ಅಫ್ಘಾನ್: ತಾಲಿಬಾನಿಗಳಿಂದ 30 ಪೊಲೀಸರ ಹತ್ಯೆ
Update: 2018-11-15 16:46 GMT
ಕಾಬೂಲ್, ನ. 15: ಪಶ್ಚಿಮ ಅಫ್ಘಾನಿಸ್ತಾನದ ಫರಾ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಬುಧವಾರ ರಾತ್ರಿ ನಡೆಸಿದ ದಾಳಿಯಲ್ಲಿ 30 ಪೊಲೀಸರು ಹತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಫರಾ ಪ್ರಾಂತ್ಯದ ಖಾಕಿ ಸಫೇದ್ ಜಿಲ್ಲೆಯ ಪೊಲೀಸ್ ಹೊರಠಾಣೆಯ ಮೇಲೆ ಭಯೋತ್ಪಾದಕರು ಬುಧವಾರ ರಾತ್ರಿ ದಾಳಿ ಆರಂಭಿಸಿದರು ಹಾಗೂ ಅದು ನಾಲ್ಕು ಗಂಟೆಗಳಿಗೂ ಅಧಿಕ ಅವಧಿಗೆ ಮುಂದುವರಿಯಿತು ಎಂದು ಪ್ರಾಂತೀಯ ಮಂಡಳಿ ಸದಸ್ಯ ದದುಲ್ಲಾ ಖಾನ್ ಗುರುವಾರ ತಿಳಿಸಿದರು.
ತಾಲಿಬಾನ್ ದಾಳಿಯಲ್ಲಿ ಜಿಲ್ಲಾ ಪೊಲೀಸ್ ಕಮಾಂಡರ್ ಅಬ್ದುಲ್ ಜಬ್ಬಾರ್ ಕೂಡ ಮೃತಪಟ್ಟಿದ್ದಾರೆ ಎಂದು ಕಾಬೂಲ್ ನಲ್ಲಿ ಸಂಸದ ಸಮೀವುಲ್ಲಾ ಸಮೀಮ್ ತಿಳಿಸಿದರು.
ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳೊಂದಿಗೆ ತಾಲಿಬಾನಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದಕ್ಕೆ ಪ್ರತೀಕಾರವಾಗಿ ನಡೆಸಿದ ವಾಯು ದಾಳಿಯಲ್ಲಿ 17 ತಾಲಿಬಾನ್ ಉಗ್ರರು ಹತರಾಗಿದ್ದಾರೆ ಎಂದು ಸಮೀಮ್ ಹೇಳಿದರು.