ಜಗತ್ತನ್ನೇ ಬದಲಿಸಿದ ಈ ಆಕಸ್ಮಿಕ ಆವಿಷ್ಕಾರಗಳು ನಿಮಗೆ ಗೊತ್ತೇ...?
ಎರಡು ವರ್ಷಗಳ ಹಿಂದೆ ಜಪಾನಿನಲ್ಲಿ ತ್ಯಾಜ್ಯಗಳ ರಾಶಿಯಲ್ಲಿ ಒಂದು ವಿಧದ ನೈಸರ್ಗಿಕ ಬ್ಯಾಕ್ಟೀರಿಯಾಗಳು ಕಂಡು ಬಂದಿದ್ದು,ಅವು ಆ ರಾಶಿಯಲ್ಲಿದ್ದ ಪ್ಲಾಸ್ಟಿಕ್ ಬಾಟ್ಲಿಗಳನ್ನು ತಿಂದು ಹಾಕಿದ್ದು ಆಕಸ್ಮಿಕವಾಗಿ ಬೆಳಕಿಗೆ ಬಂದಿತ್ತು. ಇದರ ಬೆನ್ನು ಬಿದ್ದ ಬ್ರಿಟನ್‌ನ ಪೋರ್ಟ್ಸ್‌ವೌತ್ ವಿವಿಯ ಪ್ರೊ.ಜಾನ್ ಮೆಕ್‌ಗಿಹಾನ್ ನೇತೃತ್ವದ ಅಂತರರಾಷ್ಟ್ರೀಯ ಸಂಶೋಧಕರ ತಂಡವು ಈ ಬ್ಯಾಕ್ಟೀರಿಯಾಗಳು ಸ್ರವಿಸುವ ಕಿಣ್ವಗಳು ಜಗತ್ತನ್ನು ಪ್ಲಾಸ್ಟಿಕ್ ಹಾವಳಿಯಿಂದ ಮುಕ್ತಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಲಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹಿಂದೆಯೂ ಆಕಸ್ಮಿಕವಾಗಿಯೇ ಕೆಲವು ಆವಿಷ್ಕಾರಗಳು ನಡೆದಿದ್ದು,ಅವು ಜಗತ್ತನ್ನೇ ಬದಲಿಸಿವೆ. ಅಂತಹ ಕೆಲವು ಆವಿಷ್ಕಾರಗಳ ಮಾಹಿತಿಯಿಲ್ಲಿದೆ.......
►ಇಂಪ್ಲಾಂಟೇಬಲ್ ಪೇಸ್‌ಮೇಕರ್
1950ರ ದಶಕದಲ್ಲಿ ಮಾನವನ ಹೃದಯ ಬಡಿತಕ್ಕೆ ನೆರವಾಗುವ ಪೇಸ್‌ಮೇಕರ್‌ಗಳು ಬೃಹತ್ ಗಾತ್ರದ್ದಾಗಿದ್ದವು. ಟಿವಿಯಷ್ಟು ದೊಡ್ಡದಾಗಿರುತ್ತಿದ್ದ ಈ ಯಂತ್ರವನ್ನು ತಾತ್ಕಾಲಿಕವಾಗಿ ಹೊರಗಿನಿಂದ ರೋಗಿಯ ಶರೀರಕ್ಕೆ ಜೋಡಿಸಲಾಗುತ್ತಿತ್ತು. ಆದರೆ ವರದಾನವೆಂಬಂತೆ ವಿಲ್ಸನ್ ಗ್ರೇಟ್‌ಬ್ಯಾಚ್ ಮಾಡಿದ್ದ ಒಂದು ತಾಂತ್ರಿಕ ತಪ್ಪು ಹೃದ್ರೋಗಕ್ಕೆ ಸಂಬಂಧಿಸಿದಂತೆ ಪ್ರತಿಯೊಂದನ್ನೂ ಬದಲಿಸಿಬಿಟ್ಟಿತ್ತು. ಹೃದಯದ ಬಡಿತದ ಶಬ್ದಗಳನ್ನು ದಾಖಲಿಸಲು ಆಸಿಲೇಟರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ 10,000 ಓಮ್ ಮಾದರಿಯ ರಸಿಸ್ಟರ್‌ನ್ನು ಜೋಡಿಸುವ ಬದಲು ಆಕಸ್ಮಿಕವಾಗಿ 1-ಮೆಗಾಓಮ್ ರಸಿಸ್ಟರ್‌ನ್ನು