ವಿಶ್ವವಿದ್ಯಾನಿಲಯಗಳ ಅಂತ್ಯ, ಭಾರತೀಯ ಶೈಲಿ!
ದಿಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಕರ ಮೇಲೆ ಹೇರಲು ಪ್ರಯತ್ನಿಸಿರುವ ಪ್ರಾಯೋಗಿಕ ಕ್ರಮವು, ಯುಜಿಸಿಯು ಎಲ್ಲ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಪರಿಚಯಿಸಲು ಮುಂದಾಗಿರುವ ಮಾದರಿಯತ್ತ ಇಟ್ಟ ಪ್ರಥಮ ಹೆಜ್ಜೆಯಾಗಿದೆ. ಯೋಚಿಸುವ ಸ್ವಾತಂತ್ರ, ಭಿನ್ನಾಭಿಪ್ರಾಯ ಹೊಂದುವ ಮತ್ತು ಅದರ ಮೇಲೆ ಕಾರ್ಯಾಚರಿಸುವ ಸ್ವಾತಂತ್ರವನ್ನು ನೀಡುವ ಶೈಕ್ಷಣಿಕ ಜಗತ್ತು ಮತ್ತು ಸರಕಾರಿ ಯಂತ್ರದ ನಡುವೆ ಇರುವ ಗೋಡೆಯನ್ನು ಉಲ್ಲಂಘಿಸಲು ಇದು ನೆರವಾಗಲಿದೆ.
ಕಾರ್ನೆಲ್, ಹಾರ್ವರ್ಡ್, ಪ್ರಿನ್ಸ್‌ಟೌನ್, ಬ್ರೌನ್ ಹಾಗೂ ಅಮೆರಿಕದ ಇತರ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಸಾಲಿನಲ್ಲಿ ನಿಲ್ಲುವ ಯಾಲೆ ವಿಶ್ವವಿದ್ಯಾನಿಲಯದ ಯುವ ವಿದ್ಯಾರ್ಥಿ ನಡೆಸಿದ ಅಧ್ಯಯನವು ಎಲ್ಲರ ಕಣ್ಣು ತೆರೆಸುವಂತಿದೆ. ಯಾವ ರೀತಿ ಯಾಲೆ ವಿಶ್ವವಿದ್ಯಾನಿಲಯವು ಹಣದ ಬೆಟ್ಟದ ಮೇಲೆ ನಿಂತಿದೆ ಮತ್ತು ಈಗಲೂ ಸಾರ್ವಜನಿಕ ನಿಧಿಗಳ ಮೂಲಕ ಹೆಚ್ಚೆಚ್ಚು ಹಣವನ್ನು ಪಡೆಯುತ್ತಿದೆ, ಯಾವ ರೀತಿ ಸರಕಾರವು ಶ್ರೀಮಂತವಾಗಿರುವ ಈ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿಗೆ ಸಬ್ಸಿಡಿಗಳನ್ನು ನೀಡುತ್ತಿದೆ ಮತ್ತು ಒಕ್ಕೂಟ ಮತ್ತು ರಾಜ್ಯ ಸರಕಾರಗಳು ಯಾವ ರೀತಿ ತೆರಿಗೆ ವಿನಾಯಿತಿ, ಒಪ್ಪಂದಗಳು, ದೇಣಿಗೆ ಮತ್ತು ನೇರ ಉಡುಗೊರೆಗಳ ಮೂಲಕ 40 ಬಿಲಿಯನ್ ಡಾಲರ್‌ಗೂ ಅಧಿಕ ಹಣವನ್ನು ಈ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿಗಾಗಿ ಯಾವ ರೀತಿ ವೆಚ್ಚ ಮಾಡಿದೆಯೆಂದು ಈ ಅಧ್ಯಯನವು ತಿಳಿಸುತ್ತದೆ.
