ಭಾರತದಲ್ಲಿ ಇದ್ದ ತುರ್ತು ಪರಿಸ್ಥಿತಿ ಹಿಟ್ಲರ್‌ನ ಆಳ್ವಿಕೆಗೆ ಸಮಾನವೇ?

Update: 2018-07-13 18:30 GMT

 ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನಿಸಲು ಸರಕಾರಿ ಯಂತ್ರವನ್ನು ಬಳಸಿದ ತುರ್ತು ಪರಿಸ್ಥಿತಿಯ ಸರ್ವಾಧಿಕಾರಿ ಆಡಳಿತ ಮತ್ತು ಫ್ಯಾಶಿಸ್ಟ್ ಆಡಳಿತಗಳ ನಡುವಣ ವ್ಯತ್ಯಾಸಗಳನ್ನು ನಾವು ಗಮನಿಸಲೇಬೇಕು. ಫ್ಯಾಶಿಸ್ಟ್ ಆಡಳಿತವು ಸಂಕುಚಿತ ರಾಷ್ಟ್ರೀಯತೆಯಿಂದ ಮುನ್ನಡೆಸಲ್ಪಟ್ಟು ಅಲ್ಪಸಂಖ್ಯಾತರನ್ನು ತನ್ನ ಗುರಿಯಾಗಿಸುತ್ತಿದೆ. ಹಿಂದೂ ರಾಷ್ಟ್ರೀಯತೆಯನ್ನು ಮುಂದಕ್ಕೆ ತಳ್ಳಿ ಸಮಾಜದಲ್ಲಿ ಮತೀಯ ನೆಲೆಯಲ್ಲಿ ಒಡಕನ್ನು ಉಂಟು ಮಾಡುತ್ತದೆ. ಎರಡು ರೀತಿಯ ಆಡಳಿತಗಳಲ್ಲೂ ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ ನಿಜ. ಆದರೆ ಸಂಕುಚಿತ ರಾಷ್ಟ್ರೀಯತೆಯಲ್ಲಿ ಜನರ ಧರ್ಮ ಅಥವಾ ಜನಾಂಗದ ಆಧಾರದಲ್ಲಿ ನಾಗರಿಕತ್ವದ ಮೂಲತತ್ವವನ್ನೇ ನಾಶಗೈಯಲಾಗುತ್ತದೆ. ಮತೀಯ ರಾಷ್ಟ್ರೀಯತೆಯ ಪ್ರಧಾನ ಲಕ್ಷಣ ಇದು.