ಅಳವಡಿಸಿದ್ದ. ಇಷ್ಟಾದ ಬಳಿಕ ಮಾದರಿ ಹೃದಯವು ಥೇಟ್ ಮಾನವನ ಹೃದಯವನ್ನೇ ಹೋಲುವ ಬಡಿತವನ್ನು ದಾಖಲಿಸತೊಡಗಿತ್ತು. ಈ ಸಾಧನವನ್ನು ಹೃದಯ ಬಡಿತವನ್ನು ಉತ್ತಮಗೊಳಿಸಲು ರೋಗಿಗಳ ಎದೆಯಲ್ಲಿ ಕಸಿ ಮಾಡಬಹುದು ಎಂದು ಆಗಲೇ ವಿಲ್ಸನ್‌ಗೆ ಅನಿಸಿತ್ತು. ಮಾದರಿಯನ್ನು ಇನ್ನಷ್ಟು ಸಂಸ್ಕರಿಸಿದ ಆತ ಅದಕ್ಕೆ ಇಂಪ್ಲಾಂಟೇಬಲ್ ಪೇಸ್‌ಮೇಕರ್ ಎಂದು ಹೆಸರಿಟ್ಟಿದ್ದು,ಎರಡು ವರ್ಷಗಳ ಬಳಿಕ ಈ ಆಕಸ್ಮಿಕ ಆವಿಷ್ಕಾರದ ಪೇಟೆಂಟ್ ಆತನಿಗೆ ಲಭಿಸಿತ್ತು. ಆತ ಮಾಡಿದ್ದ ತಪ್ಪಿನ ಫಲವಾಗಿಯೇ ಇಂದು ಎಷ್ಟೋ ಹೃದಯರೋಗಿಗಳು ಪೇಸ್‌ಮೇಕರ್ ಬಳಸಿಕೊಂಡು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ.
►ಕೋಲಾ
ಇಂದು ವಿಶ್ವಾದ್ಯಂತ ಜನಪ್ರಿಯ ಪಾನೀಯವಾಗಿರುವ ಕೋಲಾ ನಿಜಕ್ಕೂ ಹುಟ್ಟಿದ್ದು ಮಾರ್ಫಿನ್ ಸೇವನೆಯ ಚಟವನ್ನು ಬೆಳಸಿಕೊಂಡವರಿಗೆ ಔಷಧಿಯ ರೂಪದಲ್ಲಾಗಿತ್ತು. ಅಮೆರಿಕನ್ ನಾಗರಿಕ ಯುದ್ಧದ ಬಳಿಕ ಫಾರ್ಮಾಸಿಸ್ಟ್ ಜಾನ್ ಪೆಂಬರ್ಟನ್ ಎಂಬಾತ ತನಗಿದ್ದ ಮಾರ್ಫಿನ್ ಚಟದಿಂದ ಪಾರಾಗಲು ಕೋಕಾ ಎಲೆಗಳು ಮತ್ತು ಕೋಕಾ ವೈನ್‌ನಿಂದ ಪಾನೀಯವೊಂದನ್ನು ತಯಾರಿಸಿದ್ದ. ಇದನ್ನು ಓಪಿಯಂ ಮುಕ್ತ ನೋವು ನಿವಾರಕವನ್ನಾಗಿ ಮಾರಾಟಕ್ಕೂ ಬಿಡಲಾಗಿತ್ತು. ಒಂದು ವರ್ಷದ ಬಳಿಕ ಸರಕಾರವು ಇದನ್ನು ನಿಷೇಧಿಸಿದಾಗ ಪೆಂಬರ್ಟನ್ ಅದರಲ್ಲಿದ್ದ ಮದ್ಯದ ಅಂಶವನ್ನು ತೆಗೆದು ಹಾಕಿದ್ದ. ಆತನ ಮುಖ್ಯ ಉದ್ದೇಶ ನೋವು ನಿವಾರಕದ ಮೇಲೆ ಸರಕಾರವು ಹೇರಿದ್ದ ನಿಷೇಧವನ್ನು ಎದುರಿಸುವುದು ಆಗಿತ್ತು. ಆದರೆ ಅದೇ ಈಗ ವಿಶ್ವಾದ್ಯಂತ ಕೋಲಾ ಹೆಸರಿನಿಂದ ಜನಪ್ರಿಯವಾಗಿದೆ. ಇದರ ಮೊದಲ ಮಾರಾಟ ಜಾರ್ಜಿಯಾದ ಅಟ್ಲಾಂಟಾದಲ್ಲಿದ್ದ ಜಾಕೋಬ್ ಫಾರ್ಮಸಿಯಲ್ಲಿ ನಡೆದಿದ್ದು,ಅಲ್ಲಿ ಅದು ಐದು ಸೆಂಟ್‌ಗಳ ಪೇಟೆಂಟ್ ಔಷಧಿಯಾಗಿತ್ತು.
