ಶಿವಮೊಗ್ಗ ಕ್ಷೇತ್ರ : ಮೂವರು ಮಾಜಿ ಸಿಎಂ ಪುತ್ರರ ಹಣಾಹಣಿಗೆ ವೇದಿಕೆ ಸಜ್ಜು!

Update: 2018-10-14 16:56 GMT
ಬಿ.ವೈ.ರಾಘವೇಂದ್ರ, ಮಧು ಬಂಗಾರಪ್ಪ, ಮಹಿಮಾ ಪಟೇಲ್

ಶಿವಮೊಗ್ಗ, ಅ. 14: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ, ಅಭ್ಯರ್ಥಿ ಕಣಕ್ಕಿಳಿಸುವ ಕುರಿತಂತೆ ಕಾಂಗ್ರೆಸ್-ಜೆಡಿಎಸ್ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ. ಮಾಜಿ ಸಿಎಂ ಎಸ್.ಬಂಗಾರಪ್ಪ ಪುತ್ರ, ಜೆಡಿಎಸ್ ಪಕ್ಷದ ಮಾಜಿ ಶಾಸಕ ಮಧು ಬಂಗಾರಪ್ಪ ಮೈತ್ರಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಬಿಜೆಪಿಯಿಂದ ಈಗಾಗಲೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಕಣಕ್ಕಿಳಿಯತ್ತಿದ್ದಾರೆ. ಈ ನಡುವೆ ಮಾಜಿ ಸಿಎಂ ಜೆ.ಹೆಚ್.ಪಟೇಲ್‍ರವರ ಪುತ್ರ ಮಹಿಮಾ ಪಟೇಲ್‍ರವರು ಕೇಂದ್ರದಲ್ಲಿ ಎನ್‍ಡಿಎ ಸರ್ಕಾರದ ಭಾಗವಾಗಿರುವ ಜೆಡಿಯು ಪಕ್ಷದಿಂದ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಈ ಮೂವರು ಅ. 14 ರಂದೇ ನಾಮಪತ್ರ ಸಲ್ಲಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. 

ಮೂವರು ಮಾಜಿ ಸಿಎಂ ಪುತ್ರರ ಹಣಾಹಣಿ ಭಾರೀ ಕುತೂಹಲ ಕೆರಳಿಸಿದೆ. ಅದರಲ್ಲಿಯೂ ಶಿವಮೊಗ್ಗ ಕ್ಷೇತ್ರವು ಮತ್ತೊಮ್ಮೆ ಬಿ.ಎಸ್.ಯಡಿಯೂರಪ್ಪ ಹಾಗೂ ಎಸ್.ಬಂಗಾರಪ್ಪ ಕುಟುಂಬದ ನಡುವಿನ 'ಬಿಗ್‍ಫೈಟ್'ಗೆ ವೇದಿಕೆಯಾಗುತ್ತಿದೆ. ಇದರಿಂದ ಉಪ ಚುನಾವಣಾ ಕಣ ರಂಗೇರುವಂತೆ ಮಾಡಿದೆ. 

'ಕೈ' ಹಿನ್ನಡೆ: 3 ಲೋಕಸಭೆ ಹಾಗೂ 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ, ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸುವ ನಿರ್ಧಾರ ಮಾಡಿದ್ದವು. ಅದರಂತೆ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಬೆಂಬಲಿಸುವ ತೀರ್ಮಾನವಾಗಿತ್ತು. ಅದರಂತೆ ಕಾಂಗ್ರೆಸ್ ನಾಯಕರು, ಬಿಜೆಪಿ ಎದುರು ಪ್ರಬಲ ಅಭ್ಯರ್ಥಿ ಅಖಾಡಕ್ಕಿಳಿಸುವ ತಯಾರಿ ನಡೆಸುತ್ತಿದ್ದರು. ಸಮರ್ಥ ಹುರಿಯಾಳುವಿನ ಶೋಧ ನಡೆಸುತ್ತಿದ್ದರು. 

ಈ ನಡುವೆ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರುಗಳಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಹಾಗೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಂಜುನಾಥ ಭಂಡಾರಿಯವರು ಚುನಾವಣಾ ಕಣಕ್ಕಿಳಿಯಲು ನಿರಾಕರಿಸಿದ್ದರು. ಈ ಕಾರಣದಿಂದ ಆ ಪಕ್ಷದ ವರಿಷ್ಠರು ಎರಡನೇ ಹಂತದ ನಾಯಕರತ್ತ ಚಿತ್ತ ಹರಿಸಿದ್ದರು. ಆದರೆ ಸಮರ್ಥ ಹುರಿಯಾಳು ಲಭ್ಯವಾಗಿರಲಿಲ್ಲ. ಇದು ಆ ಪಕ್ಷದ ವರಿಷ್ಠರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. 