ತುರ್ತುಪರಿಸ್ಥಿತಿಯ 43ನೇ ವರ್ಷಾಚರಣೆಯ ಸಂದರ್ಭದಲ್ಲಿ ಬಿಜೆಪಿ ತುರ್ತುಪರಿಸ್ಥಿತಿಯನ್ನು ಖಂಡಿಸಿ ಹೇಳಿಕೆಗಳನ್ನು ನೀಡಿತು; ಪತ್ರಿಕೆಗಳಲ್ಲಿ ಅರ್ಧ ಪುಟದ ಜಾಹೀರಾತುಗಳನ್ನ್ನೂ ನೀಡಿತ್ತು. ಒಂದು ಕುಟುಂಬದ ಅಧಿಕಾರವನ್ನು ಉಳಿಸಿಕೊಳ್ಳಲು ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಲಾಯಿತೆಂದು ಪ್ರಧಾನಿ ಮೋದಿ ಹೇಳಿದರು. ಬಿಜೆಪಿಯ ಪೋಷಕ ಸಂಘಟನೆ ಆರೆಸ್ಸೆಸ್ ಮತ್ತು ಅದರ ರಾಜಕೀಯ ಪೂರ್ವಿಕರು ತುರ್ತುಪರಿಸ್ಥಿತಿಯ ವಿರುದ್ಧ ವೀರಾವೇಶದಿಂದ ಹೋರಾಡಿದರೆಂದು ಹೇಳಲಾಗುತ್ತಿದೆ. ಆಶ್ಚರ್ಯವೆಂದರೆ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡಿದ ಸಿಪಿಐ(ಎಂ), ಹಲವು ಸಮಾಜವಾದಿಗಳು ತಮ್ಮ ಹೋರಾಟದ ಬಗ್ಗೆ ಏನನ್ನೂ ಹೇಳಲಿಲ್ಲ. ಅದೇನಿದ್ದರೂ ಇಂದಿರಾ ಗಾಂಧಿಯವರು 1978ರಲ್ಲಿ ಯಾವತ್‌ಮಲ್‌ನಲ್ಲಿ ಮಾಡಿದ ಭಾಷಣವೊಂದರಲ್ಲಿ ತುರ್ತುಪರಿಸ್ಥಿತಿಯಲ್ಲಿ ನಡೆದ ಅತಿರೇಕಗಳ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು. ಆದರೂ ಜೇಟ್ಲಿ ಮತ್ತು ಬಿಜೆಪಿಯ ನಾಯಕರಲ್ಲದೆ ಇತರ ಹಲವರು ಕೂಡಾ ತುರ್ತುಪರಿಸ್ಥಿತಿಯನ್ನು ಮತ್ತು ಅದರ ಅತಿರೇಕಗಳನ್ನು ಹಿಟ್ಲರ್‌ನ ಫ್ಯಾಶಿಸ್ಟ್ ಆಡಳಿತದೊಂದಿಗೆ ಹೋಲಿಸುತ್ತಾರೆ.

