ಬ್ರಹ್ಮನ ನಾವು ಬಲ್ಲೆವು
ಬ್ರಹ್ಮನ ನಾವು ಬಲ್ಲೆವು, ವಿಷ್ಣುವ ನಾವು ಬಲ್ಲೆವು,
ತೆತ್ತೀಸಕೋಟಿ ದೇವತೆಗಳ ನಾವು ಬಲ್ಲೆವು.
ಅದೇನು ಕಾರಣವೆಂದಡೆ,
ಇವರು ಹಲವು ಕಾಲ ನಮ್ಮ ನೆರೆಮನೆಯಲ್ಲಿದ್ದರಾಗಿ,
ಇವರು ದೇವರೆಂಬುದ ನಾ ಬಲ್ಲೆನಾಗಿ,
ಒಲ್ಲೆನೆಂದಾತಂಬಿಗ ಚೌಡಯ್ಯ.
-ಅಂಬಿಗರ ಚೌಡಯ್ಯ
ಅಂಬಿಗರ ಚೌಡಯ್ಯನವರ ಮನೋಜ್ಞವೂ ಕ್ರಾಂತಿಕಾರಿಯೂ ಆದ ವಚನವಿದು. ಈ ವಚನ ಏಕದೇವೋಪಾಸನೆಯ ಮಹತ್ವವನ್ನು ಪರೋಕ್ಷವಾಗಿ ತಿಳಿಸುತ್ತದೆ. ದೇಶದ ತುಂಬ ದೇವಾನುದೇವತೆಗಳೇ ಇದ್ದಾರೆ. 33 ಕೋಟಿ ದೇವತೆಗಳನ್ನು ನಾವು ಬಲ್ಲೆವು. ಅಷ್ಟೇ ಅಲ್ಲ, ಬ್ರಹ್ಮನನ್ನೂ ವಿಷ್ಣುವನ್ನೂ ಬಲ್ಲೆವು ಎಂದು ಅವರು ಹೇಳುವ ರೀತಿಯಲ್ಲಿ ಮಾನವ ಕಾಳಜಿ ಮತ್ತು ಸುಳ್ಳುದೇವತೆಗಳ ಬಗೆಗಿನ ವ್ಯಂಗ್ಯವಿದೆ. ಬಸವಣ್ಣನವರು ‘ದೇವನೊಬ್ಬ ನಾಮ ಹಲವು’ ಎಂಬುದನ್ನು ತಿಳಿಸುವ ಮೊದಲು ಅಂಬಿಗರ ಚೌಡಯ್ಯ ಮೊದಲಾದ ಶರಣರು ಕೂಡ ತೆತ್ತೀಸಕೋಟಿ ದೇವತೆಗಳ ಬಗ್ಗೆ ಸಂಶಯವನ್ನು ಇಟ್ಟುಕೊಂಡಿರಲಿಲ್ಲ. ಸತ್ಯದ ಅರಿವಾದ ಕೂಡಲೆ ಅವರು ಏಕದೇವೋಪಾಸನೆಯ ಮಹತ್ವವನ್ನು ಅರಿತರು. ಕಣ್ಣಿಗೆ ಕಾಣದ ದೇವರು ನಮ್ಮ ತಂದೆ, ಕಣ್ಣಿಗೆ ಕಾಣುವ ದೇವರುಗಳೆಲ್ಲ ನಮ್ಮ ಮಕ್ಕಳು ಎಂಬುದನ್ನು ಅವರು ಈ ವಚನದಲ್ಲಿ ಸೂಚಿಸಿದ್ದಾರೆ.
ಏಕದೇವೋಪಾಸನೆಯ ಪ್ರಜ್ಞೆ ಮೂಡುವವರೆಗೂ ಈ ದೇವರುಗಳೆಲ್ಲ ನಮ್ಮ ನೆರೆಮನೆಯವರಂತೆ ಇದ್ದರು ಎಂದು ಅವರು ಕಣ್ಣಿಗೆ ಕಾಣುವ ಎಲ್ಲ ದೇವರುಗಳನ್ನು ಜನಸಾಮಾನ್ಯರ ಸ್ಥಾನಕ್ಕೆ ಇಳಿಸಿದ್ದಾರೆ. ಏಕೆಂದರೆ ಅವರೆಲ್ಲ ಜನರಿಂದಲೇ ರೂಪುಗೊಂಡಿದ್ದಾರೆ. ಆದ್ದರಿಂದ ಜನರಿಂದ ಸೃಷ್ಟಿಯಾದ ಈ ದೇವರುಗಳನ್ನೆಲ್ಲ ನಾನು ಬಲ್ಲೆ ಎಂದು ತಿಳಿಸುತ್ತಾರೆ. ಇಂಥ ದೇವರುಗಳ ಒಳಹೊರಗುಗಳು ಗೊತ್ತಾದ ಕಾರಣ ಇವುಗಳ ಸಹವಾಸ ಬೇಡವೆಂದು ಖಂಡತುಂಡವಾಗಿ ಹೇಳುತ್ತಾರೆ.
ಶರಣರಿಗೆ ದೇವರು ಒಬ್ಬನೇ ಇದ್ದಾನೆ. ಇಡೀ ಜಗತ್ತಿನ ಸಕಲ ಚರಾಚರ ಗಳಿಗೂ ಆತನೊಬ್ಬನೇ ದೇವರಾಗಿದ್ದಾನೆ. ಆತನ ದೃಷ್ಟಿಯಲ್ಲಿ ಯಾವುದೇ ಭೇದಭಾವವಿಲ್ಲ. ಮಾದಾರ ಚೆನ್ನಯ್ಯನವರ ಮನೆಯಲ್ಲಿ ಆತ ಅಂಬಲಿಯನ್ನೂ ಸೇವಿಸುತ್ತಾನೆ. ಈ ತೆತ್ತೀಸಕೋಟಿ ದೇವತೆಗಳಲ್ಲಿ ಯಾವೊಂದು ದೇವತೆಯೂ ಹೊಲೆಮಾದಿಗರ ಮನೆಗೆ ಹೋಗಿ ಅಂಬಲಿಯನ್ನು ಕುಡಿದಿಲ್ಲ. ಮಾನವ ನಿರ್ಮಿತ ಈ ದೇವತೆಗಳು ಮೇಲ್ಜಾತಿ ಮತ್ತು ಮೇಲ್ವರ್ಗದವರು ಹೇಳಿದಂತೆಯೆ ಕೇಳುತ್ತವೆ. ಇವುಗಳ ಹೆಸರಿನಲ್ಲಿ ಮೇಲ್ವರ್ಗದ ಸವರ್ಣೀಯರು ವರ್ಣಭೇದ, ಜಾತಿಭೇದ, ಅಸ್ಪಶ್ಯತೆ ಮುಂತಾದ ಆಚರಣೆಗಳನ್ನು ಸಹಸ್ರಾರು ವರ್ಷಗಳಿಂದ ಆಚರಿಸುತ್ತ ಬಂದಿದ್ದಾರೆ. ಅಂತೆಯೆ ಇಂಥ ದೇವತೆಗಳನ್ನು ಅಂಬಿಗರ ಚೌಡಯ್ಯನವರು ತಿರಸ್ಕರಿಸಿದ್ದಾರೆ.