ಸಾಬೀತಾದ ನೋಟು ನಿಷೇಧದ ಅನಾಹುತಗಳು
ಶ್ರೀಮಂತ ಕುಟುಂಬಗಳು ತಮ್ಮ ಶೇ.90ರಷ್ಟು ಸಂಪತ್ತನ್ನು ಆಸ್ತಿಪಾಸ್ತಿಗಳ ಭೌತಿಕ ಸ್ವರೂಪದಲ್ಲಿ ಶೇಖರಿಸಿಟ್ಟಿರುತ್ತಾರೆಯೇ ವಿನಃ ನಗದಿನ ರೂಪದಲ್ಲಲ್ಲ ಎಂಬುದನ್ನು ಆರ್‌ಬಿಐನ ಕಡತದಲ್ಲಿರುವ ಹಲವಾರು ವಿಶ್ಲೇಷಣಾತ್ಮಕ ದಾಖಲೆಗಳು ಸಾರಿ ಸಾರಿ ಹೇಳುತ್ತವೆ. ಈ ಕಾರಣದಿಂದಲೇ ಸಾಮಾನ್ಯವಾಗಿ ಅಧಿಕ ಮೌಲ್ಯದ ನೋಟುನಿಷೇಧದ ಬಗ್ಗೆ ಸರಕಾರವು ಒತ್ತಡ ಹಾಕಿದಾಗಲೆಲ್ಲಾ ಆರ್‌ಬಿಐ ವಿರೋಧಿಸುತ್ತಾ ಬಂದಿತ್ತು. ಆದರೆ ಈಗ ಅದರ ನಿರ್ಧಾರಗಳು ಅಧಿಕಾರಾರೂಢ ಸರಕಾರದ ಧೋರಣೆಗಳನ್ನು ಅವಲಂಬಿಸಿವೆ ಮತ್ತದು ಯಾವುದೇ ಆಳವಾದ ಬೌದ್ಧಿಕ ತಿಳಿವಿಲ್ಲದ ತರ್ಕಗಳ ಮೇಲೆ ನಿಂತಿದೆ.
ನೋಟು ನಿಷೇಧ (ಡಿಮಾನಿಟೈಸೇಶನ್) ಕ್ರಮದ ಭಾಗವಾಗಿ ನಿಷೇಧವಾಗಿದ್ದ ಅಧಿಕ ಮೌಲ್ಯದ ನೋಟುಗಳಲ್ಲಿ ಶೇ.99.3ರಷ್ಟು ನೋಟುಗಳು ಬ್ಯಾಂಕ್ ವ್ಯವಸ್ಥೆಗೆ ಹಿಂದಿರುಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕು (ಆರ್‌ಬಿಐ) ತನ್ನ 2017-18ರ ವಾರ್ಷಿಕ ವರದಿಯಲ್ಲಿ ಘೋಷಿಸಿದೆ. ಅದರೊಂದಿಗೆ ಕಪ್ಪುಹಣವನ್ನು ತಡೆಗಟ್ಟುವುದರಲ್ಲಿ ನೋಟು ನಿಷೇಧದ ಕ್ರಮ ಯಶಸ್ವಿಯಾಗಿದೆ ಎಂದು ಕೊಚ್ಚಿಕೊಳ್ಳುತ್ತಿದ್ದ ಹಾಲಿ ಕೇಂದ್ರ ಸರಕಾರದ ಪ್ರಚಾರಗಳಿಗೆ ದೊಡ್ಡ ತಡೆಯುಂಟಾಗಿದೆ. ಬ್ಯಾಂಕುಗಳಿಗೆ ಮರಳಿದ ನಿಷೇಧಿತ ನೋಟುಗಳ ಬಗ್ಗೆ ಆರ್‌ಬಿಐ ವರದಿ ಕೊಡುತ್ತಿರುವುದು ಇದೇ ಮೊದಲಲ್ಲ. 2016ರ ಡಿಸೆಂಬರ್‌ನಲ್ಲಿ ಒಟ್ಟಾರೆ ನಿಷೇಧಿತ 15.42 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳಲ್ಲಿ 12.44 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಆ ವೇಳೆಗಾಗಲೇ ವಾಪಸ್ ಬಂದಿರುವುದಾಗಿ ಆರ್‌ಬಿಐ ಘೋಷಿಸಿತ್ತು. ಆದರೆ ಅದು ಉತ್ಪ್ರೇಕ್ಷಿತ ವರದಿ ಯೆಂದು ಸರಕಾರ ನಿರಾಕರಿಸಿತ್ತು. ಅದಕ್ಕೆ ಕಾರಣ ಸರಕಾರವು ನೋಟು ನಿಷೇಧದಿಂದಾಗಿ 3-4 ಲಕ್ಷ ಕೋಟಿ ರೂ.