ದೇವೇಂದ್ರ ಫಡ್ನವೀಸ್‌ಗೆ ಮಹಾರಾಷ್ಟ್ರ ಸಿಎಂ ಹುದ್ದೆ ಕೈತಪ್ಪಲಿದೆಯೇ?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಫಡ್ನವೀಸ್ ತಕ್ಕವರು ಎಂಬುದು ಒಂದು ತರ್ಕ. ಬ್ರಾಹ್ಮಣ ಸಮುದಾಯದವರು, ನಾಗಪುರದವರು, ಸಂಘಕ್ಕೂ ಒಪ್ಪಿಗೆಯಾಗುವ ವ್ಯಕ್ತಿ. ರಾಜಕಾರಣದಲ್ಲಿ ಪಳಗಿದವರು. ದಿಲ್ಲಿ ನಾಯಕರೊಂದಿಗೂ ಒಳ್ಳೆಯ ಸಂಬಂಧವಿದೆ. ಹೀಗಾಗಿ ಫಡ್ನವೀಸ್ ಬಗ್ಗೆ ಎಲ್ಲರ ಸಮ್ಮತಿಯೂ ಇದೆ. ಫಡ್ನವೀಸ್ ಅವರಿಗೆ ಮಾತ್ರ ಬಿಜೆಪಿ ಅಧ್ಯಕ್ಷ ಹುದ್ದೆಗಿಂತ ಮುಖ್ಯಮಂತ್ರಿಯಾಗುವ ಆಸೆಯೇ ಹೆಚ್ಚಿದೆ.

Update: 2024-12-04 07:24 GMT

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಈಗ ತನ್ನ ಆಟವನ್ನೇ ಆಡಲಾರದ ಸನ್ನಿವೇಶ ಎದುರಾಗಿರುವ ಹಾಗೆ ಕಾಣಿಸುತ್ತಿದೆ. ಜಾತಿ ರಾಜಕೀಯ ಬಿಜೆಪಿಯನ್ನು ವಿಚಿತ್ರ ಇಕ್ಕಟ್ಟಿನ ಸ್ಥಿತಿಯಲ್ಲಿ ತಂದು ನಿಲ್ಲಿಸಿರುವ ಹಾಗಿದೆ. ಮುಖ್ಯಮಂತ್ರಿ ಯಾರು ಎನ್ನುವುದು ಇಷ್ಟು ದಿನಗಳಾದರೂ ಬಗೆಹರಿಯದಂತಾಗಿರುವುದಕ್ಕೆ ಈ ಇಕ್ಕಟ್ಟು ಕಾರಣವಾಗಿದೆ.

ಏಕನಾಥ್ ಶಿಂದೆ ಹೊರತಾಗಿ ಸರಕಾರ ರಚಿಸಲಾರದ ಸ್ಥಿತಿ ಬಿಜೆಪಿಯದ್ದು. ಹಾಗೆಯೇ ಶಿಂದೆ ಬಲವಿಲ್ಲದೆ ಬಿಎಂಸಿ ಚುನಾವಣೆಯನ್ನು ಗೆಲ್ಲುವ ಸ್ಥಿತಿಯಲ್ಲೂ ಬಿಜೆಪಿ ಇಲ್ಲ. ಶಿಂದೆಯನ್ನೇನಾದರೂ ಬಿಜೆಪಿ ದೂರವಿಟ್ಟರೆ ಮತ್ತೊಮ್ಮೆ ಉದ್ಧವ್ ಠಾಕ್ರೆ ಮೇಲೇಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಉದ್ಧವ್ ಠಾಕ್ರೆ ಆಟ ನಡೆಯದಿರಲು ಎಲ್ಲ ರೀತಿಯಿಂದಲೂ ಶಿಂದೆಯನ್ನು ಸಂಭಾಳಿಸಿಕೊಳ್ಳಬೇಕಾದ ಅನಿವಾರ್ಯತೆ ಈಗ ಬಿಜೆಪಿಗೆ ಇದೆ.

