ಗಾಂಧಿ ಟೋಪಿ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೆ

Update: 2018-08-15 06:59 GMT

ನಮ್ಮ ಕಾಲದಲ್ಲಿ ಹಿಂದೂ ಮುಸ್ಲಿಮ್ ಸಂಬಂಧ ಚೆನ್ನಾಗಿಯೇ ಇತ್ತು. ಆಗಿನ ರಾಜಕಾರಣಕ್ಕೂ ಒಂದು ತೂಕವಿತ್ತು. ಈಗ ಎಲ್ಲದರಲ್ಲೂ ರಾಜಕೀಯ. ಹಾಗಾಗಿ ಹಿಂದೂ ಮುಸ್ಲಿಮ್ ಸಂಬಂಧದಲ್ಲೂ ಬಿರುಕು ಕಾಣಿಸಿದೆ. ಹೀಗಾಗಬಾರದು. ನಾವು ನಮ್ಮ ಯುವ ಪೀಳಿಗೆಗೆ ಪರಸ್ಪರ ಕೈ ಜೋಡಿಸುವ ಪರಿಪಾಠ ಬಿಟ್ಟು ಹೋಗಬೇಕು.

ಮಂಗಳೂರು: ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ನನ್ನ ಹುಟ್ಟೂರು. 19/03/1934ರಲ್ಲಿ ನನ್ನ ಜನನವಾಯಿತು. ಅದ್ಯಾವುದೋ ಕಾರಣದಿಂದ ದಾಖಲೆಪತ್ರಗಳಲ್ಲಿ ನನ್ನ ಜನ್ಮ ದಿನಾಂಕ 4/2/1935 ಎಂದು ನಮೂದಾಗಿದೆ. ಅದೇನೇ ಇರಲಿ, ಭಾರತಕ್ಕೆ ಸ್ವಾತಂತ್ರ ಲಭಿಸಿದಾಗ ನನಗೆ ಆಗ 12 ವರ್ಷ ಪ್ರಾಯ. ಆವಾಗ ನಾನು ಪೆರುವಾಯಿ ಗ್ರಾಮದ ಮುಚ್ಚಿರಪದವು ಕಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೆ ತರಗತಿಯಲ್ಲಿ ಕಲಿಯುತ್ತಿದ್ದೆ. ಸ್ವಾತಂತ್ರ ಲಭಿಸಲು ಇನ್ನೇನೋ ಎರಡು- ಮೂರು ದಿನವಿರುವಾಗ ಭಾರತಕ್ಕೆ ಸ್ವಾತಂತ್ರ ಸಿಗುತ್ತದೆ ಎಂಬ ಸುದ್ದಿ ಸಿಕ್ಕಿತು. ಆವಾಗ ಸ್ವಾತಂತ್ರ ಅಂದರೆ ಏನೂಂತ ನನಗೆ ಗೊತ್ತಿರಲಿಲ್ಲ. ಸ್ವಾತಂತ್ರದ ದಿನ ಮುಂಜಾನೆ ಎದ್ದು ಎಂದಿನಂತೆ ನಾವು ಶಾಲೆಗೆ ಕಾಲಿಟ್ಟಾಗ ಊರಿಗೇ ಊರೇ ಸೇರಿತ್ತು. ಎಲ್ಲರ ಕೈಯಲ್ಲಿ ಒಂದೊಂದು ಬಾವುಟ ಮತ್ತು ಗಾಂಧಿ ಟೋಪಿಯನ್ನೂ ಕೊಟ್ಟರು.