ಗಳಷ್ಟು ಕಪ್ಪುಹಣ ಬ್ಯಾಂಕುಗಳಿಗೆ ಮರಳುವುದಿಲ್ಲವೆಂದು ನಿರೀಕ್ಷಿಸಿತ್ತು. ಸರಕಾರದ ನಿರೀಕ್ಷೆಗೆ ಆರ್‌ಬಿಐ ನೀಡಿದ ವಾಸ್ತವಿಕ ವರದಿ ವ್ಯತಿರಿಕ್ತವಾಗಿದ್ದರಿಂದ ಸರಕಾರ ಅದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅದೇ ಸಮಯದಲ್ಲಿ ತನ್ನ ವ್ಯವಸ್ಥೆಯ ದಕ್ಷತೆ ಮತ್ತು ಸಾಮರ್ಥ್ಯಗಳ ಬಗ್ಗೆ ಆರ್‌ಬಿಐ ಸಹ ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.
ಒಂದು ವರ್ಷದ ಕೆಳಗಿನ ತನ್ನ ವಾರ್ಷಿಕ ವರದಿಯಲ್ಲಿ ಅದು 2017ರ ಜೂನ್ 30ರ ವೇಳೆಗೆ ‘‘15.28 ಲಕ್ಷ ಕೋಟಿ ರೂ.ಗಳಷ್ಟು ಮೌಲ್ಯದ ನೋಟುಗಳು ವಾಪಸ್ ಬಂದಿವೆ’’ಯೆಂದು ಹೇಳಿತ್ತು. ಇದೀಗ ಭರ್ತಿ ಎರಡು ವರ್ಷಗಳು ಕಳೆದ ನಂತರ ಸರಕಾರವನ್ನು ಮತ್ತು ಒಟ್ಟಾರೆಯಾಗಿ ಸಾರ್ವಜನಿಕರನ್ನು ಓಲೈಸುವ ಸಲುವಾಗಿ ನಿಷೇಧಿತ ನೋಟುಗಳ ತುಲನೆ ಮತ್ತು ಪರಿಷ್ಕರಣೆಗಳ ಅಗಾಧವಾದ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಆರ್‌ಬಿಐ ಘೋಷಿಸಿದೆ. ಹಾಗಿದ್ದಲ್ಲಿ, ನಿಷೇಧಿತ ನೋಟುಗಳ ಬಗೆಗಿನ ಆರ್‌ಬಿಐನ ಹಿಂದಿನ ಅಂದಾಜಿನಲ್ಲಿ ಎಷ್ಟು ಬದಲಾಗಿದೆ? 2017ರಲ್ಲಿ ಅದು 15.28 ಲಕ್ಷ ಕೋಟಿಗಳಿದ್ದದ್ದು ಈಗ 15.31 ಲಕ್ಷ ಕೋಟಿಗಳು ಎಂದಾಗಿದೆ. ಎಂದರೆ ಕೇವಲ 0.2ರಷ್ಟು ಮಾತ್ರ ಬದಲಾವಣೆ ಮತ್ತು ಎಷ್ಟು ನೋಟುಗಳು ವಾಪಸ್ ಬರಲಿಲ್ಲ? ಕೇವಲ 11,000 ಕೋಟಿ ರೂ. ಮೌಲ್ಯದ ನೋಟುಗಳು ಅಥವಾ ಒಟ್ಟಾರೆ ನಿಷೇಧಿತ ನೋಟುಗಳ ಶೇ.0.7ರಷ್ಟು ಮಾತ್ರ ಹಿಂದಿರುಗಲಿಲ್ಲ.