ಆರೋಗ್ಯ ಸರಿಯಿಲ್ಲವೆಂದು ಶಿಂದೆ ಅವರು ತಮ್ಮ ಊರು ಸತಾರಾಕ್ಕೆ ಹೋದಾಗ ಅಲ್ಲಿನ ಜನರ ನಾಡಿಮಿಡಿತವೂ ಮಹಾರಾಷ್ಟ್ರಕ್ಕೆ ಅರ್ಥವಾಗಿರಬಹುದು. ಜನರ ದೃಷ್ಟಿಯಲ್ಲಿ, ಈಗ ಶಿಂದೆ ಬಹುಮುಖ್ಯ ನಾಯಕರಾಗಿ ಕಾಣುತ್ತಿದ್ದಾರೆ. ಜನರಿಗೋಸ್ಕರ ಅನೇಕ ನೀತಿಗಳನ್ನು ತಂದವರಾಗಿ ಕಾಣುತ್ತಿದ್ದಾರೆ ಮತ್ತು ಇದೇ ಈಗ ಬಿಜೆಪಿ ಪಾಲಿನ ಭಯವೂ ಆಗಿದೆ.

ಸಿಎಂ ಆಗಿದ್ದ ದೇವೇಂದ್ರ ಫಡ್ನವೀಸ್ ಡಿಸಿಎಂ ಆದಂತೆ ಶಿಂದೆ ಆಗಲು ತಯಾರಿಲ್ಲ. ಸಿಎಂ ಆಗದೇ ಹೋದಲ್ಲಿ ಅವರು ಬಯಸುತ್ತಿರುವುದು ಗೃಹಮಂತ್ರಿಯ ಸ್ಥಾನ ಎನ್ನಲಾಗುತ್ತಿದೆ.

ಸಿಎಂ ಹುದ್ದೆಯ ವಿಚಾರವಾಗಿ ನೀವೇನು ತೀರ್ಮಾನ ತೆಗೆದುಕೊಳ್ಳುತ್ತೀರೋ ಅದಕ್ಕೆ ತಾನು ಬದ್ಧ ಎಂದು ಮೋದಿ, ಶಾ ಅವರಿಗೆ ಮಾತು ಕೊಟ್ಟಿರುವುದಾಗಿ ಹೇಳುತ್ತಲೇ, ಇಷ್ಟು ಅಲ್ಪ ಕಾಲದಲ್ಲಿ ಇಂಥ ಜನಪರ ಯೋಜನೆಗಳನ್ನು ಯಾರಾದರೂ ತಂದದ್ದಿತ್ತೇ ಎಂದು ಕೂಡ ಶಿಂದೆ ಪ್ರಶ್ನೆಯೆತ್ತಿದ್ದಾರೆ. ತನಗಿಂತ ಹೆಚ್ಚು ಕೆಲಸ ಮಾಡಿದವರು ಯಾರಾದರೂ ಇದ್ದಾರೆಯೇ ಎಂಬ ಈ ಸವಾಲಿನಲ್ಲಿಯೇ ಅವರ ತಾಕತ್ತು ಕಾಣಿಸುತ್ತದೆ.

ಈ ತಾಕತ್ತು ಅವರಿಗೆ ಬಂದದ್ದು ಎಲ್ಲಿಂದ?

ಸರಕಾರ ಯಾರದೇ ಆದರೂ ಅಲ್ಲಿ ನಡೆಯುವುದು ನಮ್ಮದೇ ಆಟ, ಸರಕಾರ ನಮ್ಮದೇ ಆಗಿರುತ್ತದೆ ಎಂಬುದು ಈಗ ಶಿಂದೆ ಮತ್ತವರ ಬಣದ ಶಾಸಕರ ವಿಶ್ವಾಸವಾಗಿದೆ.

