ಲಿಂಗದೇವನೆ ಕರ್ತ

Update: 2018-07-27 18:34 GMT

ಲಿಂಗದೇವನೆ ಕರ್ತ, ಶಿವಭಕ್ತನೇ ಶ್ರೇಷ್ಠ.

ಕೊಲ್ಲದಿರ್ಪುದೆ ಧರ್ಮ.
ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ.
ಅಳುಪಿಲ್ಲದಿರ್ಪುದೆ ವ್ರತ.
ಇದೇ ಸತ್ಪಥ, ಉಳಿದುದೆಲ್ಲ ಮಿಥ್ಯವೆಂದೆ ಕಾಣಾ,
ದೇವರಾಯ ಸೊಡ್ಡಳಾ.
                                        -ಸೊಡ್ಡಳ ಬಾಚರಸ

ಸೊಡ್ಡಳ ಬಾಚರಸ, ಸೌರಾಷ್ಟ್ರ ಸೋಮೇಶ್ವರನ ಭಕ್ತನಾಗಿದ್ದ. ಬಿಜ್ಜಳನ ಉಗ್ರಾಣದಲ್ಲಿ ಧಾನ್ಯ ಅಳೆದು ಕೊಡುವ ಮತ್ತು ಅದರ ಲೆಕ್ಕವಿಡುವ ಕಾಯಕ ಮಾಡುತ್ತಿದ್ದ ಬಾಚರಸ, ಬಸವನಿಷ್ಠೆಗೆ ಹೆಸರಾಗಿದ್ದಾನೆ. ಈತನ ವಿಚಾರಗಳಲ್ಲಿ ಸ್ಪಷ್ಟತೆ ಇದೆ. ವ್ಯಾಖ್ಯಾನ ರೂಪದಲ್ಲಿ ಘನವಾದ ಶಬ್ದಗಳ ಅರ್ಥ ವಿವರಿಸುವ ಕ್ರಮ ಈ ವಚನದಲ್ಲಿದೆ.
ಪ್ರತಿಯೊಂದು ಶಬ್ದವೂ ಯಾದೃಚ್ಛಿಕವಾಗಿದೆ. ಅಂದರೆ ಈ ಶಬ್ದಕ್ಕೆ ಇದೇ ಅರ್ಥ ಏಕೆ ಬಂತು ಎಂದು ಹೇಳಲು ಸಾಧ್ಯವಿಲ್ಲ. ಕಲ್ಲು, ಮಣ್ಣು, ಆನೆ, ಕುದುರೆ ಹೀಗೆ ಶಬ್ದಗಳು ಏಕೆ ಉತ್ಪತ್ತಿಯಾದವು ಎಂಬುದು ಯಾರಿಗೂ ಗೊತ್ತಿಲ್ಲ. ಅನೇಕ ಶಬ್ದಗಳು ಕಾಲಕ್ಕೆ ತಕ್ಕಂತೆ ಬದಲಾದುದೂ ಉಂಟು. ಹಳೆಗನ್ನಡದಲ್ಲಿ ತಂದೆಗೆ ‘ಅಮ್ಮ’ ಎನ್ನುತ್ತಿದ್ದರು. ‘ಪೆದ್ದ’ ಎಂದರೆ ಹಿರಿಯ ಎಂಬ ಅರ್ಥವಿತ್ತು. ಇನ್ನು ಒಂದೇ ಶಬ್ದ ವಿವಿಧ ಸಂದರ್ಭಗಳಲ್ಲಿ ವಿವಿಧ ಅರ್ಥ ಕೊಡುವುದು. ಅಲ್ಲದೆ ಶಬ್ದಾರ್ಥ, ಲಕ್ಷಣಾರ್ಥ ಹಾಗೂ ಧ್ವನ್ಯರ್ಥಗಳೂ ಇರುವವು. ಹಾಗೆಯೆ ಆಧ್ಯಾತ್ಮಿಕ ಶಬ್ದಗಳು ಮತ್ತು