ರಿಷಬ್ ಶೆಟ್ಟಿಯ ಕಳೆದು ಹೋದ ಬಾಲ್ಯದ ಕನಸು

Update: 2018-09-01 18:32 GMT

ಯೋಗರಾಜ ಭಟ್, ದುನಿಯಾ ಸೂರಿಯಂತಹ ನಿರ್ದೇಶಕರ ಅದೇ ರಾಗ, ಅದೇ ಹಾಡು ಕೇಳಿ ಬೋರು ಹೊಡೆದಿದ್ದ ಕನ್ನಡ ಚಿತ್ರ ಪ್ರೇಕ್ಷಕರು ಮೈ ಕೊಡವಿ ಚಿತ್ರ ಮಂದಿರದ ಕಡೆಗೆ ಧಾವಿಸುವಂತೆ ಮಾಡುತ್ತಿರುವ ಹೊಸ ನಿರ್ದೇಶಕರಲ್ಲಿ ಪ್ರಮುಖರು ರಿಷಬ್ ಶೆಟ್ಟಿ. ರಿಕ್ಕಿ ಚಿತ್ರದ ಮೂಲಕ ಅಪಾರ ನಿರೀಕ್ಷೆ ಹುಟ್ಟಿಸಿದ ಈ ನಿರ್ದೇಶಕ, ಕಿರಿಕ್ ಪಾರ್ಟಿಯ ಮೂಲಕ ಕಾಲೇಜು ಬದುಕನ್ನು ಮತ್ತೊಮ್ಮೆ ಧ್ಯಾನಿಸುವಂತೆ ಮಾಡಿದವರು. ಇದಾದ ಬಳಿಕ ಅವರು ಕಾಲೇಜಿನಿಂದ ಒಮ್ಮೆಲೆ ಪ್ರಾಥಮಿಕ ಶಾಲೆಗೆ ಹಿಂಭಡ್ತಿ ಪಡೆದಾಗ ಪ್ರೇಕ್ಷಕರು ಹುಬ್ಬೇರಿಸಿದ್ದು ನಿಜ. ಇಷ್ಟಕ್ಕೂ ಒಂದು ಚಿತ್ರಕ್ಕೆ ‘ಸರಕಾರಿ ಹಿ. ಪ್ರಾ. ಶಾಲೆ ಕಾಸರಗೋಡು’ ಎಂದು ಹೆಸರಿಟ್ಟು ಅದನ್ನು ಕಮರ್ಶಿಯಲ್ ಆಗಿ ಓಡಿಸಬಹುದು ಎನ್ನುವ ಆತ್ಮವಿಶ್ವಾಸವೇ, ರಿಷಬ್ ಶೆಟ್ಟಿಯ ಸಾಹಸ ಮನೋಭಾವವನ್ನು ತೆರೆದಿಡುತ್ತದೆ.

‘ಸರಕಾರಿ ಹಿ. ಪ್ರಾ. ಶಾಲೆ ಕಾಸರಗೋಡು’ ಹೆಸರು ಕೇಳಿದಾಕ್ಷಣ ಇದೊಂದು ಸಾಕ್ಷ ಚಿತ್ರವಿರಬಹುದೆ ಎನ್ನುವ ಅನುಮಾನ ನಮ್ಮನ್ನು ಕಾಡುತ್ತದೆ. ಸರಕಾರಿ ಶಾಲೆಗಳ ಮುಚ್ಚುಗಡೆಯ ಕುರಿತಂತೆ ಈಗಾಗಲೇ ಮಾಧ್ಯಮಗಳಲ್ಲಿ ಓದಿ ಸುಸ್ತಾಗಿರುವ ಜನರಿಗೆ ಈ ಹೆಸರು ಆಕರ್ಷಿಸುವುದು ಕಷ್ಟ. ‘ಸರಕಾರಿ ಶಾಲೆಗಳ ಸಮಸ್ಯೆಗಳನ್ನು ತೆರೆದಿಡುವ ಚಿತ್ರ ಇದಾಗಿರಬಹುದು’ ಎಂದು ಮೊದಲೇ ಊಹಿಸಿ, ಚಿತ್ರಕ್ಕೆ ಬೆನ್ನು ತಿರುಗಿಸುವ ಸಾಧ್ಯತೆಗಳು ಹೆಚ್ಚು. ಆದರೆ ಈ ಎಲ್ಲ ಪೂರ್ವಗ್ರಹಗಳನ್ನು ಬದಿಗಿಟ್ಟು, ಈ ಸರಕಾರಿ ಶಾಲೆಯ ಬಾಗಿಲನ್ನು ತಟ್ಟಿದವರಿಗೆ ತೆರೆದುಕೊಳ್ಳುವುದು ಅವರು ಮರೆತೇ ಬಿಟ್ಟಿದ್ದ ಅವರ ಬಾಲ್ಯ. ನಾವು ಯಾವ ಬಾಲ್ಯದ ಖುಷಿಗಳನ್ನು ದಾಟಿ ಬಂದಿದ್ದೇವೆಯೋ, ಯಾವ ಬಾಲ್ಯವನ್ನು ನಾವು ನಮ್ಮ ತಲೆಮಾರಿನ ಮಕ್ಕಳಿಗೆ ಮುಚ್ಚಿಟ್ಟಿದ್ದೇವೆಯೋ, ಆ ಬಾಲ್ಯದ ಮಧುರ ನೆನಪುಗಳು ನಮ್ಮನ್ನು ಸ್ವಾಗತಿಸುತ್ತವೆ.

