ವಿಶ್ವರೂಪಂ-2: ಹುಸಿಯಾದ ಕಮಲ್ ಕಮಾಲ್
ನಾಲ್ಕು ವರ್ಷಗಳ ಹಿಂದೆ ಕಮಲ್ ಹಾಸನ್ ಅವರ ವಿಶ್ವರೂಪಂ ಸಿನೆಮೇತರ ಕಾರಣಗಳಿಗಾಗಿ ಸಾಕಷ್ಟು ಸುದ್ದಿಯಾಗಿತ್ತು. ಚಿತ್ರದಲ್ಲಿ ಕಮಲ್ ಹಾಸನ್ ಅವರು ಅಮೆರಿಕದ ಭಯೋತ್ಪಾದನಾ ವಿರೋಧಿ ಯುದ್ಧವನ್ನು ಗ್ರಹಿಸಿದ ರೀತಿಯನ್ನು ಹಲವರು ಟೀಕಿಸಿದ್ದರು. ಇದೇ ಸಂದರ್ಭದಲ್ಲಿ ಚಿತ್ರದಲ್ಲಿರುವ ಕೆಲವು ದೃಶ್ಯಗಳ ಕುರಿತಂತೆ ಮುಸ್ಲಿಮರ ಒಂದು ಸಣ್ಣ ಗುಂಪು ವಿರೋಧಿಸಿ ಚಿತ್ರಕ್ಕೆ ಇನ್ನಷ್ಟು ಪ್ರಚಾರ ನೀಡಿತ್ತು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಚಿತ್ರಕ್ಕೆ ನಿಷೇಧ ಹೇರುವ ಪ್ರಹಸನ ನಡೆಸಿ, ಆ ಚಿತ್ರ ಇನ್ನಷ್ಟು ಸುದ್ದಿಯಾಗುವಂತೆ ಮಾಡಿದ್ದರು. ಒಟ್ಟಿನಲ್ಲಿ ಭಯೋತ್ಪಾದನೆ ಮತ್ತು ಅದರ ವಿರುದ್ಧದ ಹೋರಾಟದ ಬ್ಲಾಕ್ ಆ್ಯಂಡ್ ವೈಟ್ ಕತೆಯನ್ನು ವಸ್ತುವಾಗಿಟ್ಟು ಮಾಡಿದ ಆ ಥ್ರಿಲ್ಲರ್ ಚಿತ್ರ, ಮನರಂಜನೆಯ ಮಟ್ಟಿಗೆ ಪ್ರೇಕ್ಷಕರಿಗೆ ಮೋಸ ಮಾಡಿಲ್ಲ. ಚಿತ್ರ ಕತೆಯನ್ನು ಕುತೂಹಲಕರವಾಗಿ ಹೆಣೆದಿದ್ದರು. ಒಂದು ಮಾಮೂಲಿ ಕಮರ್ಶಿಯಲ್ ಚಿತ್ರವಾಗಿ ಅದು ಯಶಸ್ವಿಯಾಗಿತ್ತು. ಚಿತ್ರದ ಎರಡನೆ ಭಾಗ ಶೀಘ್ರ ಬಿಡುಗಡೆಯಾಗುವ ಕುರಿತಂತೆಯೂ ಅಂದು ಅವರು ಹೇಳಿಕೆ ನೀಡಿದ್ದರು. ಆದರೆ ಚಿತ್ರ ಬಿಡುಗಡೆಯಾಗಲು ಸುಮಾರು 4 ವರ್ಷ ಬೇಕಾಯಿತು. ಕಮಲ್ ಈ ಚಿತ್ರದಲ್ಲಿ ಇನ್ನೇನಾದರೂ ಹೊಸತನದೊಂದಿಗೆ ಬಂದಿರಬಹುದೇ ಎಂಬ ಕುತೂಹಲದಿಂದ ಚಿತ್ರ ನೋಡಲು ಹೋದವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.