ಇದೇ ವೇಳೆ, ಕನೆಕ್ಟಿಕಟ್‌ನಲ್ಲಿರುವ ಹನ್ನೆರಡು ಸಮುದಾಯ ಕಾಲೇಜುಗಳು ಮತ್ತು ನಾಲ್ಕು ವಿಶ್ವವಿದ್ಯಾನಿಲಯಗಳು ಕಠಿಣ ಧೋರಣೆ ಮತ್ತು ನವಉದಾರವಾದದ ಪರಿಣಾಮವಾಗಿ ಮುಚ್ಚುಗಡೆಯ ದಿನಗಳನ್ನು ಎದುರು ನೋಡುತ್ತಿವೆ ಎಂಬುದನ್ನು ಅಧ್ಯಯನದಲ್ಲಿ ವಿವರಿಸಲಾಗಿದೆ. ಈ ಲೇಖನವನ್ನು ಓದಿದಾಗ, ಮಾರ್ಕ್ಸ್‌ವಾದಿ ವಿಮರ್ಶಕ ಟೆರ್ರಿ ಈಗ್ಲೆಟನ್ ಬರೆದ ಯೋಚನೆಗೆ ಹಚ್ಚುವಂತಹ ಬರಹ, ‘ದ ಸ್ಲೋ ಡೆತ್ ಆಫ್ ದ ಯುನಿವರ್ಸಿಟಿ’ಯ ನೆನಪು ಮೂಡಿಸುತ್ತದೆ. ಈ ಪುಸ್ತಕದಲ್ಲಿ, ನಾವು ಯಾವ ರೀತಿ ಕ್ಯೂಬಾದ ಕ್ರಾಂತಿ ಅಥವಾ ಇರಾಕ್ ಮೇಲಿನ ದಾಳಿಯಂತಹ ಘಟನೆಯಷ್ಟೇ ತೀವ್ರತೆಯನ್ನು ಹೊಂದಿರುವ ಘಟನೆಗೆ ಸಾಕ್ಷಿಯಾಗುತ್ತಿದ್ದೇವೆ ಎಂಬುದನ್ನು ತಿಳಿಸಲಾಗಿದೆ. ಒಂದೊಮ್ಮೆ ಸಾಮಾಜಿಕ ವ್ಯವಸ್ಥೆಯ ವೌಲ್ಯಗಳು, ಗುರಿಗಳು ಮತ್ತು ಹಿತಾಸಕ್ತಿಗಳನ್ನು ಪ್ರತಿಫಲಿಸಲು ಅವಕಾಶ ನೀಡುತ್ತಿದ್ದ ವಿಶ್ವವಿದ್ಯಾನಿಲಯ ಮತ್ತು ಸಮಾಜದ ನಡುವಿನ ಸೂಕ್ಷ್ಮ ಅಂತರವು ಈಗ ಬಹುತೇಕ ಇಲ್ಲವಾಗಿದೆ. ಎರಾಸ್ಮಸ್, ಜಾನ್ ಮಿಲ್ಟನ್, ಐನ್‌ಸ್ಟೈನ್ ಮತ್ತು ಮೋಂಟಿ ಪೈಥನ್ ಮುಂತಾದವರನ್ನು ರೂಪಿಸಿದ ಸಂಸ್ಥೆಗಳನ್ನು ಈಗ ಜಾಗತಿಕ ಬಂಡವಾಳಶಾಹಿಯ ಪ್ರಾಮುಖ್ಯತೆಗಳಿಗೆ ಶರಣಾಗುವಂತೆ ಮಾಡಲಾಗಿದೆ. ಈ ವಿದ್ಯಮಾನದ ವಿವರಣೆಯನ್ನು ನೀಡುವ ಈಗ್ಲೆಟನ್, ಯಾವ ರೀತಿ ಗಮನವು ನಿಧಾನವಾಗಿ ವಿಶ್ವವಿದ್ಯಾನಿಲಯಗಳ ಆಡಳಿತವು ಶಿಕ್ಷಣತಜ್ಞರಿಂದ ವರ್ಗ ವ್ಯವಸ್ಥೆಗೆ ಬದಲಾವಣೆಗೊಂಡಿದೆ, ಹೆಚ್ಚು ಹಣ ತರುತ್ತದೆ ಎಂಬ ಕಾರಣದಿಂದ ಸಂಶೋಧನೆಗಿಂತ ಕಲಿಸುವುದಕ್ಕೆ ಕಡಿಮೆ ಪ್ರಾಧಾನ್ಯತೆ ನೀಡಲಾಗುತ್ತಿದೆ ಮತ್ತು ಯಾವ ರೀತಿ ಉಪನ್ಯಾಸಕರನ್ನು ಪ್ರಬಂಧಕರಾಗಿ ಪರಿವರ್ತಿಸಲಾಗುತ್ತಿದೆ, ಆಮೂಲಕ ವಿದ್ಯಾರ್ಥಿಗಳನ್ನು ಗ್ರಾಹಕರನ್ನಾಗಿ ಮತ್ತು ಯಾವ ರೀತಿ ಆಳ ಬೇರೂರಿ ಕುಳಿತಿರುವ ರಾಜಕೀಯ ಮತ್ತು ಆರ್ಥಿಕ ಶಕ್ತಿಗಳು ಪಠ್ಯಕ್ರಮಗಳನ್ನು ರೂಪಿಸುವವವರಾಗಿ ಬದಲಾಯಿಸಲಾಗುತ್ತಿದೆ ಎಂಬುದನ್ನು ತಿಳಿಸಿದ್ದಾರೆ. ಉನ್ನತ
ಶಿಕ್ಷಣ-ಭಾರತದ ಕತೆ
