2014ರ ಬಳಿಕ ತಪ್ಪು ದಿಶೆಯಲ್ಲಿ ‘ಡಿಢೀರ್ ನೆಗೆತ’ಕಂಡ ಭಾರತ: ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್
ಹೊಸದಿಲ್ಲಿ, ಜು. 8: ಆರ್ಥಿಕತೆಯ ವೇಗದ ಪ್ರಗತಿಯ ಹೊರತಾಗಿಯೂ 2014ರ ಬಳಿಕ ದೇಶ ತಪ್ಪು ದಿಶೆಯಲ್ಲಿ ‘ದಿಢೀರ್ ನೆಗೆತ’ ಕಂಡಿದೆ ಎಂದು ಪ್ರಮುಖ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಹೇಳಿದ್ದಾರೆ.
ಹಿಂದಕ್ಕೆ ಚಲಿಸುವುದರಿಂದ ಭಾರತ ಈಗ ಈ ವಲಯದಲ್ಲಿ ಎರಡನೇ ಅತಿ ಕೆಟ್ಟ ದೇಶವಾಗಿ ಗುರುತಿಸಲ್ಪಟ್ಟಿದೆ ಎಂದೂ ಅವರು ಹೇಳಿದರು. ಇದು ತುಂಬಾ ಕೆಟ್ಟದಾಗಿ ನಡೆದಿದೆ. 2014ರಿಂದ ತಪ್ಪು ದಿಶೆಯಲ್ಲಿ ದೇಶ ‘ದಿಢೀರ್ ನೆಗೆತ’ ಕಂಡಿದೆ. ಇದರಿಂದ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕತೆ ಹಿನ್ನಡೆಗೆ ಚಲಿಸಿತು ಎಂದು ಸೇನ್ ಹೇಳಿದ್ದಾರೆ. 20 ವರ್ಷಗಳ ಹಿಂದೆ ಈ ವಲಯದ ಆರು ದೇಶಗಳಾದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಲ ಹಾಗೂ ಬೂತಾನ್‌ಗಳಲ್ಲಿ ಶ್ರೀಲಂಕಾ ಮೊದಲ ಉತ್ತಮ ದೇಶ ಹಾಗೂ ಭಾರತ ಎರಡನೇ ಉತ್ತಮ ದೇಶವಾಗಿತ್ತು. ಆದರೆ, ಇಂದು ಭಾರತ ಅತಿ ಕೆಟ್ಟ ಎರಡನೇ ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
‘ಎ ಅನ್‌ಸರ್ಟೈನ್ ಗ್ಲೋರಿ: ಇಂಡಿಯಾ ಆ್ಯಂಡ್ ಇಟ್ಸ್ ಕಾಂಟ್ರಡಿಕ್ಶನ್’ ಪುಸ್ತಕವನ್ನು ಅಭಿವೃದ್ಧಿ ಅರ್ಥಶಾಸ್ತ್ರಜ್ಞ ಜೀನ್ ಡ್ರೆಜೆ ಅವರೊಂದಿಗೆ ಅಮರ್ತ್ಯ ಸೇನ್ ಬರೆದಿದ್ದಾರೆ. ಈ ಪುಸ್ತಕದ ಹಿಂದಿ ಆವೃತ್ತಿ ‘ಭಾರತ್ ಔರ್ ಉಸ್ಕೆ ವಿರೋಧಾಬಾಸ್’ ಅನ್ನು ಇಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅಸಮಾನತೆ, ಜಾತಿ ವ್ಯವಸ್ಥೆ ಹಾಗೂ ಬುಡಕಟ್ಟು ಜನರ ಸಮಸ್ಯೆಯನ್ನು ಕೇಂದ್ರ ಸರಕಾರ ನಿರ್ಲಕ್ಷಿಸಿದೆ. ತಮ್ಮ ಕೈಗಳಲ್ಲಿ ಮಲಗುಂಡಿ ಶುಚಿಗೊಳಿಸುವ ದೊಡ್ಡ ಜನರ ಗುಂಪನ್ನು, ಅವರ ಆಗ್ರಹ ಹಾಗೂ ಅಗತ್ಯತೆಗಳನ್ನು ನಿರ್ಲಕ್ಷಿಸಿದೆ ಎಂದು ಅಮರ್ತ್ಯ ಸೇನ್ ಹೇಳಿದ್ದಾರೆ.