ಹೀಗಿರುವಾಗ, ಒಂದೆಡೆ ದಿಲ್ಲಿ ವರಿಷ್ಠರಿಗೂ, ಇನ್ನೊಂದೆಡೆ ಅದಾನಿಗೂ, ಮತ್ತೊಂದೆಡೆ ಆರೆಸ್ಸೆಸ್‌ಗೂ ಸರಿಯೆನ್ನಿಸುವ ನಾಯಕ ಯಾರು ಎಂಬುದು ಸವಾಲಾಗಿದೆ. ಜೊತೆಗೇ ಜಾತಿಯ ಪ್ರಶ್ನೆಯೂ ಮುಖ್ಯವಾಗಿದೆ. ಇಷ್ಟೊಂದು ದೊಡ್ಡ ಮಟ್ಟದ ಗೆಲುವಿನ ನಂತರವೂ ಇಷ್ಟು ದಿನ ಕಳೆದರೂ ಸಿಎಂ ಯಾರು ಎಂಬ ಕಠಿಣ ಪ್ರಶ್ನೆಯನ್ನು ಬಗೆಹರಿಸುವುದು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ.

ಮಹಾರಾಷ್ಟ್ರ ಸಿಎಂ ಆಗುವವರು ಯಾರು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುವವರು ಯಾರು ಎಂಬ ಪ್ರಶ್ನೆಗಳೆರಡೂ ಒಟ್ಟೊಟ್ಟಿಗೇ ಬಂದಿವೆಯೇ? ಒಂದು ಪ್ರಶ್ನೆಗೆ ಸಿಗುವ ಉತ್ತರ ಇನ್ನೊಂದು ಪ್ರಶ್ನೆಗೆ ಪರಿಹಾರವಾಗಲಿದೆಯೆ? ಅಂದರೆ, ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆಗಲಿದ್ದಾರೆಯೇ ಅಥವಾ ಬಿಜೆಪಿ ಅಧ್ಯಕ್ಷರಾಗುವರೆ?

ಮಹಾರಾಷ್ಟ್ರ ನಾಯಕರೊಂದಿಗೆ ಮಾತಾಡಲು ದಿಲ್ಲಿ ನಾಯಕರು ಕಳಿಸಿಕೊಡುತ್ತಿರುವುದು ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು. ಈ ಇಬ್ಬರಿಗೂ ಮಹಾರಾಷ್ಟ್ರ ರಾಜಕೀಯದ ಬಗ್ಗೆ ಏನಾದರೂ ಗೊತ್ತಿದೆಯೆ?

ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ನೇಮಕಗೊಂಡಿದ್ದು, ಅವರ ಸಮ್ಮುಖದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ಆದರೆ, ಇಲ್ಲಿ ಪ್ರಶ್ನೆಯಿರುವುದು ಒಂದೆಡೆ ದಿಲ್ಲಿ, ಇನ್ನೊಂದೆಡೆ ಮುಂಬೈ ಹಾಗೂ ಮತ್ತೊಂದೆಡೆ ನಾಗಪುರ. ಈ ಮೂರೂ ಒಮ್ಮತಕ್ಕೆ ಬರುವುದರೊಂದಿಗೆ ಮಹಾರಾಷ್ಟ್ರ ಸಿಎಂ ಆಯ್ಕೆಯಾಗಬೇಕಿದೆ.