ಭಾರತದಲ್ಲಿ ಶಿಕ್ಷಣ ಕ್ಷೇತ್ರ, ಮುಖ್ಯವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಡೆದಿರುವ ಬೆಳವಣಿಗೆಯನ್ನು ಸಮೀಪದಿಂದ ಗಮನಿಸಿದವರು ಕೇಂದ್ರದಲ್ಲಿ ಕೇಸರಿ ಮೂಲಭೂತವಾದ ಪರ ಶಕ್ತಿಗಳು ಅಧಿಕಾರವನ್ನು ಹಿಡಿದಿರುವುದು, ವಿಶ್ವವಿದ್ಯಾನಿಲಯಗಳ ನಿಧಾನ ಸಾವಿಗೆ ಹೊಸ ಆಯಾಮನವನ್ನು ನೀಡಿರುವುದನ್ನು ಗಮನಿಸಲಾರದಿರರು. ಇದರ ಜೊತೆಗೆ ಸರಕಾರ ಮತ್ತು ಶಿಕ್ಷಣದ ನಡುವಿನ ಗೋಡೆಯ ಉಲ್ಲಂಘನೆ, ಸಾಂಸ್ಥಿಕ ಸ್ವಾಯತ್ತೆಯನ್ನು ದುರ್ಬಲಗೊಳಿಸಿರುವುದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರಜಾಸತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳುವುದು ಹಾಗೂ ಖಾಸಗೀಕರಣ ಮತ್ತು ಕೇಸರೀಕರಣ ಎಂಬ ದ್ವಂದ್ವ ಸಿದ್ಧಾಂತದ ಅಡಿಯಲ್ಲಿ ಭಿನ್ನಾಭಿಪ್ರಾಯಗಳ ಅಪರಾಧೀಕರಣವೂ ಸೇರಿಕೊಂಡಿದೆ. ಇದಕ್ಕೆ ಸೇರ್ಪಡೆಯಾಗಿರುವ, ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ ಸರಕಾರದ ಹೊಸ ನಡೆಯೆಂದರೆ, ದಿಲ್ಲಿ ವಿಶ್ವವಿದ್ಯಾನಿಲಯದ ತರಗತಿಗಳು, ಪರೀಕ್ಷೆಗಳು ಮತ್ತು ಪತ್ರಿಕೆ ವೌಲ್ಯಮಾಪನಗಳನ್ನು ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆಯಡಿ (ಎಸ್ಮಾ) ತಂದಿರುವುದು. ಈ ಕಾಯ್ದೆಯು ಪ್ರತಿಭಟನೆಗಳನ್ನು ನಡೆಸುವ ಶಿಕ್ಷಕರನ್ನು ಜೈಲಿಗೆ ಹಾಕುವ ಅವಕಾಶವನ್ನು ನೀಡುತ್ತದೆ. ದೇಶದಲ್ಲಿ ಉನ್ನತ ಶಿಕ್ಷಣದ ಬೃಹತ್ ಸಂಸ್ಥೆಗಳಲ್ಲಿ ಒಂದಾಗಿರುವ ದಿಲ್ಲಿ ವಿಶ್ವವಿದ್ಯಾನಿಲಯದ ಸಾಂಸ್ಥಿಕ ಸ್ವಾಯತ್ತತೆ ಮತ್ತು ಪ್ರಜಾಸತಾತ್ಮಕ ಹಕ್ಕುಗಳನ್ನು ಕಸಿಯಲು ಸಾಧ್ಯತೆಗಳನ್ನು ಪರಿಶೀಲಿಸುವ ಸಲುವಾಗಿ ಸಮಿತಿಯನ್ನು ರಚಿಸಿರುವುದು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯದ ಸೂಚನೆಯಂತೆ ವಿಶ್ವವಿದ್ಯಾನಿಲಯ ದೇಣಿಗೆ ಆಯೋಗ (ಯುಜಿಸಿ)ವು ತೆಗೆದುಕೊಂಡಿರುವ ಸರ್ವಾಧಿಕಾರಿ ಕ್ರಮವಾಗಿದೆ. ಶೈಕ್ಷಣಿಕ ಚಟುವಟಿಕೆಗಳನ್ನು ಎಸ್ಮಾದ ಅಡಿಗೆ ತಂದಿರುವುದ ರಿಂದ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಯಾವುದೇ ರೀತಿಯ ಪ್ರತಿಭಟನೆಗಳನ್ನು ನಡೆಸದಂತೆ ಮತ್ತು ಯಾವುದೇ ಶೈಕ್ಷಣಿಕ ಮತ್ತು ಇತರ ವಿಷಯಗಳಿಗೆ ಸಂಬಂಧಪಟ್ಟಂತೆ ಸಹೋದ್ಯೋಗಿಗಳನ್ನು ಪ್ರತಿಭಟನೆಯಲ್ಲಿ ಸೇರುವಂತೆ ಪ್ರಚೋದಿಸದಂತೆಯೂ ತಡೆಯುತ್ತದೆ. ಹೀಗೆ ಮಾಡಿದಲ್ಲಿ ಅವರು ಜಾಮೀನುರಹಿತ ಬಂಧನಕ್ಕೊಳಗಾಗುವ ಭೀತಿ ಎದುರಾಗಿದೆ. ಪ್ರತಿಭಟನೆ ನಡೆಸುವ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಾಗುತ್ತದೆ ಎಂದು ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಕರ ಪ್ರತಿನಿಧಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ. ಎಸ್ಮಾದಲ್ಲಿ ಇನ್ನೂ ಹಲವು ಕಠಿಣ ನಿಯಮಗಳಿದ್ದು, ಪ್ರತಿಭಟನೆ ಅಥವಾ ಚಳವಳಿಗಳಿಗೆ ಆರ್ಥಿಕ ಸಹಾಯ ನೀಡುವವರ ವಿರುದ್ಧವೂ ಕಠಿಣ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಹಾಗಾಗಿ ಸದ್ಯ ಕೇವಲ ಔಪಚಾರಿಕವಾಗಿ ಉಳಿದಿರುವ ಈ ಯೋಜನೆಯು ಜಾರಿಗೆ ಬಂದರೆ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆಯೊಡ್ಡುವಂತಹ ಕ್ರಿಯೆಗಳಲ್ಲಿ ಭಾಗವಹಿಸುವುದರ ಮೇಲೆ ನಿಷೇಧ ಬೀಳಲಿದೆ. ನಿಜಾಂಶ ಏನೆಂದರೆ, ದಿಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಕರು ಯಾವಾಗಲೂ ದೇಶದಲ್ಲಿ ನಡೆಯುವ ವಿಶ್ವವಿದ್ಯಾನಿಲಯಗಳ ಮತ್ತು ಕಾಲೇಜು ಶಿಕ್ಷಕರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ರುತ್ತಾರೆ ಮತ್ತು ಸರಕಾರ ಅವರನ್ನು ತಹಬಂದಿಗೆ ತರಲು ಯೋಚಿಸಿದೆ. ಒಂದೊವ್ಮೆು ದಿಲ್ಲಿ ವಿಶ್ವವಿದ್ಯಾನಿಲಯವನ್ನು ಈ ಯೋಜನೆಯಡಿ ತರುವಲ್ಲಿ ಸಫಲವಾದರೆ ಉಳಿದ ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾನಿಲಯಗಳು ತಾವಾಗಿಯೇ ಈ ಹೊಸ ಕಾನೂನನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯಕ್ಕೆ ಸಿಲುಕುತ್ತದೆ ಎಂಬುದನ್ನು ಸರಕಾರ ತಿಳಿದಿದೆ.
ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಯೋಗಿಕ ಯೋಜನೆ?
ದಿಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಕರ ಮೇಲೆ ಹೇರಲು ಪ್ರಯತ್ನಿಸಿರುವ ಈ ಪ್ರಾಯೋಗಿಕ ಕ್ರಮವು, ಯುಜಿಸಿಯು ಎಲ್ಲ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಪರಿಚಯಿಸಲು ಮುಂದಾಗಿರುವ ಮಾದರಿಯತ್ತ ಇಟ್ಟ ಪ್ರಥಮ ಹೆಜ್ಜೆಯಾಗಿದೆ. ಯೋಚಿಸುವ ಸ್ವಾತಂತ್ರ, ಭಿನ್ನಾಭಿಪ್ರಾಯ ಹೊಂದುವ ಮತ್ತು ಅದರ ಮೇಲೆ ಕಾರ್ಯಾಚರಿಸುವ ಸ್ವಾತಂತ್ರವನ್ನು ನೀಡುವ ಶೈಕ್ಷಣಿಕ ಜಗತ್ತು ಮತ್ತು ಸರಕಾರಿ ಯಂತ್ರದ ನಡುವೆ ಇರುವ ಗೋಡೆಯನ್ನು ಉಲ್ಲಂಘಿಸಲು ಇದು ನೆರವಾಗಲಿದೆ. ಐದು ತಿಂಗಳ ಹಿಂದೆ ತನ್ನ ಯೋಜನೆಯನ್ನು ಎಲ್ಲ ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ತಿಳಿಸಿದ ಯುಜಿಸಿ, ಕೇಂದ್ರ ಸರಕಾರದಿಂದ ಅನುದಾನವನ್ನು ಪಡೆಯುವ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಕೇಂದ್ರ ನಾಗರಿಕ ಸೇವೆ (ನಡತೆ)ಕಾಯ್ದೆ (ಸಿಸಿಎಸ್)ಗೆ ಬದ್ಧವಾಗಿರಬೇಕೆಂದು ಸ್ಪಷ್ಟವಾಗಿ ತಿಳಿಸಿತ್ತು. ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ ಅಂಥ ಉದ್ಯೋಗಿಯನ್ನು ವಜಾಗೊಳಿಸುವ ಅಧಿಕಾರವನ್ನು ಸರಕಾರ ಹೊಂದಿದೆ. ಶಿಕ್ಷಕರು ಪಾಲಿಸಬೇಕಾದ ಮತ್ತು ಉಲ್ಲಂಘಿಸಿದರೆ ಕೆಲಸದಿಂದಲೇ ವಜಾಗೊಳಿಸಲ್ಪಡುವ ಶಿಕ್ಷೆಗೊಳಪಡಬಹುದಾದ ಸಿಸಿಎಸ್ ನಿಯಮಗಳಾದರೂ ಯಾವುದು. 21 ಪುಟಗಳ ನಿಯಮಗಳ ಸಂಕ್ಷಿಪ್ತ ಮಾಹಿತಿಯನ್ನು ಈ ಕೆಳಗೆ ನೀಡಿರುವ ಅದರ ಒಂದು ನಿಯಮದಿಂದ ತಿಳಿದುಕೊಳ್ಳಬಹುದಾಗಿದೆ:
ಅ) ಕೇಂದ್ರ ಅಥವಾ ರಾಜ್ಯ ಸರಕಾರದ ಪ್ರಸ್ತುತ ಅಥವಾ ಇತ್ತೀಚಿನ ನೀತಿ ಅಥವಾ ಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ
ಆ) ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ನಡುವಿನ ಸಂಬಂಧಕ್ಕೆ ಮುಜುಗರವುಂಟುಮಾಡುವ ಅಥವಾ
