ಶ್ರೀಗಂಧದ ಸಂಸ್ಕೃತಿಯ ಭಟ್ಟರು ಕರಿಗಂಧದ ಬೂತವಾಗಬೇಕಿದೆ!
‘‘ತಲೆ ಸರಿ ಇರೋ ದೈವದ ಪಾತ್ರಧಾರಿಯು ದೈವಸ್ಥಾನಕ್ಕೆ ಬಂದ ಯು. ಟಿ. ಖಾದರ್‌ಗೆ ಪ್ರಸಾದ ನೀಡುವುದಿಲ್ಲ. ಯು. ಟಿ. ಖಾದರ್ ಭೇಟಿ ಕೊಟ್ಟ ಎಲ್ಲಾ ದೈವ/ಬೂತಸಾನಗಳಿಗೆ ಬ್ರಹ್ಮಕಲಶ ಮಾಡಬೇಕು’’ ಎಂದು ಕಲ್ಲಡ್ಕ ಪ್ರಭಾಕರ ಭಟ್ಟರು ಹೇಳಿರುವುದರಿಂದ ಬೂತಗಳ ಇತಿಹಾಸ ಶುದ್ಧೀಕರಣ ಆಗಬೇಕಿದೆ.
ದೈವ/ಬೂತಸಾನಗಳು ಕರಾವಳಿಯ ಮಣ್ಣಿನ ದೈವಗಳು. ಬ್ರಾಹ್ಮಣರು ಕರಾವಳಿಗೆ ಬರುವುದಕ್ಕೂ ಮೊದಲು ಈ ಶೂದ್ರ ದೈವಾರಾಧನೆ ಚಾಲ್ತಿಯಲ್ಲಿತ್ತು ಎಂದು ಇತಿಹಾಸ ಹೇಳುತ್ತದೆ. ದೈವ/ಬೂತಾರಾಧನೆಗೂ ಬ್ರಾಹ್ಮಣರಿಗೂ, ವೈದಿಕರ ಬ್ರಹ್ಮಕಲಶಕ್ಕೂ ಸಂಬಂಧವಿಲ್ಲ. ಬೂತಸಾನವೇನಾದರೂ ಅಶುದ್ಧ್ದಿಯಾಯ್ತು ಎಂದರೆ ಸಾನದ ಬಾವಿಯಿಂದ ಒಂದು ಚೆಂಬು ನೀರು ಸಿಂಪಡಿಸಿ ಶುದ್ಧಗೊಳಿಸುವ ಶಕ್ತಿ ಬೂತಸಾನದ ಮನೆತನಕ್ಕಿದೆ. ಬೇರೆ ಜಾತಿ/ ಧರ್ಮದ ವ್ಯಕ್ತಿ ಬೂತಸಾನಕ್ಕೆ ಬಂದನೆಂದರೆ ಅದು ಸಾನದೊಳಗಿರುವ ದೈವಕ್ಕೆ ಪ್ರತಿಷ್ಠೆಯ ವಿಚಾರವೇ ಹೊರತು ಅವಮರ್ಯಾದೆಯಲ್ಲ. ಇಷ್ಟಕ್ಕೂ ದೈವವೊಂದು ತಾನು ಎಷ್ಟು ಜಾತಿ, ಧರ್ಮದವರಿಗೆ ಗೌರವ ಕೊಟ್ಟೆ ಎನ್ನುವುದನ್ನು ತನ್ನ ಮಾತಿನಲ್ಲಿ ಉಲ್ಲೇಖಿಸುತ್ತದೋ ಅಷ್ಟು ಅದರ ಹಿರಿಮೆ ಹೆಚ್ಚಿದೆ ಎಂದರ್ಥ. ಜಾರಂದಾಯ, ಕೋಡ್ದಬ್ಬು, ತನ್ನಿಮಾನಿಗ, ರಾಹು, ಗುಳಿಗ, ಬಂಟ, ಕಲ್ಲುರ್ಟಿ, ಸತ್ಯಪ್ಪೆಹೀಗೆ ತುಳುನಾಡಿನ ಸಾವಿರದ ಒಂದು ದೈವಗಳನ್ನು ಭೂಮಿಯಲ್ಲಿ ಮನುಷ್ಯನ ಮೇಲೆ ದರ್ಶನ ಬರಿಸಿದಾಗ ಎಲ್ಲಾ ಜಾತಿ ಧರ್ಮಗಳನ್ನು ಕರೆದೇ ತನ್ನ ಧಾರ್ಮಿಕ ವಿಧಿವಿಧಾನಗಳನ್ನು ಪ್ರಾರಂಭಿಸುತ್ತದೆ. ‘‘ಗುತ್ತಿನಾರ್ಲೇ, ಮೂಲ್ಯರೇ, ಪೂಜಾರ್ಲೇ, ಸೇಕುರ್ಕುಲೇ..... ಒರಿಯತ್ತು, ಒರಿಯಂದು....’’ ಅಂತ ದೈವ ಎಲ್ಲಾ ಜಾತಿ ಧರ್ಮದವರನ್ನು ಕರೆದು ಮಾತನಾಡಿಸಿ ಅನುಮತಿ ಪಡೆದು ತನ್ನ ರಾಜ್ಯಭಾರವನ್ನು ಪ್ರಾರಂಭಿಸುತ್ತದೆ. ‘‘ಸೇಕುರ್ಕುಲೇ’’ ಅಂದರೆ ತುಳುನಾಡಿನ ಮುಸ್ಲಿಮರಾದ ಬ್ಯಾರಿಗಳನ್ನು ಉದ್ದೇಶಿಸಿರುವುದು. ತಲೆ ಸರಿ ಇರುವ ದೈವದ ಪಾತ್ರಿ ಯು. ಟಿ. ಖಾದರ್‌ಗೆ ಬೂಳ್ಯ ಕೊಡಲ್ಲ ಎಂದು ಹೇಳಿರುವುದು ತುಳುನಾಡಿನ ದೈವಗಳಿಗೆ ಪ್ರಭಾಕರ ಭಟ್ಟರು ಮಾಡಿದ ಅವಮಾನ. ದೈವಗಳೆಂದರೆ ಪತ್ತಪ್ಪೆ ಜೋಕುಲೆನ್ ಒಂಜಿ ಮಟ್ಟೆಲ್ಡ್ ಪಾಡುನ ಶಕ್ತಿಲು (ಹತ್ತು ತಾಯಿಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿ ಸಾಕುವ ಶಕ್ತಿಗಳು) ಎಂದೇ ಬಣ್ಣಿಸಲಾಗುತ್ತದೆ.
ಬ್ರಾಹ್ಮಣರು ತುಳುನಾಡಿಗೆ ಬಂದ ಬಳಿಕ ಒಂದೊಂದೇ ಶೂದ್ರ, ದಲಿತರ ದೈವಸ್ಥಾನಗಳನ್ನು ವೈದಿಕೀಕರಣಗೊಳಿಸಲು ಪ್ರಾರಂಭಿಸಿದರು ಎಂಬುದು ಗೋಡೆಯ ಮೇಲಿನ ಬರಹದಷ್ಟೇ ಸ್ಪಷ್ಟ. ಬ್ರಾಹ್ಮಣರಿಗೆ ಸಂಬಂಧವೇ ಇಲ್ಲದ ಕಿರುಸಂಸ್ಕೃತಿಯ ಒಳಗೆ ವೈದಿಕ ಆಚರಣೆಗಳು ಕಾಣಿಸಿಕೊಳ್ಳಲಾರಂಭಿದವು. ಬ್ರಾಹ್ಮಣರು ತುಳುನಾಡಿಗೆ ಬಂದ ಬಳಿಕ, ಅವರ ಕುತಂತ್ರಗಳಿಗೆ ಬಲಿಯಾದ ಎಷ್ಟೋ ಶೂದ್ರ, ದಲಿತ ವೀರಪುರುಷರು- ವೀರ ಮಹಿಳೆಯರು ನಮ್ಮನ್ನು ಕಾಪಾಡುವ ದೈವಗಳಾಗಿದ್ದಾರೆಂದು ಜನಪದ ನಂಬಿಕೊಂಡೇ ಬಂದಿದೆ. ಇತ್ತೀಚಿನ ಹತ್ತಿಪ್ಪತ್ತು ವರ್ಷಗಳಲ್ಲಿ ಯಾರಿಂದ ನಮ್ಮ ಹಿರೀಕರು ಹತರಾಗಿ ದೈವಗಳಾದರೋ ಅವರಿಂದಲೇ ಹಿರೀಕರ ದೈವಸ್ಥಾನಗಳಿಗೆ ಬ್ರಹ್ಮಕಲಶ, ಶುದ್ಧ್ದೀಕರಣ ಹೋಮ ಮಾಡಿಸಲಾಗುತ್ತಿದೆ. ಪುರೋಹಿತರು ಮಾಡುವ ಬ್ರಹ್ಮಕಲಶದ ಹೋಮಕ್ಕೂ ನಮ್ಮ ಬೂತಗಳಿಗೂ ಸಂಬಂಧವೇ ಇಲ್ಲ. ದೈವಗಳಿಗೆ ಹೂ ನೀರು ಇಟ್ಟರೆ ಅದೇ ದೊಡ್ಡ ಬ್ರಹ್ಮಕಲಶ. ಹಳೇ ದೈವಸ್ಥಾನ ಕೆಡವಿ ಹೊಸ ದೈವಸ್ಥಾನ ಕಟ್ಟುವಾಗ ಒಂದು ಬಿದಿರ ಬುಟ್ಟಿಯಲ್ಲಿ ದೈವದ ಮೂರ್ತಿಗಳನ್ನು ಇಟ್ಟು ಅದಕ್ಕೆ ಬಾವಿಯ ನೀರು ಮತ್ತು ಗುಡ್ಡದಲ್ಲಿ ಹೇರಳವಾಗಿ ಸಿಗುವ ಕೇಪುಲ ಹೂ ಇಟ್ಟರೆ ಅದೇ ದೈವಸ್ಥಾನದ ಶುದ್ಧೀಕರಣ ಪ್ರಕ್ರಿಯೆ. ಈಗೀಗ ನಮ್ಮ ದೈವಸ್ಥಾನಗಳ ಶುದ್ಧೀೀಕರಣಕ್ಕೆ ವೈದಿಕರು ಬಂದು ನಮ್ಮನ್ನೇ ಅಸ್ಪೃಶ್ಯರಂತೆ ದೂರ ನಿಲ್ಲಿಸಲಾಗುತ್ತಿದೆ. ಇದನ್ನೇ ಯು. ಟಿ. ಖಾದರ್ ಬಂದು ಹೋಗಿರುವ ಬೂತಸಾನಗಳಲ್ಲಿ ಮಾಡುವಂತೆ ಕಲ್ಲಡ್ಕ ಭಟ್ಟರು ಹೇಳಿದ್ದಾರೆ.
ಹಾಗಂತ ಬ್ರಾಹ್ಮಣರಿಂದ ಅಥವಾ ಮೇಲ್ವರ್ಗಗಳ ದಬ್ಬಾಳಿಕೆಗೆ ಬಲಿಯಾಗಿ ಬೂತಗಳಾಗಿದ್ದು ಕೇವಲ ಶೂದ್ರರು ಮತ್ತು ದಲಿತರು ಮಾತ್ರವಲ್ಲ. ಬ್ರಾಹ್ಮಣ ಸಮುದಾಯಕ್ಕೂ ಅಂತದ್ದೊಂದು ಹಿರಿಮೆಯಿದೆ. ಭಟ್ಟರಾಗಿದ್ದು ಭಟ್ಟರಂತಾಗದೇ ಬ್ರಾಹ್ಮಣ ಸಮುದಾಯದೊಳಗೆ ಇದ್ದುಕೊಂಡೇ ಸಮಾನತೆಗಾಗಿ ಹೋರಾಡಿದವರನ್ನು ಬ್ರಾಹ್ಮಣರೇ ಮುಗಿಸಿದ್ದಾರೆ. ಅಂತಹ ಬ್ರಾಹ್ಮಣರನ್ನೂ ಶೂದ್ರರು ದೈವಗಳಾಗಿ ಆರಾಧಿಸಿಕೊಂಡು ಬರುತ್ತಿದ್ದಾರೆ. ಭಟ್ಟಿ ಭೂತ, ಬ್ರಾಣ ಬೂತ/ಮಾಣಿ ಬೂತ, ಮುಂಡೆ ಬೂತ/ಮರ್ಲು ಮಾಣಿ, ಓಪೆತ್ತಿ ಮದಿಮಾಳ್, ಬ್ರಾಹ್ಮಣತಿ ಬೂತ ಹೀಗೆ ಹಲವು ಬ್ರಾಹ್ಮಣ ಬೂತಗಳು ಶೂದ್ರರ ಆರಾಧನೆಯಲ್ಲಿವೆೆ. ಬ್ರಾಹ್ಮಣ ಸಮುದಾಯದ ಪುರೋಹಿತಶಾಹಿ ಚೌಕಟ್ಟನ್ನು ಮೀರಿ ಶೂದ್ರರ ಜೊತೆ ಸಂಬಂಧ ಸಾಧಿಸಿದ ಕ್ರಾಂತಿಕಾರಿಗಳನ್ನು ‘ಮಾಯ’ ಮಾಡಲಾಯಿತು. ಅವರು ದೈವಗಳಾದರು. ಕಲ್ಲಡ್ಕ ಭಟ್ಟರಂತಹವರಿಗೆ ದಲಿತ ದೈವಗಳನ್ನು ಮಾದರಿಯಾಗಿಟ್ಟುಕೊಳ್ಳಲು ಮಡಿಮೈಲಿಗೆಯಾದರೆ ಇಂತಹ ಬ್ರಾಹ್ಮಣ ದೈವಗಳನ್ನಾದರೂ ಮಾದರಿಯನ್ನಾಗಿಸಿಕೊಂಡು ಜಾತಿ ಧರ್ಮದ ಬಗ್ಗೆ ಮಾತನಾಡಲಿ. ಭಟ್ಟರು ಇಂತಹ ಬೂತವಾಗುತ್ತ ಚಿಂತಿಸಬೇಕಿದೆ.
