ಹಾವನ್ನು ಹಿಡಿಯುವ ಪ್ರಯತ್ನದಲ್ಲಿ ಮನೆ ಬೆಂಕಿಗಾಹುತಿ

Update: 2018-06-22 18:31 GMT

ಮನೆಯ ಕೈತೋಟದಲ್ಲಿ ಕಾಣಿಸಿಕೊಂಡ ಹಾವನ್ನು ಓಡಿಸಲು ಸುಧಾರಿತ ತಂತ್ರಜ್ಞಾನವನ್ನು ಬಳಸಿದ್ದರಿಂದ, ಮನೆಯೇ ಸುಟ್ಟುಹೋದ ಘಟನೆ ದಕ್ಷಿಣ ಫಿನ್‌ಲ್ಯಾಂಡ್‌ನಲ್ಲಿ ನಡೆದಿದೆ.

ರಾಜಧಾನಿ ಹೆಲ್ಸಿಂಕಿಗೆ ಪಶ್ಚಿಮದಲ್ಲಿರುವ ಸಿಯುಂಟಿಯೊ ಪಟ್ಟಣದ ನಿವಾಸಿಯೊಬ್ಬ ಮನೆಯ ತೋಟದೊಳಗೆ ಹಾವೊಂದು ನುಸುಳಿತ್ತು. ಬಿಲವೊಂದರಲ್ಲಿ ಅವಿತುಕೊಂಡಿದ್ದ ಅದನ್ನು ಓಡಿಸಲು ಮನೆ ಮಾಲಕ ದಹನಕಾರಿಯಾದ ಗ್ಯಾಸೊಲಿನ್ ದ್ರಾವಣವನ್ನು ಬಿಲದ ಸುತ್ತಲೂ ಸಿಂಪಡಿಸಿದ್ದರು. ದುರದೃಷ್ಟವಶಾತ್ ಈ ದ್ರಾವಣವು ಸಮೀಪದಲ್ಲಿಯೇ ನಿಲ್ಲಿಸಿದ್ದ ಹುಲ್ಲುಕೀಳುವ ಯಂತ್ರದ ಬಳಿ ಸಿಂಪಡಣೆಯಾಗಿತ್ತು.
   ಆದರೆ ಆಗ ತಾನೆ ಹುಲ್ಲು ಕತ್ತರಿಸುವ ಕೆಲಸ ನಿರ್ವಹಿಸಿದ್ದ ಯಂತ್ರವು ತುಂಬಾ ಬಿಸಿಯಿತ್ತು. ಗ್ಯಾಸೊಲಿನ್ ದ್ರಾವವು ಯಂತ್ರಕ್ಕೆ ಸೋಕಿದ ಕೂಡಲೇ ಭಗ್ಗೆನೆ ಬೆಂಕಿ ಎದ್ದು, ಸುತ್ತುಮುತ್ತಲಿನ ಪ್ರದೇಶಕ್ಕೆ ಹರಡಿತ್ತು. ಹೀಗೆ ವೇಗವಾಗಿ ವ್ಯಾಪಿಸಿದ ಬೆಂಕಿಯು ಮರದಿಂದ ನಿರ್ಮಿಸಲ್ಪಟ್ಟಿದ್ದ ಮನೆಯನ್ನೂ ಆವರಿಸಿತು. ಮನೆಯ ಹೊರಭಾಗದ ಗೋಡೆ ಹಾಗೂ ಮುಂಭಾಗದ ಛಾವಣಿ ಬೆಂಕಿಯ ಪ್ರಕೋಪಕ್ಕೆ ಸಂಪೂರ್ಣ ಸುಟ್ಟುಕರಕಲಾಗಿದೆ.
ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ಯನ್ನು ನಂದಿಸಿದರಾದರೂ, ಮನೆಯ ಹೊರಭಾಗ ಅರ್ಧಕ್ಕರ್ಧ ಸುಟ್ಟುಹೋಗಿತ್ತು. ಮನೆಯ ಒಳಭಾಗಕ್ಕೆ ಅಷ್ಟೇನೂ ಹಾನಿಯಾಗ ದಿದ್ದರೂ, ಒಟ್ಟು 17 ಸಾವಿರ ಡಾಲರ್ (11,12,345 ರೂ.) ನಷ್ಟ ಸಂಭವಿಸಿದೆಯೆಂದು ಘಟನೆಯ ಬಗ್ಗೆ ವರದಿ ಮಾಡಿರುವ ಫಿನ್‌ಲ್ಯಾಂಡ್‌ನ ಅಧಿಕೃತ ಸುದ್ದಿವಾಹಿನಿ ವೈಎಲ್‌ಇ ತಿಳಿಸಿದೆ.
 ಆದರೆ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿರುವ ಹಾವು ವಿಷಕಾರಿಯೇ ಅಥವಾ ನಿರುಪದ್ರವಿಯೇ ಎಂಬುದನ್ನು ಮಾತ್ರ ಈತನಕ ಗುರುತಿಸಲಾಗಿಲ್ಲವಂತೆ. ಫಿನ್‌ಲ್ಯಾಂಡ್‌ನಲ್ಲಿ ಸ್ಮೂತ್‌ಸ್ನೇಕ್ ಹಾಗೂ ಹಸಿರು ಹಾವುಗಳು ಸಾಮಾನ್ಯವಾಗಿ ಕಂಡುಬರುತ್ತವೆ.

 

Writer - *ವಿಸ್ಮಯ

contributor

Editor - *ವಿಸ್ಮಯ

contributor

Similar News