ಇ) ಕೇಂದ್ರ ಸರಕಾರ ಮತ್ತು ಯಾವುದೇ ವಿದೇಶಿ ಸರಕಾರದ ನಡುವಿನ ಸಂಬಂಧಕ್ಕೆ ಮುಜುಗರವುಂಟು ಮಾಡುವ ಯಾವುದೇ ರೀತಿಯ ಹೇಳಿಕೆ ಅಥವಾ ಅಭಿಪ್ರಾಯವನ್ನು ಸರಕಾರಿ ಉದ್ಯೋಗಿ ಯಾವುದೇ ಮಾಧ್ಯಮ ಅಥವಾ ಸಾರ್ವಜನಿಕ ವೇದಿಕೆಯಲ್ಲಿ, ರೇಡಿಯೊ, ದೃಶ್ಯ ಮಾಧ್ಯಮ ಮುಂತಾದ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಅಥವಾ ತನ್ನ ಹೆಸರು, ಅಥವಾ ಪರ್ಯಾಯ ಹೆಸರು ಅಥವಾ ಇತರ ಯಾವುದೇ ವ್ಯಕ್ತಿಯ ಹೆಸರಲ್ಲಿ ದಾಖಲೆಗಳನ್ನು ಮುದ್ರಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ವಿಶ್ವವಿದ್ಯಾನಿಲಯವು ಈ ಕಾನೂನನ್ನು ಅನುಷ್ಠಾನಕ್ಕೆ ತರುವುದು, ಹೊಸ ಜ್ಞಾನವನ್ನು ಉತ್ಪಾದಿಸಲು ಮತ್ತು ಇತರರ ಜೊತೆ ಅದನ್ನು ಹಂಚಲು ಶಿಕ್ಷಕರಿಗೆ ಇರುವ ಸ್ವಾತಂತ್ರ, ಸ್ವಾಯತ್ತೆಯ ಜೊತೆ ಹೊಂದಾಣಿಕೆ ಮಾಡಿದಂತೆ. ಬೌದ್ಧಿಕ ಪ್ರಗತಿಯು ಮುಕ್ತ ವಿಚಾರಣೆಯ ಸ್ಫೂರ್ತಿಯ ಅಗತ್ಯ ಯಾಕಿದೆ ಎನ್ನುವುದು ಉನ್ನತ ಶಿಕ್ಷಣದ ಕುರಿತ ಮೊಟ್ಟಮೊದಲ ವರದಿಯು ಸ್ಪಷ್ಟಪಡಿಸಿದೆ. ಉನ್ನತ ಶಿಕ್ಷಣವು ಖಂಡಿತವಾಗಿಯೂ ರಾಜ್ಯದ ಜವಾಬ್ದಾರಿಯಾಗಿದೆ. ಆದರೆ ರಾಜ್ಯದ ಸಹಾಯವನ್ನು ಶೈಕ್ಷಣಿಕ ನೀತಿಗಳು ಮತ್ತು ಆಚರಣೆಗಳ ಮೇಲೆ ರಾಜ್ಯದ ನಿಯಂತ್ರಣ ಎಂದು ತಪ್ಪು ತಿಳಿಯಬಾರದು. ಬೌದ್ಧಿಕ ಪ್ರಗತಿಯು ಮುಕ್ತ ವಿಚಾರಣೆಯ ಸ್ಫೂರ್ತಿಯನ್ನು ಬೇಡುತ್ತದೆ. ಪರಿಣಾಮಗಳ ಬಗ್ಗೆ ಚಿಂತಿಸದೆ ಸತ್ಯದ ಹುಡುಕಾಟ ಮತ್ತು ಆಚರಣೆ ವಿಶ್ವವಿದ್ಯಾನಿಲಯಗಳ ಮಹಾತ್ವಾಕಾಂಕ್ಷೆಯಾಗಿದೆ. ವಿವಾದಿತ ವಿಷಯಗಳ ಬಗ್ಗೆ ದೇಶದ ಯಾವುದೇ ನಾಗರಿಕರಂತೆ ಶಿಕ್ಷಕರಿಗೂ ಮಾತನಾಡುವ ಸ್ವಾತಂತ್ರವಿರಬೇಕಾದುದು ವೃತ್ತಿಪರ ಸಮಗ್ರತೆಗೆ ಅಗತ್ಯವಾಗಿದೆ. ಮಾನಸಿಕ ನೈತಿಕತೆಯನ್ನು ಅಭಿವೃದ್ಧಿಪಡಿಸಲು ಮುಕ್ತ ವಾತಾವರಣ ಅತ್ಯಗತ್ಯವಾಗಿದೆ. ಪ್ರಾಯಶಃ, ಜಾಗತಿಕ ಸ್ಪರ್ಧಾತ್ಮಕ ಪರಿಸರದಲ್ಲಿ ಸ್ಥಿರವಾಗಿರಲು ಮಾನದಂಡಗಳನ್ನು ಬದಲಾಯಿಸುವ ಸಮಯ ಬಂದಿದೆ ಎಂದು ದೇಶದ ಆಡಳಿತಗಾರರು ಯೋಚಿಸಿರಬಹುದು. ಸದ್ಯ ನಮ್ಮ ಮುಂದಿರುವ ಚಿತ್ರಣವು ಗೊಂದಲವನ್ನು ಮೂಡಿಸುವಂತಿದೆ. ಯುಜಿಸಿಯ ನಿರ್ದೇಶನ ಯಾವ ರೀತಿಯಿದೆಯೆಂದರೆ, ತರಗತಿಗಳು ಮತ್ತು ನಾಗರಿಕ ಸಮಾಜದಲ್ಲಿ ಶಿಕ್ಷಕರು ನಿರ್ವಹಿಸಬೇಕೆಂದು ನಿರೀಕ್ಷಿಸಲಾಗುವ ಪಾತ್ರಗಳನ್ನು ಸುಲಭವಾಗಿ ಅಪರಾಧೀಕರಣಗೊಳಿಸಬಹುದಾಗಿದೆ. ಇದರ ತಕ್ಷಣದ ಪರಿಣಾಮವು, ನಿಗದಿತ ಗೆರೆಯನ್ನು ಮೀರುವ ವಿದ್ಯಾರ್ಥಿಗಳ ಮೇಲೆ ಬೀಳಲಿದೆ.
