ವಿಶ್ವವಿದ್ಯಾನಿಲಯಗಳ ಆಡಳಿತ ವರ್ಗದ ನೇಮಕಾತಿಗೆ ಮಾರ್ಗಸೂಚಿ
ಭಾರತವು ಪಪ್ರಂಚದ 3ನೇ ಅತಿದೊಡ್ಡ ಉನ್ನತ ಶಿಕ್ಷಣದ ವ್ಯವಸ್ಥೆಯಾಗಿದ್ದು ಭಾರತಕ್ಕೆ ಅಷ್ಟೇ ಅಲ್ಲದೆ ಇಡೀ ಪಪ್ರಂಚಕ್ಕೆ ಜ್ಞಾನ ಕೌಶಲಗಳುಳ್ಳ ಮಾನವ ಸಂಪನ್ಮೂಲವನ್ನು ನೀಡುತ್ತಿದೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಪಪ್ರಂಚದ 200 ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಯಾವ ವಿಶ್ವವಿದ್ಯಾನಿಲಯವೂ ಸ್ಥಾನವನ್ನು ಪಡೆಯದಿರುವುದು ಖೇದಕರ ಸಂಗತಿ ಮತ್ತು ಸೂಕ್ತ ಮಾರ್ಪಾಟುಗಳನ್ನು ಮಾಡಿ ವಿಶ್ವವಿದ್ಯಾನಿಲಯಗಳನ್ನು ಉನ್ನತ ಮಟ್ಟಕ್ಕೇರಿಸುವುದು ಸದ್ಯದ ಸವಾಲು.
ಕರ್ನಾಟಕ ರಾಜ್ಯವನ್ನು ಪರಿಗಣಿಸುವುದಾದರೆ, ದೇಶದ ಮಾನವ ಸಂಪನ್ಮೂಲ ಅಭಿವೃದ್ಧ್ದಿ ಸಚಿವಾಲಯದ ಮಾನದಂಡ ಆಧಾರಿತ ವಿಶ್ವವಿದ್ಯಾನಿಲಯಗಳ ರ್ಯಾಂಕ್ ಪಟ್ಟಿಯ (National Institute Ranking Framework)ಪ್ರಕಾರ ಕುವೆಂಪು ವಿಶ್ವವಿದ್ಯಾನಿಲಯ (78ನೇ ರ್ಯಾಂಕ್) ಹೊರತು ಪಡಿಸಿ ಕರ್ನಾಟಕದ ಇನ್ನಾವುದೇ ವಿಶ್ವವಿದ್ಯಾನಿಲಯವು ದೇಶದ 100 ಉನ್ನತ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಹಾಗಾಗಿ ಉನ್ನತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಬೇಕಾಗಿದೆ. ಜೊತೆಗೆ ಉನ್ನತ ಸಂಸ್ಥೆಗಳ ಅಭಿವೃದ್ಧ್ಧಿಗೆ ವಿಶ್ವವಿದ್ಯಾನಿಲಯಗಳ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾನ್ಯ ಕುಲಪತಿಗಳು, ಕುಲಸಚಿವರು-ಆಡಳಿತ ಮತ್ತು ಕುಲಸಚಿವರು-ಪರಿಕ್ಷಾಂಗ ಆ ಸಂಸ್ಥೆಯ ಧ್ಯೇಯೊದ್ದೇಶಗಳಿಗನುಗುಣವಾಗಿ ನಿಷ್ಪಕ್ಷಪಾತವಾದ ಆಡಳಿತ ನಡೆಸಲು, ವಸ್ತುನಿಷ್ಟ ಕಾರ್ಯತತ್ಪರತೆ, ಶ್ರದ್ಧೆ ಮತ್ತು ದೇಶಾಭಿಮಾನಗಳಂತಹ ಮೌಲ್ಯಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಾಗಿದೆ.