 ತುರ್ತುಪರಿಸ್ಥಿತಿಯಲ್ಲಿ ಪ್ರಜಾಸತ್ತಾತ್ಮಕ ಸ್ವಾತಂತ್ರಗಳ ಉಲ್ಲಂಘನೆ ನಡೆದಿತ್ತೆಂಬುದು ನಿಜ. ಆದರೆ ತುರ್ತುಪರಿಸ್ಥಿತಿಗೆ ಹಿಟ್ಲರ್‌ನ ಫ್ಯಾಶಿಸ್ಟ್ ಆಡಳಿತದೊಂದಿಗಿರುವ ಹೋಲಿಕೆ ಇಲ್ಲಿಗೇ ಕೊನೆಗೊಳ್ಳುತ್ತದೆ. ಹಿಟ್ಲರ್‌ನ ಆಡಳಿತದ ಮುಖ್ಯ ತಂತ್ರ ಜನರ ಭಾವನೆಗಳನ್ನು ಪ್ರಚೋದಿಸುವುದು, ದಿಢೀರ್ ದಾಳಿ ಮಾಡುವ ಸೈನಿಕರನ್ನು ಎತ್ತಿಕಟ್ಟಿ ಜನರ ನಡುವೆ ಒಡಕು ಉಂಟು ಮಾಡುವುದು ಮತ್ತು ಜನಾಂಗೀಯ ಅಲ್ಪಸಂಖ್ಯಾತರಾದ ಯೆಹೂದಿಗಳನ್ನು ದಾಳಿಗೆ ಗುರಿ ಮಾಡುವುದೇ ಆಗಿತ್ತು. ಉದ್ಯಮಿಗಳ, ವ್ಯಾಪಾರಿಗಳ ಹಿತಾಸಕ್ತಿಗಳನ್ನು ಕಾಪಾಡುವುದು ಮತ್ತು ವಿಶೇಷವಾಗಿ ದುಡಿಯುವ ವರ್ಗದ ಹಕ್ಕುಗಳನ್ನು ಹತ್ತಿಕ್ಕುವುದು ಹಿಟ್ಲರ್‌ನ ಆಡಳಿತದ ಇತರ ಅಂಶಗಳಾಗಿದ್ದವು. ಗತ ವೈಭವವನ್ನು ಜನರ ಮುಂದಿಟ್ಟು ಅತಿರೇಕವಾದ ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸಿ ಬಲಪ್ರಯೋಗದ ವಿದೇಶ ನೀತಿಯನ್ನು ಅನುಸರಿಸಿ ನೆರೆ ರಾಷ್ಟ್ರಗಳೊಂದಿಗೆ ಸಂಬಂಧಗಳನ್ನು ಹದಗೆಡಿಸಿಕೊಂಡಿದ್ದು ಹಿಟ್ಲರ್‌ಶಾಹಿಯ ಇನ್ನೊಂದು ಸಾಧನೆ. ಹಿಟ್ಲರ್ ಶಾಹಿಯಿಂದಾಗಿ ಐನ್‌ಸ್ಟೀನ್‌ನಂಥವರು ದೇಶ ಬಿಟ್ಟು ಹೋಗಬೇಕಾಯಿತು. ಜನಾಂಗೀಯ ಅಲ್ಪಸಂಖ್ಯಾತರನ್ನು ದಾಳಿಯ ಗುರಿಯಾಗಿಸಿದ್ದು ಹಿಟ್ಲರ್ ನೀತಿಯ ಅತ್ಯಂತ ಪ್ರಮುಖ ಭಾಗವಾಗಿತ್ತು. ನಮ್ಮ ದೇಶದಲ್ಲಿ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಡೆದ ಅತಿರೇಕಗಳು ಯಾವುದೇ ಅಲ್ಪಸಂಖ್ಯಾತರನ್ನು ಗುರಿಯಾಗಿ ಇಟ್ಟುಕೊಂಡು ನಡೆದವುಗಳಲ್ಲ. ಅಕ್ರಮ ಕಟ್ಟಡಗಳ ಉರುಳಿಸುವಿಕೆ ಮತ್ತು ಬಡವರ್ಗಗಳ ಕಡ್ಡಾಯ ಸಂತಾನ ಹರಣಗಳು ಮುಸ್ಲಿಮರ ಮೇಲೂ ಪರಿಣಾಮ ಬೀರಿದ್ದು ನಿಜ. ಆದರೆ ಇವು ಯಾವುವೂ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ನಡೆದವುಗಳಲ್ಲ. ಕಾಲಾಳುಗಳನ್ನು ಕ್ರೋಡೀಕರಿಸುವುದು, ಸಮೂಹ ಸನ್ನಿಯನ್ನು ಸೃಷ್ಟಿಸುವುದು ಮತ್ತು ಭಾವನಾತ್ಮಕ ವಿಷಯಗಳಿಗೆ ಪ್ರಾಧಾನ್ಯ ನೀಡುವುದು ಫ್ಯಾಶಿಸ್ಟ್ ಆಡಳಿತದ ಮುಖ್ಯ ಲಕ್ಷಣಗಳು. ಆದರೆ ಇಂದಿರಾ ಗಾಂಧಿ ಸ್ವತಃ ತಾವೇ ತುರ್ತುಪರಿಸ್ಥಿತಿಯನ್ನು ರದ್ದು ಮಾಡಿ ಪ್ರಜಾಸತ್ತಾತ್ಮಕವಾಗಿ ಚುನಾವಣೆಗಳನ್ನು ನಡೆಸಿದ್ದರು ಎಂಬುದನ್ನು ನಾವು ಮರೆಯಬಾರದು. ಜರ್ಮನಿಯಲ್ಲಿ ಹೀಗಾಗಲಿಲ್ಲ ಅಲ್ಲಿ ಫ್ಯಾಶಿಸ್ಟ್ ಆಡಳಿತವು ಜರ್ಮನಿಯನ್ನು ನಾಶಮಾಡಿತು.