ಇಲ್ಲೊಂದು ವಿಚಿತ್ರ ಸಂದರ್ಭವಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಪ್ರಚಂಡ ಬಹುಮತ ಪಡೆದು ಆರಿಸಿ ಬಂದಿರುವಾಗಲೂ, ಸಿಎಂ ಆಯ್ಕೆ ಇನ್ನೂ ಸಾಧ್ಯವಾಗದ ಸ್ಥಿತಿಯಿದ್ದರೂ ದಿಲ್ಲಿಯಲ್ಲಿ ‘ಸಾಬರಮತಿ ರಿಪೋರ್ಟ್’ ಸಿನೆಮಾ ನೋಡುವುದರಲ್ಲಿ ಮೋದಿ, ಶಾ, ರಾಜನಾಥ್ ಸಿಂಗ್ ಬಿಝಿಯಾಗಿದ್ದರು ಎಂಬುದು. ದೇಶದಲ್ಲಿ ಏನೇ ನಡೆಯುತ್ತಿದ್ದರೂ, ಮಹಾರಾಷ್ಟ್ರದಲ್ಲಿ ಏನೇ ಬಿಕ್ಕಟ್ಟು ಇದ್ದರೂ ಸಾಬರಮತಿ ರಿಪೋರ್ಟ್ ಸಿನೆಮಾ ನೋಡುವುದು ಮುಖ್ಯವಾಗಿದೆ ಎಂಬುದೇ ಒಂದು ರಾಜಕೀಯ. ಪ್ರಧಾನಿ, ಗೃಹಮಂತ್ರಿ, ರಕ್ಷಣಾ ಮಂತ್ರಿ ಮತ್ತೂ ಅನೇಕ ಸಚಿವರು, ರಾಜ್ಯ ಸಚಿವರುಗಳೆಲ್ಲ ಸಿನೆಮಾ ನೋಡುವುದಕ್ಕೆ ಅಷ್ಟು ಸಮಯ ಹಾಕಿ ಕೂರುತ್ತಾರೆಂದರೆ ಏನರ್ಥ?

ಡಿಸೆಂಬರ್ 4ರಂದು ಶಾಸಕರ ಸಭೆ ನಡೆಯಲಿದೆ. ಡಿಸೆಂಬರ್ 5ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿಗದಿಪಡಿಸಲಾಗಿದ್ದರೂ ಹೊಸ ಸಿಎಂ ಯಾರು ಎಂಬುದು ನಿಗೂಢವಾಗಿಯೇ ಉಳಿದಿದೆ.

ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ಮೊದಲ ಹೆಸರು ಇರುವುದು ದೇವೇಂದ್ರ ಫಡ್ನವೀಸ್ ಅವರದು. ಅವರು ಆಗಲೇ ಸಿಎಂ ಆಗಿದ್ದವರು, ಉತ್ತಮ ಕೆಲಸ ಮಾಡಿದ್ದಾರೆ, ಸಂಘದ ವ್ಯಕ್ತಿಯೂ ಹೌದು ಎಂದೆಲ್ಲ ಸಮರ್ಥನೆಗಳೂ ಇವೆ. ಆದರೆ ಈ ಮಧ್ಯೆ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಬೇಕೆಂದು ಬಯಸುತ್ತಿರುವವರು ಯಾರು?

ಫಡ್ನವೀಸ್ ಈಗ ಎರಡೂವರೆ ವರ್ಷ ಸಿಎಂ ಆಗಿ ನಂತರ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಪ್ರವೀಣ್ ತೊಗಾಡಿಯಾ ಜೊತೆಗಿನ ಮಾತುಕತೆಯಲ್ಲಿ ಇವೆಲ್ಲ ನಡೆದಿದೆ ಎನ್ನಲಾಗಿದೆ.

ಇಲ್ಲಿ ಮತ್ತೊಂದು ಪ್ರಶ್ನೆಯೆಂದರೆ, ಬಿಜೆಪಿ ಅಧ್ಯಕ್ಷ ಸಂಘದ ಕಡೆಯವರಾಗಿದ್ದು, ಮಹಾರಾಷ್ಟ್ರ ಸಿಎಂ ದಿಲ್ಲಿ ಯಾರನ್ನು ಬಯಸುತ್ತದೆಯೋ ಅವರಾಗಬೇಕೇ ಎಂಬುದು.

ಹಾಗಾದರೆ ಹೊಸ ಮುಖ್ಯಮಂತ್ರಿಯಾಗಿ ಬೇರೆಯದೇ ಹೆಸರು ಬರಲಿದೆಯೆ?