ವಿಶ್ವರೂಪಂ -2, ಕಮಲ್ ರಾಜಕೀಯ ಪಕ್ಷ ಸ್ಥಾಪಿಸಿದ ನಂತರ ಬಿಡುಗಡೆಯಾಗುತ್ತಿರುವ ಅವರ ಮೊದಲ ಸಿನೆಮಾ. ಬಹುಶಃ ಆ ಕಾರಣದಿಂದಲೋ ಏನೋ ಈ ಚಿತ್ರದಲ್ಲಿ ಕೆಲವು ಸಂಭಾಷಣೆಗಳು ಅವರ ರಾಜಕೀಯ ಸಿದ್ಧಾಂತವನ್ನು ಬಿಂಬಿಸುವಂತಿವೆೆ. ಈ ಭಾಷಣಗಳು ಚಿತ್ರದ ಸೋಲಿನಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಉಳಿದಂತೆ ಚಿತ್ರಕತೆಯ ಹೆಣಿಗೆ ಕೂಡ ದೀರ್ಘವಾಗಿದೆ, ದುರ್ಬಲವಾಗಿದೆ. ಏನನ್ನೋ ಹೇಳಲು ಹೋಗಿ, ಇನ್ನೇನನ್ನೋ ಹೇಳುತ್ತದೆ. ಅಥವಾ ಏನನ್ನೂ ಹೇಳದೆ ಚಿತ್ರ ಮುಗಿಯುತ್ತದೆ. ಭಾರತೀಯ ಗೂಢಚಾರ ವಿಶ್ವಂ ಅಹಮದ್ ಕಾಶ್ಮೀರಿಯಾಗಿ ಕಾಣಿಸಿಕೊಳ್ಳುವ ಕಮಲ್ ತುಸು ದಣಿದವರಂತೆ ಕಾಣುತ್ತಾರೆ. ಪ್ರಾಯದ ಗೆರೆಗಳು ಅವರ ನಟನೆಯ ಮೇಲೆ ಪರಿಣಾಮ ಬೀರಿದಂತಿದೆ. ಚಿತ್ರದಲ್ಲಿ ಕಮಲ್ ಪಾತ್ರ, ನಟನೆಗಿಂತ ಸಂಭಾಷಣೆಗೆ ಆದ್ಯತೆ ನೀಡುವ ಪ್ರಯತ್ನ ನಡೆದಿದೆ. ಇದು ಪ್ರೇಕ್ಷಕರ ಮನಮುಟ್ಟುವಲ್ಲಿ ಮಾತ್ರ ವಿಫಲವಾಗಿದೆ. ಹೊಡೆದಾಟದ ದೃಶ್ಯಗಳಲ್ಲೂ ಅವರು ಮಂಕಾದವರಂತೆ ಕಾಣುತ್ತಾರೆ.
ವಿಶ್ವರೂಪಂ -2ನಲ್ಲಿ ವಿಶ್ವಂ ಮತ್ತು ಆತನ ತಂಡ ಅಲ್ ಖಾಯಿದಾ ಉಗ್ರ ಉಮರ್ (ರಾಹುಲ್ ಬೋಸ್) ಹಾಗೂ ಇತರರನ್ನು ಸದೆಬಡಿಯಲು ಬ್ರಿಟನ್‌ಗೆ ತೆರಳುತ್ತಾರೆ. ಇದೇ ವೇಳೆ ಉಮರ್ ಹಾಗೂ ಆತನ ಸಹಚರರು ಲಂಡನ್, ದಿಲ್ಲಿ ಸೇರಿದಂತೆ ನಾನಾ ಕಡೆಗಳಲ್ಲಿ ಬಾಂಬ್ ಸ್ಪೋಟಿಸುವ ಸಂಚು ರೂಪಿಸುತ್ತಾರೆ. ಒಂದು ಥ್ರಿಲ್ಲರ್ ಸಿನೆಮಾದಲ್ಲಿ ಇರಬೇಕಾದ ಎಲ್ಲ ಅಂಶಗಳೂ ವಿಶ್ವರೂಪಂ2ನಲ್ಲಿದೆ. ಕತೆ, ಹಾಸ್ಯ, ರೊಮ್ಯಾನ್ಸ್, ಡ್ರಾಮಾ ಎಲ್ಲವೂ ಇದ್ದರೂ, ಪೂರ್ವನಿರ್ಧರಿತ ಮತ್ತು ಈಗಾಗಲೇ ಹತ್ತು ಹಲವು ಚಿತ್ರಗಳಲ್ಲಿ ಬಳಕೆಯಾಗಿ ಸವಕಲಾದ ಅದೇ ಭಯೋತ್ಪಾದನಾ ಕತೆಯ ದೆಸೆಯಿಂದ ಚಿತ್ರ ಪ್ರೇಕ್ಷಕರ ಮನ ಮುಟ್ಟುವಲ್ಲಿ ವಿಫಲವಾಗುತ್ತದೆ. ಅಷ್ಟುಮಾತ್ರವಲ್ಲ ಚಿತ್ರದ ಬಜೆಟ್‌ನಲ್ಲೂ ನಿರ್ಮಾಪಕರು ಜಿಪುಣತನ ತೋರಿದ್ದಾರೆ. ಭಾಗ ಎರಡರಲ್ಲಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಕೆ ಮಾಡಿದ್ದಾರಾದರೂ, ಆ್ಯಕ್ಷನ್ ದೃಶ್ಯಗಳು ಮೊದಲ ಚಿತ್ರದಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ.