ಈ ಬೆಳವಣಿಗೆಯಿಂದ ಸರಕಾರ ತನಗಾಗಿರುವ ಮುಜುಗರವನ್ನು ಗೌಣಗೊಳಿಸುತ್ತಿದೆಯಾದರೂ ಅದರ ವಾದಗಳ ಮಗ್ಗುಲೇ ಮುರಿದಂತಾಗಿದೆ. ಈ ನಡುವೆ ಆರ್‌ಬಿಐ ಇನ್ನೂ ಹಲವಾರು ಕಾರಣಗಳಿಗಾಗಿ ಹೆಚ್ಚಿನ ಮುಜುಗರವನ್ನು ಅನುಭವಿಸಬೇಕಾಗಿದೆ. ಹಲವಾರು ಸಂಸ್ಥೆಗಳ ಪ್ರಬುದ್ಧ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ ಸರಕಾರವು ನೋಟುನಿಷೇಧ ಕ್ರಮವನ್ನು ಜಾರಿ ಮಾಡಿತು. ಒಂದು ವರ್ಷದ ಹಿಂದೆಯೇ ಇಂತಹ ಯಾವುದೇ ದುಸ್ಸಾಹಸಕ್ಕೆ ಕೈ ಹಾಕಬಾರದೆಂದು ತಾನು ಸರಕಾರಕ್ಕೆ ಸಲಹೆ ಮಾಡಿದ್ದಾಗಿ ಆರ್‌ಬಿಐನ ಮಾಜಿ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಬಹಿರಂಗವಾಗಿಯೇ ಹೇಳಿದ್ದಾರೆ. ಹಾಗೆಯೇ ಆರ್‌ಬಿಐನ ಬಹುಪಾಲು ಮಾಜಿ ಗವರ್ನರುಗಳು ನೋಟುನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಶ್ರೀಮಂತ ಕುಟುಂಬಗಳು ತಮ್ಮ ಶೇ.90ರಷ್ಟು ಸಂಪತ್ತನ್ನು ಆಸ್ತಿಪಾಸ್ತಿಗಳ ಭೌತಿಕ ಸ್ವರೂಪದಲ್ಲಿ ಶೇಖರಿಸಿಟ್ಟಿರುತ್ತಾರೆಯೇ ವಿನಃ ನಗದಿನ ರೂಪದಲ್ಲಲ್ಲ ಎಂಬುದನ್ನು ಆರ್‌ಬಿಐನ ಕಡತದಲ್ಲಿರುವ ಹಲವಾರು ವಿಶ್ಲೇಷಣಾತ್ಮಕ ದಾಖಲೆಗಳು ಸಾರಿ ಸಾರಿ ಹೇಳುತ್ತವೆ. ಈ ಕಾರಣದಿಂದಲೇ ಸಾಮಾನ್ಯವಾಗಿ ಅಧಿಕ ಮೌಲ್ಯದ ನೋಟುನಿಷೇಧದ ಬಗ್ಗೆ ಸರಕಾರವು ಒತ್ತಡ ಹಾಕಿದಾಗಲೆಲ್ಲಾ ಆರ್‌ಬಿಐ ವಿರೋಧಿಸುತ್ತಾ ಬಂದಿತ್ತು. ಆದರೆ ಈಗ ಅದರ ನಿರ್ಧಾರಗಳು ಅಧಿಕಾರಾರೂಢ ಸರಕಾರದ ಧೋರಣೆಗಳನ್ನು ಅವಲಂಬಿಸಿವೆ ಮತ್ತದು ಯಾವುದೇ ಆಳವಾದ ಬೌದ್ಧಿಕ ತಿಳಿವಿಲ್ಲದ ತರ್ಕಗಳ ಮೇಲೆ ನಿಂತಿದೆ.