ಈಗಾಗಲೇ ಎಡು ಹೆಸರುಗಳು ಕೇಳಿಬಂದಿದ್ದವು. ಅದರಲ್ಲಿ ಮೊದಲನೆಯದು, ಮೊದಲ ಬಾರಿ ಸಂಸದರಾಗಿರುವ ಮತ್ತು ಕೇಂದ್ರದಲ್ಲಿ ಮಂತ್ರಿಯಾಗಿರುವ ಮುರಳೀಧರ ಮೊಹೊಲ್. ಅವರು ಪುಣೆ ಸಂಸದ ಮತ್ತು ಮರಾಠಾ ಸಮುದಾಯದವರು.

ಎರಡನೆಯವರು ಮರಾಠಾವಾಡಾದ ಮೇಘನಾ ವಾಡಿಕರ್. ಹಿಂದೆ ಶಾಸಕರಾಗಿದ್ದ ರಾಮಪ್ರಸಾದ್ ವಾಡಿಕರ್ ಅವರ ಪುತ್ರಿ.

ಈಗ ದೇವೇಂದ್ರ ಫಡ್ನವೀಸ್ ಅಲ್ಲದಿದ್ದರೆ ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಸಿಎಂ ಹುದ್ದೆಗೆ ಆಯ್ಕೆಯಾಗುತ್ತಾರೆಯೆ?

ವೀಕ್ಷಕರಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಚುನಾವಣಾ ರಾಜಕಾರಣವೇ ಗೊತ್ತಿಲ್ಲ. ಇನ್ನು ರೂಪಾನಿ ಹೇಗೆ ಗುಜರಾತ್ ಸಿಎಂ ಆದರು, ಹೇಗೆ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಯಿತು ಎಂಬುದು ಗೊತ್ತೇ ಇರುವ ವಿಚಾರ. ದಿಲ್ಲಿ ತೀರ್ಮಾನದಂತೆ ಅವರು ಸಿಎಂ ಆಗಿದ್ದರು, ಮತ್ತದೇ ದಿಲ್ಲಿ ತೀರ್ಮಾನದಂತೆಯೇ ಅವರು ಕೆಳಗಿಳಿಯಬೇಕಾಯಿತು.

ಈಗ ದೇವೇಂದ್ರ ಫಡ್ನವೀಸ್ ಅವರ ದಾರಿ ಯಾವುದು ಎಂಬುದೂ ಮುಖ್ಯವಾಗಲಿದೆ.

ಒಂದು ವೇಳೆ ಅವರು ಮುಖ್ಯಮಂತ್ರಿಯಾಗದೆ ಹೋದರೆ ಇನ್ನಾರದೋ ಸರಕಾರ ಬರಲಿದೆ ಎಂದಾದರೆ ಶಿಂದೆ ತೆಗೆದುಕೊಳ್ಳುವ ನಿಲುವೇನು?

ಬಿಜೆಪಿ ಅಧ್ಯಕ್ಷ ಹುದ್ದೆಗೆ ಫಡ್ನವೀಸ್ ತಕ್ಕವರು ಎಂಬುದು ಒಂದು ತರ್ಕ. ಬ್ರಾಹ್ಮಣ ಸಮುದಾಯದವರು, ನಾಗಪುರದವರು, ಸಂಘಕ್ಕೂ ಒಪ್ಪಿಗೆಯಾಗುವ ವ್ಯಕ್ತಿ. ರಾಜಕಾರಣದಲ್ಲಿ ಪಳಗಿದವರು. ದಿಲ್ಲಿ ನಾಯಕರೊಂದಿಗೂ ಒಳ್ಳೆಯ ಸಂಬಂಧವಿದೆ. ಹೀಗಾಗಿ ಫಡ್ನವೀಸ್ ಬಗ್ಗೆ ಎಲ್ಲರ ಸಮ್ಮತಿಯೂ ಇದೆ. ಆದರೆ ಅವರಿಗೆ ಮಾತ್ರ ಬಿಜೆಪಿ ಅಧ್ಯಕ್ಷ ಹುದ್ದೆಗಿಂತ ಮುಖ್ಯಮಂತ್ರಿಯಾಗುವ ಆಸೆಯೇ ಹೆಚ್ಚಿದೆ.

