ಮಂಗಳೂರು ಲಿಟ್ ಫೆಸ್ಟ್: ಬಲವಂತ(ಪಂಥ)ದ ಮಾಘಸ್ನಾನ
ಒಬ್ಬ ಜವಾಬ್ದಾರಿಯುತ ಸಾಹಿತಿಯಾಗಿ ಮತ್ತು ಕಳೆದ ಸುಮಾರು ಹದಿನೈದು ವರ್ಷಗಳಿಂದ ಜಿಲ್ಲೆ ರಾಜ್ಯ ದೇಶ ವಿದೇಶಗಳ ಹತ್ತಾರು ಲಿಟ್ ಫೆಸ್ಟ್‌ಗಳನ್ನು ವೈಯಕ್ತಿಕವಾಗಿ ವಿವಿಧ ನೆಲೆಗಳಲ್ಲಿ ಹೋಗಿ ಮುಖತಃ ಕಂಡು ಕೇಳಿರುವ ನನಗೆ ಇಂತಹ ಲಿಟ್‌ಫೆಸ್ಟ್‌ಗಳು ಹೇಗಿರುತ್ತವೆ, ಹೇಗಿರಬೇಕು ಎಂಬ ಒಂದಿಷ್ಟು ಅನುಭವವಿದೆ. ಅವುಗಳ ಅಜೆಂಡ - ಹಿಡನ್ ಅಜೆಂಡಗಳ ಬಗ್ಗೆಯೂ ಹೆಚ್ಚು ಕಡಿಮೆ ಸುಲಭವಾಗಿ ತಿಳಿಯಬಲ್ಲೆ. ಸಾಹಿತ್ಯ - ಸಾಹಿತ್ಯ ಹಬ್ಬಗಳು ಎಡ, ಬಲ ಅಪರೂಪಕ್ಕೆ ಕೆಲವೊಮ್ಮೆ ನಡು ಪಂಥದ ಹಾದಿ ಹಿಡಿದಿರುವುದು ಭಾರತದಲ್ಲಂತು ಹೊಸದಲ್ಲ. ಅದಕ್ಕೆ ಪೂರಕವಾಗಿ ದೊಡ್ಡ ಪಟ್ಟಿಯ ಉದಾಹರಣೆಯನ್ನೇ ಕೊಡಬಹುದು. ಆದರೆ ಸಾಹಿತ್ಯ ಹಬ್ಬ, ಒಂದು ಸಾಹಿತ್ಯ ಪಂಥದ ಜೊತೆ ಜೊತೆಗೆ ಸಂಪೂರ್ಣ ಧರ್ಮವೊಂದರ ಜಾಡು ಹಿಡಿದು ನೇರವಾಗಿ ಮುಂದಿನ ಚುನಾವಣೆಯ ಗೆಲುವು-ಸೋಲಿನ ಪರಿಣಾಮದ ಸಾಧ್ಯತೆಯ ಹೊಸ್ತಿಲಲ್ಲಿ ಬಂದು ನಿಂತದ್ದು ಬಹುಶಃ ಇದೇ ಪ್ರಥಮವಿರಬಹುದೇನೊ. ಈ ನಿಟ್ಟಿನಲ್ಲಿ MLF ತನ್ನ ಚೊಚ್ಚಲ ಯತ್ನದಲ್ಲಿಯೇ ದಾಖಲೆ ಸೃಷ್ಟಿಸಿ, ಸಾಹಿತ್ಯ ಲೋಕಕ್ಕೆ ಮುಂದಿನ ದಿನಗಳಿಗೆ ಒಂದು ರೀತಿಯ ಭಯಾನಕ ವಾತಾವರಣವನ್ನೇ ನಿರ್ಮಿಸಿದೆ.
‘ಭಾರತದ ಕಲ್ಪನೆ’ ಎಂಬ (The idea of bharat) ನೆಲೆಯಲ್ಲಿ 2 ದಿನ ನಡೆದ ‘MLF 2018 ’ರ ವಿವಿಧ 18-20 ಗೋಷ್ಠಿಗಳಲ್ಲಿ ಭಾಗವಹಿಸಿದ ಭಾಷಣಗಾರರ ಒಟ್ಟು ಸಂಖ್ಯೆ ಸುಮಾರು 60ರಷ್ಟು. ಅ 60ರಲ್ಲಿ ಭಾರತೀಯ ಹಿಂದುಯೇತರ ವ್ಯಕ್ತಿಗಳು ಸೊನ್ನೆ!! ಈ ಒಂದು ನಿದರ್ಶನವೇ ಸಾಕಾದೀತು MLF ಕೇವಲ ಹಿಂದೂಪರ ಭಾರತದ ಕಲ್ಪನೆಯ ಸಾಹಿತ್ಯ ಹಬ್ಬ ಎಂದು ಸಾರಸಗಟಾಗಿ ಘೋಷಿಸಲು. ಇದೇ ಕಾರಣಕ್ಕೆ ಆತಂಕ ಹುಟ್ಟುತ್ತಿರುವುದು.