ವಿಶ್ವವಿದ್ಯಾನಿಲಯಗಳು ಪ್ರಜಾಪಭುತ್ವದ ಅಡಿಯಲ್ಲಿ ಸಂವಿಧಾನದ ನಿಯಮಗಳಿಗನುಗುಣವಾಗಿ ಕಾರ್ಯನಿರ್ವಹಿಸುವ ಉನ್ನತ ಸಂಸ್ಥೆಗಳಾಗಿದ್ದು ಸಮಾಜದ ಮತ್ತು ದೇಶದ ಅಭಿವೃದ್ಧ್ದಿಗೆ ಪೂರಕವಾದ ಸಲಹೆ ಸೂಚನೆಗಳನ್ನು ನೀಡುವ ಮತ್ತು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಮಾರ್ಗದರ್ಶನ ನೀಡುವ ಹೊಣೆಗಾರಿಕೆಯನ್ನು ಹೊಂದಿವೆ. ಇಂತಹ ಸಂಸ್ಥೆಗಳಲ್ಲಿ ಸೇವೆಗೈಯುತ್ತಿರುವ ಬೋಧಕ ವೃಂದ ಅಪಾರ ಜ್ಞಾನ ಮತ್ತು ಪಾಂಡಿತ್ಯವನ್ನು ಹೊಂದಿರುವ ದೇಶದ ಅತಿ ಉನ್ನತವಾದ ಮಾನವ ಸಂಪನ್ಮೂಲ ಶಕ್ತಿಯಾಗಿದೆ. ಈ ಸಂಪನ್ಮೂಲ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಸಮಾಜದ, ರಾಜ್ಯ ಮತ್ತು ದೇಶದ ಅಭಿವೃದ್ಧ್ದಿಗೆ ಅತ್ಯವಶ್ಯಕ.
ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ ಅವರ ಸಲಹೆಯಂತೆ ಎಸ್.ಎಂ. ಕೃಷ್ಣ ನೇತೃತ್ವದ ಸರಕಾರ 2002ರಲ್ಲಿ ರಚಿಸಿದ್ದ ಉನ್ನತ ಶಿಕ್ಷಣ ಕಾರ್ಯಪಡೆಯು 2004ರ ವರದಿಯಂತೆ; ‘‘ಉನ್ನತ ಶಿಕ್ಷಣವು ರಾಜ್ಯ ಸರಕಾರದ ಕಠಿಣ ನಿಯಂತ್ರಣದಲ್ಲಿದೆ, ಇದಕ್ಕೆ ಸರಕಾರದ ಅನುದಾನವೇ ಕಾರಣ. ಕುಲಪತಿಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಹೆಚ್ಚಿನ ಸ್ವಾಯತ್ತತೆ ನೀಡುವ ಆವಶ್ಯಕತೆ ಇದ್ದು, ಅಧ್ಯಾಪಕರ ಮತ್ತು ಆಡಳಿತ ವರ್ಗದ ಆಯ್ಕೆಯಲ್ಲಿ ಸಂಪೂರ್ಣ ಸ್ವಾತಂತ್ರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಆಧಿಕಾರಿಗಳ ಮತ್ತು ರಾಜಕಾರಣಿಗಳ ಮಧ್ಯಸ್ಥಿಕೆ ಕೂಡದು’’ ಎಂಬ ಸಲಹೆಯನ್ನು ನೀಡಿದೆ. ಹಾಗಾಗಿ ಶಿಕ್ಷಣವನ್ನು ಸಮಾಜದ ಒಳಿತಿಗೆ ಪೂರಕವಾದ ಸೇವೆ ಎಂದು ಪರಿಗಣಿಸಲಾಗಿದೆ. ಹಾಗೆಯೆ ಸರಕಾರವೂ ಇದರ ಫಲಾನುಭವಿ.
ಉನ್ನತ ಶಿಕ್ಷಣ ಸಂಸ್ಥೆಗಳ ಅಭಿವೃದ್ಧ್ಧಿಗೆ ಮತ್ತು ಅಲ್ಲಿ ನಡೆಯುವ ಬೋಧನೆ ಮತ್ತು ಸಂಶೋಧನೆ ಕಾರ್ಯಚಟುವಟಿಕೆಗಳಿಗೆ ಸರಕಾರವು ಸಹ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಆದ್ದರಿಂದ ಅಂತಹ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ(ವಿಶ್ವವಿದ್ಯಾನಿಲಯ) ಸೇವೆಗೈಯುವ ಶಿಕ್ಷಕ ವೃಂದದ ಆಯ್ಕೆ ಪ್ರಕ್ರಿಯೆ ಮತ್ತು ಆ ಸಂಸ್ಥೆಗಳ ಉನ್ನತ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಬೇಕು ಮತ್ತು ವಸ್ತುನಿಷ್ಠವಾಗಿ ಆದ್ಯತೆಯ ಮೇರೆಗೆ ಎಲ್ಲರಿಗೂ ಸಮಾನವಾಗಿ ದೊರಕುವ ಆವಶ್ಯಕತೆ ತುರ್ತಾಗಿ ಎದ್ದು ಕಾಣುತ್ತಿದೆ. ಇದರಿಂದ ಇನ್ನುಳಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಯಲ್ಲೂ ಪಾರದರ್ಶಕತೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಾಷ್ಟ್ರ ಮಟ್ಟದಲ್ಲಿ ಶ್ರೇಷ್ಠ ಶೈಕ್ಷಣಿಕ ಸಾಧನೆಗೈದ ಪ್ರಾಧ್ಯಾಪಕರನ್ನು ಕುಲಪತಿಗಳಾಗಿ ನೇಮಿಸುವುದು ಜಾಗತಿಕ ಪ್ರಪಂಚದ ಆವಶ್ಯಕವಾಗಿದೆ. ಹಾಗೆಯೆ ಸಂವಿಧಾನಾತ್ಮಕವಾಗಿರುವುದು ಅಪೇಕ್ಷಣೀಯ.
