ಸಾಹೇಬ್ ಬೀವಿ ಔರ್ ಗ್ಯಾಂಗ್‌ಸ್ಟರ್ 3 ಅನಿರೀಕ್ಷಿತ ತಿರುವುಗಳೇ ಚಿತ್ರದ ಹೆಗ್ಗಳಿಕೆ

Update: 2018-07-28 18:40 GMT

‘‘ಸಾಹೇಬ್, ಬೀವಿ ಔರ್ ಗ್ಯಾಂಗ್‌ಸ್ಟರ್’’ ಚಿತ್ರ 2011ರಿಂದ ಬಾಲಿವುಡ್‌ನಲ್ಲಿ ಸುದ್ದಿಯಲ್ಲಿದೆ. 2011ರಲ್ಲಿ ಮೊದಲ ಬಾರಿಗೆ, ದಿಗ್ಮಾಂಶು ಧುಲಿಯಾ ಅವರು ಈ ಚಿತ್ರ ನಿರ್ದೇಶನ ಮಾಡಿದಾಗ ಅದರ ಪ್ರಮುಖ ಪಾತ್ರದಲ್ಲಿ ರಣ್‌ದೀಪ್ ಹೂಡಾ ಕಾಣಿಸಿಕೊಂಡಿದ್ದರು. ಪ್ರೇಮ, ಕಾಮ ಮತ್ತು ಅಪರಾಧಗಳನ್ನು ತಳಕು ಹಾಕಿಕೊಂಡ ಥ್ರಿಲ್ಲರ್ ಚಿತ್ರ ಇದು. ಆ ಸಂದರ್ಭದಲ್ಲಿ ವಿಮರ್ಶಕರ ಗಮನವನ್ನು ಸೆಳೆದಿತ್ತು ಮಾತ್ರವಲ್ಲ, ಒಳ್ಳೆಯ ಮಾತುಗಳು ನಿರ್ದೇಶಕರ ಬಗ್ಗೆಯೂ ನಟರ ಬಗ್ಗೆಯೂ ಕೇಳಿ ಬಂದಿತ್ತು. ಆ ಯಶಸ್ಸಿನ ಗುಂಗಿನಲ್ಲೇ ಅವರು ‘ಸಾಹೇಬ್, ಬೀವಿ ಔರ್ ಗ್ಯಾಂಗ್‌ಸ್ಟರ್ ರಿಟರ್ನ್ಸ್’ ಮಾಡಿದ್ದರು. ಹೂಡಾ ನಿರ್ವಹಿಸಿದ ವಿಶಿಷ್ಟ ಪಾತ್ರವನ್ನು ಇಲ್ಲಿ ಇರ್ಫಾನ್ ಖಾನ್ ಯಶಸ್ವಿಯಾಗಿ ನಿರ್ವಹಿಸಿದ್ದರು. ಈ ಚಿತ್ರವೂ ಭಾಗಶಃ ಯಶಸ್ಸನ್ನು ಕಂಡಿತ್ತು. ಇದೀಗ ಮತ್ತೆ ಗ್ಯಾಂಗ್‌ಸ್ಟರ್ ತನ್ನ ಸಾಹೇಬ್ ಮತ್ತು ಬೀವಿಯ ಜೊತೆಗೆ ಕಾಲಿಟ್ಟಿದ್ದಾನೆ.