ಇನ್ನು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಆರೆಸ್ಸೆಸ್ ಇಂದಿರಾ ಸರಕಾರದ ವಿರುದ್ಧ ಹೋರಾಡಿತ್ತು ಎಂಬುದು ಕಾಗಕ್ಕ ಗುಬ್ಬಕ್ಕ ಕಥೆ ಎಂದು ಈಗಾಗಲೇ ದಾಖಲೆಗಳ ಸಹಿತ ರುಜುವಾತಾಗಿದೆ. ಆರೆಸ್ಸೆಸ್ ತುರ್ತುಪರಿಸ್ಥಿತಿಗೆ ಬೆಂಬಲ ಸೂಚಿಸಿದ್ದಷ್ಟೇ ಅಲ್ಲದೆ ಆರೆಸ್ಸೆಸ್ ನಾಯಕರು ಇಂದಿರಾ ಗಾಂಧಿಯವರೊಡನೆ ಅಷ್ಟೇ ಅಲ್ಲ, ಸಂಜಯಗಾಂಧಿಯ ಜೊತೆ ಕೂಡ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದಾರೆಂದು ಉತ್ತರಪ್ರದೇಶ ಮತ್ತು ಸಿಕ್ಕಿಂನ ರಾಜ್ಯಪಾಲರಾಗಿದ್ದ ಟಿವಿ ರಾಜೇಶ್ವರ್ ‘ಇಂಡಿಯಾ: ದಿ ಕ್ರೂಶಿಯಲ್ ಇಯರ್ಸ್‌’ ಎಂಬ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.

ನಿಜ ಹೇಳಬೇಕೆಂದರೆ, ಇವತ್ತು ದೇಶದಲ್ಲಿ ಅಧಿಕೃತ ತುರ್ತು ಪರಿಸ್ಥಿತಿ ಇಲ್ಲದಿದ್ದರೂ ತುರ್ತು ಪರಿಸ್ಥಿತಿಗಿಂತ ಹೆಚ್ಚು ದಮನಕಾರಿಯಾದ ಸ್ಥಿತಿ ಇದೆ ಅಂದಿನ ತುರ್ತು ಪರಿಸ್ಥಿತಿಯ ಕಟು ಟೀಕಾಕಾರರಾಗಿದ್ದ ನಯನತಾರಾ ಸೆಹಗಲ್, ‘‘ನಮ್ಮ ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇದರ ಬಗ್ಗೆ ಅನುಮಾನವೇ ಇಲ್ಲ’’ ಎಂದಿದ್ದಾರೆ
‘‘ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಈಗ ಭಾರೀ ದಾಳಿ ನಡೆಯುತ್ತಿದೆ. ಭಿನ್ನಮತಕ್ಕೆ ರಾಷ್ಟ್ರ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಲಾಗುತ್ತಿದೆ. ಗೌರಿ ಲಂಕೇಶ್‌ರಂತಹ ಲೇಖಕರ ಹತ್ಯೆ ಮಾಡಲಾಗಿದೆ. ಆದ್ದರಿಂದ ತುರ್ತು ಪರಿಸ್ಥಿತಿಗಿಂತಲೂ ಹೆಚ್ಚು ಭಯಾನಕವಾದ ಒಂದು ಪರಿಸ್ಥಿತಿ ಈಗ ಇದೆ.’’ ಎಂದಿದ್ದಾರೆ.