ಮಹಾರಾಷ್ಟ್ರ ಸಿಎಂ ಮತ್ತು ಬಿಜೆಪಿ ಅಧ್ಯಕ್ಷ ಹಾಗೂ ಇವೆರಡಕ್ಕೂ ಸಂಬಂಧಿಸಿದಂತೆ ನಡೆದ ನಾಗಪುರ ಸಭೆ ಮಹತ್ವ ಪಡೆದಿದೆ. ಅಲ್ಲಿ ವ್ಯಕ್ತವಾಗಿರುವ ಇಂಗಿತದಂತೆ ಸಂಘ ಬಿಜೆಪಿ ಅಧ್ಯಕ್ಷ ಹುದ್ದೆಗೆ ಫಡ್ನವೀಸ್ ನೇಮಕವನ್ನು ಬಯಸಿದೆ.

ದಿಲ್ಲಿ ಬಯಸಿದಂತೆ ಕೆಲ ಸಮಯದವರೆಗೆ ಫಡ್ನವೀಸ್ ಅವರನ್ನು ಸಿಎಂ ಹುದ್ದೆಯಲ್ಲಿ ಕೂರಿಸಬಹುದೆ? ಈ ಸಾಧ್ಯತೆಗಳು ಕಡಿಮೆ ಇವೆ.

ಇಂಥ ಸ್ಥಿತಿಯಲ್ಲಿ ಹೊಸ ಹೆಸರು ಬರಬೇಕೆಂದರೆ ಅದು ಒಂದೇ ಪಶ್ಚಿಮ ಮಹಾರಾಷ್ಟ್ರದ ಕಡೆಯಿಂದ ಬರಬೇಕು ಇಲ್ಲವೇ ಮರಾಠಾವಾಡಾದ್ದಾಗಿರಬೇಕು.

ಚುನಾವಣಾ ಫಲಿತಾಂಶದಲ್ಲಿ ಮರಾಠಾ ಸಮುದಾಯ ಮತ್ತು ಒಬಿಸಿ ಪ್ರಭಾವ ದೊಡ್ಡ ಮಟ್ಟದಲ್ಲಿದೆ. ಈ ಜಾತಿ ಸಮೀಕರಣವನ್ನು ಸಂಘ ಕೂಡ ನಿರಾಕರಿಸಲಾಗದ ಸ್ಥಿತಿ ಇದೆ. ಆದರೆ ತನ್ನ ಇಚ್ಛೆಯಂತೆ ಮಹಾರಾಷ್ಟ್ರ ಸರಕಾರ ಇರಬೇಕೆಂದು ದಿಲ್ಲಿ ಬಯಸುತ್ತಿದೆ.

ಈ ಹಂತದಲ್ಲಿ ಶಿಂದೆ ರಾಜಕೀಯ ಆಟ ಮಾತ್ರ ನಿಗೂಢ ವಾಗುತ್ತಿದೆ. ಶಾಸಕಾಂಗ ಸಭೆಯಲ್ಲಿ ಎಲ್ಲ ತೀರ್ಮಾನವಾಗಲಿದೆ ಎಂದು ಹೇಳುತ್ತಿರುವ ಅವರಲ್ಲಿ ಒಳಗಿನ ಲೆಕ್ಕಾಚಾರಗಳು ಬೇರೆಯೇ ಇದ್ದಿರಲು ಸಾಕು.

