ನೈಜ ಅರ್ಥ ಕಳೆದುಕೊಳ್ಳುತ್ತಿರುವ ಸ್ವಾತಂತ್ರ್ಯ
ಮಂಗಳೂರು: ದಿನದಿಂದ ದಿನಕ್ಕೆ ನೀರು, ಭಾಷೆ, ಪ್ರಾಂತದ ಗಡಿ, ಆಂತರಿಕ ಸಮಸ್ಯೆಗಳು ಹೀಗೆ ಒಂದಿಲ್ಲೊಂದು ಕಾರಣದಿಂದ ನಾವು ಒಳಜಗಳ ಹಾಗೂ ರಕ್ತಪಾತ ಮಾಡುತ್ತಲೇ ಇದ್ದೇವೆ, ಇದು ಹೀಗೆಯೇ ಮುಂದುವರಿಯುತ್ತಲೇ ಇದೆ. ಸ್ವಾತಂತ್ರ್ಯವೆಂದರೆ ಇದೇನಾ? ಹೀಗೆಂದು ಪ್ರಶ್ನಿಸುತ್ತಾರೆ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ ಆಚಾರ್.
ಮೂಲತಃ ಬಂಟ್ವಾಳ ತಾಲೂಕಿನವರಾಗಿರುವ ಇವರನ್ನು ವಾರ್ತಾಭಾರತಿ ಮಾತನಾಡಿಸಿದಾಗ ಅವರು ಭಾವೋದ್ವೇಗದಿಂದ ಮೇಲಿನಂತೆ ಉದ್ಗರಿಸಿದ್ದು. ದೇಶದೊಳಗಿನ ಎಲ್ಲ ಬಗೆಯ ತಲ್ಲಣಗಳನ್ನು ಕಂಡು ಸ್ವಯಂ ಮರುಗುತ್ತಿರುವ ಇವರ ಮನದಾಳದಲ್ಲಿ ಸ್ವಾತಂತ್ರ್ಯ ಹೋರಾಟದ ನಿಜವಾದ ಹಲವು ಆಶಯಗಳು ಸಾಕಾರಗೊಳ್ಳದಿರುವ ಬಗೆಗಿನ ವಿಷಾದವೂ ಎದ್ದುಕಾಣುತ್ತಿತ್ತು.
ಪರಿವರ್ತನೆಯನ್ನು ಕಂಡುಕೊಳ್ಳುವ ಅಗತ್ಯವಿದೆ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ 10 ವರ್ಷದೊಳಗೆ ದೇಶದ ಎಲ್ಲ ಆಂತರಿಕ ಸಮಸ್ಯೆಗಳು ಪರಿಹಾರಗೊಳ್ಳಬೇಕು ಎಂದು ನೆಹರೂ ಕನಸು ಕಂಡಿದ್ದರು. ಆದರೆ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದರೂ ಇದಕ್ಕೆ ಮುಕ್ತಿ ಸಿಕ್ಕಿಲ್ಲ. ನಮ್ಮ ದೇಶದಲ್ಲಿ ಈಗಲೇ ಯಂತ್ರ್ಯಯುಗವನ್ನು ಕಾಣುವುದು ಬೇಡವೆಂದು, ಎಲ್ಲರೂ ಬಡತನ ರೇಖೆಯಿಂದ ಮೇಲೆ ಬರಲಿ ಎಂದು ಗಾಂಧೀಜಿ ಹೇಳಿದ್ದರು. ಆದರೆ ಈಗ ಕೈಗಾರಿಕೆಗಳ ಹೆಸರಿನಲ್ಲಿ ಪರಿಸರವನ್ನು ನಾಶ ಪಡಿಸುತ್ತಿದ್ದೇವೆ. ಪ್ರತಿನಿತ್ಯವೂ ಒಂದಿಲ್ಲೊಂದು ಕಾರಣದಿಂದ ಹೊಡೆದಾಡಿಕೊಂಡು ರಕ್ತಪಾತಕ್ಕೆ ಕಾರಣವಾಗುತ್ತಿರುವ ನಾವು, ನಮ್ಮಿಳಗೆ ಪರಿವರ್ತನೆಯನ್ನು ಕಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಹಿಂದೂ- ಮುಸ್ಲಿಮರು ಒಂದಾಗಿ ಬಾಳುವ ಸಾಧ್ಯತೆ ಕಡಿಮೆಯಿತು್ತ: ಭಾರತ- ಪಾಕ್ ವಿಭಜನೆಯಲ್ಲಿ ಗಾಂಧೀಜಿಯ ನಿಲುವಿನ ಬಗ್ಗೆ ಕೇಳಿದಾಗ, ಆ ಸನ್ನಿವೇಶದಲ್ಲಿ ಹಿಂದೂ- ಮುಸ್ಲಿಮರು ಒಂದಾಗಿ ಬಾಳುವ ಸಾಧ್ಯತೆ ಕಡಿಮೆ ಇತ್ತು. ಎಲ್ಲೆಲ್ಲೂ ಮತೀಯ ಗಲಭೆಗಳು ಹುಟ್ಟಿ ಉಂಟಾಗುವ ರಕ್ತಪಾತ ಈ ನಿರ್ಧಾರ ಸಮರ್ಥನೀಯ ಎಂದು ಉತ್ತರ ನೀಡಿದರು.