ಹಾಗೇ ಗಾಂಧೀಜಿ ಕಿ ಜೈ, ನೆಹರೂಜಿಕಿ ಜೈ, ವೌಲಾನಾ ಆಝಾದ್‌ಕಿ ಜೈ ಅಂತ ಘೋಷಣೆ ಕೂಗಿಸಿದರು. ನಾವೆಲ್ಲಾ ಮಕ್ಕಳು ಜೋರಾಗಿ ಈ ಘೋಷಣೆ ಕೂಗಿ ಒಂದೂವರೆ ಮೈಲು ದೂರ ಮೆರವಣಿಗೆ ಹೊರಟೆವು. ನಮ್ಮಾಡನೆ ಊರಿನ ಜನರು, ಶಿಕ್ಷಕ- ಶಿಕ್ಷಕಿಯರೂ ಇದ್ದರು. ನಮಗೋ ಘೋಷಣೆ ಕೂಗುವ, ಮೆರವಣಿಗೆಯಲ್ಲಿ ಸಾಗುವ ಖುಷಿ. ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಘೋಷಣೆ ಕೂಗಿಕೊಂಡು ಮರಳಿ ಶಾಲೆ ಸೇರಿದೆವು. ಶಾಲೆಯಲ್ಲಿ ಚಾಕ್ಲೆಟ್, ತಿಂಡಿ ತಿನಿಸು, ಕುಡಿಯಲು ಪಾನೀಯ ನೀಡಿದರು. ಹಾಗೇ ಶಾಲೆಯ ಮುಖ್ಯ ಶಿಕ್ಷಕ ಮಹಾಲಿಂಗ ಭಟ್, ಊರಿನ ಹಿರಿಯರಾದ ಕೋಚಣ್ಣ ರೈ ಮುಂತಾದವರೆಲ್ಲಾ ಭಾಷಣ ಮಾಡಿದರು. ಇಷ್ಟರವರೆಗೆ ನಮ್ಮನ್ನು ಬ್ರಿಟಿಷರು ಆಳುತ್ತಿದ್ದರು. ನಾವಿನ್ನು ಅವರ ದಾಸ್ಯದಿಂದ ಮುಕ್ತರಾದೆವು. ನಮಗೀಗ ಸ್ವಾತಂತ್ರ ಸಿಕ್ಕಿತು. ನಮ್ಮನ್ನು ಇನ್ನು ನಾವೇ ಆಳುತ್ತೇವೆ. ಇದು ಅವರ ಭಾಷಣದ ಮುಖ್ಯ ಸಂದೇಶವಾಗಿತ್ತು. ಸ್ವಾತಂತ್ರ ಅಂದರೆ ಏನೂಂತ ಆ ಭಾಷಣ ಕೇಳಿದ ಮೇಲೆಯೇ ನನಗೆ ಗೊತ್ತಾದದ್ದು. ಗಾಂಧೀಜಿಯು ಸ್ವಾತಂತ್ರ ದೊರಕಿಸಿಕೊಡುವಲ್ಲಿ ವಹಿಸಿದ ಪ್ರಮುಖ ಪಾತ್ರದ ಬಗ್ಗೆ ಮನೆಯವರು ಆಗಾಗ ಹೇಳುತ್ತಿದ್ದರು. ಹಾಗಾಗಿ ನನಗೆ ಬಾಲ್ಯದಲ್ಲೇ ಗಾಂಧೀಜಿಯ ಬಗ್ಗೆ ವಿಶೇಷ ಗೌರವವೂ ಇತ್ತು. ಕಾಂಗ್ರೆಸ್ ಪಕ್ಷವು ರಕ್ತಗತವಾಗಿತ್ತು. ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಮಂಗಳೂರಿಗೆ ಬಂದಾಗ ಮನೆಯವರು ನನ್ನನ್ನೂ ಸೇರಿಸಿಕೊಂಡಿದ್ದರು.