ಈ ನಡುವೆಯೇ ಅವರ ಪುತ್ರ, ಸಂಸದ ಶ್ರೀಕಾಂತ್ ಶಿಂದೆ ತಾವು ರಾಜ್ಯದಲ್ಲಿ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪುತ್ರನ ಮೂಲಕ ಶಿಂದೆ ಆಡುತ್ತಿರುವ ರಾಜಕೀಯ ಆಟವೂ ಕುತೂಹಲ ಕೆರಳಿಸದೆ ಇರುವುದಿಲ್ಲ. ಸಿಎಂ ಹುದ್ದೆಗಾಗಿಯೇ ಶಿಂದೆ ಒಳಗೊಳಗೇ ಪಟ್ಟು ಹಿಡಿದಿದ್ದಾರೆಯೇ?

ಫಡ್ನವೀಸ್‌ಗೆ ಕೂಡ ಈ ಬಾರಿ ತನಗೆ ಸಿಎಂ ಹುದ್ದೆ ತಪ್ಪಿದರೆ ಮತ್ತು ತಾನು ದಿಲ್ಲಿ ದಾರಿ ಹಿಡಿದರೆ ಮತ್ತೆಂದೂ ಮಹಾರಾಷ್ಟ್ರ ರಾಜಕಾರಣ ತನ್ನ ಹಿಡಿತಕ್ಕೆ ಸಿಗುವುದಿಲ್ಲ ಎಂಬುದು ಗೊತ್ತಿದೆ.

ಇಂಥದೇ ಸ್ಥಿತಿಯನ್ನು ಈಗಾಗಲೇ ನಿತಿನ್ ಗಡ್ಕರಿ ಕೂಡ ಎದುರಿಸುತ್ತಿದ್ದಾರೆ. ಒಮ್ಮೆ ದಿಲ್ಲಿಗೆ ಕಾಲಿಟ್ಟರೆಂದರೆ, ಮಹಾರಾಷ್ಟ್ರ ರಾಜಕಾರಣ ಅವರನ್ನು ದೂರ ಇಟ್ಟುಬಿಡುತ್ತದೆ.

ಇದೆಲ್ಲದರ ನಡುವೆ ಇಷ್ಟು ದಿನಗಳಿಂದ ಒಂದೇ ಒಂದು ಮಾತನ್ನೂ ಆಡದೆ ಇರುವವರು ಅಜಿತ್ ಪವಾರ್. ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ಅವರೂ ಕಾದಿರುವ ಹಾಗಿದೆ. ಹಾಗಾಗಿಯೇ ಅವರನ್ನು ದಿಲ್ಲಿಗೆ ಕರೆಸಿಕೊಂಡ ನಾಯಕರು ತಮ್ಮ ಜೊತೆಯೇ ಇರಲಿದ್ದಾರೆ ಎಂಬುದನ್ನು ಕೇಳಿ ಖಚಿತಪಡಿಸಿಕೊಂಡಿದ್ದಾರೆ.

ಹೀಗೆ ದಿಲ್ಲಿ, ಮುಂಬೈ ಮತ್ತು ನಾಗಪುರ ಎಂಬ ತ್ರಿಕೋನ, ಹಾಗೆಯೇ ಶಿಂದೆ, ಫಡ್ನವೀಸ್ ಮತ್ತು ಅಜಿತ್ ಪವಾರ್ ಎಂಬ ತ್ರಿಕೋನ ಕುತೂಹಲಕಾರಿಯಾಗಿದೆ.

ಇವೆಲ್ಲದರ ನಡುವೆ ಅಸಲೀ ಆಟ ಆಡಲಿರುವುದು ಕಾರ್ಪೊರೇಟ್ ಶಕ್ತಿ ಎನ್ನುವುದು ಗೊತ್ತೇ ಇರುವ ವಿಚಾರ.

ಅಂತಿಮವಾಗಿ ಗೊಂಬೆಯಾಗಲಿರುವವರು ಯಾರು?

ಸೂತ್ರ ಹಿಡಿಯುವವರು ಯಾರು?

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News