ಒಬ್ಬರ ಮನ

Update: 2018-09-24 18:30 GMT

ಒಬ್ಬರ ಮನವ ನೋಯಿಸಿ,

ಒಬ್ಬರ ಮನವ ಘಾತವ ಮಾಡಿ,
ಗಂಗೆಯ ಮುಳುಗಿದಡೇನಾಗುವುದಯ್ಯ?
ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು? ಕಲಂಕ ಬಿಡದಾಯಿತಯ್ಯ.
ಅದು ಕಾರಣ, ಮನವ ನೋಯಿಸದವನೆ,
ಒಬ್ಬರ ಘಾತವ ಮಾಡದವನೆ
ಪರಮಪಾವನ ನೋಡಾ ಕಪಿಲಸಿದ್ದಮಲ್ಲಿಕಾರ್ಜುನ.
                                         -ಸಿದ್ದರಾಮೇಶ್ವರ

ಜೀವದಯೆಯ ಪರವಾದ ಮತ್ತು ಮೂಢನಂಬಿಕೆಗೆ ವಿರುದ್ಧವಾದ ಚಿಂತನೆಗಳನ್ನು ಸಿದ್ದರಾಮೇಶ್ವರರ ಈ ವಚನದಲ್ಲಿ ಏಕಕಾಲಕ್ಕೆ ಅನುಭವಿಸುತ್ತೇವೆ. ಜನರ ಮನಸ್ಸನ್ನು ನೋಯಿಸಿ ಸಂತೋಷ ಪಡುವುದು ಮತ್ತು ಜನರ ಮನಸ್ಸಿಗೆ ಹಿಂಸೆಯನ್ನುಂಟು ಮಾಡುವುದು ವಿಘ್ನಸಂತೋಷಿಗಳ ಕುಕೃತ್ಯವಾಗಿದೆ. ಇಂಥ ನಿರ್ದಯಿಗಳು ನೂರೆಂಟು ಪಾಪಕೃತ್ಯಗಳನ್ನು ಎಸಗಿದ ನಂತರ ಪಾಪ ಪರಿಹಾರಕ್ಕಾಗಿ ಕಾಶಿಗೆ ಹೋಗಿ ಗಂಗಾನದಿಯಲ್ಲಿ ಮುಳುಗಿ ವಿಶ್ವನಾಥನ ದರ್ಶನ ಪಡೆದರೆ ತಾವು ಮಾಡಿದ ಹೀನ ಕಾರ್ಯಗಳಿಂದುಂಟಾದ ಪಾಪ ಪರಿಹಾರವಾಗುವುದೇ ಎಂದು ಸಿದ್ದರಾಮೇಶ್ವರರು ಪ್ರಶ್ನಿಸಿದ್ದಾರೆ. ಹುಣ್ಣಿಮೆ ದಿನ ಪೂರ್ಣಚಂದ್ರ ಗಂಗಾನದಿಯಲ್ಲಿ ಥಳಥಳ ಹೊಳೆಯುತ್ತಿರುತ್ತಾನೆ. ಆದರೆ ಚಂದ್ರನ ಜೊತೆ ಆತನ ಕಲೆಗಳೂ ಎದ್ದು ಕಾಣಿಸುತ್ತಿರುತ್ತವೆ. (ಗುರುಪತ್ನಿಯನ್ನು ಓಡಿಸಿಕೊಂಡು ಹೋದ ಎಂಬ ಕಳಂಕವೂ ಚಂದ್ರನ ಮೇಲಿದೆ.)

