ಉದಯಾಸ್ತಮಾನವೆಂಬೆರಡು ಕೊಳಗ
ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ
ಶಿವನ ನೆನೆಯಿರೆ, ಶಿವನ ನೆನೆಯಿರೆ ಈ ಜನ್ಮ ಬಳಿಕಿಲ್ಲ.
ಚೆನ್ನಮಲ್ಲಿಕಾರ್ಜುನದೇವರ ನೆನೆದು
ಪಂಚಮಹಾಪಾತಕರೆಲ್ಲರು ಮುಕ್ತಿವಡೆದರಂದು.
-ಅಕ್ಕಮಹಾದೇವಿ
ಜನಿಸಿದ ಪ್ರತಿಯೊಂದು ಜೀವಿ ಪ್ರತಿಕ್ಷಣ ಸಾವಿನ ದವಡೆಯ ಕಡೆಗೇ ಸಾಗುತ್ತಿರುತ್ತದೆ. ಸಾವು ಬರುವ ಮೊದಲೇ ಮಂಗಳಕರವಾದ ಶಿವನನ್ನು ನೆನೆದು ಮಂಗಳಕರವಾದುದನ್ನೇ ಮಾಡಿರಿ. ಇನ್ನೊಂದು ಜನ್ಮ ಇಲ್ಲದ ಕಾರಣ ಏನಾದರೂ ಮಂಗಳಕರವಾದುದನ್ನು ಮಾಡಲು ಸಾಧ್ಯವಿದ್ದರೆ ಇದೇ ಜನ್ಮದಲ್ಲಿ ಸಾಧ್ಯ. ಇಂಥ ಮಂಗಳಕರವಾದ ಮತ್ತು ಮಂಗಳಕರವಾದುದನ್ನೇ ಮಾಡಲು ಪ್ರೇರೇಪಿಸುವ ಶಿವನಾದ ಚೆನ್ನಮಲ್ಲಿಕಾರ್ಜುನದೇವರ ನೆನೆದು ಆ ಮೂಲಕ ಸದ್ಭಕ್ತರಾಗಿ ಮಂಗಳಕರವಾದುದನ್ನೇ ಸಾಧಿಸಿ ಮುಕ್ತಿಪಡೆದವರಲ್ಲಿ ಪಂಚಮಹಾಪಾತಕರೂ ಇದ್ದಾರೆ. ಬ್ರಹ್ಮಹತ್ಯೆ, ಸುರಾಪಾನ, ಕಳ್ಳತನ, ಗುರುವಿನ ಪತ್ನಿಯ ಕಡೆಗೆ ಲಕ್ಷ್ಯ ಕೊಡುವುದು ಮತ್ತು ಇಂಥವರ ಜೊತೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ಪಂಚ ಮಹಾಪಾತಕ ಎಂದು ಕರೆಯುತ್ತಾರೆ. ಅವರು ತಾವು ಮಾಡಿದ ಪಾಪ ಕಾರ್ಯಗಳಿಗೆ ಪಶ್ಚಾತ್ತಾಪ ಪಟ್ಟು ಪರಿಶುದ್ಧರಾದ ಕಾರಣ ಮುಕ್ತಿಯನ್ನು ಹೊಂದಿದವರಾಗಿದ್ದಾರೆ ಎಂದು ಅಕ್ಕ ತಿಳಿಸುತ್ತಾಳೆ.
ಮಾನವರೆಲ್ಲ ಕಾಲದ ಕಟ್ಟಳೆಯಲ್ಲೇ ಬದುಕುತ್ತಿದ್ದಾರೆ. ಆಯುಷ್ಯವನ್ನು ಅಳೆಯಲು ಸೂರ್ಯ ಹುಟ್ಟುವ ಸಮಯವಾದ ಬೆಳಗು ಮತ್ತು ಸೂರ್ಯ ಮುಳುಗುವ ಸಂಜೆ ಎಂಬ ಎರಡು ಕೊಳಗಗಳಿವೆ. ಈ ಕೊಳಗಗಳು ನಮಗೆ ಸಂಬಂಧಿಸಿದ ತಮ್ಮ ಕರ್ತವ್ಯವನ್ನು ಮುಗಿಸುವ ಮೊದಲೇ, ಅಂದರೆ ನಮ್ಮ ಆಯುಷ್ಯ ತೀರುವ ಮೊದಲೇ ನಾವು ನಮ್ಮ ಕರ್ತವ್ಯವನ್ನು ಮುಗಿಸಬೇಕಿದೆ. ಸಕಲ ಜೀವರಾಶಿಗೆ ಒಳ್ಳೆಯದಾಗುವಂಥ ಮಂಗಲಮಯವಾದ ಕರ್ತವ್ಯವನ್ನು ಪಾಲಿಸುವುದೇ ನಮ್ಮ ಗುರಿಯಾಗಿರಬೇಕಾಗಿದೆ.
ಬಸವಾದಿ ಶರಣರು ಕರ್ಮಸಿದ್ಧಾಂತವನ್ನು ಅಲ್ಲ ಗಳೆದಿದ್ದಾರೆ. ಈ ವಚನದಲ್ಲಿ ಅಕ್ಕಮಹಾದೇವಿ ಕರ್ಮಸಿದ್ಧಾಂತವನ್ನು ಅಲ್ಲಗಳೆದಿದ್ದಾಳೆ. ಕರ್ಮಸಿದ್ಧಾಂತವು ಮಾನವರ ಮೆದುಳಿನ ಮೇಲೆ ಸವಾರಿ ಮಾಡುತ್ತದೆ. ಅವರನ್ನು ಮಾನಸಿಕ ಗುಲಾಮರನ್ನಾಗಿಸುತ್ತದೆ. ಜನ್ಮಜನ್ಮಾಂತರಗಳಿಂದ ಶೇಖರಣೆಯಾದಂಥ ಸಂಚಿತಕರ್ಮ, ಹಿಂದಿನ ಜನ್ಮದಿಂದ ಉಳಿದುಕೊಂಡು ಬಂದಂಥ ಪ್ರಾರಬ್ಧಕರ್ಮ ಮತ್ತು ಈ ಜನ್ಮದಿಂದ ಮುಂದಿನ ಜನ್ಮಕ್ಕೆ ಬರುವ ಆಗಾಮಿಕರ್ಮ ಎಂಬ ಕರ್ಮಗಳ ಬಲೆಯಲ್ಲಿ ಇಡೀ ಭಾರತೀಯ ಸಮಾಜ ಸಿಕ್ಕಿ ಒದ್ದಾಡುತ್ತಲೇ ಇದೆ. ಆದರೆ ಜನರು ತಮಗಿರುವ ಒಂದೇ ಜನ್ಮದಲ್ಲಿ ಪರಿಶುದ್ಧರಾಗಿ ಮುಕ್ತಿಪಡೆಯುವ ಮಾರ್ಗನ್ನು ಅಕ್ಕಮಹಾದೇವಿ ಸೂಚಿಸಿದ್ದಾಳೆ.
ಶಿವ ಎಂದರೆ ಮಂಗಳಕರ. ಶಿವನನ್ನು ನೆನೆಯುವುದೆಂದರೆ ಮಂಗಳಕರವಾದುದನ್ನು ನೆನೆಯುವುದು ಮತ್ತು ಅದನ್ನು ಸಾಧಿಸುವುದು. ಅಂದರೆ ಅಮಂಗಳಕರವಾದುದನ್ನು ಮಾಡದೆ ಇರುವುದು. ಆಮೂಲಕ ಎಲ್ಲ ಅವಗುಣಗಳಿಂದ ಹೊರಬಂದು ಜೀವಿತಾವಧಿಯಲ್ಲೇ ಮುಕ್ತಿಯನ್ನು ಪಡೆಯುವುದು.