ಸಂವಿಧಾನವನ್ನು ಅರ್ಥೈಸಿಕೊಳ್ಳದವರಿಂದ ಈ ಪರಿಸ್ಥಿತಿ: ಸರಕಾರದಿಂದ ಯಾರ ಹಿತ ಕಾಯುವಂತಹ ಕೆಲಸಗಳೂ ನಡೆಯುತ್ತಿಲ್ಲ. ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಮೆರೆದಾಡುತ್ತಿರುವ ಮಂದಿಯಿಂದ ಈ ರೀತಿಯ ಪರಿಸ್ಥಿತಿ ಉಂಟಾಗಿದೆ ಎಂದ ಅವರು, ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದ ನೆಹರೂ, ಇಂದಿರಾಗಾಂಧಿ, ಹನುಮಂತಯ್ಯನಂತಹ ಮನಸ್ಥಿತಿಯವರು ಈಗ ಎಲ್ಲಿದ್ದಾರೆ, ಯಾರಿದ್ದಾರೆ? ಎಂದು ನಮ್ಮನ್ನೇ ಪ್ರಶ್ನಿಸಿದರು.
ಗುಂಪಿನೊಳಗೆ ಸೇರಿಕೊಂಡು ಗದ್ದಲ: ತಾನು ವಿದ್ಯಾರ್ಥಿ ದೆಸೆಯಿಂದಲೇ ಬಾವುಟ ಹಿಡಿಯುವುದು, ಜೈಕಾರ ಕೂಗುವುದು, ಕರಪತ್ರ್ಯ ಹಂಚುವುದು ಮೊದಲಾದ ಹುಡುಗಾಟಗಳಿಗೆ ಬಲಿಬಿದ್ದು ಸ್ವಾತಂತ್ರ್ಯ ಹೋರಾಟದ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದೇನೆಯೇ ವಿನಃ 1942ರ ಸಂದರ್ಭದಲ್ಲಿ ನನಗೆ ಸ್ವಾತಂತ್ರ್ಯದ ಯಾವ ಕಲ್ಪನೆಯೂ ಇರಲಿಲ್ಲ. ಗುಂಪಿನೊಳಗೆ ಸೇರಿಕೊಂಡು ಗದ್ದಲವೆಬ್ಬಿಸುವುದು ನಮಗೊಂದು ಸಂತಸದ ವಿಚಾರವಾಗಿತ್ತು. ದಿನಗಳು ಕಳೆದಂತೆ ನನ್ನಲ್ಲಿ ದೇಶಪ್ರೇಮ ಗಟ್ಟಿಗೊಳ್ಳುತ್ತಾ ಬಂತು.
1947ರಲ್ಲಿ ದೇಶ ರಾಜಮನೆತನದ ದರ್ಬಾರಿನಿಂದ ಬಿಡುಗಡೆಯಾಗದೇ ಇದ್ದಾಗ ನಡೆದ ಚಳವಳಿಯಲ್ಲಿ ಇವರು 2 ತಿಂಗಳು ಜೈಲುಶಿಕ್ಷೆ ಅನುಭವಿಸಿದ್ದಾರೆ. ಸ್ವಾತಂತ್ರ್ಯದ ಬಳಿಕ ಶಿವಮೊಗ್ಗದ ಹಿಂದಿ ಪ್ರಚಾರ ಸಭಾದಲ್ಲಿ 25 ವರ್ಷಗಳ ಕಾಲ ಹಿಂದಿ ಮೇಸ್ಟ್ರಾಗಿ ಸಾವಿರಾರು ಮಂದಿಗೆ ಹಿಂದಿ ಕಲಿಸಿದ ಹೆಮ್ಮೆ ತನಗಿದೆ ಎನ್ನುವ ಇವರಲ್ಲಿ ತಾನೇನು ಮಾಡಿದ್ದರೂ ಅದು ದೇಶಕ್ಕಾಗಿ ಎನ್ನುವ ಭಾವನೆ ಇದೆ.