ಧರ್ಮ, ನೀತಿ, ತತ್ತ್ವಜ್ಞಾನ ಮುಂತಾದವು ಮಾನವರಿಗೆ ಸಂಸ್ಕಾರ ಕೊಟ್ಟು ನಿಜಮಾನವ ರನ್ನಾಗಿಸುವ ಗುರಿಯನ್ನೇ ಹೊಂದಿವೆ. ಆದರೆ ಧಾರ್ಮಿಕ ವಿಧಿ ವಿಧಾನಗಳು, ಸುಳ್ಳು ಜೋತಿಷಿಗಳು, ಭವಿಷ್ಯ ಹೇಳುವವರು ‘ಪಾಪ ಪರಿಹಾರ’ ಮಾಡುತ್ತೇವೆಂದು ಹೇಳಿ ಧರ್ಮದ ಹೆಸರಿನಲ್ಲಿ ಮೋಸ ಮಾಡುತ್ತಾರೆ. ಇದರಿಂದಾಗಿ ಅಪರಾಧಗಳು ಹೆಚ್ಚುತ್ತವೆ. ಪಾಪಕ್ಕೆ ಪರಿಹಾರ ಇದೆ ಎಂದ ಮೇಲೆ ಪಾಪ ಮಾಡುವುದಕ್ಕೆ ಜನರು ಹಿಂಜರಿಯುವುದಿಲ್ಲ. ವಿವಿಧ ಪಾಪಕಾರ್ಯಗಳಿಗೆ ತಕ್ಕಂತೆ ಪರಿಹಾರವನ್ನೂ ಹುಸಿ ಧರ್ಮಪಂಡಿತರು ಸೂಚಿಸುತ್ತಾರೆ. ನಿಜವಾದ ಧರ್ಮಜ್ಞಾನಿಗೆ ಈ ಅವನತಿ ಹೊಂದುತ್ತಿರುವ ವ್ಯವಸ್ಥೆಯಲ್ಲಿ ಸ್ಥಾನವೇ ಇಲ್ಲದಂಗಿದೆ.
ತನ್ನೊಳಗಿನ ಅಂತಃಸಾಕ್ಷಿ, ತನ್ನ ಹೊರಗಿನ ಜೀವಜಗತ್ತಿನ ಬಗೆಗಿನ ಭೂತದಯೆ (ಜೀವಿಗಳ ಬಗೆಗಿನ ಅನುಕಂಪ), ಧರ್ಮ, ದರ್ಶನ, ನೀತಿ, ಮೌಲ್ಯ ಮತ್ತು ಸಂಸ್ಕಾರದ ಮೂಲಕ ಪರಮಪಾವನನಾಗಿ, ಯಾರ ಮನಸ್ಸನ್ನೂ ನೋಯಿಸದೆ, ಯಾರ ಮನಸ್ಸಿಗೂ ಹಿಂಸೆಯನ್ನುಂಟು ವಾಡದೆ ಬದುಕುವವನೇ ನಿಜಮಾನವ.
ಎಲ್ಲ ಧರ್ಮಗಳೂ ಒಂದಿಲ್ಲೊಂದು ರೀತಿಯಲ್ಲಿ ಇದೇ ಸಂದೇಶವನ್ನು ಹೊಂದಿವೆ. ‘‘ಪರೋಪಕಾರವೇ ಪುಣ್ಯ ಪರಪೀಡನೆಯೆ ಪಾಪ’’ ಎಂದು ಮಹಾಭಾರತ ಹೇಳುತ್ತದೆ. ‘ಮನುರ್ಭವ’ (ಮನುಷ್ಯನಾಗು) ಎಂದು ಋಗ್ವೇದ ಸಾರುತ್ತದೆ. ‘‘ಒಬ್ಬ ಮನುಷ್ಯನನ್ನು ಕೊಂದರೆ ಇಡೀ ಮಾನವಕುಲವನ್ನೇ ಕೊಂದ ಹಾಗೆ’’ ಎಂದು ಕುರ್‌ಆನ್ ಹೇಳುತ್ತದೆ. ‘‘ಎಲ್ಲ ಮಾನವರು ಸಹೋದರರು’’ ಎಂಬ ಉದಾತ್ತಭಾವ, ಯೇಸು ಕ್ರಿಸ್ತರಿಂದಾಗಿ ಜಗತ್ತಿನ ಜನರಿಗೆ ತಲುಪಿದೆ. ಆದರೆ ಬದಲಾವಣೆ ಬೇಕೆನಿಸಿದಷ್ಟು ಆಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News