ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಪ್ರಕಾರ ಲಭ್ಯ ನೀರನ್ನು ಪೂರ್ಣ ಬಳಸಿಕೊಳ್ಳಲು ಕೇಂದ್ರದ ಯೋಜನೆ

Update: 2018-11-25 14:59 GMT

ಹೊಸದಿಲ್ಲಿ, ನ.25: ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಇಂಡಸ್ (ಸಿಂಧೂ) ನೀರು ಹಂಚಿಕೆ ಒಪ್ಪಂದದ ಪ್ರಕಾರ ತನ್ನ ಪಾಲಿನ ಬಳಕೆಯಾಗದ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಭಾರತ ಅಣೆಕಟ್ಟು ನಿರ್ಮಾಣವೂ ಸೇರಿದಂತೆ ಮೂರು ಯೋಜನೆಗಳ ಕಾಮಗಾರಿಯನ್ನು ಚುರುಕಿನಿಂದ ನಡೆಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಹಾಪುರ ಕಾಂಡಿ ಅಣೆಕಟ್ಟು ಯೋಜನೆ, ಜಮ್ಮು ಕಾಶ್ಮೀರದ ಉಜಾಹ್ ಅಣೆಕಟ್ಟು ಯೋಜನೆ, ಪಂಜಾಬ್‌ನ ಸಟ್ಲೇಜ್-ಬಿಯಾಸ್ ಸಂಪರ್ಕ ಯೋಜನೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಭ್ರಷ್ಟಾಚಾರ ಹಾಗೂ ಅಂತರ್‌ರಾಜ್ಯ ವಿವಾದಗಳಿಂದಾಗಿ ಈ ಯೋಜನೆಗಳು ಸ್ಥಗಿತಗೊಂಡಿವೆ. ಇದೀಗ ಇದನ್ನು ತ್ವರಿತವಾಗಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಪ್ರಕಾರ, ಸಿಂಧೂ ನದಿಯ ಉಪನದಿಗಳಾದ ಸಟ್ಲೇಜ್, ಬಿಯಾಸ್ ಹಾಗೂ ರಾವಿ ನದಿಗಳ ಮೂಲಕ ಹರಿಯುತ್ತಿರುವ ನೀರನ್ನು ಭಾರತಕ್ಕೆ, ಚೆನಾಬ್, ಝೇಲಂ ಮತ್ತು ಸಿಂಧು ನದಿ ನೀರನ್ನು ಪಾಕಿಸ್ತಾನಕ್ಕೆ ಹಂಚಿಕೆ ಮಾಡಲಾಗಿದೆ. ಒಟ್ಟು 168 ಮಿಲಿಯನ್ ಎಕ್ರೆ ಅಡಿ ನೀರಿನಲ್ಲಿ ಭಾರತದ ಪಾಲು ಶೇ.20ರಷ್ಟು ಅಂದರೆ, 33 ಮಿಲಿಯನ್ ಎಕ್ರೆ ಅಡಿ ನೀರು. ಈ ಪಾಲಿನಲ್ಲಿ ಭಾರತ ಸುಮಾರು ಶೇ.94ರಷ್ಟು ಪ್ರಮಾಣದ ನೀರನ್ನು ಮಾತ್ರ ಬಳಸಿಕೊಳ್ಳುತ್ತಿದ್ದು ಬಳಕೆಯಾಗದ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ರಾವಿ ನದಿಯ ಮೇಲೆ ಕಟ್ಟಲಾಗುವ ಉಜಾಹ್ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ಜಲವಿದ್ಯುತ್ ಉತ್ಪಾದನೆ ಹಾಗೂ ಕೃಷಿಕಾರ್ಯಕ್ಕೆ ಬಳಸಲಾಗುವುದು. 925 ಮಿಲಿಯನ್ ಕ್ಯುಸೆಕ್ ಮೀಟರ್(ಎಂಸಿ) ನೀರನ್ನು ಸಂಗ್ರಹಿಸುವ ಸಾಮರ್ಥ್ಯವಿರುವ ಈ ಅಣೆಕಟ್ಟಿನ ಮೂಲಕ 172.8 ಮಿಲಿಯನ್ ಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲಾಗುವುದು. ಯೋಜನೆಯ ವೆಚ್ಚ 5,950 ಕೋಟಿ ರೂ. ಈ ಕುರಿತ ವಿವರವಾದ ಯೋಜನಾ ವರದಿಯನ್ನು ಜಮ್ಮು-ಕಾಶ್ಮೀರ ಸರಕಾರ ಕೇಂದ್ರಕ್ಕೆ ಕಳುಹಿಸಿದ್ದು ಜಲಸಂಪನ್ಮೂಲ ಇಲಾಖೆಯ ಅನುಮೋದನೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ರಾವಿ-ಬಿಯಾಸ್ ಸಂಪರ್ಕ ಯೋಜನೆಯ ಬಗ್ಗೆ ಕಾರ್ಯಸಾಧ್ಯತೆ ವರದಿಯನ್ನು ಸಿದ್ಧಪಡಿಸುವಂತೆ ಕೇಂದ್ರ ಸರಕಾರ ಪಂಜಾಬ್ ಸರಕಾರಕ್ಕೆ ಸೂಚಿಸಿದೆ.

ಶಹಾಪುರ ಕಾಂಡಿ ಯೋಜನೆಗೆ 2013ರಲ್ಲಿ ಚಾಲನೆ ನೀಡಲಾಗಿದ್ದರೂ ಜಮ್ಮು ಕಾಶ್ಮೀರ ಸರಕಾರ ಎತ್ತಿರುವ ಆಕ್ಷೇಪಣೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ 2,793 ಕೋಟಿ ರೂ.ವೆಚ್ಚದ ಯೋಜನೆಯ ಕಾಮಗಾರಿ ಪುನರಾರಂಭಿಸುವ ಕುರಿತು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರ ಸರಕಾರಗಳ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಯೋಜನೆಯ ವೆಚ್ಚವನ್ನು 2,793.54 ಕೋಟಿ ರೂ.ಗೆ ಪರಿಷ್ಕರಿಸಿರುವ ಪಂಜಾಬ್ ಸರಕಾರ, ಯೋಜನೆಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ(ಪಿಎಂಕೆಎಸ್‌ವೈ) ಅಥವಾ ವೇಗವರ್ಧಿತ ನೀರಾವರಿ ಸೌಲಭ್ಯ ಯೋಜನೆ(ಎಐಬಿಪಿ)ಯಡಿ ಸೇರಿಸಿ ಆದ್ಯತೆ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡಿದೆ.

ಯೋಜನೆ ಅನುಷ್ಠಾನಕ್ಕೆ ಬಂದಾಗ 206 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುವ ಜೊತೆಗೆ ಪಂಜಾಬ್ ಹಾಗೂ ಜಮ್ಮು ಕಾಶ್ಮೀರದ 37,173 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ. 2016ರಲ್ಲಿ ಕಾಶ್ಮೀರದ ಉರಿ ಎಂಬಲ್ಲಿ ಪಾಕ್ ಬೆಂಬಲಿತ ಉಗ್ರರು ದಾಳಿ ನಡೆಸಿದ ಪ್ರಕರಣದ ಬಳಿಕ ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಪ್ರಕಾರ ಲಭ್ಯವಿರುವ ನೀರಿನ ಪ್ರಮಾಣವನ್ನು ಪೂರ್ತಿಯಾಗಿ ಬಳಸಿಕೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News