ಫೆಂಗಲ್ ಚಂಡಮಾರುತದ ಪರಿಣಾಮ: ಸಾವಿರಾರು ಎಕರೆ ರಾಗಿ ಬೆಳೆಗೆ ಹಾನಿ
ಕೋಲಾರ, ಡಿಸೆಂಬರ್. 02: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಫೆಂಗಾಲ್ ಚಂಡಮಾರುತ ಸೃಷ್ಟಿಯಾಗಿದೆ. ಇದರಿಂದ ದಕ್ಷಿಣ ಭಾರತ ರಾಜ್ಯಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಕರ್ನಾಟಕ ರಾಜ್ಯದ ಮೂಡಲಬಾಗಿಲು ಕೋಲಾರದ ಮೂಲಕ ಹಾದು ಪಶ್ಚಿಮದ ಕಡೆಗೆ ಚಲಿಸುತ್ತಿರುವ ಚಂಡಮಾರುತದಿಂದ ನಿರಂತರ ಮಳೆಯಾಗಲಾರಂಭಿಸಿದೆ.
ಕೋಲಾರ ಜಿಲ್ಲೆಯಲ್ಲಿ ಫೆಂಗಲ್ ಪರಿಣಾಮ ತೀವ್ರವಾಗಿ ಕಂಡುಬಂದಿದೆ. ಕಳೆದೆ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ನೆಲೆಸಿದ್ದು, ನಿರಂತರವಾಗಿ ಮಳೆ ಮತ್ತು ಕೊರೆಯುವ ಚಳಿಗೆ ಜನ ತತ್ತರಿಸಿದ್ದಾರೆ. ಬೆಳೆದು ನಿಂತಿದ್ದ ರಾಗಿ ಬೆಳೆ ಹಾನಿಗೊಳಗಾಗುತ್ತಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.
ಫೆಂಗಲ್ ಚಂಡಮಾರುತದಿಂದ ಬೀಳುತ್ತಿರುವ ಮಳೆಯು ರೈತರ ಪಾಲಿಗೆ ಹೊರೆಯಾಗಿ ಗೋಚರವಾಗುತ್ತಿವೆ. ನಿರಂತರ ಸುರಿಯುತ್ತಿರುವ ಮಳೆಯಿಂದ ಬೆಳೆ ನಷ್ಟದ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಮುಂಗಾರು ಹಂಗಾಮಿನ ವೇಳೆ ಸೂಕ್ತ ಸಮಯಕ್ಕೆ ಮಳೆ ಬಾರದೆ , ಶೇ.60ರಷ್ಟು ಬೆಳೆ ಹಾನಿಯಾಗಿತ್ತು. ಇದೀಗ ಅಳಿದುಳಿದ ಬೆಳೆಯನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಕೆಲ ರೈತರು ಅಳಲು ತೋಡಿಕೊಳ್ಳುತ್ತಾರೆ.
ಫೆಂಗಲ್ ಚಂಡಮಾರುತ ತಮಿಳುನಾಡಿನಿಂದ ಜಿಲ್ಲೆಯ ಮೂಲಕ ಚಲಿಸುತ್ತಿರುವ ಕಾರಣ ಜಿಲ್ಲೆಯ ವಾತಾವರಣದಲ್ಲಿ ಏರುಪೇರಾಗಿದ್ದು, ರಾಗಿ ಬೆಳೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ. ಬೆಳೆ ನಷ್ಟ ಸಂಭವಿಸುವ ಸಾಧ್ಯತೆಯಿದ್ದು, ಮಳೆ ನಿಂತ ನಂತರದಲ್ಲಿ ಸಮೀಕ್ಷೆ ನಡೆಸಿ ಬೆಳೆ ನಷ್ಟ ಅಂದಾಜಿಸಲಾಗುವುದು ಮತ್ತು ರೈತರಿಗೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು.
- ಅಕ್ರಂ ಪಾಷಾ, ಜಿಲ್ಲಾಧಿಕಾರಿ, ಕೋಲಾರ.
ಫೆಂಗಾಲ್ ಚಂಡಮಾರುತದ ಪರಿಣಾಮವಾಗಿ ಹವಾಮಾನ ವೈಪರೀತ್ಯದಿಂದ ಬೆಳೆದು ಕಟಾವಿಗೆ ಬಂದಿದ್ದ ರಾಗಿ ಹಾಗೂ ತರಕಾರಿ ಬೆಳೆಗಳು ನೆಲಕಚ್ಚಿ ಮೊಳಕೆಯೊಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಟಾವಿಗೆ ಬಂದಿದ್ದ ರಾಗಿ ಬೆಳೆ ಕೊಯ್ಲಿಕ್ಕೆ ಸಾಧ್ಯವಾಗುತ್ತಿಲ್ಲ. ಅದೇ ರೀತಿ ತರಕಾರಿ ಬೆಳೆಗಳಾದ ಹೂ ಕೋಸು ಹಾಗೂ ಟೊಮೆಟೊ ಬೆಳೆ ಸಹ ಮಳೆಯಿಂದಾಗಿ ಹಾಳಾಗುತ್ತಿದೆ, ಇನ್ನೇನು ಬೆಳೆ ಕೈಗೆ ಸಿಗುವ ವೇಳೆಗೆ ಮಳೆ ಬಂದಿದೆ. ಇದರಿಂದಾಗಿ "ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ " ಸರ್ಕಾರ ಬೆಳೆ ಸಮೀಕ್ಷೆ ನಡೆಸಿ ಶೀಘ್ರ ರೈತರ ನೆರವಿಗೆ ಬರಬೇಕಾಗಿದೆ.
- ಟಿ.ಎಂ.ವೆಂಕಟೇಶ್,ಜಿಲ್ಲಾ ಮುಖಂಡರು, ಕರ್ನಾಟಕ ಪ್ರಾಂತ ರೈತ ಸಂಘ,ಕೋಲಾರ.