ಈ ಹಿಂದೆಯೂ ಅಧಿಕ ಮೌಲ್ಯದ ನೋಟುಗಳನ್ನು ನಿಷೇಧ ಮಾಡಲಾಗಿತ್ತು. ಆದರೆ ಅವು ಚಲಾವಣೆಯಲ್ಲಿದ್ದ ನೋಟುಗಳ ಶೇ.0.6ರಷ್ಟು ನೋಟುಗಳಷ್ಟೇ ಆಗಿದ್ದವು. ಆದರೆ ಚಲಾವಣೆಯಲ್ಲಿದ್ದ ಶೇ.86ರಷ್ಟು ನೋಟುಗಳನ್ನು ನಿಷೇಧ ಮಾಡುವಾಗ ಅದು ಮನೆಮನೆಗಳಲ್ಲಿ ನಗದನ್ನು ಶೇಖರಿಸಿಡುವ ಪ್ರವೃತ್ತಿ ಮತ್ತು ಒಟ್ಟಾರೆ ದೇಶದ ಆರ್ಥಿಕ ಸಂರಚನೆಗಳ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದೆಂಬ ಬಗ್ಗೆ ಸಾಕಷ್ಟು ಬೌದ್ಧಿಕ ಕಸರತ್ತುಗಳು ನಡೆಯಬೇಕಿತ್ತು. ನೋಟು ನಿಷೇಧದ ತರುವಾಯ ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣ ಶೇ.20ರಷ್ಟು ಇಳಿಕೆಯಾಗಿಬಿಟ್ಟಿತು. ಇದರಿಂದಾಗಿ ನೋಟುಗಳು ಮತ್ತು ಜಿಡಿಪಿಗಳ ನಡುವಿನ ಅನುಪಾತ ಶೇ.12.2ರಿಂದ ಶೇ. 8.8ಕ್ಕೆ ಇಳಿಯಿತು. ಆಗ ಆರ್‌ಬಿಐ ಇದರ ಬಗ್ಗೆ ಹೆಮ್ಮೆಯಿಂದ ಹೇಳಿಕೆಯೊಂದನ್ನು ನೀಡಿ ‘‘ಈ ಅನುಪಾತವು ಹಲವಾರು ಅಭಿವೃದ್ಧಿ ಹೊಂದಿದ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ಮಾರುಕಟ್ಟೆ ಆರ್ಥಿಕತೆಗಳಿಗೆ ಸರಿಸಮನಾಗಿದೆ’’ ಎಂದು ಕೊಚ್ಚಿಕೊಂಡಿತ್ತು. ಆದರೆ ವಾಸ್ತವಿಕವಾಗಿ ನೋಡಿದರೆ ಭಾರತದ ಆರ್ಥಿಕತೆಯಲ್ಲಿ ಅಸಂಘಟಿತ ಉದ್ಯಮಗಳ ಮತ್ತು ಅನೌಪಚಾರಿಕ ಕೌಟುಂಬಿಕ ವಲಯವು ಪ್ರಧಾನವಾಗಿರುವುದರಿಂದ ಭಾರತದಲ್ಲಿ ನಗದಿನ ಮೇಲಿನ ಅವಲಂಬನೆಯ ಪ್ರವೃತ್ತಿಯು ಇತರ ಎಲ್ಲಾ ಅಭಿವೃದ್ಧಿ ಹೊಂದಿದ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆ ಆರ್ಥಿಕತೆಗಳಿಗಿಂತ ಸಾಕಷ್ಟು ಹೆಚ್ಚಾಗಿದೆಯೆಂದು ತಿಳಿದುಬರುತ್ತದೆ.