ಒಳಗುಟ್ಟಿನ ಅರ್ಥಗಳಿಂದ ಕೂಡಿರುವ ಬೆಡಗಿನ ಶಬ್ದಗಳೂ ಇವೆ. ಈ ಹಿನ್ನೆಲೆಯಲ್ಲಿ ಸೊಡ್ಡಳ ಬಾಚರಸ ವಿವಿಧ ಶಬ್ದಗಳಿಗೆ ಸಮೂಹ ಪ್ರಜ್ಞೆಯೊಂದಿಗೆ ವ್ಯಾಖ್ಯಾನಿಸುವುದರ ಮೂಲಕ ನಿಖರತೆಯನ್ನು ಸಾಧಿಸಿದ್ದಾನೆ.
  ಲಿಂಗದೇವ ಎಂಬ ಪದ ಶಿವನನ್ನು ಪ್ರತಿನಿಧಿಸುತ್ತದೆ. ಶಿವನೇ ಸೃಷ್ಟಿಕರ್ತ ಎಂದು ಸೊಡ್ಡಳ ಬಾಚರಸ ಸಾರುತ್ತಾನೆ. ಶಿವದೇವನೊಬ್ಬನೇ ದೇವನಾಗಿರುವುದರಿಂದ ಆತ ಎಲ್ಲ ಜನಸಮುದಾಯಗಳಿಗಷ್ಟೇ ಅಲ್ಲದೆ ಸಕಲಜೀವರಾಶಿಗೆ ಸೇರಿದವನು. ಆ ಶಿವನನ್ನು ಬೇರೆ ಬೇರೆ ಧರ್ಮದವರು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಆದರೆ ಆತನೇ ಸರ್ವ ಸೃಷ್ಟಿಕರ್ತ. ಸೃಷ್ಟಿಯೇ ದೇವರಲ್ಲ. ಅದಕ್ಕೊಬ್ಬ ಕರ್ತನಿದ್ದಾನೆ ಎಂಬುದನ್ನು ಸೊಡ್ಡಳ ಸ್ಪಷ್ಟಪಡಿಸುತ್ತಾನೆ. ಇಂಥ ಸೃಷ್ಟಿಕರ್ತನಿಗೆ ಶರಣಾಗುವ ಭಕ್ತನೇ ಶ್ರೇಷ್ಠ. ಸರ್ವ ಸಮತ್ವದ ಮನೋಭಾವವುಳ್ಳ ಭಕ್ತನು ತನ್ನನ್ನು ‘ಕಿರಿಯ’ ಎಂದು ಭಾವಿಸುತ್ತಾನೆ. ಆದ್ದರಿಂದಲೇ ಆತ ಶ್ರೇಷ್ಠ! ಕೊಲ್ಲದಿರುವುದೇ ಆತನ ಧರ್ಮ. ಅಧರ್ಮದಿಂದ ಬಂದದ್ದನ್ನು ಬೇಡ ಎನ್ನುವುದೇ ಆತನ ನೇಮ. ಬಯಕೆ ಇಲ್ಲದೆ ಬದುಕುವುದೇ ಆತನ ವ್ರತ. ಆತನೇ ಶರಣ. ಹೀಗೆ ಸಾಗುವ ದಾರಿಯೇ ಸತ್ಪಥ. ಉಳಿದ ಜೀವನವಿಧಾನ ಅಸತ್ಯದಿಂದ ಕೂಡಿದ್ದಾಗಿರುತ್ತದೆ ಎಂದು ಬಾಚರಸ ಸ್ಪಷ್ಟಪಡಿಸುತ್ತಾನೆ. ಹೀಗೆ ಸತ್ಪಥದ ಪಂಚಸೂತ್ರಗಳು ಲೋಕದ ಮಾನವರಿಗೆ ದಾರಿ ತೋರುವ ಸಾಮರ್ಥ್ಯ ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News