ಈಗಾಗಲೇ ಇರುವ ಎಡ-ಬಲ ಪಂಥಗಳ ವೈಭವಿಕರಣದ ಸಾಹಿತ್ಯ ಹಬ್ಬಗಳ ಜೊತೆಗೆ ನಿರ್ದಿಷ್ಟ ಮತ ಧರ್ಮಗಳ ಸೇರ್ಪಡೆಯಗಿ ಭಾರತದ ಕಲ್ಪನೆ ಸಾಕಾರಗೊಂಡರೆ.... ಸಾಹಿತ್ಯದ ಪಾಡು ಹಾಗಿರಲಿ, ಭಾರತದ ಪಾಡು ಅದೇನಾಗಬಹುದು ಮುಂದೆ? ಪ್ರಮುಖವಾಗಿ ‘‘ಎಡಪಂಥೀಯರು ಇಂತಹ ಹಬ್ಬಗಳಲ್ಲಿ ತಮ್ಮತನವನ್ನು ಉಣಬಡಿಸುತ್ತಾರೆ, ಇತರರನ್ನು ಹೀಯಾಳಿಸುತ್ತಾರೆ (ಕೆಲವೊಮ್ಮೆ ಇದು ಅಲ್ಲ್ಲಲ್ಲಿ ಹೌದು ಸಹ) ಹಾಗಿರುವಾಗ ನಾವು ಮಾಡಿದರೆ ತಪ್ಪೇನು?’’, ಎಂಬ ಮಾತಂತೂ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ನಿಲುವಿನಂತೆ ಸಹಜವಾಗಿ ಕಂಡರೂ ಕೈಗೆತ್ತಿಕೊಂಡ ಹೊಸ ಮುಳ್ಳು ಮೈ ಪರಚುವಂತಾಗಬಾರದಲ್ಲ ಎಂಬುವುದಷ್ಟೆ ಆತಂಕಕ್ಕೆ ಕಾರಣ. ಭಾರತದಲ್ಲಿ ಇಂತಹ ಹಬ್ಬಗಳಿಂದ ಚುನಾವಣೆಯಲ್ಲಿ ಯಾರಾನ್ನಾದರೂ ಗೆಲ್ಲಿಸಲು ಸಾಧ್ಯವಾದರೆ ಇದೊಂದು ಪ್ರಜಾಪ್ರಭುತ್ವದ ಅಣಕವಾದೀತೇ ವಿನಹ ಸಾಹಿತ್ಯದ ಗೆಲುವಾಗಲಿಕ್ಕಿಲ್ಲ.
MLF ಗೋಷ್ಠಿಗಳ ಬಗ್ಗೆ
ಇಂತಹ ಹಬ್ಬಗಳಲ್ಲಿ ಗೋಷ್ಠಿಗಳು ಸಾಹಿತ್ಯದ ಹೊರತು ಬಹುರೂಪಿಯಾಗಿ ಪರಿವರ್ತನೆಗೊಂಡಿರುವುದು ಹೊಸದೇನಲ್ಲ. ಆದರೆ ಇಲ್ಲಿ ಈ ಹೊಸತನದೊಂದಿಗೆ ಕೆಲವು ನಿರ್ದಿಷ್ಟ ಮತ ಧರ್ಮಗಳ, ರಾಜಕೀಯ ಪಕ್ಷ, ವ್ಯಕ್ತಿಗಳ ವಿರೋಧಿಯಾಗಿ ನಿಂತದ್ದು ಮತ್ತೊಂದು ಖೇದಕರ ವಿಷಯ. ಅದು ಯಾವುದೇ ವಿಚಾರದ ಗೋಷ್ಠಿ ಇರಲಿ ಬಹುತೇಕ ಕೊನೆಯಲ್ಲಿ 2019ರಲ್ಲಿ ಮೋದಿ ಗೆಲ್ಲಬೇಕೆನ್ನುವಲ್ಲಿಗೆ ಸಮಾಪ್ತಿ ಹೊಂದುತ್ತಿದ್ದುದು ವಿಪರ್ಯಾಸವೋ ವಿಸ್ಮಯವೋ ಇನ್ನೂ ತಿಳಿಯುತ್ತಿಲ್ಲ. ಪ್ರಜಾತಾಂತ್ರಿಕವಾಗಿ ಮೋದಿ ಮುಂದೆ ಗೆದ್ದರೂ ಅಥವಾ ಸೋತರೂ ಅದಕ್ಕೆ ಅದರದ್ದೇ ಆದ ಕಾರಣಗಳಿವೆ. ಜನ ಅದನ್ನು ನಿರ್ಧರಿಸುತ್ತಾರೆ, ಸ್ವೀಕರಿಸುತ್ತಾರೆ. ಆದು ಬಿಟ್ಟು ಸಾಹಿತ್ಯ ಹಬ್ಬದ ಹೆಸರಿನಲ್ಲಿ ಇದನ್ನು ಮಾಡಹೊರಟರೆ...ಪ್ರಶ್ನೆ ಮತ್ತು ಪರಿಣಾಮ ಗಂಭೀರದ್ದು. ಉಳಿದಂತೆ ಕೆಲವು ಗೋಷ್ಠಿಗಳಲ್ಲಿ ಭಾಗವಹಿಸಿದವರ ಪಾಂಡಿತ್ಯ ಏಕಮುಖವಾದರೂ ಮೆಚ್ಚ ತಕ್ಕದ್ದೆ. ಇನ್ನ್ನು ಮಹಿಳೆಯರ ಸಹಜ ಮತ್ತು ಖಾಸಗಿಯಾಗಿರಬೇಕಾದ ಮಾಸಿಕ ಸ್ರಾವ ಹಾಗೂ ಅಯ್ಯಪ್ಪನ ಬ್ರಹ್ಮಚಾರಿತ್ವದ ವಿಧಾನ, ಸಾಹಿತ್ಯ ಹಬ್ಬ ಒಂದರ ವೇದಿಕೆ ಹತ್ತಿದ್ದು ಬದಲಾಗುತ್ತಿರುವ ಭಾರತ ಕಲ್ಪನೆಯ ಹೊಸಮುಖವು ಹೌದು.