ಈ ಮೂರು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪರಿಗಣಿಸಲು ಅನುಸರಿಸಬಹುದಾದ ಮಾರ್ಗಸೂಚಿಗಳು:
1. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕರ ಜೇಷ್ಠತಾ ಪಟ್ಟಿ ತಯಾರಿಸುವುದು.
2. ಕುಲಸಚಿವರು(ಪರೀಕ್ಷಾಂಗ ಮತ್ತು ಆಡಳಿತ) ಹುದ್ದೆಗೆ ಪ್ರಾಧ್ಯಾಪಕರಾಗಿ ಕನಿಷ್ಠ 5 ವರ್ಷ ಹಾಗೂ ಕುಲಪತಿಗಳ ಹುದ್ದೆಗೆ ಪ್ರಾಧ್ಯಾಪಕರಾಗಿ ಕನಿಷ್ಠ 10 ವರ್ಷಗಳ ಸೇವಾನುಭವ ಹೊಂದಿರುವುದು ಕಡ್ಡಾಯವಾದ ಮಾನದಂಡವಾಗಬೇಕು.
3. ಪ್ರಾಧ್ಯಾಪಕರನ್ನು ನೇಮಕಾತಿಗೆ ಪರಿಗಣಿಸಬಹುದಾದ ಸಾಮರ್ಥ್ಯ ಹೊಂದಿರಬೇಕಾಗಿದ್ದು ಮತ್ತು ನಿಗದಿಪಡಿಸಿದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಬೇಕಾದುದು ಅವಶ್ಯ.
(ಪರಿಗಣಿಸಬಹುದಾದ ವಿವಿಧ ಮಾನದಂಡಗಳು ಮತ್ತು ಪೂರಕ ಅಂಕಗಳನ್ನು ನಿಗದಿಪಡಿಸಬೇಕು)
* ಸರಕಾರದ ಪಾಲಿಸಿಗಳ ತಯಾರಿಕೆಗೆ ನೀಡಿದ ಸಲಹೆ ಸೂಚನೆಗಳು
* ಸರಕಾರದ ವಿವಿಧ ಇಲಾಖೆಗಳಿಗೆ ನೀಡಿರುವ ಮಾರ್ಗದರ್ಶನ
* ಸಂಶೋಧನೆ, ಖಿ ಮತ್ತು ಪೇಟೆಂಟ್‌ಗಳು
* ಸಂಪನ್ಮೂಲಗಳ ಕ್ರೋಡೀಕರಣ.
* ಎಕ್ಸ್‌ಚೇಂಜ್ ಕಾರ್ಯಕ್ರಮದಲ್ಲಿ ಭಾಗಿ
* ವಿದ್ಯಾರ್ಥಿಗಳಿಂದ ಶಿಕ್ಷಕರ ಮೌಲ್ಯಮಾಪನ ಅಂಕಗಳು
* ವಿಶ್ವವಿದ್ಯಾನಿಲಯದಲ್ಲಿ ಹೊಂದಿದ ವಿವಿಧ ಸ್ಥಾನ ಮಾನಗಳು(ಸಿಂಡಿಕೇಟ್, ಅಕಾಡಮಿಕ್ ಕೌನ್ಸಿಲ್, ಡೀನ್, ನಿರ್ದೇಶಕ)
* ಉನ್ನತ ಶಿಕ್ಷಣದ ಕುರಿತಾದ ಅರಿವು ವತ್ತು ದೂರದೃಷ್ಟಿ
* ಶೈಕ್ಷಣಿಕ ತಂತ್ರಜ್ಞಾನದ ಅರಿವು ಮತ್ತು ಕೌಶಲಗಳು
* ಅಂತರ್‌ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವಿಕೆ ಮತ್ತು ನೀಡಿರುವ ಕೊಡುಗೆ
* ವಿವಿಧ ಕಾರ್ಯಕ್ರಮಗಳ ಸಂಘಟನೆ
* ಸಾಮಾಜಿಕ ಅಭಿವೃದ್ಧ್ದಿಗೆ ಕೈಗೊಂಡ ಕಾರ್ಯಚಟುವಟಿಕೆಗಳು.