ನೆಹರೂರನ್ನು ಹತ್ತಿರದಿಂದ ನೋಡಿದ ನೆನಪು ಈಗಲೂ ಇದೆ. ಪೆರುವಾಯಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಬಳಿಕ ನಾನು ನನ್ನ ತಾಯಿಯ ತವರೂರು ಪೆರ್ಲಕ್ಕೆ ತೆರಳಿದೆ. ಅಲ್ಲಿಂದಲೇ ದಿನನಿತ್ಯ ಮನೆಯಿಂದ ಮೂರು ಕಿ.ಮೀ. ದೂರವಿರುವ ಎಸ್.ಎನ್. ಶಾಲೆಗೆ ಹೋಗುತ್ತಿದ್ದೆ. ಸ್ವಾತಂತ್ರ ದಿನದಂದು ಮಕ್ಕಳಿಗೆಲ್ಲಾ ಗಾಂಧಿ ಟೋಪಿ ಕೊಟ್ಟಿದ್ದರಲ್ಲ. ನಾನದನ್ನು ಹೈಸ್ಕೂಲ್ ಮುಗಿಸುವವರೆಗೂ ಹಾಕಿಕೊಂಡು ಹೆಮ್ಮೆಯಿಂದ ಹೋಗುತ್ತಿದ್ದೆ. ಆವಾಗ ಗಾಂಧಿ ಟೋಪಿಗೆ ಅದರದ್ದೇ ಆದ ಗೌರವವಿತ್ತು. ಆ ಟೋಪಿ ಧರಿಸಿ ಹೋಗುವಾಗ ಸಿಗುತ್ತಿದ್ದ ಪುಳಕವನ್ನು ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಪೆರ್ಲದಲ್ಲಿ ದೇವಪ್ಪ ಆಳ್ವ ಅಂತ ಒಬ್ಬರಿದ್ದರು. ಭಾರೀ ಶ್ರೀಮಂತರು. ಸ್ವಾತಂತ್ರಕ್ಕಾಗಿ ಅವರು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದರು. ನಾವು ಅವರನ್ನು ಕುಂಬ್ಳೆ ಗಾಂಧಿ ಎಂದೇ ಕರೆಯುತ್ತಿದ್ದೆವು. ಅವರ ಒಂದು ಕರೆಗೆ ಊರಿಗೆ ಊರೇ ಎದ್ದೇಳುತ್ತಿತ್ತು. ಸ್ವಾತಂತ್ರ ಹೋರಾಟಗಾರರಾಗಿದ್ದ ಅವರು ಅಪ್ಪಟ ಗಾಂಧಿವಾದಿಯೂ ಹೌದು. ಶಿಸ್ತನ್ನು ನಾನು ಈ ದೇವಪ್ಪ ಆಳ್ವರಿಂದ ಕಲಿತೆ. ಗಾಂಧಿ ಟೋಪಿ ಧರಿಸಿ ಶಾಲೆಗೆ ಹೋಗುವ ನಮ್ಮ ಬಗ್ಗೆ ಅವರಿಗೆ ತುಂಬಾ ಪ್ರೀತಿ ಇತ್ತು.