ಎಸ್.ಎಲ್ ಭೈರಪ್ಪನವರಿಗೆ ನೀಡಿದ ಜೀವಮಾನ ಸಾಧನ ಪ್ರಶಸ್ತಿ ಅತ್ಯಂತ ಖುಷಿ ಕೊಟ್ಟರೂ ಅದು ಅವರ ಸಾಹಿತ್ಯಕ್ಕಿಂತ ಹೆಚ್ಚು ರಾಜಕೀಯ ಒಲವಿಗಾಗಿತ್ತು ಎಂಬುದು ಎಲ್ಲರೂ ಬಲ್ಲ ವಿಷಯ. ಬಹುತೇಕ ಒಂದೇ ಮಾನಸಿಕತೆಯ ವ್ಯಕ್ತಿಗಳಿಂದ ತುಂಬಿ ತುಳುಕುತ್ತಿದ್ದ ಸಭಾಂಗಣದಲ್ಲಿ ಎಲ್ಲಕ್ಕೂ ಸೈ ಎನ್ನುವ ಮಾತೇ ಇತ್ತು ವಿನಃ ನಾಣ್ಯದ ಎರಡು ಮುಖಗಳನ್ನು ಪರಿಚಯಿಸುವ, ನೋಡುವ, ಕೇಳುವ ಪ್ರಯತ್ನ ಆಗಲೇ ಇಲ್ಲ. ಇಂತಹ ಭಾರತದ ಕಲ್ಪನೆ, ಅದು ಯಾವುದೇ ಇರಲಿ, ಸರಿ ದಾರಿಯಲ್ಲಿರದ ಮತ ಧರ್ಮ ರಾಜಕೀಯ ಜನತೆಗೆ ಅದೆಂತಹ ದಿಕ್ಕು ದಿಸೆಯನ್ನು ತೋರಬಲ್ಲದು ಎಂಬ ಪ್ರಶ್ನೆ ಒಲೈಕೆ ಮತ್ತು ಒಡಂಬಡಿಕೆ ಇಲ್ಲದ ಜಾತ್ಯತೀತ ಮಂದಿಯ ಗಮನಾರ್ಹ ಚಿಂತೆ - ಚಿಂತನೆ. ಇದಕ್ಕೆ ಉತ್ತರ ಮುಂದೆ ಬೇರೊಂದು ಸಾಹಿತ್ಯ ಹಬ್ಬದಲ್ಲಿ ಸಿಕ್ಕರೂ ಅತಿಶಯೋಕ್ತಿಯೇನಲ್ಲ. ಆದರೆ ಅದು ಸ್ವಸ್ಥ್ಯ ಸಮಾಜದ ನಿರ್ಮಾಣದೆಡೆಗೆ ಮುಖ ಮಾಡಿರಲಿ ಎಂಬವುದಷ್ಟೆ ವಿಶ್ವ ಮಾನವತ್ವದ ಕಲ್ಪನೆ ಇರುವ ಭಾರತೀಯರ ಒಲವು ಮತ್ತು ಅದರಲ್ಲಡಗಿದೆ ಭಾರತದ ಗೆಲುವು, ಇದು ಮೋದಿ, ರಾಹುಲ್... ಹೀಗೆ ಯಾರ ಗೆಲುವಿಗಿಂತಲೂ ಪ್ರಮುಖವಾದದ್ದು. ಇದು ಕೇವಲ 2019ಕ್ಕೆ ಮಾತ್ರವಲ್ಲ, ಎಂದೆಂದಿಗೂ.