ವಿಶ್ವರೂಪಂ ಚಿತ್ರ ಗೆಲ್ಲುವಲ್ಲಿ ಖಳನಾಯಕ ರಾಹುಲ್ ಬೋಸ್ (ಉಮರ್ ಖುರೇಶಿ) ಪಾತ್ರವೂ ಪ್ರಮುಖವಾಗಿತ್ತು. ಅಲ್ ಖಾಯಿದಾ ನಾಯಕನಾಗಿ ಉಮರ್ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿತ್ತು ಮತ್ತು ಈ ಪಾತ್ರದಲ್ಲಿ ಬೋಸ್ ಅದ್ಭುತ ಅಭಿನಯ ನೀಡಿದ್ದರು. ಆದರೆ ವಿಶ್ವರೂಪಂ-2ನಲ್ಲಿ ರಾಹುಲ್ ಬೋಸ್ ಪಾತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಚಿತ್ರದ ಇನ್ನೊಂದು ಋಣಾತ್ಮಕ ಅಂಶ.
ಕಮಲ್‌ಗೆ ನಾಯಕಿಯರಾಗಿ ಆ್ಯಂಡ್ರಿಯಾ ಜೆರೆಮಿಯ (ಅಶ್ಮಿತಾ) ಹಾಗೂ ಪೂಜಾ ಕುಮಾರ್ (ನಿರುಪಮಾ) ತಮಗೆ ಸಿಕ್ಕ ಪಾತ್ರವನ್ನು ಚೊಕ್ಕವಾಗಿ ಮಾಡಿ ಮುಗಿಸಿದ್ದಾರೆ. ಶೇಖರ್ ಕಪೂರ್ ಹಾಗೂ ಅನಂತ್ ಮಹದೇವನ್ ಮಧ್ಯೆ ನಡೆಯುವ ಸಂಭಾಷಣೆಗಳು ಚಿತ್ರದ ಅವಧಿಯನ್ನು ಹೆಚ್ಚು ಮಾಡುತ್ತವೆಯೇ ಹೊರತು ಪರಿಣಾಮ ಬೀರುವುದಿಲ್ಲ. ಕಮಲ್ ಹಾಸನ್ ತಾಯಿ ಹಾಗೂ ಅಲ್‌ಝೈಮರ್ ಪೀಡಿತಳಾಗಿ ವಹೀದಾ ರೆಹಮಾನ್ ಉತ್ತಮ ಅಭಿನಯ ನೀಡಿದ್ದಾರೆ.
ವಿಶ್ವರೂಪಂ- 2 ಚಿತ್ರವನ್ನು ಹಿಂದಿ ಮತ್ತು ತಮಿಳು ಭಾಷೆಗಳ ನಿರ್ಮಿಸಲಾಗಿದೆ. ಕೆಲವು ದೃಶ್ಯಗಳು ಬಿಡಿ ಬಿಡಿಯಾಗಿ ಮನಸನ್ನು ಸೆಳೆಯುತ್ತವೆೆ. ಆದರೆ ಒಟ್ಟಾರೆ ಒಂದು ಸಿನೆಮಾವಾಗಿ ನೋಡುವಾಗ ವಿಶ್ವರೂಪಂ2ನಲ್ಲಿ ಕಮಲ್ ಸಂಪೂರ್ಣ ಸೋತಿದ್ದಾರೆ. ರಾಜಕೀಯ ಪ್ರವೇಶದ ಅವರ ಗೊಂದಲಗಳ ನಡೆಯಂತೆಯೇ ಇದೆ, ವಿಶ್ವರೂಪಂ ಸಿನೆಮಾ.