ಆಯಾ ವಿಶ್ವವಿದ್ಯಾನಿಲಯಗಳ ಇಡೀ ಬೋಧಕ ವೃಂದವು ಹುದ್ದೆಗೇರುವ ಅಭ್ಯರ್ಥಿಯ ಮೌಲ್ಯಮಾಪನ ಮಾಡುವುದು ಮತ್ತು ಸದರಿ ವರದಿಯನ್ನು ಆಯ್ಕೆಗೆ ಪರಿಗಣಿಸುವುದು ಮತ್ತು ವಿವಿಧ ನಿಕಾಯಗಳಿಗೆ ಅನುಗುಣವಾಗಿ ವಿಶೇಷ ಮಾನದಂಡಗಳನ್ನು ಎಲ್ಲಾ ನಿಕಾಯಗಳಿಗೆ ಸಮಾನಾಂತರವಾಗಿ ರಚಿಸುವುದು.
ಉನ್ನತ ಶಿಕ್ಷಣ ಮತ್ತು ನಾಯಕತ್ವದ ಕುರಿತಾದ ಅಭಿಕ್ಷಮತೆ ಪರೀಕ್ಷೆ: ಪರೀಕ್ಷೆಯನ್ನು ನಡೆಸಿ ಅರ್ಹ ಅಭ್ಯರ್ಥಿಗಳನ್ನು ಮುಂದಿನ ಹಂತದ ಪ್ರಕ್ರಿಯೆಗೆ ಪರಿಗಣಿಸುವುದು.
ಮೇಲಿನ ಎಲ್ಲಾ ಮಾನದಂಡಗಳನ್ನು ಅನುಸರಿಸಿ 1:3ಗಳ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸಂವಿಧಾನಾತ್ಮಕ ಮೀಸಲಾತಿಯನ್ನು ಅನುಸರಿಸುವುದು (ಎಲ್ಲಾ ವರ್ಗದ ಜನರಿಗೂ ಪ್ರಾತಿನಿಧ್ಯ- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ಮಹಿಳೆಯರು) ಹುದ್ದೆಗೆ ಪರಿಗಣಿಸುವ ಮುನ್ನ ಅಭ್ಯರ್ಥಿಯೊಂದಿಗೆ ಮುಕ್ತವಾದ ಚರ್ಚೆ ಏರ್ಪಡಿಸುವುದು (ತೆರೆದ ಸಂದರ್ಶನ- ವಿದ್ಯಾರ್ಥಿಗಳು, ಹಿರಿಯ ಪ್ರಾಧ್ಯಾಪಕರು ಹಾಗೂ ಪ್ರಗತಿಪರ ಚಿಂತಕರು, ವಿಶ್ರಾಂತ ಕುಲಪತಿಗಳು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ವಿಶ್ವವಿದ್ಯಾನಿಲಯಗಳ ಕುಲಸಚಿವರು ವತ್ತು ಕುಲಪತಿಗಳೊಂದಿಗೆ) ದೂರದರ್ಶನ/ ಬಾನುಲಿ/ ಪತ್ರಿಕೆಗಳ ಮುಖಾಂತರ ನೇರ ಪ್ರಸಾರ/ನಂತರ ಪ್ರಸಾರ.
