‘ಧರ್ಮ ರಾಜಕಾರಣ’ಕ್ಕೆ ನೀತಿ ಸಂಹಿತೆಯ ಬಿಸಿ

Update: 2018-04-07 08:35 GMT

ಮಂಗಳೂರು, ಎ.6: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಗೆ ಸಂಬಂಧಿಸಿ ಹೊರಡಿಸಲಾದ ನೀತಿ ಸಂಹಿತೆಯ ಬಿಸಿ ‘ಧರ್ಮ ರಾಜಕಾರಣ’ಕ್ಕೆ ತಟ್ಟಿದೆ. ಹಾಗಾಗಿ ನೀತಿ ಸಂಹಿತೆ ಜಾರಿಯಾದಂದಿನಿಂದ ಮೇ 18ರವರೆಗೆ ಜನಪ್ರತಿನಿಧಿಗಳ ನೇತೃತ್ವದಲ್ಲಿ ವಿವಿಧೆಡೆ ನಡೆಯುವ ಧಾರ್ಮಿಕ, ಸಾಂಸ್ಕೃತಿಕ , ಕ್ರೀಡಾ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ.

ರಾಜಕಾರಣದಲ್ಲಿ ಧರ್ಮವಿರಲಿ. ಆದರೆ ಧರ್ಮದಲ್ಲಿ ರಾಜಕಾರಣ ಬೇಡ ಎಂಬುದು ತಿಳಿದವರ ಸಲಹೆಯಾಗಿದೆ. ರಾಜಕಾರಣಿಗಳು ತಮ್ಮ ನಂಬಿಕೆಯ ಧರ್ಮದ ಆಚಾರ ವಿಚಾರವನ್ನು ಅಳವಡಿಸಿಕೊಳ್ಳಬಹುದು. ಆದರೆ ಧರ್ಮದಲ್ಲಿ ರಾಜಕಾರಣ ಬೆರೆತರೆ ಅಲ್ಲಿ ಒಗ್ಗಟ್ಟಿಗೆ ಹೊಡೆತವಿದೆ ಎಂಬುದು ಬಲ್ಲವರ ಅಭಿಮತವಾಗಿದೆ. ಚುನಾವಣೆಯಲ್ಲಿ ಹಣ-ತೋಳ್ಬಲವೇ ಮೇಲುಗೈ ಸಾಧಿಸುತ್ತಿರುವ ಈ ಸಂದರ್ಭದಲ್ಲಿ ಪ್ರಬಲ ರಾಜಕಾರಣಿಗಳು ಚುನಾವಣೆಯ ಮೇಲೆ ಕಣ್ಣಿಟ್ಟುಕೊಂಡು ಮಸೀದಿ, ಮದ್ರಸ, ದೇವಸ್ಥಾನ, ದೈವಸ್ಥಾನ, ಚರ್ಚ್, ಕ್ರೀಡೆ, ಸಾಮಾಜಿಕ ಸಂಘಟನೆಗಳಲ್ಲಿ ತಮ್ಮವರು ನುಸುಳುವಂತೆ ಮಾಡುತ್ತಾರೆ. ಅಲ್ಲದೆ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ನೋಡಿ ಕೊಳ್ಳುತ್ತಾರೆ. ಆ ಬಳಿಕ ಧಾರ್ಮಿಕ ಸಂಸ್ಥೆಗಳ ಸಹಿತ ಎಲ್ಲಾ ಸಂಘಟನೆಗಳಲ್ಲಿ ಎಲ್ಲವೂ ಪ್ರಬಲ ರಾಜಕಾರಣಿಗಳ ಮರ್ಜಿಗೆ ತಕ್ಕಂೆ ನಡೆಯುತ್ತದೆ.

