಾಕಿ
ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ‘ನರ್ಮ್’ ಗಾಗಿ ಸಿದ್ಧಗೊಂಡಿದ್ದ ‘ಗ್ರೇಟರ್ ಮಂಗಳೂರು’ ಯೋಜನೆಯು ಪ್ರಸ್ತಾವ ಹಂತದಲ್ಲಿ ಬಾಕಿಯಾಗಿದೆ. ಅಂದರೆ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ‘ನರ್ಮ್’ ಬದಲು ‘ಸ್ಮಾರ್ಟ್ ಸಿಟಿ’ ಯೋಜನೆ ಕೈಗೆತ್ತಿ ಕೊಂಡಾಗಲೇ ‘ಗ್ರೇಟರ್ ಮಂಗಳೂರು’ಗೆ ಇತಿಶ್ರೀ ಹಾಡಲಾಗಿದೆ.
‘ನರ್ಮ್’ ಯೋಜನೆಯ ಹಿನ್ನಲೆಯಲ್ಲಿ ಅಂದಿನ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆಯವರ ಸೂಚನೆ ಮತ್ತು ಸಲಹೆಯ ಮೇರೆಗೆ ಮಂಗಳೂರು ಮಹಾನಗರ ಪಾಲಿಕೆಗೆ ಮನಪಾ ಅಧಿಕಾರಿಗಳು ಆಸುಪಾಸಿನ 35 ಗ್ರಾಮಗಳನ್ನು ಸೇರಿಸಿ ‘ಗ್ರೇಟರ್ ಮಂಗಳೂರು’ ಯೋಜನೆ ಸಿದ್ಧಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಟ್ಟಿದ್ದರೂ ಆ ಬಳಿಕ ಆ ಕಡತ ಏನಾಗಿದೆ ಎಂಬುದನ್ನು ತಿಳಿಯುವ ಪ್ರಯತ್ನ ನಡೆದಿಲ್ಲ.