ಕಾಂಗ್ರೆಸ್‍ನಲ್ಲಿ ಪ್ರಬಲ ಅಭ್ಯರ್ಥಿ ಲಭ್ಯವಾಗದಿರುವ ಸಂಗತಿಯು ಜೆಡಿಎಸ್‍ಗೆ ವರವಾಗಿ ಪರಿಣಮಿಸಿತ್ತು. ತನ್ನ ಪಕ್ಷದ ಮಾಜಿ ಶಾಸಕ ಮಧು ಬಂಗಾರಪ್ಪರ ಹೆಸರನ್ನು ದಿಢೀರ್ ಆಗಿ ತೇಲಿಬಿಟ್ಟಿತ್ತು.

ಗಾಹುಲ್‍ಗೆ ಗಾಳ: 'ಶಿವಮೊಗ್ಗದಲ್ಲಿ ದುರ್ಬಲ ಅಭ್ಯರ್ಥಿ ಕಣಕ್ಕಿಳಿಸಿದರೆ ಬಿಜೆಪಿ ಎದುರು ಮುಖಭಂಗಕ್ಕೀಡಾಗುವುದು ಗ್ಯಾರಂಟಿ. ಮಧು ಬಂಗಾರಪ್ಪ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಭಾರೀ ಹಣಾಹಣಿ ಏರ್ಪಡುವುದು ನಿಶ್ಚಿತ' ಎಂಬ ಸಂದೇಶವನ್ನು ಜೆಡಿಎಸ್ ಪಕ್ಷವು ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಗೆ ರವಾನಿಸಿತ್ತು. ಶನಿವಾರ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಡುವೆ ನಡೆದ ಮಾತುಕತೆಯ ವೇಳೆಯೂ ಶಿವಮೊಗ್ಗ ಕ್ಷೇತ್ರದ ಬಗ್ಗೆ ಚರ್ಚೆಯಾಗಿತ್ತು. 

ಕಾಂಗ್ರೆಸ್‍ನಲ್ಲಿ ಸಮರ್ಥ ಅಭ್ಯರ್ಥಿ ಲಭ್ಯವಾಗದಿರುವ ವಿಷಯವನ್ನು ರಾಹುಲ್ ಗಮನಕ್ಕೆ ತಂದಿದ್ದ ಹೆಚ್.ಡಿ.ಕೆ., ತಮ್ಮ ಪಕ್ಷದ ಮಧು ಬಂಗಾರಪ್ಪರನ್ನು ಕಣಕ್ಕಿಳಿಸಿದರೆ ಮೈತ್ರಿ ಪಕ್ಷಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂಬುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ಶಿವಮೊಗ್ಗದಲ್ಲಿ ಜೆಡಿಎಸ್ ಬೆಂಬಲಿಸದಿರುವ ನಿರ್ಧಾರ ಕೈಗೊಂಡಿದ್ದ ಹಿನ್ನೆಲೆಯಲ್ಲಿ ರಾಹುಲ್ ಹೆಚ್.ಡಿ.ಕೆ. ಅಭಿಪ್ರಾಯವನ್ನು ಮೊದಲು ಒಪ್ಪಿರಲಿಲ್ಲ ಎನ್ನಲಾಗಿದೆ. 

2019 ರ ಲೋಕಸಭೆ ಚುನಾವಣೆಯಲ್ಲಿ ಮಹಾಘಟಬಂಧನ ಗಮನದಲ್ಲಿಟ್ಟುಕೊಂಡ ರಾಹುಲ್ ಗಾಂಧಿಯವರು, ಅಂತಿಮ ಕ್ಷಣದಲ್ಲಿ ಜೆಡಿಎಸ್‍ಗೆ ಶಿವಮೊಗ್ಗ ಕ್ಷೇತ್ರ ಬಿಟ್ಟುಕೊಡುವ ನಿರ್ಧಾರ ಕೈಗೊಂಡಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆಯಾದರೂ, ಹೈಕಮಾಂಡ್ ನಿರ್ಧಾರವನ್ನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. 

ಕಣಕ್ಕೆ: ಈ ನಡುವೆ ಮಾಜಿ ಸಿಎಂ, ದಿವಂಗತ ಜೆ.ಹೆಚ್.ಪಟೇಲ್‍ರವರ ಪುತ್ರ ಮಹಿಮಾ ಪಟೇಲ್‍ರವರು ದಿಢೀರ್ ಆಗಿ ಶಿವಮೊಗ್ಗ ಕ್ಷೇತ್ರದಲ್ಲಿ ಕಣಕ್ಕಿಳಿಯುವ ನಿರ್ಧಾರ ಕೈಗೊಂಡಿದ್ದಾರೆ. ಎನ್‍ಡಿಎ ಪಕ್ಷದ ಭಾಗವಾಗಿರುವ ಜೆಡಿಯುನಿಂದ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ಇದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. 

ಮತ್ತೆ ಬಿ.ಎಸ್.ಯಡಿಯೂರಪ್ಪ - ಎಸ್.ಬಂಗಾರಪ್ಪ ಕುಟುಂಬ ಮುಖಾಮುಖಿ!

*** ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಎಸ್.ಬಂಗಾರಪ್ಪ ಕುಟುಂಬವು ತನ್ನದೆ ಆದ ಮಹತ್ವ ಪಡೆದುಕೊಂಡಿವೆ. ಸರಿಸುಮಾರು ಮೂರ್ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಈ ಎರಡು ಕುಟುಂಬಗಳು ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಪಾತ್ರವಹಿಸಿಕೊಂಡು ಬರುತ್ತಿವೆ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಈ ಎರಡು ಕುಟುಂಬಗಳ ಸದಸ್ಯರು ಎರಡು ಲೋಕಸಭೆ ಹಾಗೂ ಒಂದು ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ಆದರೆ ಈ ಮೂರು ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಕುಟುಂಬವೇ ಮೇಲುಗೈ ಸಾಧಿಸಿದೆ. ಇದೀಗ ನಾಲ್ಕನೇ ಬಾರಿ ಈ ಎರಡು ಕುಟುಂಬಗಳು ಮತ್ತೆ ಮುಖಾಮುಖಿಯಾಗುತ್ತಿರುವುದು ಕುತೂಹಲ ಕೆರಳಿಸಿದೆ. 

ಮೊದಲ ಬಾರಿಗೆ 2008 ರ ವಿಧಾನಸಭೆ ಚುನಾವಣೆಯಲ್ಲಿ ಈ ಎರಡು ಕುಟುಂಬ ಎದುರಾಳಿಯಾಗಿದ್ದವು. ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಿ.ಎಸ್.ಯಡಿಯೂರಪ್ಪ ಎದುರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಎಸ್.ಬಂಗಾರಪ್ಪ ಕಣಕ್ಕಿಳಿದಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬಂಗಾರಪ್ಪಗೆ ಬೆಂಬಲಿಸಿದ್ದವು. ಬಿ.ಎಸ್.ಯಡಿಯೂರಪ್ಪರವರು 83,491 ಮತ ಪಡೆದು, 45,927 ಮತಗಳ ಅಂತರದಲ್ಲಿ ಜಯ ಸಂಪಾದಿಸಿದ್ದರು. ಬಂಗಾರಪ್ಪರವರು ಕೇವಲ 37,564 ಮತ ಪಡೆಯಲಷ್ಟೆ ಶಕ್ತರಾಗಿದ್ದರು. 

2009 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಬಂಗಾರಪ್ಪ ಎದುರು, ಬಿಜೆಪಿ ಅಭ್ಯರ್ಥಿಯಾಗಿ ಬಿ.ಎಸ್.ವೈ. ಪುತ್ರ ಬಿ.ವೈ.ರಾಘವೇಂದ್ರ ಸ್ಪರ್ಧಿಸಿದ್ದರು. ಬಿ.ವೈ.ರಾಘವೇಂದ್ರರವರು 4,82,783 ಮತ ಪಡೆದು 52,893 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಪರಾಭವಗೊಂಡ ಎಸ್.ಬಂಗಾರಪ್ಪರವರು 4,29,890 ಮತ ಪಡೆದಿದ್ದರು. 

2014 ರ ಲೋಕಸಭೆ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಚ್ಚರಿ ಎಂಬಂತೆ ಎಸ್.ಬಂಗಾರಪ್ಪರ ಪುತ್ರಿ ಗೀತಾ ಶಿವರಾಜ್‍ಕುಮಾರ್‍ರವರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದರು. ಕಾಂಗ್ರೆಸ್ ಪಕ್ಷದಿಂದ ಮಂಜುನಾಥ ಭಂಡಾರಿ ಕಣಕ್ಕಿಳಿದಿದ್ದರು. ಗೀತಾ ಶಿವರಾಜ್‍ಕುಮಾರ್‍ರವರು ಜಿಲ್ಲೆಯಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದರು. ಸಿನಿಮಾ ರಂಗದ ಹಲವು ನಟನಟಿಯರು ಅವರ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಕೆಲ ಸಮೀಕ್ಷೆಗಳು ಗೀತಾ ಜಯಗಳಿಸಲಿದ್ದಾರೆ ಎಂದು ಭವಿಷ್ಯ ಕೂಡ ನುಡಿದಿದ್ದವು. 

ಆದರೆ ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಕ್ಷರಶಃ ಧೂಳೀಪಟವಾಗಿತ್ತು. ಗೀತಾ ಶಿವರಾಜ್‍ಕುಮಾರ್‍ರವರು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ವಿಜೇತ ಬಿ.ಎಸ್.ಯಡಿಯೂರಪ್ಪರವರು 6,06,216 ಮತ ಪಡೆದು 3,63,305 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. 2 ನೇ ಸ್ಥಾನ ಪಡೆದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿಯವರು 2,42,911 ಹಾಗೂ ಗೀತಾ ಶಿವರಾಜ್‍ಕುಮಾರ್‍ರವರು 2,40,636 ಮತ ಪಡೆಯಲಷ್ಟೆ ಶಕ್ತರಾಗಿದ್ದರು. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News