ಹೂಡಾ ಮತ್ತು ಇರ್ಫಾನ್ ಖಾನ್ ನಿರ್ವಹಿಸಿದ ನೆಗೆಟಿವ್ ಪಾತ್ರವನ್ನು ಸಂಜಯ್ ದತ್ ಅಷ್ಟೇ ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವೇ ಎನ್ನುವುದೇ ಈ ಬಾರಿಯ ಗ್ಯಾಂಗ್‌ಸ್ಟರ್ ಕುರಿತಂತೆ ಪ್ರೇಕ್ಷಕರಿಗಿರುವ ಕುತೂಹಲ. ಇತ್ತೀಚೆಗಷ್ಟೇ ಸಂಜಯ್ ದತ್ ಬದುಕನ್ನು ಆಧರಿಸಿ ‘ಸಂಜು’ ಚಿತ್ರ ಅವರ ವ್ಯಕ್ತಿತ್ವದ ಮೇಲೆ ತೀವ್ರ ಪರಿಣಾಮವನ್ನು ಬೀರಿತ್ತು. ಸಂಜು ಚಿತ್ರ ಬಿಡುಗಡೆಯಾದ ಬಳಿಕ ಹೊರಬರುತ್ತಿರುವ ಸಂಜಯ್ ದತ್ ಅಭಿನಯಿಸಿದ ಮೊದಲ ಚಿತ್ರ ಇದು. ಈ ಎಲ್ಲ ಕಾರಣಗಳಿಗಾಗಿ ಚಿತ್ರ ಅಪಾರ ನಿರೀಕ್ಷೆಗಳನ್ನು ಪ್ರೇಕ್ಷಕರಲ್ಲಿ ಬಿತ್ತಿತ್ತು. ಕತೆ ಹಿಂದಿನ ದಾಟಿಯಲ್ಲೇ ಮುಂದುವರಿಯುತ್ತದೆ. ಸ್ಥಳ, ಸಂದರ್ಭಗಳು ಬೇರೆ ಅಷ್ಟೇ. ಅಧಿಕಾರಕ್ಕಾಗಿ ನಡೆಯುವ ಒಳಸಂಚುಗಳು, ತಮ್ಮ ತಮ್ಮ ದುರುದ್ದೇಶಕ್ಕಾಗಿ ಇತರರನ್ನು ಕಾಲಾಳುಗಳನ್ನಾಗಿ ಬಳಸುವ ಪಾತ್ರಗಳು ಇಲ್ಲೂ ತಂತ್ರಗಳನ್ನು ಹೆಣೆಯುತ್ತವೆ. ರಾಜಕೀಯವಾಗಿ ಪ್ರಭಾವಿಯಾಗಿರುವ ಬೀವಿ (ಪತ್ನಿ), ಬಂದಿಯಂತಿರುವ ಸಾಹೇಬ್ (ಪತಿ) ಹಾಗೂ ಲಂಡನ್ ಮೂಲದ ಗ್ಯಾಂಗ್‌ಸ್ಟರ್, ಈ ಮೂವರ ಮಧ್ಯೆ ಇಡೀ ಚಿತ್ರದ ಕತೆ ಸುತ್ತುತ್ತವೆಯಾದರೂ, ನಮಗೆ ಆಗಾಗ ಎದುರಾಗುವ ಅನಿರೀಕ್ಷಿತ ತಿರುವುಗಳು ಚಿತ್ರವನ್ನು ಆಪ್ತವಾಗಿಸುತ್ತದೆ. ಕುತೂಹಲದಿಂದ ನೋಡುವಂತೆ ಮಾಡುತ್ತದೆ. ಈ ಹಿಂದಿನ ಮತ್ತು ಈಗಿನ ಒಟ್ಟು ಮೂರೂ ಚಿತ್ರಗಳಲ್ಲೂ ಬೀವಿಯಾಗಿ ಸಮರ್ಥವಾಗಿ ಅಭಿನಯಿಸಿದವರು ಮಾಹಿ ಗಿಲ್. ಈ ಚಿತ್ರದಲ್ಲಿ ರಾಣಿ ಮಾಧವಿ ದೇವಿಯಾಗಿ ಅವರು ಮತ್ತೆ ಉಜ್ವಲವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗ್ಯಾಂಗ್‌ಸ್ಟರ್‌ಗಿಂತ ಈಕೆಯೇ ಮಿಂಚುತ್ತಾರೆ.