* ವಿಶ್ವವಿದ್ಯಾನಿಲಯಗಳ ಸುಧಾರಣಾ ಕ್ರಮಗಳ ಬಗ್ಗೆ ಚರ್ಚೆಯಾಗಬೇಕು
* ಸಂಸ್ಥೆಯ ಅಭಿವೃದ್ಧಿಗೆ ಹಾಕಿಕೊಳ್ಳುವ ಉದ್ದೇಶಗಳು, ಕಾರ್ಯನಿರ್ವಹಿಸುವ ರೀತಿ, ಆಯಾ ರಾಜ್ಯದಲ್ಲಿನ ಉನ್ನತ ಶಿಕ್ಷಣದ ಸ್ಥಿತಿಗತಿ, ದೇಶ ಮತ್ತು ಅಂತರ್‌ರಾಷ್ಟ್ರೀಯ ಮಟ್ಟಗಳಲ್ಲಿ ಹೋಲಿಕೆ, ಅಭಿವೃದ್ಧಿಗೆ ರೂಪಿಸುವ ವಿಶೇಷ ಕಾರ್ಯಕ್ರಮಗಳು, ವಿದ್ಯಾರ್ಥಿ ಕೇಂದ್ರಿತ ಆಡಳಿತ ಇತರ ಗುಣಾತ್ಮಕ ಅಂಶಗಳ ಕುರಿತು ಚರ್ಚೆ.
ಹುದ್ದೆಗಳಿಗೆ ಪರಿಗಣಿಸಬಹುದಾದ ಗರಿಷ್ಠ ವಯೋಮಿತಿ ಮತ್ತು ಅವಧಿ
* ಕುಲಪತಿಗಳಿಗೆ 3ವರ್ಷ (ಗರಿಷ್ಠ 62ವರ್ಷ ವಯೋಮಿತಿ- ಒಂದು ಬಾರಿ ಮಾತ್ರ)
* ಕುಲಸಚಿವರು(ಪ) ಮತ್ತು ಕುಲಸಚಿವರು(ಆ) 2-ವರ್ಷ(ಗರಿಷ್ಠ 60 ವರ್ಷ ವಯೋಮಿತಿ-ಒಂದು ಬಾರಿ ಮಾತ್ರ).
ತರಬೇತಿ: ಆಯ್ಕೆಯಾದ 1:3 ಪ್ರಾಧ್ಯಾಪಕರುಗಳಿಗೆ ಸೇವಾ ಪೂರ್ವ ಒಂದು ತಿಂಗಳ ತರಬೇತಿ ನೀಡಬೇಕು (ರಾಜ್ಯ ಉನ್ನತ ಶಿಕ್ಷಣ ಅಕಾಡಮಿಯಿಂದ)
ಅನುಸರಿಸಬಹುದಾದ ಸೂಚನೆಗಳು:
* ಖಾಲಿಯಾಗುವಂತಹ/ಖಾಲಿಯಾಗಲಿರುವ ಮೂರೂ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ 6 ತಿಂಗಳುಗಳ ಮುಂಚಿತವಾಗಿಯೇ ನಡೆಯತಕ್ಕದ್ದು.
* ಅಭ್ಯರ್ಥಿಯು ಇಚ್ಛಿಸಿದ್ದಲ್ಲಿ ಮಾತ್ರ ಹುದ್ದೆಗಳಿಗೆ ಪರಿಗಣಿಸುವುದು.
* ದಿನಪತ್ರಿಕೆಗಳಲ್ಲಿ ನೋಟಿಫಿಕೇಶನ್ ಕೊಡುವ ಆವಶ್ಯಕತೆ ಇರುವುದಿಲ್ಲ.
* ಉನ್ನತ ಶಿಕ್ಷಣ ಪರಿಷತ್ತು ಈ ಆಯ್ಕೆ ಪ್ರಕ್ರಿಯೆಯನ್ನು/ಕಾರ್ಯವನ್ನು ನಿರ್ವಹಿಸುವುದು.
* ರಾಜ್ಯಪಾಲರ ಮತ್ತು ರಾಜ್ಯ ಸರಕಾರದ ಅಂಕಿತ-ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಸರಕಾರದಿಂದ ಮತ್ತು ರಾಜ್ಯಪಾಲರಿಂದ ಅಂಕಿತಗೊಳಿಸುವುದು.
* ಪ್ರತಿ ವರ್ಷ ಆಯ್ಕೆ ಪ್ರಕ್ರಿಯೆಯು ನಿರಂತರವಾಗಿ ನಡೆಯಬೇಕಿರುತ್ತದೆ.