►ಪೋಸ್ಟ್-ಇಟ್ ನೋಟ್ ಅಥವಾ ಅಂಟು ಚೀಟಿ
1968ರಲ್ಲಿ 3ಎಂ ಉದ್ಯೋಗಿ ಆರ್ಥರ್ ಪ್ರೈ ಎಂಬಾತ ಗಟ್ಟಿಯಾದ ಅಂಟೊಂದನ್ನು ತಯಾರಿಸಲು ಪ್ರಯತ್ನಿಸಿದ್ದ,ಆದರೆ ಆಕಕಸ್ಮಿಕವಾಗಿ ದುರ್ಬಲ ಅಂಟನ್ನು ತಯಾರಿಸಿದ್ದ. ಅದನ್ನೇನು ಮಾಡಬೇಕು ಎನ್ನುವುದು ಗೊತ್ತಾಗದೇ ಹಾಗೆಯೇ ಇಟ್ಟಿದ್ದ. ಆರು ವರ್ಷಗಳ ಬಳಿಕ ತನ್ನ ಚರ್ಚ್ ಶ್ಲೋಕಗಳಿರುವ ಪುಸ್ತಕಕ್ಕೆ ಹಚ್ಚಲು ಆತನಿಗೆ ಲಘು ಅಂಟಿನ ಅಗತ್ಯವುಂಟಾಗಿತ್ತು. ಇದಕ್ಕೆ ಆತ ತಾನು ಹಿಂದೆ ತಯಾರಿಸಿದ್ದ ದುರ್ಬಲ ಅಂಟನ್ನು ಲೇಪಿಸಿದ್ದ ಕಾಗದದ ತುಂಡನ್ನು ಬಳಸಿದ್ದ ಮತ್ತು ಅದು ಯಶಸ್ವಿಯಾಗಿತ್ತು. ಇದು ಪೋಸ್-್ಟಇಟ್ ನೋಟ್ ಅಥವಾ ಅಂಟು ಚೀಟಿಯ ಪರಿಕಲ್ಪನೆಗೆ ನಾಂದಿ ಹಾಡಿತ್ತು. ಕಂಪನಿಗೆ ಮೊದಲು ಉತ್ಪನ್ನದ ಬಗ್ಗೆ ವಿಶ್ವಾಸವಿರಲಿಲ್ಲವಾದರೂ ಅದೀಗ 100ಕ್ಕೂ ಅಧಿಕ ದೇಶಗಳಲ್ಲಿ ಬಳಕೆಯಲ್ಲಿದೆ.