2013ರಲ್ಲಿ ನಡೆದ ಆರನೇ ಆರ್ಥಿಕ ಸೆನ್ಸಸ್‌ನ ಪ್ರಕಾರ ಅಸ್ತಿತ್ವದಲ್ಲಿರುವ 4.54 ಕೋಟಿ ಕೃಷಿಯೇತರ ಸಂಸ್ಥೆಗಳಲ್ಲಿ ಶೇ.92ರಷ್ಟು ಸಂಸ್ಥೆಗಳು ನೋಂದಾಯಿತವಾಗದ ಖಾಸಗಿ ಏಕಒಡೆತನದ ಅಥವಾ ಪಾಲುದಾರಿಕೆಯ ಸಂಸ್ಥೆಗಳಾಗಿವೆ ಅಥವಾ ಇತರ ಸಣ್ಣ ಖಾಸಗಿ ಘಟಕಗಳಾಗಿವೆ. ಅದೇ ರೀತಿ ಒಟ್ಟಾರೆ ಶ್ರಮಿಕರಲ್ಲಿ ಶೇ.92ರಷ್ಟು ಶ್ರಮಿಕರು ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತವನ್ನು ನಗದು ರಹಿತ ಸಮಾಜವನ್ನಾಗಿ ಮಾಡಬೇಕೆಂಬ ಒತ್ತಡದ ವಾತಾವರಣದಲ್ಲೂ, ಚಲಾವಣೆಯಲ್ಲಿರುವ ನಗದಿನ ಪ್ರಮಾಣ 2017-18ರಲ್ಲಿ ಶೇ.37ರಷ್ಟು ಹೆಚ್ಚಾಗಿದೆ. ಹಾಗೆಯೇ ನಗದು ಮತ್ತು ಜಿಡಿಪಿಯ ನಡುವಿನ ಅನುಪಾತ 2016-17ರಲ್ಲಿ ಶೇ.8.8ರಷ್ಟಿದ್ದದ್ದು 2017-18ರಲ್ಲಿ ಶೇ.10.9ಕ್ಕೇರಿದೆ. ಈ ಬಗೆಯ ಪ್ರವೃತ್ತಿ ಭಾರತದ ಆರ್ಥಿಕ ರಚನೆಯಲ್ಲೇ ಅಂತರ್ಗತವಾಗಿದೆ. ಈ ನಡುವೆ ಇಂತಹ ವಿದ್ಯಮಾನಗಳ ಬಗ್ಗೆ ತನ್ನ ವಿಶ್ಲೇಷಣೆಯನ್ನು ಬದಲಿಸಿಕೊಂಡಿರುವ ಆರ್‌ಬಿಐ ಪ್ರಕಾರ ಇದೊಂದು ಹೊಸ ಮತ್ತು ಸ್ವಾಗತಾರ್ಹ ವಿದ್ಯಮಾನವಾಗಿದೆ ಮತ್ತು ಭಾರತದ ಆರ್ಥಿಕತೆಯ ಚೇತರಿಕೆಯ ಸಂಕೇತವಾಗಿದೆ. ಅಲ್ಲದೆ ಪ್ರವರ್ಧಮಾನ ಆರ್ಥಿಕತೆಗಳಲ್ಲಿ ಭಾರತವು ಅತಿ ಹೆಚ್ಚು ನಗದು ಬಳಸುವ ಆರ್ಥಿಕತೆಯಾಗಿದೆಯೆಂದು ಇದೀಗ ಅದೇ ಆರ್‌ಬಿಐ ಕೊಚ್ಚಿಕೊಳ್ಳುತ್ತಿದೆ.
ಭಾರತದ ಆರ್ಥಿಕತೆಯ ಸಂರಚನೆಯನ್ನು ಮತ್ತು ನಗದು ಶೇಖರಣೆಯ ಬಗ್ಗೆ ಭಾರತದ ಕೌಟುಂಬಿಕ ಪ್ರವೃತ್ತಿಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ನೋಟುನಿಷೇಧದಂತಹ ಒಂದು ಮತಿಗೆಟ್ಟ ಕ್ರಮವು ಎಂಥಾ ಹಾನಿಯನ್ನುಂಟುಮಾಡಬಹುದೆಂಬ ಅಂದಾಜು ಸಿಗುತ್ತಿತ್ತು. ಕೆಲವು ಬುದ್ಧಿಜೀವಿಗಳು ಹಾಗೂ ಮಾಧ್ಯಮಗಳು ಹಾನಿಗೊಳಗಾದವರ ಜೀವನ ಕಥನಗಳನ್ನು ಆಧರಿಸಿ ನೋಟು ನಿಷೇಧದ ಕ್ರಮದಿಂದ ಉತ್ಪಾದಕತೆ, ಉದ್ಯೋಗ ಮತ್ತು ಆದಾಯಗಳಿಗಾಗಿರುವ ನಷ್ಟಗಳನ್ನು ದಾಖಲಿಸಿರುವುದನ್ನು ಬಿಟ್ಟರೆ ನೋಟು ನಿಷೇಧದಿಂದ ಆಗಿರುವ ಹಾನಿಯ ಬಗ್ಗೆ ಒಂದು ವ್ಯವಸ್ಥಿತ ಅಂದಾಜು ನಡೆದಿಲ್ಲ. ನಮ್ಮ ಅಂಕಿಅಂಶ ದಾಖಲಾತಿ ವ್ಯವಸ್ಥೆಯಲ್ಲಿ ದೇಶದ ಅನೌಪಚಾರಿಕ ಕ್ಷೇತ್ರಗಳ ಬಗೆಗಿನ ದತ್ತಾಂಶಗಳನ್ನು ಸಂಗ್ರಹಿಸುವ ವ್ಯವಸ್ಥೆ ಇಲ್ಲದಿರುವುದು ಅದಕ್ಕೆ ಒಂದು ಕಾರಣವಾಗಿರಬಹುದು. ಅನೌಪಚಾರಿಕ ಕ್ಷೇತ್ರದ ಜಿಡಿಪಿಯನ್ನು ಅಂದಾಜಿಸಲು ಔಪಚಾರಿಕ ಆರ್ಥಿಕತೆಯ ಮಾನದಂಡಗಳನ್ನೇ ಬಳಸಲಾಗುತ್ತಿದೆ.