ಹಾಗೆಯೇ ಸೈದ್ಧಾಂತಿಕವಾಗಿ ಮಿದುಳು ತೊಳೆತಕ್ಕೊಳಗಾದ ಕಾಲಾಳುಗಳ ಮೂಲಕ ನಾಗರಿಕ ಸ್ವಾತಂತ್ರ್ಯಗಳಿಗೆ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಅಪಾಯ ಬಂದೊದಗಿದೆ. ಈ ಕಾಲಾಳುಗಳು ಭಾರತದ ಸಂವಿಧಾನದ ವಿರುದ್ಧ ಮತ್ತು ಹಿಂದೂ ರಾಷ್ಟ್ರದ ಪರವಾಗಿ ಕಾರ್ಯಾಚರಿಸುತ್ತಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ನಡೆಯುವ ಹಿಂಸಾಚಾರ, ಬೆದರಿಕೆಯೊಡ್ಡುವುದು, ಪವಿತ್ರ ಹಸುವಿನ ಹೆಸರಿನಲ್ಲಿ ಗುಂಪು ಥಳಿತ, ಗೋಮಾಂಸ, ಲವ್ ಜಿಹಾದ್, ಘರ್ ವಾಪಸಿ ಹೆಸರಿನಲ್ಲಿ ಗುಂಪು ಹಿಂಸೆ-ಇವೆಲ್ಲ ಇಂದಿನ ಆಡಳಿತದ ಒಂದು ರೀತಿಯ ನವ ಸಾಮಾನ್ಯ (ನ್ಯೂ ನಾರ್ಮಲ್) ಆಗಿದೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ ದ್ವಿತೀಯ ದರ್ಜೆಯ ನಾಗರಿಕ ಸ್ಥಾನಮಾನವನ್ನು ನೀಡುವ ವಿಭಾಜಕ ಶಕ್ತಿಯ ಷಡ್ಯಂತ್ರ ನಡೆಯುತ್ತಿದೆ. ಇತ್ತೀಚೆಗೆ ಕಾಸ್‌ಗಂಜ್‌ನಲ್ಲಿ ನಡೆದ ಹಾಗೆ ತ್ರಿವರ್ಣದ ಬಳಕೆ ಕೂಡ ಹಿಂಸೆಯ ಪ್ರಚೋದನೆಗೆ ಕಾರಣವಾಗಿ ನಮ್ಮ ಪ್ರಜಾಪ್ರಭುತ್ವದ ಕತ್ತನ್ನು ಇನ್ನಷ್ಟು ಹಿಸುಕುತ್ತಿದೆ.

ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನಿಸಲು ಸರಕಾರಿ ಯಂತ್ರವನ್ನು ಬಳಸಿದ ತುರ್ತು ಪರಿಸ್ಥಿತಿಯ ಸರ್ವಾಧಿಕಾರಿ ಆಡಳಿತ ಮತ್ತು ಫ್ಯಾಶಿಸ್ಟ್ ಆಡಳಿತಗಳ ನಡುವಣ ವ್ಯತ್ಯಾಸಗಳನ್ನು ನಾವು ಗಮನಿಸಲೇಬೇಕು. ಫ್ಯಾಶಿಸ್ಟ್ ಆಡಳಿತವು ಸಂಕುಚಿತ ರಾಷ್ಟ್ರೀಯತೆಯಿಂದ ಮುನ್ನಡೆಸಲ್ಪಟ್ಟು ಅಲ್ಪಸಂಖ್ಯಾತರನ್ನು ತನ್ನ ಗುರಿಯಾಗಿಸುತ್ತಿದೆ. ಹಿಂದೂ ರಾಷ್ಟ್ರೀಯತೆಯನ್ನು ಮುಂದಕ್ಕೆ ತಳ್ಳಿ ಸಮಾಜದಲ್ಲಿ ಮತೀಯ ನೆಲೆಯಲ್ಲಿ ಒಡಕನ್ನು ಉಂಟು ಮಾಡುತ್ತದೆ. ಎರಡು ರೀತಿಯ ಆಡಳಿತಗಳಲ್ಲೂ ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ ನಿಜ. ಆದರೆ ಸಂಕುಚಿತ ರಾಷ್ಟ್ರೀಯತೆಯಲ್ಲಿ ಜನರ ಧರ್ಮ ಅಥವಾ ಜನಾಂಗದ ಆಧಾರದಲ್ಲಿ ನಾಗರಿಕತ್ವದ ಮೂಲತತ್ವವನ್ನೇ ನಾಶಗೈಯಲಾಗುತ್ತದೆ. ಮತೀಯ ರಾಷ್ಟ್ರೀಯತೆಯ ಪ್ರಧಾನ ಲಕ್ಷಣ ಇದು 

Writer - ರಾಂ ಪುನಿಯಾನಿ

contributor

Editor - ರಾಂ ಪುನಿಯಾನಿ

contributor

Similar News