ಮಂಜೇಶ್ವರ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಚುನಾಯಿತರಾಗಿದ್ದ ನ್ಯಾಯವಾದಿ ಕಳ್ಳಿಗೆ ಮಹಾಬಲ ಭಂಡಾರಿಯೊಂದಿಗೆ ಜೂನಿಯರ್ ಆಗಿ ನಾನು ವಕೀಲ ವೃತ್ತಿ ಆರಂಭಿಸಿದೆ. 1960ರಿಂದ 67ರವರೆಗೂ ಅವರೊಂದಿಗೆ ಇದ್ದೆ. ಭಾಷಾವಾರು ಪ್ರಾಂತ ರಚನೆಗೊಂಡಾಗ ಕಾಸರಗೋಡು ಅನ್ಯಾಯವಾಗಿ ಕೇರಳದ ಪಾಲಾಯಿತು. ಇದರಿಂದ ಕೆಲಕಾಲ ನಾನು ಕಾಂಗ್ರೆಸ್‌ನಿಂದ ದೂರವಾಗಿದ್ದೆ. ಕಾಸರಗೋಡು ಕರ್ನಾಟಕ ಏಕೀಕರಣ ಸಮಿತಿಯಲ್ಲೂ ಸಕ್ರಿಯವಾಗಿದ್ದೆ. ನಮ್ಮ ದುರದೃಷ್ಟ, ಕಾಸರಗೋಡನ್ನು ಕರ್ನಾಟಕಕ್ಕೆ ಈಗಲೂ ಸೇರಿಸಲಾಗಲಿಲ್ಲ. ಮಂಗಳೂರಿಗೆ ಬಂದು ವಕೀಲ ವೃತ್ತಿ ಆರಂಭಿಸಿದ ಬಳಿಕ ನಾನು ಮತ್ತೆ ಕಾಂಗ್ರೆಸ್‌ನಲ್ಲಿ ಸಕ್ರಿಯನಾದೆ. ಉಳ್ಳಾಲದಲ್ಲಿ ಬಿ.ಎಂ.ಇದಿನಬ್ಬ, ಯು.ಟಿ.ಫರೀದ್‌ರ ಗೆಲುವಿಗೆ ಶ್ರಮಿಸಿದ್ದೆ. ಆದರೆ, ಪಕ್ಷದಲ್ಲಿ ನಾನು ಯಾವುದೇ ಸ್ಥಾನಮಾನಕ್ಕೆ ಹಾತೊರೆದವನಲ್ಲ. ಕಾಂಗ್ರೆಸ್ ಪಕ್ಷ ನನ್ನ ಉಸಿರಾಗಿತ್ತು. ಹಾಗಾಗಿ ಸ್ಥಾನಮಾನಕ್ಕೆ ಆಸೆಪಡದೆ ಪಕ್ಷಕ್ಕಾಗಿ ದುಡಿದೆ. ಮಂಗಳೂರಿಗೆ ಬಂದು ನೆಲೆ ನಿಂತ ಬಳಿಕ ನನ್ನ ಬಳಿ ಅನೇಕ ಯುವ ವಕೀಲರು ಬಂದು ಪ್ರಾಕ್ಟೀಸ್ ಮಾಡುತ್ತಿದ್ದರು. ಆ ಪೈಕಿ ಈಗಿನ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕೂಡಾ ಇದ್ದರು. ಅವರು ವೃತ್ತಿಯಲ್ಲಿ ಸಕ್ರಿಯರಾಗುವ ಬದಲು ರಾಜಕೀಯದಲ್ಲಿ ಸಕ್ರಿಯರಾದರು. ನನ್ನ ಶಿಷ್ಯನೊಬ್ಬ ಈ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಜನಸೇವೆ ಮಾಡುತ್ತಿರುವುದು ನನಗೆ ಹೆಮ್ಮೆಯ ವಿಚಾರವೇ ಆಗಿದೆ. ಅಂದಹಾಗೆ, ನನಗೆ ತಿಳಿದಂತೆ ಹಿಂದೆ ಸ್ವಾತಂತ್ರೋತ್ಸವ ಆಚರಣೆ ಅರ್ಥಪೂರ್ಣವಾಗಿತ್ತು. ಅಂದು ನೀಡಲಾಗುತ್ತಿದ್ದ ಸಂದೇಶಕ್ಕೊಂದು ಮಹತ್ವವಿತ್ತು. ಅದನ್ನು ಪಾಲಿಸುವ ಧಾವಂತವಿತ್ತು. ಈಗ ಎಲ್ಲವೂ ಕೃತಕ. ಯಾರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ನಾವು ಏನು ಹೇಳುತ್ತೇವೆ ಎಂಬುದೂ ಸಂದೇಶ ನೀಡುವವರಿಗೆ ಮುಖ್ಯವಲ್ಲ. ಒಟ್ಟಿನಲ್ಲಿ ಒಂದು ಆಚರಣೆಯಷ್ಟೇ. ನಮ್ಮ ಯುವ ಜನಾಂಗಕ್ಕೆ ಸ್ವಾತಂತ್ರ, ಆಚರಣೆ, ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರ ಬಗ್ಗೆ ಶಿಸ್ತುಬದ್ಧವಾಗಿ ತಿಳಿಸಿಕೊಡುವ ಪ್ರಯತ್ನ ಆಗಬೇಕು. ಇಲ್ಲದಿದ್ದರೆ ಎಲ್ಲವೂ ಅಪರಿಚಿತವಾದೀತು.

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News