ತನ್ನ ತಾನರಿದವಂಗೆ

Update: 2018-09-17 18:20 GMT

ತನ್ನ ತಾನರಿದವಂಗೆ ಅರಿವೆ ಗುರು.

ಅರಿವರತು ಮರಹು ನಷ್ಟವಾದಲ್ಲಿ, ದೃಷ್ಟನಷ್ಟವೆ ಗುರು.

ದೃಷ್ಟನಷ್ಟವೆ ಗುರು ತಾನಾದಲ್ಲಿ;

ಮುಟ್ಟಿ ತೋರಿದವರಿಲ್ಲದಡೇನು?

ಸಹಜವ ನೆಲೆಗೊಳಿಸುವ ನಿರ್ಣಯ ನಿಷ್ಪತ್ತಿಯೆ ಗುರು ನೋಡಾ.

ಗುರು ತಾನಾದಡೆಯೂ ಗುರುವಿಡಿದರಬೇಕು ಎನ್ನ ಅಜಗಣ್ಣನಂತೆ.

                                         -ಮುಕ್ತಾಯಕ್ಕ

ಹಾವಿನಾಳ ಕಲ್ಲಯ್ಯನವರು ‘ಅರಿವೆ ಗುರು’ ಎಂದು ಹೇಳಿದರೆ, ‘ತನ್ನ ತಾನರಿದವಂಗೆ ಅರಿವೆ ಗುರು’ ಎಂದು ಮುಕ್ತಾಯಕ್ಕ ಹೇಳುತ್ತಾಳೆ. ಅರಿವು ಎಂಬುದು ಸ್ವರೂಪದರ್ಶನವಾದವನಿಗೆ ಬರುವಂಥದ್ದು. ಆ ಸ್ವರೂಪದರ್ಶನದ ಅರಿವೆ ಗುರುವಾಗುವುದು ಎಂದು ಮುಕ್ತಾಯಕ್ಕ ಅರಿವಿನ ಮೂಲವನ್ನು ತೋರಿಸಿಕೊಡುತ್ತಾಳೆ. ಅನುಭವದಿಂದ ಅನುಭಾವವಾಗುವುದು. ಅನುಭವವು ಅಂಗ ಎನಿಸಿಕೊಂಡರೆ ಅನುಭಾವವು ಲಿಂಗ ಎನಿಸಿಕೊಳ್ಳುವುದು. ಲಿಂಗವಂತ ಧರ್ಮದಲ್ಲಿ ಅಂಗ ಎಂದರೆ ಮನಸ್ಸನ್ನು ಒಳಗೊಂಡ ದೇಹ. (ವಿಶಾಲ ಅರ್ಥದಲ್ಲಿ ಜೀವಾತ್ಮ ಮತ್ತು ಜೀವಜಗತ್ತು) ಲಿಂಗ ಎಂದರೆ ಪರಮಾತ್ಮ. ಜೀವಾತ್ಮ ಪರಮಾತ್ಮನ ಸಾಮರಸ್ಯದಿಂದ ಸ್ವರೂಪದರ್ಶನದ ಅರಿವು ಉಂಟಾಗುವುದು. ಅದುವೇ ಗುರುವಾಗಿ ಮಾರ್ಗದರ್ಶನ ಮಾಡುವುದು. ‘ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ’ ಎಂದು ಬಸವಣ್ಣನವರು ದೇವರನ್ನೇ ಪ್ರಶ್ನಿಸುತ್ತಾರೆ.

‘ಎನ್ನೊಳಗಿರ್ದು ನಿನ್ನ ತೋರಲಿಕೆ ನೀನೇ ರೂಪಾದೆ’ ಎಂದು ತಿಳಿಸುತ್ತಾರೆ. ಬಸವಣ್ಣನವರಿಗೆ ಘಟಿಕಾಸ್ಥಾನದಲ್ಲಿನ ಗುರುಗಳಿದ್ದಾರೆ ಹೊರತಾಗಿ ಇಷ್ಟಲಿಂಗದೀಕ್ಷೆ ಕೊಟ್ಟ ಗುರು ಇಲ್ಲ. ಇಷ್ಟಲಿಂಗವು ಬಸವಣ್ಣನವರ ಸೃಷ್ಟಿಯಾಗಿದ್ದರಿಂದ ಅವರು ಅರಿವೆಂಬ ಗುರುವಿನಿಂದಲೇ ಪಡೆದುಕೊಂಡಿದ್ದಾರೆ. ಅಂಥ ಗುರುವಿನ ಕುರಿತು ಮುಕ್ತಾಯಕ್ಕ ಅನುಭಾವದ ನೆಲೆಯಲ್ಲಿ ತರ್ಕಬದ್ಧವಾಗಿ ಹೇಳಿದ್ದಾಳೆ. ಅರಿವಿನಿಂದ ದೂರಸರಿದು ಮರೆವು ಬಂದಾಗ ಅನುಭವಕ್ಕೆ ಬಂದುದು ಮರೆಯಾಗುವುದರಿಂದ ಮರೆವೇ ಗುರುವಾಗುವುದು. ಹಾಗೆ ಮರೆವೇ ಗುರುವಾದಲ್ಲಿ ತಿಳಿಸಿ ಹೇಳುವವರು ಇಲ್ಲದಿದ್ದಾಗ, ನೈಜವಾದುದನ್ನು ಸ್ಥಾಪಿಸುವ ನಿರ್ಣಯದ ವ್ಯತ್ಪತ್ತಿಯೆ ಗುರು ಎನಿಸುವುದು ಎಂದು ವಾಸ್ತವದ ಮೂಲಕ ಅರಿವನ್ನು ಪಡೆಯುವ ಕ್ರಮವನ್ನು ಮುಕ್ತಾಯಕ್ಕ ಈ ವಚನದಲ್ಲಿ ಸೂಚಿಸಿದ್ದಾಳೆ. ತನ್ನ ಭಾವಲೋಕದ ಅಣ್ಣ ಅಜಗಣ್ಣನ ಹಾಗೆ ಅರಿವನ್ನೇ ಗುರುವಾಗಿಸಿಕೊಂಡರೂ ಗುರುವನ್ನು ಪಡೆಯಬೇಕು ಎಂದು ಹೇಳುವಲ್ಲಿ ಅವಳ ಲೋಕಜ್ಞಾನವು ವಾಸ್ತವದ ನೆಲೆಯಲ್ಲಿ ಕಂಗೊಳಿಸುತ್ತದೆ.

ಲಿಂಗಾಂಗಸಾಮರಸ್ಯದ ಮೂಲಕ ಬರುವ ಅರಿವು ಗುರುವಾಗುವ ರೀತಿಯಲ್ಲಿ ದೈನಂದಿನ ಬದುಕಿನ ಸತ್ಯಾಂಶದ ಮೂಲಕ ಬರುವ ಅರಿವು ಕೂಡ ಗುರುವಾಗುತ್ತದೆ. ಅದೇ ರೀತಿ ಐಹಿಕ ಬದುಕಿನಲ್ಲಿ ಕೂಡ ಕೆಸರಿನಲ್ಲಿ ಕಮಲದಂತೆ ಇರುವ ಜ್ಞಾನಿಗಳಿಂದ ಕೂಡ ನಾವು ಅರಿವನ್ನು ಪಡೆಯಬಹುದು ಎಂದು ಅಜಗಣ್ಣನವರ ಉದಾಹರಣೆ ಕೊಡುತ್ತಾಳೆ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News