ಅರ್ಥಶಾಸ್ತ್ರದ ಉಪನ್ಯಾಸಕರು ಅರ್ಥಶಾಸ್ತ್ರದ ಬಗ್ಗೆ ಚರ್ಚೆ ನಡೆಸಿದ ಕಾರಣಕ್ಕೆ ಶಿಕ್ಷಗೊಳಪಡಬಹುದು. ರಾಜ್ಯಶಾಸ್ತ್ರಜ್ಞರು ರಾಜಕೀಯ, ಪರಿಸರ ವಿಜ್ಞಾನ ಉಪನ್ಯಾಸಕರು ಪರಿಸರ ನೀತಿ ಗಳನ್ನು ಚರ್ಚಿಸಿದ ಕಾರಣಕ್ಕೆ ಶಿಕ್ಷೆಗೆ ಒಳಪಡಬಹುದು. ಇದರರ್ಥ, ಸಾಹಿತ್ಯ ಮತ್ತು ಕಲಾ ಸಂಪ್ರದಾಯಗಳ ಬಗ್ಗೆ ನೀಡಲಾಗುವ ಹೇಳಿಕೆಗಳೂ ದಂಡನಾತ್ಮಕ ಕ್ರಮಗಳನ್ನು ಆಹ್ವಾನಿಸಬಹುದು. ಸದ್ಯದ ಮಟ್ಟಿಗೆ, ಜವಾಹರ ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು) ಈ ಹೊಸ ನಿಯಮವನ್ನು ಅನುಷ್ಠಾನಕ್ಕೆ ತರಲಿರುವ ಮೊತ್ತಮೊದಲ ಕೇಂದ್ರೀಯ ವಿಶ್ವವಿದ್ಯಾನಿಲಯವಾಗಬಹುದು. ಇದರೊಂದಿಗೆ, ಕೇಂದ್ರ ಸರಕಾರದಿಂದ ಅನುದಾನವನ್ನು ಪಡೆಯುವುದನ್ನು ನಿಲ್ಲಿಸದ ಹೊರತು ಎಲ್ಲ ಕೇಂದ್ರೀಯ ವಿಶ್ವವಿದ್ಯಾನಿಲಯಗಳು (ಹಳೆ ಅಂದಾಜಿನಂತೆ 45) ನಿಧಾನವಾಗಿಯಾದರೂ ಈ ನಿಯಮವನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯಕ್ಕೆ ಸಿಲುಕಲಿವೆ. ವಿಶ್ವವಿದ್ಯಾನಿಲಯಗಳಿಗೆ ಅನುದಾನವನ್ನು ಸ್ಥಗಿತಗೊಳಿಸುವ ಮೂಲಕ ಅವುಗಳು ಕ್ಯಾಂಪಸ್‌ಗಳನ್ನು ಮುಚ್ಚುವ, ವಿದ್ಯಾರ್ಥಿಗೆ ನೀಡುವ ಸೇವೆಯನ್ನು ಕಡಿಮೆಗೊಳಿಸುವ ಮತ್ತು ಸಿಬ್ಬಂದಿ ಕಡಿತಗೊಳಿಸುವ ಅನಿವಾರ್ಯಕ್ಕೆ ಸಿಲುಕಿಸುವ ಅಥವಾ ಉದ್ಯಮಶೀಲತೆಗೆ ಪೂರಕವಾಗಿ ವರ್ತಿಸುವ ಮೂಲಕ ತನ್ನ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳುವಂತೆ ಮಾಡುವ ಮೂಲಕ ಶೈಕ್ಷಣಿಕ ಸಂಸ್ಥೆಗಳನ್ನು ಹಂತಹಂತವಾಗಿ ನಾಶ ಮಾಡುವ ಅಥವಾ ಹಿಂಬಾಗಿಲಿನ ಮೂಲಕ ಅವುಗಳನ್ನು ಖಾಸಗೀಕರಣಗೊಳಿಸುವ ಸ್ಪಷ್ಟ ಪ್ರಯತ್ನವಾಗಿದೆ ಎಂಬುದು ನಿಸ್ಸಂಶಯ.