ದೈವ/ಬೂತಸಾನದಲ್ಲಿ ಮುಸ್ಲಿಮರಿಗೆ ಪ್ರಸಾದ ಕೊಡಬಾರದು ಎಂದು ಭಟ್ಟರು ಹೇಳುವುದಕ್ಕೆ ಅದೇನು ವರ್ಣನೀತಿ ಅನುಸರಿಸುವ ಬ್ರಾಹ್ಮಣರ ದೇವಸ್ಥಾನವಲ್ಲ. ಬ್ರಾಹ್ಮಣರ ದೇವಸ್ಥಾನದಲ್ಲಿ ಯಾರಿಗೆ ಶ್ರೀಗಂಧದ ಪ್ರಸಾದ ಕೊಡಬೇಕು, ಯಾರಿಗೆ ಕೊಡಬಾರದು, ಯಾರಿಗೆ ಯಾವ ರೀತಿ, ಎಷ್ಟು ಎತ್ತರದಿಂದ, ಎಷ್ಟು ದೂರದಿಂದ ಗಂಧ ಪ್ರಸಾದ ನೀಡಬೇಕು ಎಂಬ ಅಲಿಖಿತ ನಿಯಮಗಳಿವೆ. ಆದರೆ ಬೂತಸಾನದಲ್ಲಿ ನೇಮ ಮುಗಿಯೋ ಕೊನೇ ಗಳಿಗೆಯಲ್ಲಿ ಬೂತ/ದೈವ ಗುತ್ತಿನಾರ ಬಳಿ ಕೇಳುತ್ತದೆ ‘‘ಎನ್ನ ಕರಿಗಂಧ ತಿಕ್ಕಂದೆ ಏರ್ಲಾ ಪೋತಿಜೆರತ್ತಾ?’’ (ನನ್ನ ಕರಿಗಂಧ ಸಿಗದೇ ಯಾರೂ ಹೋಗಿಲ್ಲ ತಾನೇ?) ಎಂದು ಪ್ರಶ್ನಿಸುತ್ತದೆ. ಬ್ರಾಹ್ಮಣರ ದೇವಸ್ಥಾನದಲ್ಲಿ ಶ್ರೀಗಂಧದ ಕೊರಡು ತೇಯ್ದು ಜಾತಿ ಆಧಾರಿತ ಗಂಧ ಪ್ರಸಾದ ನೀಡಿದರೆ ಬೂತಸಾನದಲ್ಲಿ ಮಸಿ ಮತ್ತು ತೆಂಗು, ಎಣ್ಣೆಯಿಂದ ತೇಯ್ದ ಕರಿಗಂಧ ನೀಡಲಾಗುತ್ತದೆ. ಜಾತಿ, ಮತ, ಧರ್ಮ ಭೇದಭಾವ ಇಲ್ಲದೇ ಬೂತಸಾನಕ್ಕೆ ಬಂದ ಎಲ್ಲರಿಗೂ ಕರಿಗಂಧ ನೀಡಲಾಗಿದೆ ಎಂದು ಖಾತ್ರಿಪಡಿಸಿಕೊಳ್ಳಬೇಕು. ಭಟ್ಟರದ್ದು ಶ್ರೀಗಂಧದ ಸಂಸ್ಕೃತಿ. ನಮ್ಮದು ಕರಿಗಂಧದ ಸಂಸ್ಕೃತಿ.