* ಪ್ರತಿ ವರ್ಷ ಆಯ್ಕೆಯಾದ ಎಲ್ಲಾ ಆಡಳಿತಗಾರರ ಸಾಮರ್ಥ್ಯ ಮೌಲ್ಯಮಾಪನ ಮಾಡುವಿಕೆ (ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ವೃಂದ) ಮತ್ತು ಸಂಸ್ಥೆಯ ಅಭಿವೃದ್ಧಿಗೆ ಪೂರಕವಾದ ಸಲಹೆ ಸೂಚನೆಗಳು ಪರಿಗಣಿಸುವುದು.
* ಹುದ್ದೆಗಳಲ್ಲಿ ನಿರ್ವಹಿಸುವ ಎಲ್ಲಾ ಕಾರ್ಯಚಟುವಟಿಕೆಗಳಿಗೆ ತಾವೇ ಜವಾಬ್ದಾರರಾಗಿರುತ್ತಾರೆ
* ಆಡಳಿತದ ಜೊತೆಗೆ ವಿಷಯಕ್ಕೆ ಸಂಬಂಧಿಸಿದಂತೆ ವಾರಕ್ಕೆ ಕನಿಷ್ಠ ಇಂತಿಷ್ಟು(4-6) ಗಂಟೆಗಳ ಬೋಧನೆ ಕೂಡ ಮಾಡುವುದು.
ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಡಿಯಲ್ಲ್ಲಿ ವಿಶ್ವವಿದ್ಯಾನಿಲಯಗಳ ಕುಂದು ಕೊರತೆ ನಿವಾರಣೆ ಮತ್ತು ಅಭಿವೃದ್ಧ್ದಿ ಕೋಶ (University grievances redressal and Development Cell):
ಸದಸ್ಯರು (ಕನಿಷ್ಠ ಐದು ಜನ): ನಿವೃತ್ತಿ ಹೊಂದಿದ ಕುಲಪತಿಗಳು ಮತ್ತು ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಹಿರಿಯ ಪ್ರಾಧ್ಯಾಪಕರು ಮತ್ತು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶಕರು ಅದರ ಸಂಚಾಲಕರಾಗಿ (Convener) ಕಾರ್ಯನಿರ್ವಹಿಸುವುದು.
ಇದರ ಮುಖ್ಯ ಕಾರ್ಯವೇ ವಿದ್ಯಾರ್ಥಿಗಳಿಂದ, ಶಿಕ್ಷಕರಿಂದ, ಪಾಲಕರು ಮತ್ತು ಪೋಷಕರಿಂದ ಹಾಗೂ ಸಾಮಾನ್ಯ ಜನರಿಂದ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಕುಂದು ಕೊರತೆಗಳನ್ನು ಸ್ವೀಕರಿಸಿ ಸಂಬಂಧಪಟ್ಟ ವಿಶ್ವವಿದ್ಯಾನಿಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಸೇರಿ ಸೂಕ್ತ ಕ್ರಮಗಳನ್ನು ಮತ್ತು ತೀರ್ಮಾನಗಳನ್ನು ಕೈಗೊಳ್ಳುವುದು. ಸದರಿ ಕೋಶವು ಕುಂದುಕೊರತೆಗಳ ಕುರಿತು ತೆಗೆದುಕೊಂಡ ನಿರ್ಣಯಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ತನ್ನ ಜಾಲತಾಣದಲ್ಲಿ ಪ್ರಕಟಿಸುವುದು.
ರಾಜ್ಯ ಸರಕಾರಗಳು ಈ ಹೊಸ ನೇಮಕಾತಿ ನಿಯಮಗಳನ್ನು ರೂಪಿಸಿ ವಿಶ್ವವಿದ್ಯಾನಿಲಯಗಳ ಪಾರದರ್ಶಕ ಆಡಳಿತಕ್ಕೆ ಮತ್ತು ವಿದ್ಯಾರ್ಥಿ ಸ್ನೇಹಿ ಕಲಿಕಾ ಪ್ರಕ್ರಿಯೆಗೆ ನಾಂದಿ ಹಾಡಿ ರಾಷ್ಟ್ರೀಯ ಸಂಸ್ಥೆಗಳಿಗೆ ಹಾಗೂ ಬೇರೆ ದೇಶಗಳ ವಿಶ್ವವಿದ್ಯಾನಿಲಯಗಳಿಗೂ ಮಾದರಿಯಾಗಬೇಕೆಂಬುದು ಎಲ್ಲಾ ಪ್ರಜ್ಞಾವಂತರ ಅಭಿಲಾಷೆ.