ಆದರೆ ವಿಶ್ವವಿದ್ಯಾನಿಲಯದ ಅರ್ಥವನ್ನೇ ಅಳಿಸಿ ಹಾಕುವಂಥ ಇತರ ಅನೇಕ ಕಪಟ ಹಾದಿಗಳಿವೆ ಎಂಬುದನ್ನು ಕೇಸರಿ ಪಡೆಗಳು ತೋರಿಸಿಕೊಟ್ಟಿವೆ. ವಿಶ್ವವಿದ್ಯಾನಿಲಯಗಳನ್ನು ಸರಕಾರಿ ಇಲಾಖೆಯಾಗಿ ಪರಿವರ್ತಿಸುವುದು ಅಥವಾ ಭಿನ್ನಾಭಿಪ್ರಾಯದ ಧ್ವನಿಗಳನ್ನು ಎಸ್ಮಾ ಮೂಲಕ ತುಳಿಯುವುದರಿಂದ ಸ್ವತಂತ್ರ ಚಿಂತನೆಯನ್ನು ನಿರ್ಬಂಧಿಸಲಿದೆ ಮತ್ತು ಆಮೂಲಕ ಹೊಸ ಜ್ಞಾನಗಳನ್ನು ಸೃಷ್ಟಿಸುವ ಕ್ರಿಯೆಯ ಮೇಲೆ ಪರಿಣಾಮ ಬೀರಲಿದೆ. ಆದರೆ, ನಾವಿಂದು ಉಪಯೋಗಿಸುವ ಎಲ್ಲ ಜ್ಞಾನಗಳನ್ನು ಪ್ರಾಚೀನ ಕಾಲದ ಋಷಿ ಮುನಿಗಳು ಈಗಾಗಲೇ ಅಭಿವೃದ್ಧಿಪಡಿಸಿದ್ದಾರೆ ಎಂದು ಕೇಸರಿಪಡೆ ನಂಬಿರುವಾಗ ಅವರಿಗೇನು ಚಿಂತೆ. ಅಂಬಾನಿಯ ಆಸ್ಪತ್ರೆಯ ಉದ್ಘಾಟನೆಯ ಸಂದರ್ಭದಲ್ಲಿ, ನಮ್ಮ ಶಾಸ್ತ್ರಗಳಲ್ಲಿ ಪ್ಲಾಸ್ಟಿಕ್ ಸರ್ಜರಿ ಮತ್ತು ಜೆನೆಟಿಕ್ ಇಂಜಿನಿಯರಿಂಗ್‌ನ ಉಲ್ಲೇಖವಿದೆ ಎಂದು ಹೇಳುವ ಮೂಲಕ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು ಪ್ರದರ್ಶಿಸಿದ ಜ್ಞಾನದ ಪರಾಕಾಷ್ಠೆಗಿಂತ ಹೆಚ್ಚಿನ ಸಾಕ್ಷಿ ಬೇಕಾಗಿದೆಯೇ! (ವಿಶ್ವವಿದ್ಯಾನಿಲಯಗಳ ಮೇಲೆ ಸಿಸಿಎಸ್ ನಿಯಮ ಮತ್ತು ಎಸ್ಮಾ ಹೇರುವ ಸರಕಾರದ ಪ್ರಯತ್ನವನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿರೋಧಿಸಿದ್ದರಿಂದ ಎಸ್ಮಾಕ್ಕೆ ಸಂಬಂಧಿಸಿ ಆದೇಶವನ್ನು ಹಿಂಪಡೆದುಕೊಳ್ಳುವ ಒತ್ತಡಕ್ಕೆ ಸರಕಾರ ಸಿಲುಕಿತು. ಲೇಖಕರು ಈ ಲೇಖನವನ್ನು ಬರೆದ ನಂತರ ಈ ಬೆಳವಣಿಗೆ ನಡೆದಿತ್ತು.)
newsclick.in