ರಸ್ತೆಗಳು ‘ಗುಂಡಿ’ ಮುಕ್ತವಾಗಲಿ
ಮಾನ್ಯರೇ,
ನಮ್ಮ ದೇಶದಲ್ಲಿ ಹೊಂಡ ಗುಂಡಿ ತುಂಬಿದ ರಸ್ತೆಗಳಿಂದಲೇ ಅತೀ ಹೆಚ್ಚು ಜೀವಗಳು ಬಲಿಯಾಗಿವೆ. ಈ ಕುರಿತು ಇತ್ತೀಚೆಗೆ ಸುಪ್ರೀಂ ಕೋರ್ಟ್ ಸಹ ಕಳವಳ ವ್ಯಕ್ತಪಡಿಸಿದೆ. ನಮ್ಮಲ್ಲಿ ವಿಮಾನ ಪ್ರಯಾಣ, ರೈಲು ಪ್ರಯಾಣ ಸುರಕ್ಷತೆಗೆ ಕೊಡುವ ಪ್ರಾಮುಖ್ಯತೆಯನ್ನು ರಸ್ತೆ ಸಾರಿಗೆಗೆ ನೀಡದಿರುವುದರಿಂದಲೇ ಅನ್ಯಾಯವಾಗಿ ಸಾವಿರಾರು ಜೀವಗಳು ಬಲಿಯಾಗಿವೆ. ರಾಜ್ಯ ಹೈಕೋರ್ಟ್ ಇದೇ ಸೆಪ್ಟಂಬರ್ 24ರೊಳಗೆ ಬೆಂಗಳೂರು ನಗರ ರಸ್ತೆಗಳನ್ನು ಗುಂಡಿಮುಕ್ತವನ್ನಾಗಿ ಮಾಡಬೇಕೆಂದು ಸೂಚನೆ ನೀಡಿದೆ. ಈ ಸೂಚನೆ ಪಾಲಿಸಲು ಅವಧಿ ಸೀಮಿತವಾದರೂ ಬಿಬಿಎಂಪಿ, ಜೀವಗಳ ಸುರಕ್ಷತೆಯ ದೃಷ್ಟಿಯಿಂದ ರಸ್ತೆ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ. ಇದೊಂದು ಗಂಭೀರ ವಿಚಾರವಾಗಿದ್ದರಿಂದ ದೇಶದಲ್ಲಿ ಪಂಚಾಯತ್ ವ್ಯಾಪ್ತಿಯಿಂದಲೇ ಶೀಘ್ರವೇ ಗುಂಡಿ ಮುಕ್ತ ರಸ್ತೆ ಅಭಿಯಾನ ನಡೆಯಬೇಕು. ರಸ್ತೆಗಳ ಅವ್ಯವಸ್ಥೆಯಿಂದ ಜೀವ ಬಲಿಯಾದಾಗ ಆ ಕುಟುಂಬಕ್ಕೆ ಆಸರೆ ನೀಡುವವರು ಯಾರು..? ಇದು ಕೊಲೆಗೆ ಸಮಾನವಲ್ಲವೇ..? ಈ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಭಿವೃದ್ಧಿ ಯೋಜನೆಗಳಿಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ರಸ್ತೆ ಸಾರಿಗೆ ಸುರಕ್ಷತೆಗೂ ಕೊಡುವುದು ನ್ಯಾಯವಲ್ಲವೇ?