►ಬಟಾಟೆ ಚಿಪ್ಸ್
ನ್ಯೂ ಇಂಗ್ಲಂಡ್‌ನ ಹೋಟೆಲ್ಲೊಂದರಲ್ಲಿ ಗಿರಾಕಿಯೋರ್ವ ಕರಿದ ಬಟಾಟೆಯನ್ನು ತರಿಸಿಕೊಂಡಿದ್ದು ಅದು ಗರಿಗರಿಯಾಗಿಲ್ಲವೆಂದು ರೇಗಾಡಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಬಾಣಸಿಗ ಜಾರ್ಜ ಕ್ರಮ್ ಬಟಾಟೆಯನ್ನು ಅತ್ಯಂತ ತೆಳ್ಳಗಿನ ಬಿಲ್ಲೆಗಳಾಗಿಸಿ ತಿನ್ನಲು ಸಾಧ್ಯವೇ ಇಲ್ಲದಷ್ಟು ಉಪ್ಪು ಸೇರಿಸಿ ಡೀಪ್ ಫ್ರೈ ಮಾಡಿ ಆ ತರಲೆ ಗಿರಾಕಿಗೆ ನೀಡಿದ್ದ. ಆದರೆ ಅದನ್ನು ತಿಂದ ಗಿರಾಕಿ ಇನ್ನೊಂದು ಪ್ಲೇಟ್‌ಗೆ ಆರ್ಡರ್ ಮಾಡಿದಾಗ ಜಾರ್ಜ್‌ಗೇ ಅಚ್ಚರಿಯಾಗಿತ್ತು. ಇಗ ಜನಪ್ರಿಯ ಕುರುಕುಲು ತಿಂಡಿಯಾಗಿರುವ ಪೊಟ್ಯಾಟೋ ಚಿಪ್ಸ್ ಹುಟ್ಟಿದ್ದು ಹೀಗೆ.
►ವಯಾಗ್ರಾ
ಔಷಧಿ ತಯಾರಿಕೆ ಕಂಪನಿ ಫೈಝರ್ 1990ರ ದಶಕದಲ್ಲಿ ಹೃದಯಾಘಾತವನ್ನು ತಡೆಯುವ ಔಷಧಿಯನ್ನು ಸಂಶೋಧಿಸುವ ಪ್ರಯತ್ನದಲ್ಲಿತ್ತು ಮತ್ತು ರಕ್ತನಾಳಗಳಲ್ಲಿ ತಡೆಯಿಂದಾಗಿ ಉಂಟಾಗುವ ಎದೆನೋವಿಗೆ ಚಿಕಿತ್ಸೆಗಾಗಿ ಬಳಸಲು ಔಷಧಿಯನ್ನಾಗಿ ಸಿಲ್ಡೆನಾಫಿಲ್ ಅನ್ನು ಔಷಧಿಯಾಗಿ ಪರೀಕ್ಷೆಗೊಳಪಡಿಸಿತ್ತು. ಕ್ಲಿನಿಕಲ್ ಅಧ್ಯಯನಕ್ಕಾಗಿ ಈ ಔಷಧಿಯನ್ನು ಮಾತ್ರೆಗಳ ರೂಪದಲ್ಲಿ ಸೇವಿಸಲು ಕೆಲವರಿಗೆ ನೀಡಲಾಗಿತ್ತು. ಆದರೆ ಅಧ್ಯಯನವು ಕೊನೆಯ ಹಂತದಲ್ಲಿದ್ದಾಗ ಈ ಮಾತ್ರೆಗಳನ್ನು ಪಡೆದುಕೊಂಡಿದ್ದ ಅವರೆಲ್ಲ ಅದನ್ನು ವಾಪಸ್ ಮಾಡಲು ನಿರಾಕರಿಸಿದ್ದರು. ಏಕೆಂದರೆ ಈ ಮಾತ್ರೆ ಅವರಲ್ಲಿ ಕಾಮೋತ್ತೇಜನಕ್ಕೆ ನೆರವಾಗಿತ್ತು. ಹೃದಯಾಘಾತವನ್ನು ತಡೆಯುವ ಔಷಧಿಯನ್ನು ಕಂಡು ಹಿಡಿಯಲು ಹೊರಟಿದ್ದ ಕಂಪನಿಗೆ ಆಕಸ್ಮಿಕವಾಗಿ ಕಾಮೋತ್ತೇಜಕ ಔಷಧಿ ದೊರಕಿತ್ತು ಮತ್ತು ವಯಾಗ್ರಾ ಜನ್ಮ ತಳೆದಿತ್ತು!