ನಮ್ಮ ಮಕ್ಕಳ ಪರೀಕ್ಷೆ, ಹೋಮ್‌ವರ್ಕ್, ಡಿಸ್ಟಿಂಕ್ಷನ್, ಡೊನೇಶನ್‌ಗಳ ಭಾರದಲ್ಲಿ ಹೂತು ಹೋಗಿದ್ದ ನಮ್ಮ ಬಾಲ್ಯದ ಬದುಕು ಚಿತ್ರಮಂದಿರದಲ್ಲಿ ಪಾತ್ರಗಳ ಜೊತೆ ಜೊತೆಗೇ ಕಣ್ಣು ತೆರೆಯುತ್ತವೆ. ಪ್ರಾಥಮಿಕ ಶಾಲೆಯ ಮೂಲಕ ರಿಷಬ್ ಶೆಟ್ಟಿ, ಬರೇ ಕನ್ನಡ ಭಾಷೆಯ ಅಳಿವಿನ ಕುರಿತಂತೆ ಕಾಳಜಿಯಿಂದ ಮಾಡಿರುವ ಚಿತ್ರವಲ್ಲ. ಇದು ಹೊಸ ತಲೆಮಾರಿನ ಮಕ್ಕಳು ಕಾನ್ವೆಂಟ್, ಇಂಗ್ಲಿಷ್ ಮೀಡಿಯಂ ಮೂಲಕ ಕಳೆದುಕೊಳ್ಳುತ್ತಿರುವ ಬಾಲ್ಯದ ಸಣ್ಣ ಸಣ್ಣ ಖುಷಿಗಳನ್ನು ಎತ್ತಿ ತೋರಿಸುವ ಚಿತ್ರ. ಸರಕಾರಿ ಶಾಲೆಗಳೆಂದರೆ ಬರೇ ನಾಲ್ಕು ಗೋಡೆಗಳ ನಡುವಿನ ಕಲಿಕೆಯಲ್ಲ. ಅದು ಒಂದು ಊರಿನ ನಡುವೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತದೆ. ಆ ಊರಿನ ಹಸಿರು, ಬಯಲು, ಕಾಡು, ಗುಡ್ಡ, ಕಡಲು ಎಲ್ಲವೂ ಆ ಶಾಲೆಯ ಭಾಗವೇ ಆಗಿದೆ. ಅವೆಲ್ಲವನ್ನು ದಾಟಿಕೊಂಡು ಆ ಶಾಲೆಯನ್ನು ಮಕ್ಕಳು ಪ್ರವೇಶಿಸಬೇಕಾಗುತ್ತದೆ. ಅಲ್ಲಿ ಅವರು ಕಲಿಯುವುದು ಬರೇ ಪಾಠವನ್ನಷ್ಟೇ ಅಲ್ಲ. ಸ್ನೇಹದ ನವಿರು ಸಂಬಂಧಗಳು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಾತ್ರ ಗಟ್ಟಿಯಾಗಿ ಬೆಸೆಯಬಲ್ಲದು. ಒಂದು ಊರಿನ ವೈವಿಧ್ಯಮಯ ಸಂಸ್ಕೃತಿಗಳು ಸಮಾಗಮವಾಗುವುದು ಮತ್ತು ಅದು ಪರಸ್ಪರ ಬೆಸೆದುಕೊಳ್ಳುವುದು ಈ ಶಾಲೆಗಳ ಮೂಲಕವೇ ಆಗಿದೆ.