ಈ ಸಂಸ್ಥೆಗಳ ವಾರ್ಷಿಕೋತ್ಸವ, ಜಾತ್ರೆ, ಉರೂಸ್, ನೇಮ, ಬ್ರಹ್ಮಕಲಶ ಇತ್ಯಾದಿಗಳಲ್ಲಿ ಪ್ರಬಲ ರಾಜಕಾರಣಿಗಳೇ ಮೇಳೈಸುತ್ತಾರೆ. ಅಂದರೆ ಬಹುತೇಕ ಮಸೀದಿ, ಮದ್ರಸ, ದೇವಸ್ಥಾನ, ಚರ್ಚ್ ಆಡಳಿತದ ಚುಕ್ಕಾಣಿಯು ಗ್ರಾಪಂ, ತಾಪಂ, ಜಿಪಂ, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ನಗರಪಾಲಿಕೆಯ ಸದಸ್ಯರು, ಅಧ್ಯಕ್ಷ-ಉಪಾಧ್ಯಕ್ಷರು, ಶಾಸಕರ ಬಳಿ ಇರುತ್ತದೆ. ಚುನಾವಣೆಯ ಸಂರ್ಭದಲ್ಲಂತೂ ಇವರ ಅಧಿಪತ್ಯದ ಸಂಘಟನೆಯ ಕಾರ್ಯಕ್ರಮಗಳನ್ನು ದುರು ಪಯೋಗಪಡಿಸಲಾಗುತ್ತದೆ. ಅಂದರೆ ಕಾರ್ಯಕ್ರಮಗಳ ಅಧ್ಯಕ್ಷತೆ, ಉದ್ಘಾಟನೆ, ಮುಖ್ಯ ಅತಿಥಿ ಇತ್ಯಾದಿ ನೆಪದಲ್ಲಿ ಪಾಲ್ಗೊಂಡು ಒಂದಷ್ಟು ಆಶ್ವಾಸನೆ ನೀಡಿ ಚುನಾವಣೆಯ ಮೇಲೆ ಪರಿಣಾಮ ಬೀರುವಂತೆ ಮಾಡುತ್ತಾರೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಚುನಾವಣೆಯ ನೀತಿ ಸಂಹಿತೆಯ ಮೂಲಕ ಆಯೋಗವು ಈ ಸಂಸ್ಥೆಗಳ ಕಾರ್ಯಕ್ರಮಗಳ ಮೇಲೂ ಹದ್ದಿನ ಕಣ್ಣಿಟ್ಟಿರುವ ಕಾರಣ ತಾವಿಲ್ಲದೆ ತಮ್ಮ ಅಧೀನದ ಸಂಘಟನೆಗಳ ವಾರ್ಷಿಕ ಕಾರ್ಯಕ್ರಮ ನಡೆಯಬಾರದು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮವನ್ನೇ ಮುಂದೂಡಿದ ಉದಾಹರಣೆಯು ಜಿಲ್ಲೆಯ ವಿವಿಧೆಡೆ ಬೆಳಕಿಗೆ ಬಂದಿದೆ. ಸಾಧಾರಣವಾಗಿ ಎಪ್ರಿಲ್-ಮೇನಲ್ಲಿ ಬಹುತೇಕ ಧಾರ್ಮಿಕ, ಸಾಮಾಜಿಕ, ಕ್ರೀಡಾ ಸಂಘಟನೆಗಳ ಕಾರ್ಯಕ್ರಮಗಳ ಭರಾಟೆ ಅಧಿಕವಿರುತ್ತದೆ. ಇದೇ ಸಂದರ್ಭ ಚುನಾವಣೆ ನಡೆಯಲಿರುವ ಕಾರಣ ಈ ಸಂದರ್ಭ ರಾಜಕಾರಣಿಗಳು, ತಾವಿಲ್ಲದೆ ತಮ್ಮ ಸಂಘಟನೆಗಳ ಕಾರ್ಯಕ್ರಮ ನಡೆಯಬಾರದು ಎಂಬ ನಿಟ್ಟಿನಲ್ಲಿ ಸದ್ಯದ ಮಟ್ಟಿಗೆ ಕಾರ್ಯಕ್ರಮ ಮುಂದೂಡಿ ಊರವರ ಅಸಮಾಧಾನಕ್ಕೂ ಎಡೆಮಾಡಿಕೊಟ್ಟಿದ್ದಾರೆ.

ವರ್ಷಂಪ್ರತಿ ನಡೆಸುವ ಕಾರ್ಯಕ್ರಮವನ್ನು ಚುನಾವಣೆಯ ನೆಪದಲ್ಲಿ ಮುಂದೂಡುವುದು ಸರಿಯಲ್ಲ. ಇವರು ಬೇಕಾದರೆ ದೂರ ಸರಿಯಲಿ. ಆದರೆ, ನಂಬಿಕೆಗೆ ಅಪಚಾರ ಎಸಗುವುದು ಬೇಡ ಎಂದು ಸಂಪ್ರದಾಯಸ್ಥರು ಅಭಿಪ್ರಾಯಪಡುತ್ತಾರೆ.

ಈ ಮಧ್ಯೆ ಸಾಮಾಜಿಕ, ಕ್ರೀಡಾ ಕಾರ್ಯಕ್ರಮಗಳು ಕೂಡ ಕೆಲವು ಕಡೆ ಮುಂದೂಡಲ್ಪಟ್ಟಿವೆ. ಒಟ್ಟಿನಲ್ಲಿ ’ಧರ್ಮ ರಾಜಕಾರಣ’ವು ಈ ಬಾರಿ ಎಲ್ಲೆಡೆ ಭಾರೀ ಹೊಡೆತ ನೀಡಿದ್ದು, ಊರಲ್ಲಿ ಪರ- ವಿರೋಧಕ್ಕೂ ಕಾರಣವಾಗಿದೆ.

ನುಂಗಲಾರದ ಬಿಸಿತುಪ್ಪ

ಜಾತ್ರೆ, ಉರೂಸ್, ನೇಮೋತ್ಸವಗಳಲ್ಲಿ ಅನ್ನದಾನ ಸಾಮಾನ್ಯ. ಖಾಸಗಿ ಸಂಸ್ಥೆಗಳ ಕಾರ್ಯಕ್ರಮವಾದರೂ ಕೂಡ ತಾವು ಪಾಲ್ಗೊಂಡು ನಡೆಸಲ್ಪಡುವ ಈ ಕಾರ್ಯಕ್ರಮಗಳ ಆಹಾರ ವಿತರಣೆಯ ಖರ್ಚು ವೆಚ್ಚದ ಬಗ್ಗೆಯೂ ಮಾಹಿತಿ ನೀಡಬೇಕಾದ ಕಾರಣ ಇದರ ರಗಳೆಯೇ ಬೇಡ ಎಂದು ಕಾರ್ಯಕ್ರಮ ಮುಂದೂಡಲ್ಪಟ್ಟ ಉದಾಹರಣೆ ಇದೆ. ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ವಿರೋಧವಿಲ್ಲ. ಆದರೆ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮವಾದರೆ ಅದರ ಲೆಕ್ಕ ಕೊಡಬೇಕು ಎಂದು ಚುನಾವಣಾ ಆಯೋಗ ಸೂಚಿಸಿರುವುದು ‘ಧರ್ಮ-ರಾಜಕಾರಣಿ’ಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News