ಬಿ.ಸಿ.ರೋಡಿನ ಈಗಿನ ಭಂಡಾರಿಬೆಟ್ಟು ಬಳಿಯಲ್ಲಿ ಇವರು ಹೊಂದಿದ ಮನೆ ನೆರೆಯಲ್ಲಿ ಮುಳುಗಡೆಯಾದಾಗ ಬ್ರಿಟಿಷರು ಅವರ ತಂದೆ ಧೂಮಪ್ಪ ಆಚಾರ್ಯರಿಗೆ 90 ಸೆಂಟ್ಸ್ ಜಮೀನು ನೀಡಿದ್ದರು. ಬಳಿಕದ ದಿನಗಳಲ್ಲಿ ಸಾಲ ಮರುಪಾವತಿಗೆ ಸಂಬಂಧಿಸಿ ಆ ಜಮೀನು ನಮ್ಮ ಕೈ ತಪ್ಪಿದ್ದು, ಇದೀಗ ಆ ಸ್ಥಳದಲ್ಲಿ ಎಲ್‌ಐಸಿಯ ಕಟ್ಟಡ ಎದ್ದು ನಿಂತಿರುವುದು ಮನಸ್ಸಿಗೆ ಸಂತೃಪ್ತಿ ತಂದಿದೆ ಎಂದರು. ಪತ್ನಿ ರಾಜೀವಿ ಹಾಗೂ 5 ಹೆಣ್ಣು ಮಕ್ಕಳು ಮತ್ತು 1 ಗಂಡು ಮಗನಿರುವ ಸುಂದರ ಸಂಸಾರ ಇವರದು. ಪ್ರಸ್ತುತ ಇವರು ತನ್ನ ಹಿರಿಮಗಳಾದ ಸತ್ಯದೇವಿ ಹಾಗೂ ಅಳಿಯ ಸುರೇಶ್ ಆಚಾರ್ಯರ ಕಲ್ಲಡ್ಕದ ಮನೆಯಲ್ಲಿ ವಾಸ್ತವ್ಯವಿದ್ದಾರೆ.
ಬ್ರಿಟಿಷ್ ತುಕಡಿಯ ಮೇಲೆ ನಾಡಬಾಂಬ್ ಎಸೆದಿದ್ದೆ
ಅದೊಂದು ದಿನ ಕೆಲವರೊಂದಿಗೆ ಸೇರಿಕೊಂಡು ಬಂಟ್ವಾಳದ ಕಂಚುಗಾರ ಪೇಟೆಯಲ್ಲಿ ನಿಂತಿದ್ದ ಬ್ರಿಟಿಷ್ ತುಕಡಿಯ ಮೇಲೆ ನಾಡ ಬಾಂಬ್ ಎಸೆದಿದ್ದೆ. ಅಲ್ಲದೆ, ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ಸೇತುವೆ ಬಳಿ ಗರ್ನಲ್ ಸಿಡಿಸಿ ಭಾರೀ ಶಬ್ದ ಬರಿಸಿದ್ದೆ. ಅಲ್ಲದೆ ದೂರವಾಣಿ ಕಂಬವೊಂದನ್ನು ದೂಡಿಹಾಕಿ ಕೀಟಲೆ ನಡೆಸಿದ್ದು, ಪೊಲೀಸರಿಗೆ ಹೆದರಿ ತನ್ನ ಶಿವಮೊಗ್ಗದ ಅಣ್ಣ ಪುಟ್ಟಣ್ಣ ಆಚಾರ್‌ರ ಮನೆಗೆ ಹೋದೆ ಎಂದು ತನ್ನ ಹುಡುಗಾಟ ದಿನಗಳನ್ನು ಸ್ಮರಿಸಿಕೊಂಡ ಅವರು, ಅಲ್ಲಿ ಹೋದ ಬಳಿಕ ಹುಡುಗಾಟ ಬಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಬಗೆಯನ್ನು ಹೇಳಿದರು.
ಪಂಚ ಭಾಷೆ ಬಲ್ಲರು
ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್‌ರಿಗೆ ಈಗ 93 ವರ್ಷ. ತಮ್ಮ ಜೀವಿತದ ಬಹು ವರ್ಷಗಳನ್ನು ಶಿವಮೊಗ್ಗದಲ್ಲಿ ಕಳೆದಿದ್ದರೂ, ಮೂಲತಃ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನವರು. ಕಲಿತದ್ದು 7ನೇ ತರಗತಿವರೆಗೆ. ಆದರೆ ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್, ತೆಲುಗು ಹೀಗೆ ಪಂಚಭಾಷೆ ಬಲ್ಲವರು. ಕಾಂಗ್ರೆಸ್ ಸೇವಾದಳದಲ್ಲಿ ಸಕ್ರಿಯರಾಗಿದ್ದ ಇವರು, ಯುವಕರನ್ನು ಸಂಘಟಿಸುವ ಜವಾಬ್ದಾರಿಯನ್ನು ನಿಭಾಯಿಸಿದವರು. ದಿನವಿಡೀ ಸ್ವಾತಂತ್ರ್ಯ ಹೋರಾಟ ಸಂಬಂಧೀ ಕೆಲಸದಲ್ಲಿ ತೊಡಗಿಸಿಕೊಂಡು, ರಾತ್ರಿ ವೇಳೆಯಲ್ಲಿ ತಮ್ಮ ಸಹೋದರನ ಜೊತೆ ಚಿನ್ನದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.