ಉದಾಹರಣೆಗೆ 2018-19ರ ಸಾಲಿನ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಅಭಿವೃದ್ಧ್ದಿಯ ದರ 2017-18ರ ಮೊದಲ ತ್ರೈಮಾಸಿಕದ ಅವಧಿಯಲ್ಲಿ (-)1.8 ಇದ್ದದ್ದು 2018-19ರ ಮೊದಲ ತ್ರೈಮಾಸಿಕದಲ್ಲಿ ಶೇ.13.5ರಷ್ಟಾಗಿದೆ ಎಂದು ಹೇಳುವಾಗ ಅರೆ ಕಾರ್ಪೊರೇಟ್ ಕ್ಷೇತ್ರದ ಮತ್ತು ಅಸಂಘಟಿತ ವಲಯದ ಅಭಿವೃದ್ಧಿ ದರವನ್ನು ಸಂಘಟಿತ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಮಾನದಂಡಗಳನ್ನಾಧರಿಸಿಯೇ ಲೆಕ್ಕ ಹಾಕಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಜಿಡಿಪಿಯ ಅಭಿವೃದ್ಧಿ ದರವನ್ನೇ ಮುಂದುಮಾಡಿ ಅಸಂಘಟಿತ ವಲಯವೂ ಅಭಿವೃದ್ಧಿ ಹೊಂದಿದೆ ಎಂದು ಪ್ರತಿಪಾದಿಸುವುದು ತಪ್ಪಾಗುತ್ತದೆ. ಕಪ್ಪುಹಣವನ್ನು ತಡೆಗಟ್ಟುವ ಉದ್ದೇಶವು ವಿಫಲವಾಗಿರುವುದು ಸ್ಪಷ್ಟವಾದೊಡನೆಯೇ ಸರಕಾರವು ನೋಟು ನಿಷೇಧದ ನಿಜವಾದ ಉದ್ದೇಶವು ಭಯೋತ್ಪಾದನೆ ಮತ್ತು ನಕ್ಸಲ್‌ವಾದವನ್ನು ನಿಗ್ರಹಿಸುವುದು, ಶೆಲ್ ಕಂಪೆನಿಗಳನ್ನು ಮುಚ್ಚಿಸುವುದು ಹಾಗೂ ತೆರಿಗೆ ಜಾಲವನ್ನು ವಿಸ್ತರಿಸು ವುದು ಮತ್ತು ಡಿಜಿಟಲ್ ಪಾವತಿ ಪ್ರವೃತ್ತಿಯನ್ನು ಹೆಚ್ಚಿಸುವುದಾಗಿತ್ತು ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಈ ಎಲ್ಲಾ ಉದ್ದೇಶಗಳನ್ನೂ ರಾಷ್ಟ್ರದ ಮೇಲೆ ಅದರಲ್ಲೂ ಬಡಕುಟುಂಬಗಳ ಮೇಲೆ ಸಂಕಷ್ಟಗಳ ಸರಮಾಲೆಯನ್ನು ತಂದೊಡ್ಡದೆಯೂ ಸಾಧಿಸಬಹುದಿತ್ತು.
ಕೃಪೆ: Economic and Political Weekly