ಸರಕಾರಿ ಶಾಲೆಗಳಲ್ಲಿ ಬೆಳೆದ ಹುಡುಗ ಪ್ರಕೃತಿಯ ಜೊತೆಗೆ ಗಾಢ ಸಂಬಂಧವನ್ನು ಉಳಿಸಿಕೊಳ್ಳಬಲ್ಲ. ಇಂಗ್ಲಿಷ್ ಮೀಡಿಯಂನಲ್ಲಿ ಕಲಿತ ಮಕ್ಕಳು, ಕುಂಡದಲ್ಲಿ ಬೆಳೆಸಿದ ಬೆಲೆಬಾಳುವ ಗಿಡದಂತೆ. ಅದು ಸಣ್ಣ ಏರು ಪೇರಿಗೂ ನಲುಗಬಲ್ಲುದು. ಆದುದರಿಂದಲೇ, ರಿಷಬ್ ಶೆಟ್ಟಿ, ಈ ಚಿತ್ರ ನನ್ನ ಬದುಕಿನ ಕನಸು ಎಂದು ಕರೆಯುತ್ತಾರೆ. ಸರಕಾರಿ ಶಾಲೆಗಳ ಮುಚ್ಚುಗಡೆಯ ಜೊತೆ ಜೊತೆಗೆ, ನಾಶವಾಗುತ್ತಿರುವ ನಮ್ಮ ಬಾಲ್ಯದ ಸಹಜ ಖುಷಿ ಸಂತೋಷಗಳನ್ನು ಅವರು ಬೆಟ್ಟು ಮಾಡಿ ತೋರಿಸುತ್ತಾರೆ.

ಈ ಚಿತ್ರದಲ್ಲಿ ಬರುವ ಪ್ರವೀಣ, ಮಮ್ಮುಟ್ಟಿ ಮೊದಲಾದ ಮಕ್ಕಳ ಖುಷಿ, ಸಂಭ್ರಮ, ತುಂಟತನ, ಸಿಟ್ಟು, ಸೆಡಕು ದುಃಖಗಳು ಒಂದು ಕಾಲದಲ್ಲಿ ನಮ್ಮೆಲ್ಲರದೂ ಆಗಿದ್ದವು. ಹಾಗೆಯೇ ಇಲ್ಲಿ ನಮ್ಮನ್ನು ನಕ್ಕು ನಗಿಸುವ ಹಿರಿಯ ಪಾತ್ರಗಳು ನಾವೆಲ್ಲ ಕಂಡದ್ದೇ ಆಗಿವೆ. ಕಾಸರಗೋಡು ಪರಿಸರ ಬದುಕನ್ನು ಕಟ್ಟಿಕೊಡುವ ಛಾಯಾಗ್ರಹಣ ಚಿತ್ರದ ಇನ್ನೊಂದು ಹೆಗ್ಗಳಿಕೆಯಾಗಿದೆ. ಮಕ್ಕಳ ಬದುಕಿನ ಸಣ್ಣ ಸಣ್ಣ ಸಂಗತಿಗಳನ್ನೂ ಛಾಯಾಚಿತ್ರಗ್ರಾಹಕ ಹುಡುಕಿ ಆರಿಸಿಕೊಟ್ಟಿದ್ದಾರೆ. ಚಿತ್ರದ ಕೊನೆಯಲ್ಲಿ, ಮುಚ್ಚುವ ಶಾಲೆ ಕೊನೆಗೂ ಉಳಿಯುತ್ತದೆ. ಆದರೆ ಇಂದು ಸಾವಿರಾರು ಶಾಲೆಗಳು ಸ್ವತಃ ಕರ್ನಾಟಕದೊಳಗೇ ಮುಚ್ಚಿವೆ. ಆ ಮೂಲಕ, ಅದೆಷ್ಟೋ ಬಾಲ್ಯದ ನವಿರು ಸಂಗತಿಗಳು ಅದರೊಂದಿಗೆ ಕಣ್ಮುಚ್ಚಿವೆ. ಇಂತಹ ಗಂಭೀರ ವಿಷಯವೊಂದನ್ನು ಅತ್ಯಂತ ಹೃದಯ ಭಾಷೆಯಲ್ಲಿ, ಲವಲವಿಕೆಯ ನಿರೂಪಣೆಯ ಜೊತೆಗೆ ನಮ್ಮ ಮುಂದಿಡುವಲ್ಲಿ ರಿಷಬ್ ಯಶಸ್ವಿಯಾಗಿದ್ದಾರೆ. ಈ ಚಿತ್ರ, ನಿರ್ದೇಶಕ ರಿಷಬ್ ಶೆಟ್ಟಿಯವರ ಕನಸು ಮಾತ್ರವಲ್ಲ ನಮ್ಮೆಲ್ಲರ ಕನಸಾಗಿದೆ.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News