ಈ ಚಿತ್ರದಲ್ಲೂ ಜಿಮ್ಮಿ ಶೆರ್ಗಿಲ್‌ಗೆ ಮಹತ್ವದ ಪಾತ್ರವಿದೆ. ರಾಜ ಆದಿತ್ಯ ಪ್ರತಾಪ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಿಮ್ಮಿ ಶೆರ್ಗಿಲ್, ತನ್ನ ಕಳೆದುಹೋದ ಪ್ರೀತಿ ಮತ್ತು ವೈಭವವನ್ನು ಮತ್ತೆ ಪಡೆಯುವ ಒಳಸಂಘರ್ಷವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಈ ಹಿಂದಿನ ಚಿತ್ರಗಳಲ್ಲೂ ಅವರು ಇದೇ ದಾಟಿಯ ಪಾತ್ರವನ್ನೇ ನಿರ್ವಹಿಸಿದ್ದರು. ಶೆರ್ಗಿಲ್ ಪಾತ್ರ ನಿರ್ವಹಣೆ, ಮಾಹಿಗಿಲ್ ಪಾತ್ರಕ್ಕೆ ಸರಿಗಟ್ಟುವಂತಿದೆ. ಚಿತ್ರದಲ್ಲಿ ಒಂದಿಷ್ಟು ದಣಿದವರಂತೆ ಕಾಣುವುದು ಸಂಜಯ್ ದತ್ ಪಾತ್ರ. ಮುಖ್ಯವಾಗಿ ಈ ಹಿಂದೆ ಎರಡು ಭಾಗಗಳಲ್ಲಿ ಇದೇ ಪಾತ್ರಗಳನ್ನು ಹೂಡಾ ಮತ್ತು ಇರ್ಫಾನ್ ಖಾನ್ ನಿರ್ವಹಿಸಿದ್ದು ಇದಕ್ಕೆ ಕಾರಣವಾಗಿರಬಹುದು. ಯಾಕೆಂದರೆ ಸಂಜಯ್ ದತ್ ಯಾವತ್ತೂ ಇರ್ಫಾನ್ ಖಾನ್ ಆಗಿ ಅಭಿನಯಿಸಲು ಸಾಧ್ಯವಿಲ್ಲ. ದತ್ ಅವರು ಸೂಪರ್ ಸ್ಟಾರ್. ಇರ್ಫಾನ್ ಅಪ್ಪಟ ಕಲಾವಿದ. ಆದುದರಿಂದಲೇ ಈ ಸರಣಿ ಗ್ಯಾಂಗ್‌ಸ್ಟರ್‌ಗೆ ಹೊರಗಿನವರಾಗಿ ಕಾಣುತ್ತಾರೆ. ಆದರೂ ಪಾತ್ರವನ್ನು ಸರಾಗವಾಗಿ ನಿರ್ವಹಿಸಿಕೊಂಡು ಹೋಗಿದ್ದಾರೆ. ಸುಹಾಸಿನಿಯಾಗಿ ಚಿತ್ರಾಂಗದಾ ಸಿಂಗ್ ಕಣ್ಣಿಗಷ್ಟೇ ತಂಪು. ನಟನೆ ಪರವಾಗಿಲ್ಲ ಎನ್ನಬಹುದು. ಅಥವಾ ಆ ಪಾತ್ರಕ್ಕೆ ಪೋಷಣೆ ಸಿಗದೇ ಇರುವುದೂ ಕಾರಣವಾಗಿರಬಹುದು.

ಆದಿತ್ಯ ಪ್ರತಾಪ್ ಸಿಂಗ್‌ನ ಎರಡನೇ ಪತ್ನಿಯಾಗಿ ನಟಿಸಿರುವ ಸೋಹಾ ಅಲಿ ಖಾನ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಪೋಷಕ ಪಾತ್ರಗಳಿಗೆ ಕಬೀರ್ ಬೇಡಿ, ನಫೀಸಾ ಅಲಿ ಮತ್ತು ದೀಪಕ್ ತಿಜೋರಿ ನ್ಯಾಯ ನೀಡಿದ್ದಾರೆ. ಒಂದು ರೀತಿಯಲ್ಲಿ ಕತೆಗೆ ಅಗತ್ಯವಿಲ್ಲದಷ್ಟು ಪಾತ್ರಗಳು ಚಿತ್ರದಲ್ಲಿ ತುಂಬಿಕೊಂಡಿವೆ. ಅತ್ಯುತ್ತಮ ಚಿತ್ರಕತೆ ಮತ್ತು ಅನಿರೀಕ್ಷಿತ ತಿರುವುಗಳಿಲ್ಲದೆ ಇದ್ದಿದ್ದರೆ ಚಿತ್ರ ಎಳೆದಂತಾಗಿ ಬಿಡುತ್ತಿತ್ತು. ಬಾಲಿವುಡ್‌ನ ಎಂದಿನ ತಂತ್ರವನ್ನು ಬದಿಗಿಟ್ಟು ಧುಲಿಯಾ ಚಿತ್ರ ನಿರ್ದೇಶನ ಮಾಡಿದ್ದಾರೆ. ಜೊತೆಗೇ, ಮಸಾಲೆ ಪ್ರಿಯರಿಗಾಗಿ ಅನಗತ್ಯವಾಗಿ ಒಂದು ಪ್ರೇಮಗೀತೆ ಮತ್ತು ಐಟಂಸಾಗ್‌ನ್ನು ಒತ್ತಾಯ ಪೂರ್ವಕ ತುರುಕಿಸಿದ್ದಾರೆ. ಸಂಭಾಷಣೆಗಳು ಚಿತ್ರದ ಇನ್ನೊಂದು ಹೆಗ್ಗಳಿಕೆ. ಒಟ್ಟಾರೆಯಾಗಿ ಅನಿರೀಕ್ಷಿತಗಳೇ ತುಂಬಿರುವ ಕತೆ, ಅದಕ್ಕೆ ಹೊಂದುವಂಥ ನಟನೆ ಹಾಗೂ ಪರಿಣಾಮಕಾರಿ ಸಂಭಾಷಣೆಯಿಂದ ಗ್ಯಾಂಗ್‌ಸ್ಟರ್ ಚಿತ್ರ ಇಷ್ಟವಾಗುತ್ತದೆ.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News